` rip, - chitraloka.com | Kannada Movie News, Reviews | Image

rip,

  • ರಾಮಾಯಣದ ರಾವಣ ಇನ್ನಿಲ್ಲ

    ರಾಮಾಯಣದ ರಾವಣ ಇನ್ನಿಲ್ಲ

    ರಾಮಾಯಣ ಸೀರಿಯಲ್ ಮೂಲಕ ಖ್ಯಾತರಾಗಿದ್ದ ರಾವಣ ಖ್ಯಾತಿಯ ನಟ ಅರವಿಂದ ತ್ರಿವೇದಿ ನಿಧನರಾಗಿದ್ದಾರೆ. ಅವರಿಗೆ 82 ವರ್ಷ ವಯಸ್ಸಾಗಿತ್ತು. ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ತ್ರಿವೇದಿ ಅವರು ಬಹುಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದರು.

    ಮೂಲತಃ ಗುಜರಾತಿನವರಾಗಿದ್ದ ಅರವಿಂದ ತ್ರಿವೇದಿ, ಗುಜರಾತಿ ಸಿನಿಮಾಗಳಲ್ಲಿ ಹೆಚ್ಚು ನಟಿಸಿದ್ದರು. ರಾಮಾಯಣದ ರಾವಣ ಹಾಗೂ ವಿಕ್ರಂ ಔರ್ ಬೇತಾಳ್ ಧಾರಾವಾಹಿಯ ಪಾತ್ರಗಳು ತ್ರಿವೇದಿ ಅವರಿಗೆ ದೊಡ್ಡ ಜನಪ್ರಿಯತೆ ತಂದುಕೊಟ್ಟಿದ್ದವು.

  • ಶ್ರೀದೇವಿ ನಿಗೂಢ ಸಾವು - ಪೋಸ್ಟ್ ಮಾರ್ಟಂ ಹೇಳಿದ ರಹಸ್ಯ..!

    sridevi, autopsy report

    ಶ್ರೀದೇವಿ ಹಠಾತ್ ಆಗಿ ದುಬೈನಲ್ಲಿ ಮೃತಪಟ್ಟಾಗ ಮೊದಲು ಹೊರಬಿದ್ದ ಮಾಹಿತಿ, ಅದು ಹೃದಾಯಯಾಘಾತದಿಂದ ಸಂಭವಿಸಿದ ಸಾವು ಎಂದು. ಆನಂತರ ಅದು ಹೃದಯಾಘಾತವಲ್ಲ, ಹೃದಯಸ್ತಂಭನ ಎನ್ನಲಾಯ್ತು. ಶ್ರೀದೇವಿಯ ಫಿಟ್​ನೆಸ್, ಯೋಗ, ಆಹಾರ ಪದ್ಧತಿಯನ್ನು ಹತ್ತಿರದಿಂದ ನೋಡಿದ್ದವರು, ಅದನ್ನು ನಂಬಲು ತಯಾರಿರಲಿಲ್ಲ. ಅಭಿಮಾನಿಗಳೂ ನಂಬೋಕೆ ಸಿದ್ಧರಿರಲಿಲ್ಲ. ಈಗ ಹೊರಬರುತ್ತಿರುವ ಮಾಹಿತಿ ನಿಜಕ್ಕೂ ಸ್ಫೋಟಕ ಅಂಶವನ್ನೇ ಹೊರಹಾಕಿದೆ. ಶ್ರೀದೇವಿಗೆ ಹೃದಯಾಘಾತವೂ ಆಗಿರಲಿಲ್ಲ, ಹೃದಯಸ್ತಂಭನವೂ ಆಗಿರಲಿಲ್ಲ. 

    ಇಂಥಾದ್ದೊಂದು ಸ್ಫೋಟಕ ಮಾಹಿತಿ ಹೊರಹಾಕಿರುವುದು ದುಬೈ ಪೊಲಿಸರ ಪೋಸ್ಟ್​ಮಾರ್ಟಂ ರಿಪೋರ್ಟ್. ಪೋಸ್ಟ್​ಮಾರ್ಟಂ ರಿಪೋರ್ಟ್ ಪ್ರಕಾರ, ಶ್ರೀದೇವಿ ಬಾತ್​ಟಬ್​ಗೆ ಬಿದ್ದು ಮೃತಪಟ್ಟಿದ್ದಾರೆ. ಆಕೆಯ ದೇಹದಲ್ಲಿ ಮದ್ಯದ ಅಂಶ ವಿಪರೀತ ಎನ್ನುವಷ್ಟು ಪತ್ತೆಯಾಗಿದೆ. ಈ ಪ್ರಕಾರ, ಶ್ರೀದೇವಿಯ ಸಾವು ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಸಂಭವಿಸಿದೆ. 

