ಕೊರೊನಾ ಇನ್ನಿಲ್ಲದಂತೆ ಕಾಡುತ್ತಿದೆ. ದಿನ ದಿನವೂ ನೂರಾರು ಸಾವು. ಇಂತಹ ಸಂದರ್ಭದಲ್ಲಿ ಯುವರತ್ನ ಚಿತ್ರದ ನಟ ಅರ್ಜುನ್ ಗೌಡ ಆ್ಯಂಬುಲೆನ್ಸ್ ಡ್ರೈವರ್ ಆಗಿದ್ದಾರೆ. ವಿಶೇಷವಾಗಿ ಶವಗಳನ್ನು ಸಾಗಿಸುವ ಆ್ಯಂಬುಲೆನ್ಸ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದಾರೆ. ಯುವರತ್ನ, ರುಸ್ತುಂ, ಒಡೆಯ, ಏಕ್ ಲವ್ ಯಾ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿರುವ ಅರ್ಜುನ್ ಗೌಡ, ಆ್ಯಂಬುಲೆನ್ಸ್ ಡ್ರೈವರ್ ಆಗೋದಿಕ್ಕೂ ಕಾರಣವಿದೆ.
ಅರ್ಜುನ್ ಗೌಡ ಮನೆಗೆ ಹಾಲು ಹಾಕುತ್ತಿದ್ದವರು ಅರ್ಜುನ್ ಗೌಡ ಅವರಲ್ಲಿ 12 ಸಾವಿರ ರೂ. ಕೇಳಿದರಂತೆ. ಏಕೆಂದು ವಿಚಾರಿಸಿದಾಗ ಅವರ ಅಜ್ಜಿ ಮೃತಪಟ್ಟಿದ್ದು, ಆ್ಯಂಬುಲೆನ್ಸ್ನವರಿಗೆ ಕೊಡಬೇಕು ಎಂದರಂತೆ. ಅವರಿಗೆ ನೆರವು ನೀಡಿದ ಅರ್ಜುನ್ ಗೌಡ, ನಂತರ ನಾನೇ ಏಕೆ ನೆರವು ನೀಡಬಾರದು ಎಂದು ಯೋಚಿಸಿದವರೇ ಆ್ಯಂಬುಲೆನ್ಸ್ ಡ್ರೈವರ್ ಆಗಿದ್ದಾರೆ.
ಪ್ರಾಜೆಕ್ಟ್ ಸ್ಮೈಲ್ ಟ್ರಸ್ಟ್ನವರನ್ನು ಸಂಪರ್ಕಿಸಿದ ಅರ್ಜುನ್ ಗೌಡ, ಅವರ ಬಳಿಯಿದ್ದ ಆ್ಯಂಬುಲೆನ್ಸ್ ಪಡೆದುಕೊಂಡಿದ್ದಾರೆ. ಟ್ರಸ್ಟ್ನವರಿಂದಲೇ 2 ದಿನ ತರಬೇತಿ ಪಡೆದೆ. ಡ್ರೈವಿಂಗ್ ಗೊತ್ತಿದ್ದ ಕಾರಣ, ಅದೇನೂ ಕಷ್ಟವಾಗಲಿಲ್ಲ. 10 ದಿನಗಳಿಂದ ಹಲವು ರೋಗಿಗಳನ್ನು ಆಸ್ಪತ್ರೆಗೆ ಸೇರಿಸಿದ್ದೇನೆ. ಮೃತದೇಹಗಳನ್ನು ಚಿತಾಗಾರಕ್ಕೆ ಸಾಗಿಸಿದ್ದೇನೆ. ಕೊರತೆ ಇರುವ ಕಡೆ ಆಮ್ಲಜನಕ ತಲುಪಿಸಿದ್ದೇನೆ. ಜನರ ಕಷ್ಟಕ್ಕೆ ಸ್ಪಂದಿಸುತ್ತಿರುವ ತೃಪ್ತಿ ಇದೆ. ಇನ್ನೂ 2 ತಿಂಗಳು ಇದೇ ಕೆಲಸ ಮಾಡುತ್ತೇನೆ ಎಂದಿದ್ದಾರೆ ಅರ್ಜುನ್ ಗೌಡ.
ಅರ್ಜುನ್ ಗೌಡ ಅವರಿಗೆ ಒಂದು ಜಿಮ್ ಕೂಡಾ ಇದೆ. ಸದ್ಯಕ್ಕೆ ಜಿಮ್ ಬಾಗಿಲು ಬಂದ್ ಆಗಿದೆ. ಕೊರೊನಾ ಸೋಂಕಿತರ ಆಸುಪಾಸಿನಲ್ಲೇ ಓಡಾಡುತ್ತಿರುವ ಅರ್ಜುನ್ ಗೌಡ, ಈಗ ಗೆಳೆಯನೊಬ್ಬನ ಮನೆಯಲ್ಲಿ ಉಳಿದುಕೊಂಡಿದ್ದಾರೆ. ಕುಟುಂಬದಿಂದ ದೂರವೇ ಇದ್ದಾರೆ. ಗೆಳೆಯ ಮತ್ತವನ ಕುಟುಂಬ ಊರಿಗೆ ಹೋಗಿರುವ ಹಿನ್ನೆಲೆಯಲ್ಲಿ ಮನೆ ಖಾಲಿಯಿದ್ದು, ಅಲ್ಲಿಯೇ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಹ್ಯಾಟ್ಸಾಫ್ ಅರ್ಜುನ್ ಗೌಡ.