ಗರುಡ ಗಮನ ವೃಷಭ ವಾಹನ. ಈ ಸಿನಿಮಾ ನೋಡಿದವರಿಗೆ ಮೊದಲ ಶಾಕ್.. ಪ್ರೇಕ್ಷಕರು ಊಹಿಸಿಯೂ ಇರದ ಭೂಗತ ಜಗತ್ತು. ಹಾಗೆ ಶಾಕ್ ಕೊಡುವ ರಾಜ್ ಬಿ.ಶೆಟ್ಟಿ ಮತ್ತೊಮ್ಮೆ ಗಾಂಧಿನಗರದ ಸಿದ್ಧ ಸೂತ್ರಗಳನ್ನೆಲ್ಲ ಮುರಿದು ಮೂಟೆ ಕಟ್ಟಿದ್ದಾರೆ. ಅದು ಪ್ರೇಕ್ಷಕರಿಗೂ ಇಷ್ಟವಾಗಿದೆ. ಸಿನಿಮಾ ಗೆದ್ದುಬಿಟ್ಟಿದೆ.
ಮೊದಲ ದಿನ 150 ಥಿಯೇಟರಿನಲ್ಲಿ ರಿಲೀಸ್ ಆದ ಸಿನಿಮಾ 2ನೇ ದಿನಕ್ಕೇ ಥಿಯೇಟರ್ ಹೆಚ್ಚಿಸಿಕೊಂಡಿತ್ತು. ಮಳೆ ನಡುವೆಯೂ ಪ್ರೀಮಿಯರ್ ಶೋಗಳ ಸಂಖ್ಯೆ ಹೆಚ್ಚುತ್ತಾ ಹೋಗಿದೆ. ಕೇರಳ, ದೆಹಲಿ, ಮಹಾರಾಷ್ಟ್ರ ಸೇರಿದಂತೆ ಹೊರ ರಾಜ್ಯಗಳಲ್ಲೂ ರಿಲೀಸ್ ಆಗಿದ್ದ ಚಿತ್ರಕ್ಕೆ ಅಲ್ಲಿಯೂ ಹೌಸ್‍ಫುಲ್ ರೆಸ್ಪಾನ್ಸ್ ಸಿಕ್ಕಿದೆ. ಈಗ ವಿದೇಶಗಳಿಂದ ಬೇಡಿಕೆ ಬರೋಕೆ ಶುರುವಾಗಿದೆ. ಆ ಖುಷಿಯಲ್ಲೇ ಚಿತ್ರತಂಡ ಸಕ್ಸಸ್ ಮೀಟ್ ಇಟ್ಟುಕೊಂಡಿತ್ತು.
ನಾವಿಬ್ಬರೂ ಗುಡ್ ಫ್ರೆಂಡ್ಸ್. ದೊಡ್ಡವನು ಚಿಕ್ಕವನು ಅನ್ನೋ ಭೇದಭಾವ ಇಲ್ಲ. ಅಹಂ ಇಲ್ಲ. ಒಂದು ಸಿನಿಮಾವನ್ನು ಪ್ರಾಮಾಣಿಕವಾಗಿ ಮಾಡಬೇಕು. ಚೆನ್ನಾಗಿ ಮಾಡಬೇಕು. ಚೆನ್ನಾಗಿ ರೀಚ್ ಮಾಡಿಸಬೇಕು. ಹೀಗಾಗಿಯೇ ಗೆದ್ದಿದ್ದೇವೆ ಎಂದರು ರಿಷಬ್ ಶೆಟ್ಟಿ.
ರೌದ್ರಾವತಾರದ ಶಿವನಾಗಿ ರಾಜ್ ಬಿ.ಶೆಟ್ಟಿ, ಚಾಣಾಕ್ಷನಾಗಿ ಗೆಲ್ಲುವ ಹರಿಯಾಗಿ ರಿಷಬ್ ಶೆಟ್ಟಿ.. ಅವರಿಬ್ಬರ ನಡುವಿನ ಸ್ನೇಹ.. ಸ್ನೇಹದಲ್ಲೂ ಲೆಕ್ಕ ಹಾಕುವ ಹರಿ, ಸ್ನೇಹವನ್ನು ಬಿಟ್ಟು ಬೇರೇನನ್ನೂ ಯೋಚಿಸದ ಶಿವ.. ಎಲ್ಲವೂ ಪ್ರೇಕ್ಷಕರಿಗೆ ಥ್ರಿಲ್ ಕೊಟ್ಟಿದೆ. ಈ ಹಿಂದೆ ಮೊಟ್ಟೆ ಸ್ಟೋರಿಯಲ್ಲೂ ರೂಲ್ಸ್ ಬ್ರೇಕ್ ಮಾಡಿ ಗೆದ್ದಿದ್ದ ರಾಜ್ ಬಿ.ಶೆಟ್ಟಿ, ಈ ಬಾರಿ ಮತ್ತೊಮ್ಮೆ ಸಿದ್ಧಸೂತ್ರಗಳನ್ನು ಮುರಿಯುವವನೇ ಮಹಾಶೂರ ಎಂದು ಸಾಬೀತು ಮಾಡಿದ್ದಾರೆ.