    ಆದರೆ, ಇದು ಆಕಸ್ಮಿಕವೇ..? ಅಥವಾ ಬೇರೇನಾದರೂ ರಹಸ್ಯಗಳಿವೆಯೇ..? ದುಬೈ ಪೊಲೀಸರು ಈಗ ತನಿಖೆ ನಡೆಸುವುದು ಖಚಿತ.  ತನಿಖೆಯ ವೇಳೆ ಶ್ರೀದೇವಿಯವರ ಪತಿ ಬೋನಿ ಕಪೂರ್ ಕೂಡಾ ವಿಚಾರಣೆಗೊಳಪಡಬೇಕು. ಹೋಟೆಲ್ ಸಿಬ್ಬಂದಿಯೂ ವಿಚಾರಣೆ ಎದುರಿಸಬೇಕು. ಹಾಗಾದರೆ, ಶ್ರೀದೇವಿ ಮೃತಪಟ್ಟಿದ್ದು ಹೇಗೆ..? ಈ ನಿಗೂಢ ಸಾವಿನ ರಹಸ್ಯವಾದರೂ ಏನು..? ಇನ್ನೂ ಕೆಲವು ದಿನ ಕಾಯದೇ ವಿಧಿಯಿಲ್ಲ.

    Related Articles :-

    ಶ್ರೀದೇವಿ ನಿಧನಕ್ಕೆ ಕನ್ನಡ ಚಿತ್ರರಂಗ ಕಂಬನಿ

    ಹೇ.. ಕವಿತೆ ನೀನು... ಶ್ರೀದೇವಿ..

    Sridevi said click only two photos! – KM Veeresh Experience

  • ಸಾಕ್ಷಾತ್ಕಾರದ ಜಮುನಾ ಇನ್ನಿಲ್ಲ

    ಸಾಕ್ಷಾತ್ಕಾರದ ಜಮುನಾ ಇನ್ನಿಲ್ಲ

    ಒಲವೆ ಜೀವನ ಸಾಕ್ಷಾತ್ಕಾರ..

    ಒಲವೇ ಮರೆಯದ ಮಮಕಾರ..

    ಒಲವೇ… ಮರೆಯದ ಮಮಕಾರ..

    ಈ ಹಾಡಿನೊಂದಿಗೇ ಕನ್ನಡ ಚಿತ್ರ ರಸಿಕರ ಹೃದಯದಲ್ಲಿ ಶಾಶ್ವತವಾಗಿ ನೆಲೆಯೂರಿದ್ದ ನಟಿ ಜಮುನಾ ಇನ್ನಿಲ್ಲ. ಕನ್ನಡ, ತೆಲುಗು ಸೇರಿದಂತೆ ಹಲವು ಭಾಷೆಗಳಲ್ಲಿ ನೂರಾರು ಚಿತ್ರಗಳಲ್ಲಿ ನಟಿಸಿದ್ದ ಹಿರಿಯ ನಟಿ ಜಮುನಾ ಇಂದು ಬೆಳಗ್ಗೆ ನಿಧನರಾಗಿದ್ದಾರೆ.  86 ವರ್ಷ ವಯಸ್ಸಿನ ಜಮುನಾ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಹೈದರಾಬಾದ್ನಲ್ಲಿರುವ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. 

