ಇತ್ತೀಚೆಗಷ್ಟೇ ಪದ್ಮಭೂಷಣ ಪುರಸ್ಕಾರಕ್ಕೆ ಪಾತ್ರರಾಗಿದ್ದ ಖ್ಯಾತ ಗಾಯಕಿ ವಾಣಿ ಜಯರಾಂ (78) ನಿಧನರಾಗಿದ್ದಾರೆ. ಚೆನ್ನೈನ ನುಂಗಂಬಾಕ್ಕಂನ ಹಡ್ಡೋಸ್ ರಸ್ತೆಯಲ್ಲಿರುವ ಅವರ ನಿವಾಸದಲ್ಲಿ ಇಂದು ಕೊನೆಯುಸಿರೆಳೆದಿದ್ದಾರೆ. ಅವರ ಹಣೆಗೆ ಗಾಯವಾಗಿದ್ದು, ಇದೊಂದು ನಿಗೂಢ ಸಾವು ಎಂದು ಬಣ್ಣಿಸಲಾಗುತ್ತಿದೆ.ಸಾವಿನ ಕಾರಣ ಗಾಯದ ಕಾರಣಕ್ಕಾಗಿ ನಿಗೂಢವಾಗಿಯೇ ಉಳಿದಿದೆ.
ಕನ್ನಡ ಸೇರಿದಂತೆ ಅನೇಕ ಭಾಷೆಗಳ ಚಿತ್ರಗಳಿಗೆ ಹಾಡಿದ ಹೆಗ್ಗಳಿಕೆ ಇವರದ್ದು. 1974ರಲ್ಲಿ ಪೋಷ್ಸುಮಂಗಲಿ ಚಿತ್ರದ ಮೂಲಕ ಗಾಯಕಿಯಾಗಿ ಸಿನಿಮಾ ರಂಗ ಪ್ರವೇಶಿಸಿದ್ದ ವಾಣಿ ಜಯರಾಂ, 10000ಕ್ಕೂ ಹೆಚ್ಚು ಗೀತೆಗಳನ್ನು ಹಾಡಿದ್ದಾರೆ. ಮೂರು ಬಾರಿ ರಾಷ್ಟ್ರ ಪ್ರಶಸ್ತಿ ಕೂಡ ಬಂದಿದೆ.
ತಮಿಳುನಾಡಿನವರಾದರೂ ಎಲ್ಲ ಭಾಷೆಗಳಲ್ಲೂ ಖ್ಯಾತಿ ಗಳಿಸಿದ್ದ ವಾಣಿ ಜಯರಾಂ, ಕನ್ನಡ, ಹಿಂದಿ, ತೆಲುಗು, ತಮಿಳು, ಮಲಯಾಳಂ, ಮರಾಠಿ, ಓಡಿಯಾ, ಗುಜರಾತಿ, ಬಂಗಾಳಿ ಸೇರಿದಂತೆ ನಾನಾ ಭಾಷೆಗಳ ಸಿನಿಮಾಗಳಿಗೆ ಹಾಡಿದ ಹೆಗ್ಗಳಿಕೆ ಇವರದ್ದು. ಕನ್ನಡದಲ್ಲಿಯೂ ಸಾವಿರಕ್ಕೂ ಹೆಚ್ಚು ಗೀತೆಗಳಿಗೆ ಧ್ವನಿ ನೀಡಿದ್ದಾರೆ. ಕನ್ನಡದಲ್ಲಿ ಪುಟ್ಟಣ್ಣ ಕಣಗಾಲ್ ಚಿತ್ರಗಳಿಗೆ ಹೆಚ್ಚು ಹಾಡಿದ್ದವರು.
ಮೂಡಣದಾ ರವಿ, ಮೂಡಲು ಮಮತೆಯಲಿ..
ಭಾವವೆಂಬ ಹೂವು ಅರಳಿ, ಗಾನವೆಂಬ ಗಂಧ ಚೆಲ್ಲಿ, ರಾಗವೆಂಬ ಜೇನ ಹೊನಲು ತುಂಬಿ ಹರಿಯಲಿ..
ನಗು ನೀ ನಗು, ಕಿರು ನಗೆ ನಗು..
ಈ ಶತಮಾನದ ಮಾದರಿ ಹೆಣ್ಣು..
ದಾರಿ ಕಾಣದಾಗಿದೆ ರಾಘವೇಂದ್ರನೆ..
ಸವಿ ನೆನಪುಗಳು ಬೇಕು ಸವಿಯಲೀ ಬದುಕು’..
ಆ ದೇವರೆ ನುಡಿದ ಮೊದಲ ನುಡಿ..
ಬಂದಿದೆ ಬದುಕಿನ ಬಂಗಾರದಾ ದಿನ..
ಜೀವನ ಸಂಜೀವನ..
ಹಾಡು ಹಳೆಯದಾದರೇನು ಭಾವ ನವ ನವೀನ…
ಸದಾ ಕಣ್ಣಲಿ ಒಲವಿನಾ ಕವಿತೆ ಹಾಡುವೆ..
ಪ್ರಿಯತಮಾ... ಕರುಣೆಯಾ ತೋರೆಯಾ..
