ಅಮರ್, ಅಂಬರೀಷ್ ಪುತ್ರ ಅಭಿಷೇಕ್ ಅಭಿನಯದ ಮೊದಲ ಚಿತ್ರ. ಚಿತ್ರಕ್ಕೆ ಮುಹೂರ್ತವಾಗಿದೆ. ಜೆಪಿ ನಗರದಲ್ಲಿರುವ ತಿರುಮಲಗಿರಿ ದೇವಸ್ಥಾನದಲ್ಲಿ ಚಿತ್ರಕ್ಕೆ ಪೂಜೆ ನೆರವೇರಿದೆ. ತಂದೆ, ತಾಯಿಯ ಆಶೀರ್ವಾದ ಪಡೆದ ಅಭಿಷೇಕ್ ಹೊಸ ಸವಾಲನ್ನು ಸ್ವೀಕರಿಸಿದ್ದಾರೆ. ಹೌದು, ಅಭಿಷೇಕ್‍ಗೆ ಇದು ನಿಜಕ್ಕೂ ಸವಾಲೇ. ತಂದೆ ಅಂಬರೀಷ್ ದೊಡ್ಡ ಸ್ಟಾರ್ ಅಷ್ಟೇ ಅಲ್ಲ, ಅದ್ಭುತ ಕಲಾವಿದರೂ ಹೌದು. ತಾಯಿ ಸುಮಲತಾ ಕೂಡಾ ಅಭಿಜಾತ ಕಲಾವಿದೆ. ತಂದೆ, ತಾಯಿ ಇಬ್ಬರೂ ಜನಪ್ರಿಯ ಕಲಾವಿದರಾಗಿರುವಾಗ ಮಗನಿಗೆ ಅದು ಸವಾಲಾಗರುತ್ತದೆ ಎನ್ನುವುದರಲ್ಲಿ ಅನುಮಾನವಿಲ್ಲ.
ಅಂಬರೀಷ್ ಪುತ್ರನ ಚಿತ್ರೋತ್ಸವವನ್ನ ಕನ್ನಡ ಚಿತ್ರರಂಗವೇ ಸಂಭ್ರಮಿಸಿದ್ದು ವಿಶೇಷ. ಚಾಲೆಂಜಿಂಗ್ ಸ್ಟಾರ್ ದರ್ಶನ್, ಕಿಚ್ಚ ಸುದೀಪ್, ಜಗ್ಗೇಶ್, ಚಿರಂಜೀವಿ ಸರ್ಜಾ, ಧ್ರುವ ಸರ್ಜಾ, ಮೇಘನಾ ರಾಜ್, ವಿಷ್ಣು ಮಂಚು.. ನಿರ್ದೇಶಕರಾದ ಸಂತೋಷ್ ಆನಂದ್ ರಾಮ್, ಪವನ್ ಒಡೆಯರ್... ಹೇಳಬೇಕೆಂದರೆ, ಇಡೀ ಚಿತ್ರರಂಗ ಅಂಬರೀಷ್ ಪುತ್ರನಿಗೆ ಹಸಿರು ತೋರಣದ ಸ್ವಾಗತ ಕೋರಿದೆ.
ನಾಗಶೇಖರ್ ನಿರ್ದೇಶನದದ, ಸಂದೇಶ್ ನಾಗರಾಜ್ ನಿರ್ಮಾಣದ ಚಿತ್ರದ ಮೊದಲ ದೃಶ್ಯದ ಚಿತ್ರೀಕರಣ ನಡೆಸಲಾಗಿದೆ. ನಾಯಕಿ ತಾನ್ಯಗೆ ಬೊಕೆ ಕೊಡುವ ದೃಶ್ಯವನ್ನು ಚಿತ್ರೀಕರಿಸಲಾಗಿದೆ. ಜೂನ್ 25ರಿಂದ ಚಿತ್ರದ ಚಿತ್ರೀಕರಣ ಶುರುವಾಗಲಿದೆ.
ಅಂದಹಾಗೆ ಅಮರ್ ಅನ್ನೋ ಹೆಸರಿನ ಹಿಂದೊಂದು ಸೆಂಟಿಮೆಂಟ್ ಕಥೆಯೂ ಇದೆ. ಅ ಇಂದ ಶುರುವಾಗುವ ಅಂಬರೀಷ್‍ರ ಎಲ್ಲ ಚಿತ್ರಗಳೂ ಹಿಟ್ ಆಗಿವೆ. ಅಂತ ಚಿತ್ರದ ಮೂಲಕವೇ ಸ್ಟಾರ್ ಆದ ಅಂಬರೀಷ್‍ಗೆ ಅ ಚಿತ್ರದ ಮೇಲೆ ವಿಶೇಷ ಪ್ರೀತಿಯಿದ್ದರೆ ಆಶ್ಚರ್ಯವೇನೂ ಇಲ್ಲ.