    ಸಾಕ್ಷಾತ್ಕಾರ, ಭೂಕೈಲಾಸ, ರತ್ನಗಿರಿ ರಹಸ್ಯ, ತೆನಾಲಿ ರಾಮಕೃಷ್ಣ, ಗುರು ಸಾರ್ವಭೌಮ ಶ್ರೀ  ರಾಘವೇಂದ್ರ ಕರುಣೆ, ಆದರ್ಶ ಸತಿ ಅವರು ನಟಿಸಿದ್ದ ಕೆಲವು ಚಿತ್ರಗಳು. ಪೊಲೀಸ್ ಮತ್ತು ದಾದಾ ಅವರು ನಟಿಸಿದ್ದ ಕಡೆಯ ಕನ್ನಡ ಸಿನಿಮಾ. ಒಟ್ಟು 198 ಚಿತ್ರಗಳಲ್ಲಿ ನಟಿಸಿದ್ದರು. ಕನ್ನಡದಲ್ಲಿ ಡಾ.ರಾಜ್, ಅನಂತನಾಗ್, ತೆಲುಗಿನಲ್ಲಿ ಎನ್ಟಿಆರ್, ಅಕ್ಕಿನೇನಿ ನಾಗೇಶ್ವರರಾವ್, ರಂಗರಾವ್, ತಮಿಳಿನಲ್ಲಿ ಎಂಜಿಆರ್, ಶಿವಾಜಿ ಗಣೇಶನ್ ಸೇರಿದಂತೆ ಖ್ಯಾತನಾಮರೊಂದಿಗೆ ನಟಿಸಿದ್ದರು.

    ಜಮುನಾ ಅವರ ಹುಟ್ಟೂರು ಹಂಪಿ.  1936 ಆಗಸ್ಟ್ 30 ರಂದು ಜನಿಸಿದ್ದ ಜಮುನಾ ಕನ್ನಡಕ್ಕಿಂತ ಹೆಚ್ಚಾಗಿ ತೆಲುಗು, ತಮಿಳಿನಲ್ಲಿಯೇ ಖ್ಯಾತಿ ಗಳಿಸಿದ್ದರು. ಹಿಂದಿಯಲ್ಲೂ ನಟಿಸಿದ್ದ ಜಮುನಾ ಕಾಂಗ್ರೆಸ್ ಪಕ್ಷದಿಂದ ಸಂಸದೆಯೂ ಆಗಿದ್ದವರು. ವಾಜಪೇಯಿ ಅವಧಿಯಲ್ಲಿ ಬಿಜೆಪಿ ಸೇರಿದ್ದರು.

    1952ರಲ್ಲಿ ತೆಲುಗಿನ  ಪುಟ್ಟಿಲು ಸಿನಿಮಾ ಅವರ ಮೊದಲ ಸಿನಿಮಾ.  1954ರಲ್ಲಿ ತೆರೆ ಕಂಡ  ಆದರ್ಶ ಸತಿ ಕನ್ಡನದಲ್ಲಿ ಮೊದಲ ಸಿನಿಮಾ. ಜಮುನಾ ಅವರು 1965ರಲ್ಲಿ ಪ್ರೊಫೆಸರ್ ಜುಲುರಿ ರಮಣ ರಾವ್ ಅವರನ್ನು ಮದುವೆ ಆಗಿದ್ದರು. 2014ರಲ್ಲಿ ಪತಿ ಮೃತಪಟ್ಟ ನಂತರ ಮಕ್ಕಳ ಜೊತೆ ನೆಲೆಸಿದ್ದರು.

  • ಸಿಂಹಾದ್ರಿಯ ಸಿಂಹ ವಿಜಯ್ ಕುಮಾರ್ ನಿಧನ

    ಸಿಂಹಾದ್ರಿಯ ಸಿಂಹ ವಿಜಯ್ ಕುಮಾರ್ ನಿಧನ

    ಕನ್ನಡ ಚಿತ್ರರಂಗದ ಹಿರಿಯ ನಿರ್ಮಾಪಕ, ಫಿಲ್ಮ್ ಚೇಂಬರ್ ಮಾಜಿ ಅಧ್ಯಕ್ಷ  ವಿಜಯ್ ಕುಮಾರ್ ವಿಧಿವಶರಾಗಿದ್ದಾರೆ. ಅವರಿಗೆ 63 ವರ್ಷ ವಯಸ್ಸಾಗಿತ್ತು. ಭಾನುವಾರ ರಾತ್ರಿ ಸುಮಾರು 9.30ರಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ವಿಜಯ್ ಕುಮಾರ್.