ಬೆಸುಗೆ... ಬೆಸುಗೆ... ಜೀವನವೆಲ್ಲಾ ಸುಂದರ ಬೆಸುಗೆ..
ಕನಸಲೂ ನೀನೆ ಮನಸಲೂ ನೀನೆ...
ನಾ ನಿನ್ನ ಮರೆಯಲಾರೆ..
ಶುಭಮಂಗಳ ಸುಮುಹೂರ್ತವೇ..
ತೆರೆದಿದೆ ಮನೆ ಓ ಬಾ ಅತಿಥಿ..
ಮಧುರಂ, ವದನಂ ಮಧುರಂ…
ನನ್ನೆದೆ ವೀಣೆಯು ಮಿಡಿಯುವುದು..
ದೇವ ಮಂದಿರದಲ್ಲಿ ದೇವರು ಕಾಣಲೇ ಇಲ್ಲ….
ವಾಣಿ ಜಯರಾಂ ಅವರ ಖ್ಯಾತ ಹಾಡುಗಳನ್ನು ಹೇಳುತ್ತಾ ಹೋದರೆ ಮುಗಿಯುವುದೇ ಇಲ್ಲ. ಇತ್ತೀಚೆಗಷ್ಟೇ ನಿಧನರಾದ ಕೆ.ವಿಶ್ವನಾಥ್ ಅವರ ಶಂಕರಾಭರಣಂ ಕೂಡಾ ಹಿನ್ನೆಲೆ ಗಾಯನ ಇವರದ್ದೇ..
ವಾಣಿ ಜಯರಾಂ ಗಝಲ್, ಭಜನ್, ಭಕ್ತಿಗೀತೆಗಳ ಗಾಯನದಲ್ಲೂ ಮುಂಚೂಣಿಯಲ್ಲಿದ್ದಾರೆ. ಮಲಯಾಳಂ, ತಮಿಳು, ಹಿಂದಿ ಭಾಷೆಗಳಲ್ಲಿ ಅವರ ಕವನ ಸಂಕಲನಗಳು ಪ್ರಕಟವಾಗಿವೆ. 'ಪಂಡಿತ್ ಬಿರ್ಜು ಮಹಾರಾಜ್'ರೊಂದಿಗೆ ಸೇರಿ ಗೀತ ಗೋವಿಂದವನ್ನು ಕಥಕ್‌ಗೆ ಅಳವಡಿಸಿರುವುದು ಅವರ ಗಮನಾರ್ಹ ಸಾಧನೆ. ಚೆನ್ನೈ ನಗರದಲ್ಲಿ ಇವರು ನಡೆಸುತ್ತಿದ್ದ 'ಸಂಗೀತ ಸಂಶೋಧನಾ ಕೇಂದ್ರ' ವರ್ಷವಿಡೀ 'ರಸಗ್ರಹಣ ಶಿಬಿರ' ಮತ್ತು 'ವಿಚಾರ ಸಂಕೀರ್ಣ'ಗಳನ್ನು ಏರ್ಪಡಿಸುತ್ತದೆ. ಶಾಲಾ ಮಕ್ಕಳಿಗಾಗಿ ವಿಶೇಷ ಶಿಬಿರಗಳಿವೆ. ಸಂಗೀತದಿಂದ ಕ್ಯಾನ್ಸರ್ ರೋಗಿಗಳ ನೋವು ನಿವಾರಿಸುವ ಕುರಿತು ಸಹಾ ಶಿಬಿರಗಳನ್ನು ಆಯೋಜಿಸಿದ್ದಾರೆ. ಸಂಗೀತ ಮೌಲ್ಯಗಳ ಕುರಿತ ವಿದ್ವತ್ಪೂರ್ಣ ಉಪನ್ಯಾಸಗಳಿಗೆ ಸಹಾ ಅವರು ಪ್ರಸಿದ್ಧಿ ಪಡೆದಿದ್ದಾರೆ.
ತಮಿಳಿನಲ್ಲಿ ‘ಅಪೂರ್ವ ರಾಗಂಗಳ್’, ‘ತೆಲುಗಿನಲ್ಲಿ ಶಂಕರಾಭರಣಂ’, ‘ಸ್ವಾತಿ ಕಿರಣಂ’ ಚಿತ್ರಗಳಲ್ಲಿನ ಹಿನ್ನಲೆಗಾಯನಕ್ಕೆ ರಾಷ್ಟ್ರಪ್ರಶಸ್ತಿ, ಹಲವಾರು ರಾಜ್ಯಗಳ ಶ್ರೇಷ್ಠ ಗಾಯಕಿ ಪ್ರಶಸ್ತಿ, ಸಂಗೀತ ಸಂಮಾನ್, ಹಿಂದಿ ಭಾಷೆಯನ್ನೊಳಗೊಂಡಂತೆ ಹಲವು ಭಾಷೆಗಳ ಚಿತ್ರಗಳ ಗಾಯನಕ್ಕಾಗಿ ಫಿಲಂ ಫೇರ್ ಪ್ರಶಸ್ತಿಗಳನ್ನೂ ಪಡೆದಿದ್ದಾರೆ.