` kasturi nivasa, - chitraloka.com | Kannada Movie News, Reviews | Image

kasturi nivasa,

  • ರಾಜ್ ಅಭಿಮಾನಿಗಳ ಮನವಿಗೆ ಶರಣಾದ ದಿನೇಶ್ ಬಾಬು, ರಚಿತಾ ರಾಮ್

    dinesh baboo's next film titled kasturi nivasa

    ಕಸ್ತೂರಿ ನಿವಾಸ. ಡಾ.ರಾಜ್ ಅಭಿನಯದ ಹಲವಾರು ಕ್ಲಾಸಿಕ್ ಚಿತ್ರಗಳಲ್ಲಿ ಇದೂ ಒಂದು. ಈಗ ಈ ಚಿತ್ರದ ಟೈಟಲ್‍ನ್ನು ಇಟ್ಟುಕೊಂಡು ಸಿನಿಮಾ ಮಾಡಲು ಹೊರಿಟಿದ್ದರು ನಿರ್ದೇಶಕ ದಿನೇಶ್ ಬಾಬು. ನಾಯಕಿಯಾಗಿದ್ದವರು ರಚಿತಾ ರಾಮ್. ಚಿತ್ರ ಸೆಟ್ಟೇರಿಯೂ ಆಗಿತ್ತು. ಇದು ದಿನೇಶ್ ಬಾಬು ಅವರ 50ನೇ ಸಿನಿಮಾ ಎನ್ನುವುದು ವಿಶೇಷ.

    ಆದರೆ ಅಣ್ಣಾವ್ರ ಮಾಸ್ಟರ್ ಪೀಸ್ ಚಿತ್ರದ ಟೈಟಲ್ ಬೇಡ. ಅದನ್ನು ಬಿಟ್ಟು ಬಿಡಿ ಎಂದು ರಾಜ್ ಅಭಿಮಾನಿಗಳು ದಿನೇಶ್ ಬಾಬು ಅವರಿಗೆ ಮನವಿ ಮಾಡಿದ್ದರು.

    ದಿನೇಶ್ ಬಾಬು ಅವರಿಗೂ ಅಷ್ಟೆ, ಡಾ.ರಾಜ್ ಎಂದರೆ ಅಪಾರ ಗೌರವ. ಈ ಗೌರವದಿಂದಾಗಿಯೇ ಟೈಟಲ್ ಇಟ್ಟಿದ್ದ ದಿನೇಶ್ ಬಾಬು, ಕೊನೆಗೆ ಅಭಿಮಾನಿಗಳ ಮನವಿಗೆ ಮಣಿದಿದ್ದಾರೆ. ಮುಹೂರ್ತವಾದ ಒಂದೇ ದಿನಕ್ಕೆ ಚಿತ್ರದ ಟೈಟಲ್ ಕೈಬಿಡಲು ಒಪ್ಪಿಕೊಂಡಿದ್ದಾರೆ. ಸದ್ಯಕ್ಕೆ ಕಸ್ತೂರಿ ನಿವಾಸ ಅನ್ನೋ ಟೈಟಲ್ಲಿಗೆ ಬದಲು ಕಸ್ತೂರಿ ಎಂದಷ್ಟೇ ಟೈಟಲ್ ಇಟ್ಟುಕೊಳ್ಳಲು ನಿರ್ಧರಿಸಿದ್ದಾರೆ.

  • ಅದು ಕಸ್ತೂರಿ ನಿವಾಸ.. ಪುನೀತ್ ಅಣ್ಣಾವ್ರಾದ್ರೆ.. ಪ್ರಥಮ್ ಜಯಂತಿ..!

    puneeth's kasturi nivasa

    ನಟ, ನಿರ್ದೇಶಕ ಪ್ರಥಮ್ ಸದಾ ಸುದ್ದಿಯಲ್ಲಿರೋ ಸುದ್ದಿ ಸ್ಟಾರ್. ಏನಾದ್ರೊಂದು ಮಾಡ್ತಾನೇ ಇರ್ತಾರೆ ಪ್ರಥಮ್. ಈಗಲೂ ಅಷ್ಟೆ.. ಈ ಬಾರಿ ಪ್ರಥಮ್ ತುಂಟಾಟಕ್ಕೆ ಬೇಸ್ತು ಬಿದ್ದಿರೋದು ಪುನೀತ್ ರಾಜ್‌ಕುಮಾರ್.