    ವಿಜಯ್ ಕುಮಾರ್ ಹೆಚ್ಚು ವಿಷ್ಣುವರ್ಧನ್ ಜೊತೆಯಲ್ಲೇ ಗುರುತಿಸಿಕೊಂಡಿದ್ದವರು. ಜಗದೇಕವೀರ, ಲಯನ್ ಜಗಪತಿ ರಾವ್, ಸಿಂಹಾದ್ರಿಯ ಸಿಂಹ ಮೊದಲಾದ ಚಿತ್ರಗಳನ್ನು ನಿರ್ಮಿಸಿದ್ದವರು. ಸಿಂಹಾದ್ರಿಯ ಸಿಂಹ ನಂತರ ಸಿಂಹಾದ್ರಿಯ ಸಿಂಹ ವಿಜಯ್ ಕುಮಾರ್ ಎಂದೇ ಗುರುತಿಸುತ್ತಿದ್ದರು.

    ಕರ್ನಾಟಕ ರೇಷ್ಮೆ ಮಂಡಳಿಯ ಅಧ್ಯಕ್ಷರೂ ಆಗಿದ್ದ ವಿಜಯ್ ಕುಮಾರ್, ಚಿತ್ರರಂಗದ ಹೊರಗೂ ಯಶಸ್ವಿ ಉದ್ಯಮಿ ಮತ್ತು ಕೃಷಿಕರಾಗಿದ್ದವರು. ಕರ್ನಾಟಕ ಫಿಲ್ಮ್ ಚೇಂಬರ್ ಅಧ್ಯಕ್ಷರಾಗಿದ್ದರಷ್ಟೇ ಅಲ್ಲ, ಒಮ್ಮೆ ಫಿಲ್ಮ್ ಫೆಡರೇಷನ್ ಆಫ್ ಇಂಡಿಯಾ ಉಪಾಧ್ಯಕ್ಷರಾಗಿಯೂ ಕೆಲಸ ಮಾಡಿದ್ದರು ವಿಜಯ್ ಕುಮಾರ್.

  • ಹಿರಿಯ ನಟಿ ಭಾರ್ಗವಿ ನಾರಾಯಣ್ ದೇಹದಾನ

    ಹಿರಿಯ ನಟಿ ಭಾರ್ಗವಿ ನಾರಾಯಣ್ ದೇಹದಾನ

    ಭಾರ್ಗವಿ ನಾರಾಯಣ್. ಚಿತ್ರರಂಗ, ರಂಗಭೂಮಿ, ಧಾರಾವಾಹಿ.. ಹೀಗೆ ನಟಿಸುವ ಅವಕಾಶ ಇರುವ ಎಲ್ಲ ರಂಗಗಳಲ್ಲೂ ಜನಪ್ರಿಯರಾಗಿದ್ದ ನಟಿ ಭಾರ್ಗವಿ ನಾರಾಯಣ್. ಪಾತ್ರ ಅದೆಷ್ಟೇ ಚಿಕ್ಕದಾಗಿರಲಿ, ಭಾರ್ಗವಿ ನಾರಾಯಣ್ ಮಾಡಿದರೆ ಆ ಪಾತ್ರಕ್ಕೊಂದು ಘನತೆ ಬಂದುಬಿಡುತ್ತಿತ್ತು. ತಮ್ಮ ನಟನೆಯ ಮೂಲಕ ಪಾತ್ರಗಳಿಗೊಂದು ಘನತೆ ತಂದುಕೊಡುತ್ತಿದ್ದ ನಟಿ ಭಾರ್ಗವಿ ನಾರಾಯಣ್ ನಿಧನರಾಗಿದ್ದಾರೆ. ವಯಸ್ಸು 84 ಆಗಿದ್ದ ಕಾರಣ ವಯೋಸಹಜ ಕಾಯಿಲೆಗಳಿದ್ದವು.

    ಭಾರ್ಗವಿ ನಾರಾಯಣ್ ಅವರ ಇಡೀ ಕುಟುಂಬವೇ ಕಲಾವಿದರ ಕುಟುಂಬ. ಪ್ರಕಾಶ್ ಬೆಳವಾಡಿ ಮತ್ತು ಸುಧಾ ಬೆಳವಾಡಿ ಇವರ ಮಕ್ಕಳು. ಸಂಯುಕ್ತಾ ಹೊರನಾಡು ಇವರ ಮೊಮ್ಮಗಳು. ಎಲ್ಲರೂ ನಟನಾ ವೃತ್ತಿಯಲ್ಲಿರುವವರೇ..

    ಟಿ.ಎನ್. ಸೀತಾರಾಮ್ ಅವರ ಮುಕ್ತ, ಮಂಥನ, ಮುಕ್ತ ಮುಕ್ತ, ಮಾಯಾಮೃಗ ಧಾರಾವಾಹಿಗಳ ಪಾತ್ರಗಳು ದೊಡ್ಡ ಹೆಸರು ತಂದುಕೊಟ್ಟಿದ್ದವು. ರಾಜಕುಮಾರ ಚಿತ್ರದ ಮಗ ಮತ್ತು ಮೊಮ್ಮಕ್ಕಳಿಂದ ದೂರವಾಗಿ, ಅವರನ್ನು ಸೇರಿಕೊಳ್ಳೋಕೆ ಇಂಗ್ಲಿಷ್ ಕಲಿತು ಗೆಲ್ಲುವ ಅಜ್ಜಿಯ ಪಾತ್ರ ಅಭಿಮಾನಿಗಳ ಹೃದಯ ಗೆದ್ದಿತ್ತು.

    ಭಾರ್ಗವಿ ನಾರಾಯಣ್ ದೇಹದಾನ ಮಾಡಿದ್ದರು. ಹೀಗಾಗಿ ಇಂದು ಅವರ ಮನೆಯಲ್ಲೇ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ನಂತರ ಆಸ್ಪತ್ರೆಯವರಿಗೆ ಹಸ್ತಾಂತರ ಮಾಡಲಾಗುತ್ತದೆ.

  • ಹಿರಿಯ ನಿರ್ದೇಶಕ ಹ.ಸೂ.ರಾಜಶೇಖರ್ ನಿಧನ

    ha su rajashekar no more

    ಭೈರವಿ, ಸೂಪರ್ ಪೊಲೀಸ್, ಪಾಪಿಗಳ ಲೋಕದಲ್ಲಿ, ರಫ್ & ಟಫ್, ಕರ್ಫ್ಯೂ, ಗರುಡ, ಬಣ್ಣದ ಹೆಜ್ಜೆ, ಇನ್ಸ್ಪೆಕ್ಟರ್ ಜಯಸಿಂಹ, ಧೈರ್ಯ, ನಿರ್ಬಂಧ,  ಸೇರಿದಂತೆ ಹಲವು ಚಿತ್ರಗಳನ್ನು ನಿರ್ದೇಶಿಸಿದ್ದ ಖ್ಯಾತ ನಿರ್ದೇಶಕ ಹ.ಸೂ. ರಾಜಶೇಖರ್ ನಿಧನರಾಗಿದ್ದಾರೆ. ಅವರಿಗೆ ೬೦ ವರ್ಷ ವಯಸ್ಸಾಗಿತ್ತು.

    ಕನ್ನಡದಲ್ಲಷ್ಟೇ ಅಲ್ಲ, ತುಳುವಿನಲ್ಲೂ ಕೂಡಾ ಸಿನಿಮಾ ನಿರ್ದೇಶಿಸಿದ್ದರು ಹ.ಸೂ.ರಾಜಶೇಖರ್. ರಿಕ್ಷಾ ಡ್ರೆöÊವರ್, ಒರಿಯದೋರಿ ಅಸಲ್ ಸೇರಿದಂತೆ ಹಲವು ಚಿತ್ರಗಳಿಗೆ ಆ್ಯಕ್ಷನ್ ಕಟ್ ಹೇಳಿದ್ದರು ರಾಜಶೇಖರ್. ಹ.ಸೂ.ರಾಜಶೇಖರ್ ಮೂಲತಃ ಚಾಮರಾಜನಗರ ಜಿಲ್ಲೆಯ ಹರಪನಹಳ್ಳಿಯವರು.

  • ಹೇ.. ಕವಿತೆ ನೀನು... ಶ್ರೀದೇವಿ..

    dream girl sridevi

    ಹೇ.. ಕವಿತೆ ನೀನು.. ರಾಗಾ ನಾನು.. ನಾನೂ ನೀನು.. ಒಂದಾಗೆ ಈ ಬಾಳೇ ಪ್ರೇಮಗೀತೆಯಂತೆ.. ಈ ಹಾಡು ಕೇಳಿದ್ದೀರಾ... ಅದು ಪ್ರಿಯಾ ಚಿತ್ರದ ಗೀತೆ. ಆ ಹಾಡಿನ ಮುಂದಿನ ಸಾಲು ನೋಡಿ. ನಿನ್ನ ರೂಪ ಕಂಡು ತಂಗಾಳಿ ಬಂದಿದೆ...ಹೊನ್ನ ಮೈಯ್ಯ ಸೋಕಿ ಆನಂದ ಹೊಂದಿದೆ.. ತನ್ನಾಸೆ ಇನ್ನೂ ತೀರದಾಗಿ.. ಬೀಸಿ ಬೀಸಿ ಬಂದು ಹೋಗಿ.. ಹೇ.. ಕವಿತೆ ನೀನು..