    ನಟಭಯಂಕರ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭಕ್ಕೆ ಪುನೀತ್ ಅವರನ್ನು ಆಹ್ವಾನಿಸಲು ತೆರಳಿದ್ದ ಪ್ರಥಮ್ ಪುನೀತ್ ಎದುರು ತಮಗೆ ಇಷ್ಟವಾದ ಕಸ್ತೂರಿ ನಿವಾಸದ ಕಥೆ ಹೇಳಿದ್ದಾರೆ. ಅಷ್ಟಕ್ಕೇ ನಿಂತಿಲ್ಲ..

    ಪುನೀತ್ ಅಣ್ಣಾವ್ರಂತೆ ನಟಿಸಬೇಕು, ಪ್ರಥಮ್ ಜಯಂತಿಯAತೆ ನಟಿಸಬೇಕು ಎಂದು ಹೇಳಿ, ಜಯಂತಿಯಾಗಿ ನಟಿಸಿ ಅಣ್ಣಾವ್ರಿಂದ ಅರ್ಥಾತ್ ಪುನೀತ್ ಅವರಿಂದ ಭಾಷೆ ತಗೊಂಡಿದ್ದಾರೆ.

    ಈಗ ಪುನೀತ್ ಜಯಂತಿಗೆ ಅರ್ಥಾತ್ ಪ್ರಥಮ್ ಅವರಿಗೆ ಭಾಷೆ ಕೊಟ್ಟಿದ್ದಾರೆ. ಆಡಿಯೋ ಬಿಡುಗಡೆಗೆ ಬಂದೇ ಬರ್ತೀನಿ ಅಂತಾ. ಅಣ್ಣಾವ್ರು ಕೊಟ್ಟ ಮಾತು ತಪ್ಪೋದಿಲ್ಲ. 

  • ಜನವರಿ 29. ಅಣ್ಣಾವ್ರ ಕಸ್ತೂರಿ ನಿವಾಸಕ್ಕೆ 50

    ಜನವರಿ 29. ಅಣ್ಣಾವ್ರ ಕಸ್ತೂರಿ ನಿವಾಸಕ್ಕೆ 50

    ಡಾ. ರಾಜ್‌ ಅಭಿನಯದ ಮಾಸ್ಟರ್ ಪೀಸ್ಗಳಲ್ಲಿ ಒಂದು ಕಸ್ತೂರಿ ನಿವಾಸ. ಈ ಚಿತ್ರಕ್ಕೀಗ 50 ವರ್ಷ. ಹೌದು, ಮೊನ್ನೆ ಮೊನ್ನೆಯಷ್ಟೇ ಈ ಚಿತ್ರ ಅರ್ಧ ಶತಮಾನ ಪೂರೈಸಿದೆ. 1971ರ ಜನವರಿ 29ರಂದು ತೆರೆಗೆ ಬಂದಿದ್ದ ಸಿನಿಮಾ, 2021ರ ಜನವರಿ 29ಕ್ಕೆ 50 ವರ್ಷ ಪೂರೈಸಿದ ದಾಖಲೆ ಬರೆದಿದೆ. ಈ ಚಿತ್ರದ ದಾಖಲೆಗಳು ಒಂದೆರಡಲ್ಲ..

    ಈ ಚಿತ್ರದಲ್ಲಿ ಡಾ.ರಾಜ್ ರವಿ ಅನ್ನೋ ಉದ್ಯಮಿಯ ಪಾತ್ರದಲ್ಲಿ ನಟಿಸಿದ್ದರು. ಕೊಡುಗೈ ದೊರೆ ಉದ್ಯಮಿ, ಭಗ್ನಪ್ರೇಮಿ, ಗೆಳೆಯನಿಗೆ ಸಹಾಯ ಮಾಡಿ ಗೆಳೆಯನಿಂದಲೇ ಮೋಸ ಹೋಗುವ ಪಾತ್ರದಲ್ಲಿ ರಾಜ್ ನಟನೆ ಅಮೋಘವಾಗಿತ್ತು.