    ಆ ಹಾಡಿನಲ್ಲಿ ತಂಗಾಳಿ ಎಷ್ಟು ಬಾರಿ ಸೋಕಿದರೂ ಆಸೆಯೇ ತೀರದಂತೆ ಚೆಲುವೆ ಎಂದು ಚಿ.ಉದಯಶಂಕರ್ ಬಣ್ಣಿಸಿದ್ದುದು ಬೇರ್ಯಾರನ್ನೋ ಅಲ್ಲ..ಶ್ರೀದೇವಿಯನ್ನ. ಶ್ರೀದೇವಿ ಎಂಬ ಅದ್ಭುತ ದೇವಕನ್ನಿಕೆಯನ್ನ ಆ ಹಾಡಿನಲ್ಲಿ ಹೊಗಳುವುದು ರಜಿನಿಕಾಂತ್. ಕೃಷ್ಣ ಸುಂದರ. ಯೇಸುದಾಸ್ ಮತ್ತು ಜಾನಕಿ ಕಂಠದಲ್ಲಿ ಮೂಡಿ ಬಂದಿದ್ದ ಆ ಗೀತೆ ಅಂದಿಗೂ ಮಧುರ. ಎಂದೆಂದಿಗೂ ಮಧುರ. ಆಕೆಯ ಸೌಂದರ್ಯ, ಅಭಿನಯ ಎಂದೆಂದಿಗೂ ಅಮರ.

    ಆಕೆಯನ್ನು ಮತ್ತೆ ನೋಡಬೇಕೆಂದೆ ನೀವು ಭಕ್ತ ಕುಂಭಾರ ಚಿತ್ರವನ್ನು ನೆನಪಿಸಿಕೊಳ್ಳಬೇಕು. ಆ ಚಿತ್ರದಲ್ಲಿ ಭಕ್ತ ಜ್ಞಾನದೇವನ ಮೇಲೆ ರೊಟ್ಟಿ ಬೇಯಿಸುವ ಪುಟ್ಟ ಹುಡುಗಿಯಾಗಿ ಕಂಗೊಳಿಸುತ್ತಾರೆ ಶ್ರೀದೇವಿ. ಆಗಿನ್ನೂ ಶ್ರೀದೇವಿಗೆ ಐದೋ ಆರೋ ವರ್ಷ ಇರಬೇಕು.

    ನೀವು ನೀ ಬರೆದ ಕಾದಂಬರಿ ಸಿನಿಮಾ ನೋಡಿದ್ದೀರಲ್ಲವೇ.. ಕನ್ನಡದಲ್ಲಿ ಭವ್ಯಾ ಮಾಡಿದ್ದ ಪಾತ್ರವನ್ನು ತಮಿಳಿನಲ್ಲಿ ಮಾಡಿದ್ದವರು ಶ್ರೀದೇವಿ. ಅಪ್ಪಟ ಸೌಂದರ್ಯ ದೇವತೆಯಂತೆ ಆಕೆಯನ್ನು ತೋರಿಸಲು ಒಂದೇ ಒಂದು ಡ್ರೆಸ್‍ಗೆ ಲಕ್ಷಾಂತರ ರೂಪಾಯಿ ಕೊಟ್ಟು ತರಿಸಿದ್ದರಂತೆ ದ್ವಾರಕೀಶ್.