    ರಾಜ್ ಎದುರು ನಾಯಕಿಯಾಗಿ ನಟಿಸಿದ್ದವರು ಜಯಂತಿ ಮತ್ತು ಆರತಿ.

    ಕೆಸಿಎನ್‌ ಗೌಡ ನಿರ್ಮಾಣದ ಚಿತ್ರಕ್ಕೆ ದೊರೈ ಭಗವಾನ್ ಜೋಡಿಯ ನಿರ್ದೇಶನವಿತ್ತು. ರಾಜಾಶಂಕರ್, ಕೆಎಸ್‌ ಅಶ್ವತ್ಥ್ ಅವರ ಪೋಷಕ ಪಾತ್ರಗಳೂ ಜನರಿಗೆ ಇಷ್ಟವಾಗಿದ್ದವು.

    ಈ ಚಿತ್ರದಲ್ಲಿದ್ದದ್ದು 6 ಹಾಡು. ಜಿಕೆ ವೆಂಕಟೇಶ್ ಸಂಗೀತ ನಿರ್ದೇಶನದ ಎಲ್ಲ ಹಾಡುಗಳೂ ಸೂಪರ್ ಹಿಟ್. ಎಲ್ಲ ಹಾಡುಗಳಿಗೂ ಸಾಹಿತ್ಯ ಒದಗಿಸಿದ್ದವರು ಚಿ.ಉದಯ್ ಶಂಕರ್.

    ಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗದು.. & ಆಡಿಸಿದಾತ ಬೇಸರ ಮೂಡಿ ಆಟ ಮುಗಿಸಿದ.. ಒಂದೇ ಟ್ರ್ಯಾಕ್ನಲ್ಲಿ ಇರುವ ಎರಡು ವಿಷಾದ ಗೀತೆಗಳು. ನೀ ಬಂದು ನಿಂತಾಗ ನಿಂತು ನೀ ನಕ್ಕಾಗ.. ಹಾಡಂತೂ ಇಂದಿಗೂ ಪ್ರೇಮಿಗಳ ಎದೆಯಲ್ಲಿ ರೋಮಾಂಚನ ಸೃಷ್ಟಿಸುತ್ತದೆ. ಆಡೋಣ ನೀನು ನಾನು.. ಹಾಡು ಮಗುವಿಗೆ ಹಾಡುಗ ಜೋಗುಳ ಗೀತೆಯಾದರೆ, ಎಲ್ಲೇ ಇರು ಹೇಗೇ ಇರು.. ಹಾಡು ಪ್ರೇಮಿ.. ಪ್ರೇಮಿಗಾಗಿಯೇ ಹಾಡುವ ಗೀತೆ. ಓ ಗೆಳೆಯ.. ಅನ್ನೋ ಕ್ಯಾಬರೆ ಸಾಂಗ್ ಕೊಟ್ಟ ಥ್ರಿಲ್ಲೇ ಬೇರೆ.

    ಈ ಕ್ಲಾಸಿಕ್ ಸಿನಿಮಾದ ಓಪನಿಂಗ್ ಡಲ್ ಹೊಡೆದಿತ್ತು. ಸಿನಿಮಾ ಹೌಸ್ಫುಲ್ ಪ್ರದರ್ಶನ ಕಂಡಿದ್ದು 9ನೇ ವಾರದ ಬಳಿಕ. ಅದಾದ ಮೇಲೆ ಈ ಚಿತ್ರ ಸತತ 100 ವಾರ ಓಡಿ ದಾಖಲೆಯನ್ನೇ ಬರೆಯಿತು. ಕಸ್ತೂರಿ ನಿವಾಸ ಚಿತ್ರವನ್ನ ಕಲರ್ನಲ್ಲಿ 2014ರಲ್ಲಿ ರಿಲೀಸ್ ಮಾಡಿದಾಗಲೂ 100 ಡೇಸ್ ಓಡಿದ್ದು ಈ ಚಿತ್ರದ ಸಾಧನೆ.

    ವಿಶೇಷವೆಂದರೆ ಈ ಚಿತ್ರವನ್ನು ಕಲರ್ನಲ್ಲಿ ಚಿತ್ರೀಕರಿಸಲು ಮುಂದಾಗಿದ್ದ ಚಿತ್ರತಂಡ, ಬಜೆಟ್ 5 ಲಕ್ಷ ದಾಟಲಿದೆ ಎಂಬ ಕಾರಣಕ್ಕೆ ಬ್ಲಾಕ್ & ವೈಟ್ನಲ್ಲಿ ಚಿತ್ರೀಕರಣ ಮಾಡಿತಂತೆ. ಈ ಚಿತ್ರಕ್ಕೆ ಕಥೆ ಬರೆದಿದ್ದವರು ಜಿ.ಬಾಲಸುಬ್ರಹ್ಮಣ್ಯಂ. ಶಿವಾಜಿ ಗಣೇಶನ್ ಅವರನ್ನು ಕಲ್ಪಿಸಿಕೊಂಡು ಬರೆದಿದ್ದ ಕಥೆ, ಶಿವಾಜಿ ಗಣೇಶನ್ಗೇ ಇಷ್ಟವಾಗಲಿಲ್ಲ.  ದುರಂತದ ಕ್ಲೈಮಾಕ್ಸ್ ಬೇಡ ಎಂದ ಕಾರಣಕ್ಕೆ ಕನ್ನಡಕ್ಕೆ ಬಂದ ಕಥೆ ಕಸ್ತೂರಿ ನಿವಾಸ. ತಮಿಳಿನಲ್ಲಿ ಈ ಕಥೆಗಾಗಿ 25 ಸಾವಿರ ಖರ್ಚು ಮಾಡಲಾಗಿತ್ತು. ನಂತರ ಇದನ್ನು ಕನ್ನಡಕ್ಕೆ 38 ಸಾವಿರ ಕೊಟ್ಟು ತರಲಾಯ್ತು. ವಿಶೇಷ ಅಂದ್ರೆ ಈ ಕಥೆ ಅಣ್ಣಾವ್ರ ಸಹೋದರ ವರದಪ್ಪನವರಿಗೂ ಅಷ್ಟು ಇಷ್ಟವಾಗಿರಲಿಲ್ಲ. ಕ್ಲೈಮಾಕ್ಸ್ ಬಗ್ಗೆ ಅವರಿಗೂ ತಕರಾರಿತ್ತು. ಆದರೆ ಡಾ.ರಾಜ್ ಅವರೇ ಒಪ್ಪಿಸಿದರಂತೆ. ನಂತರ ಆ ಸಿನಿಮಾ ಇತಿಹಾಸವನ್ನೇ ಸೃಷ್ಟಿಸಿಬಿಡ್ತು.

    20 ದಿನದಲ್ಲಿ ರೆಡಿಯಾದ ಚಿತ್ರಕ್ಕೆ ಆಗಿನ ಕಾಲಕ್ಕೆ 3 ಲಕ್ಷದ 75 ಸಾವಿರ ಬಜೆಟ್ ಆಗಿತ್ತು. ಅದೇ ಚಿತ್ರವನ್ನು ಕಲರ್ ಮಾಡಿದಾಗ ಚಿತ್ರಕ್ಕೆ ಬಣ್ಣ ತುಂಬಲು 20 ತಿಂಗಳು ತಗುಲಿತ್ತು. ಮೊದಲ ವಾರದಲ್ಲೇ ಅಣ್ಣಾವ್ರ ಹಳೆಯ ಚಿತ್ರ 2 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿತ್ತು ಎನ್ನಲಾಗಿದೆ.