    ಆಕೆಯ ಕಣ್ಣಿನಲ್ಲಿ ಅದ್ಭುತವಾದ ಶಕ್ತಿಯಿದೆ. ಕಣ್ಣಿನಲ್ಲೇ ಹೆದರಿಸುತ್ತಿದ್ದ ನಟಿ ಆಕೆ ಎನ್ನುತ್ತಿದ್ದರು ರಾಜ್‍ಕುಮಾರ್. ಶ್ರೀದೇವಿಯನ್ನು ಕನ್ನಡಕ್ಕೆ ಕರೆತರಬೇಕು ಎಂದು ಹಲವು ಬಾರಿ ಪ್ರಯತ್ನಪಟ್ಟವರಲ್ಲಿ ರವಿಚಂದ್ರನ್ ಒಬ್ಬರು. ಆದರೆ, ಆಕೆಗೆ ಸರಿಹೊಂದುವಂತ ಕಥೆ ಸಿಕ್ಕಾಗ ಶ್ರೀದೇವಿ ಸಿಗುತ್ತಿರಲಿಲ್ಲ. ಜೊತೆಗೆ ಶ್ರೀದೇವಿಯ ಆಗಿನ ಕಾಲದ ಸಂಭಾವನೆಯಲ್ಲಿ ಒಂದು ಚಿತ್ರವನ್ನೇ ಮಾಡಿ ಮುಗಿಸಬಹುದಿತ್ತು. ಹೀಗಾಗಿ ಕನಸುಗಾರನ ಕ್ಯಾಮೆರಾಗೆ ಶ್ರೀದೇವಿ ಸಿಗಲೇ ಇಲ್ಲ.

    ಆಕೆಯನ್ನು ಹುಚ್ಚರಂತೆ ಆರಾಧಿಸಿದ ಅಭಿಮಾನಿಗಳಲ್ಲಿ ರಾಮ್‍ಗೋಪಾಲ್ ವರ್ಮಾನ ಈ ಒಂದು ಮಾತು ಸಾಕು. ಆಕೆ ಎಂತಹವರೆಂದು ಬಣ್ಣಿಸಲು. ``ಶ್ರೀದೇವಿ ಲಕ್ಷ  ವರ್ಷಗಳಿಗೊಮ್ಮೆ ಜನಿಸಬಹುದಾದ ಅದ್ಭುತ. ಬ್ರಹ್ಮದೇವನ ವಿಶೇಷ ಸೌಂದರ್ಯ ಸೃಷ್ಟಿಯ ಶಿಲ್ಪ ಶ್ರೀದೇವಿ. ಆಕೆಯನ್ನು ಪಡೆಯುವ ಅರ್ಹತೆ, ಬೋನಿಕಪೂರ್‍ಗೆ ಇರಲಿಲ್ಲ. ಹಾಗೆ ನೋಡಿದರೆ, ನನ್ನನ್ನೂ ಸೇರಿದಂತೆ ಜಗತ್ತಿನ ಯಾವ ಪುರುಷನಿಗೂ ಆಕೆಯನ್ನು ಪಡೆಯುವ ಅರ್ಹತೆ ಇರಲಿಲ್ಲ. ಆಕೆ ಬೆಳಕಿನ ರೇಖೆ.. ಆಕೆಯನ್ನು ಬೆಳಕಿನ ಅರಮನೆಯಲ್ಲಿಟ್ಟು ಆರಾಧಿಸಬೇಕು...''

    ವರ್ಮಾನ ಕನಸುಗಳು, ಬಣ್ಣನೆಗಳು ಹೀಗೆಯೇ ಮುಂದುವರೆಯುತ್ತವೆ. ಅಭಿಮಾನಿಗಳ ಕನವರಿಕೆಗಳೂ ಅಷ್ಟೆ..ಕವಿತೆಯಂತೆ... ಹೌದು.. ಶ್ರೀದೇವಿ.. ಒಂದು ಅದ್ಭುತ ಕವಿತೆ. ಅಂದಹಾಗೆ ಆಕೆಯ ಮೊದಲು ಹೆಸರು ಶ್ರೀಅಮ್ಮಯ್ಯಾಂಗಾರ್ ಅಯ್ಯಪ್ಪನ್ ಅಂತೆ. ಆಕೆ ತನ್ನ ಸೌಂದರ್ಯಕ್ಕೆ ತಕ್ಕಂತೆಯೇ ಶ್ರೀದೇವಿ ಎಂದು ಬದಲಿಸಿಕೊಂಡುಬಿಟ್ಟರು. ಶ್ರೀದೇವಿ ಎಂದರೆ ಮಹಾಲಕ್ಷ್ಮಿ. ಸಿರಿಯ ದೇವತೆ ಎಂದರ್ಥ. ಈಗ ಭಾರತೀಯ ಚಿತ್ರರಂಗದ ಸೌಂದರ್ಯ ಸಿರಿಯೂ ಇಲ್ಲ. ಸೌಂದರ್ಯ ದೇವಿಯೂ ಇಲ್ಲ.