    ಅಣ್ಣಾವ್ರು ಈ ಚಿತ್ರಕ್ಕೆ ಪಡೆದಿದ್ದ ಸಂಭಾವನೆ 15 ಸಾವಿರ ರೂಪಾಯಿಗಳು. ಆ ಚಿತ್ರದಲ್ಲಿ ಡಾ.ರಾಜ್ ಅವರ ಹೆಗಲ ಮೇಲೆ ಕೂರುವ ಪಾರಿವಾಳವನ್ನು 500 ರೂ. ಕೊಟ್ಟು ತರಲಾಗಿತ್ತು. ಅದಕ್ಕಿಂತ ಮಜಾ ಇನ್ನೊಂದಿದೆ.

    ಯಾವ ಶಿವಾಜಿ ಗಣೇಶನ್ ಈ ಚಿತ್ರವನ್ನು ಬೇಡ ಎಂದು ತಿರಸ್ಕರಿಸಿದ್ದರೋ, ನಂತರ ಅವರೇ ಈ ಚಿತ್ರವನ್ನು ರೀಮೇಕ್ ಮಾಡಲು 2 ಲಕ್ಷ ಕೊಟ್ಟು ಹಕ್ಕುಗಳನ್ನು ಪಡೆದುಕೊಂಡರು. ಆದರೆ, ಡಾ.ರಾಜ್ ಅವರ ಅಭಿನಯದ ಎತ್ತರಕ್ಕೆ ನನ್ನ ಅಭಿನಯ ಬರಲಿಲ್ಲ ಎಂದು ಬಹಿರಂಗವಾಗಿಯೇ ಹೇಳಿಕೊಂಡಿದ್ದರು ಶಿವಾಜಿ ಗಣೇಶನ್.

  • ಪೊಲೀಸ್ ಭದ್ರತೆಯಲ್ಲಿ ಅಣ್ಣಾವ್ರ ಚಿತ್ರ ಪ್ರದರ್ಶನ

    kasturi nivasa in urvashi theater

    ಬೆಂಗಳೂರಿನ ಊರ್ವಶಿ ಚಿತ್ರಮಂದಿರದಲ್ಲಿ ಕನ್ನಡ ಚಿತ್ರಗಳ ಪ್ರದರ್ಶನ ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ. ಆದರೆ, ರಾಜ್ಯೋತ್ಸವದ ದಿನ ಮಾತ್ರ ಕನ್ನಡ ಚಿತ್ರ ಪ್ರದರ್ಶನ ಮಾಡುವ ಸಂಪ್ರದಾಯ ಪಾಲಿಸಿಕೊಂಡು ಬಂದಿದೆ ಊರ್ವಶಿ. ಈ ಬಾರಿಯೂ ಅಷ್ಟೆ, ರಾಜ್ಯೋತ್ಸವದ ವಿಶೇಷವಾಗಿ ಕಸ್ತೂರಿ ನಿವಾಸ ಚಿತ್ರ ಪ್ರದರ್ಶನ ಮಾಡಿತ್ತು ಊರ್ವಶಿ ಚಿತ್ರಮಂದಿರ.

    ಆದರೆ, ಕೆಲವು ಕನ್ನಡ ಸಂಘಟನೆಗಳ ಕಾರ್ಯಕರ್ತರು ಚಿತ್ರಮಂದಿರಕ್ಕೆ ಹೋಗಿ, ಇಡೀ ತಿಂಗಳು ಕಸ್ತೂರಿ ನಿವಾಸ ಪ್ರದರ್ಶನ ಮಾಡಿ. ಅದನ್ನು ಬಿಟ್ಟು ಬೇರೆ ಭಾಷೆಯ ಚಿತ್ರ ಹಾಕಿದರೆ, ಚಿತ್ರಮಂದಿರಕ್ಕೆ ಕಲ್ಲು ತೂರುತ್ತೇವೆ ಎಂದು ಬೆದರಿಕೆ ಹಾಕಿದ್ದಾರಂತೆ. ಇದರಿಂದಾಗಿ ಈಗ ಊರ್ವಶಿ ಚಿತ್ರಮಂದಿರದಲ್ಲಿ ಪೊಲೀಸ್ ಭದ್ರತೆಯ ಅಣ್ಣಾವ್ರ ಚಿತ್ರ ಪ್ರದರ್ಶನವಾಗುತ್ತಿದೆ.