ಅಯೋಗ್ಯ... ನಿರ್ದೇಶಕ ಮಹೇಶ್ ಕುಮಾರ್‍ಗೆ ಮೊದಲ ಸಿನಿಮಾ. ನೀನಾಸಂ ಸತೀಶ್, ರಚಿತಾ ರಾಮ್ ಕಾಂಬಿನೇಷನ್‍ನ ಮೊದಲ ಚಿತ್ರ. ಅದ್ಧೂರಿಯಾಗಿ ಬಿಡುಗಡೆಯಾಗುತ್ತಿರುವ ಚಿತ್ರದ ಹಿಂದಿನ ಕಥೆ ಯಾವ ಸಿನಿಮಾಗೂ ಕಮ್ಮಿಯಿಲ್ಲ. ಬೆಚ್ಚಿಬೀಳಿಸುವ ಹಾಗಿದೆ. ನಂಬಿಕೆ, ವಿಶ್ವಾಸ, ವಂಚನೆ, ದ್ರೋಹ, ಆತಂಕ.. ಎಲ್ಲವೂ ಮುಗಿದ ಮೇಲೆ ಸುಖಾಂತ್ಯ. ಅಷ್ಟೂ ಕತೆ ಚಿತ್ರದ ಹಿಂದಿದೆ.
ಅಯೋಗ್ಯ ಚಿತ್ರಕ್ಕೆ ಮೊದಲಿಗೆ ಚಿತ್ರದ ನಿರ್ಮಾಪಕರಾಗಿದ್ದವರು ಟಿ.ಆರ್. ಚಂದ್ರಶೇಖರ್ ಅಲ್ಲ. ಬೇರೊಬ್ಬರು. ಚಿತ್ರಕ್ಕೆ ಮುಹೂರ್ತವೂ ಆಗಿ, ಇನ್ನೇನು ಶೂಟಿಂಗ್ ಶುರುವಾಗಬೇಕು. ಅಷ್ಟು ಹೊತ್ತಿಗೆಆ ನಿರ್ಮಾಪಕರು ಫೋನ್ ಮಾಡಿ, ಶೂಟಿಂಗ್ ಮಾಡಕ್ಕೆ ದುಡ್ಡಿಲ್ಲ ಅಂದುಬಿಟ್ರಂತೆ. ಅದಕ್ಕೂ ಮೊದಲು, ಕಾಸ್ಟ್ಯೂಮ್ ಮಾಡೋಕೆ ನಮ್ಮೂರಿಂದ್ಲೇ ಜನ ಬರ್ತಾರೆ. ಲೈಟಿಂಗೂ ಅವರೇ ಮಾಡ್ತಾರೆ. ಊಟ ಬಡಿಸೋದು, ಸೆಟ್ ಕೆಲಸ ಮಾಡೋದು ಎಲ್ಲ ನಮ್ಮೂರ್ ಹುಡುಗ್ರೇ.. ಎಂದು ಷರತ್ತು ಹಾಕಿದ್ದ ನಿರ್ಮಾಪಕ ಆತ.
ಚಿತ್ರದ ನಾಯಕ ನೀನಾಸಂ ಸತೀಶ್ ಹತ್ತಿರಾನೇ 50 ಲಕ್ಷ ರೂಪಾಯಿ ಸಾಲ ಕೇಳಿದ್ದ ಆ ನಿರ್ಮಾಪಕ ಕೈ ಎತ್ತಿಬಿಟ್ಟಾಗ ಆತ್ಮಹತ್ಯೆಗೂ ಯೋಚಿಸಿದ್ದರಂತೆ ಮಹೇಶ್. ಆಗ ಸಮಾಧಾನ ಹೇಳಿದ್ದು ಇದೇ ಸತೀಶ್. ಅವರು ಧೈರ್ಯ ಹೇಳಿ, ನಿರ್ಮಾಪಕ ಚಂದ್ರಶೇಖರ್ ಅವರನ್ನು ಪರಿಚಯ ಮಾಡಿಸಿ, ಅವರೂ ಕಥೆ, ತಾರಾಗಣ, ತಂತ್ರಜ್ಞರು.. ಎಲ್ಲದಕ್ಕೂ ಓಕೆ ಎಂದ ಮೇಲೆ, ಹಳೆಯ ನಿರ್ಮಾಪಕರು ಮತ್ತೊಮ್ಮೆ ಕಿರಿಕ್ ಶುರು ಹಚ್ಚಿಕೊಂಡರಂತೆ. ನಾನು ಖರ್ಚು ಮಾಡಿರುವ ಎಲ್ಲ ಹಣ ವಾಪಸ್ ಕೊಡಿ ಎಂದ. ನನಗೆ ಬೇರೆ ದಾರಿಯೇ ಇರಲಿಲ್ಲ. ಸತೀಶ್ ಟೇಬಲ್ ಮೇಲೆ ಆತ್ಮಹತ್ಯೆ ಪತ್ರ ಬರೆದಿಟ್ಟು ಹೋಗಿಬಿಟ್ಟೆ. ಅದು ಅಲ್ಲಿಗೇ ಮುಗಿಯಲಿಲ್ಲ. ಹಳೆಯ ನಿರ್ಮಾಪಕರ ಟೀಂನವರು ಬಂದು ಕಿಡ್ನಾಪ್ ಮಾಡಿ, ದುಡ್ಡಿಗೆ ಡಿಮ್ಯಾಂಡ್ ಇಟ್ರು. ಆಗ ಸತೀಶ್ ಅವರೇ ಬಂದು ಫಿಲಂ ಚೇಂಬರ್‍ಗೆ ಕರೆದುಕೊಂಡು ಹೋಗಿ ಪಂಚಾಯಿತಿ ಮಾಡಿಸಿ ಇತ್ಯರ್ಥ ಮಾಡಿಸಿದ್ರು. ಇದು ಮಹೇಶ್ ಹೇಳಿರುವ ಕಥೆ.
ಅಫ್‍ಕೋರ್ಸ್.. ಈಗ ವಿವಾದ ಮುಗಿದಿದೆ. ನಿರ್ಮಾಪಕ ಚಂದ್ರಶೇಖರ್ ಹೀರೋನಂತೆ ಎಂಟ್ರಿ ಕೊಟ್ಟು, ಸಿನಿಮಾದ ಕ್ಲೈಮಾಕ್ಸ್‍ನಲ್ಲಿ ಎಲ್ಲವೂ ಸುಖಾಂತ್ಯವಾಗಿ ಶುಭಂ ಎಂದು ಬರುವಂತೆಯೇ ಚಿತ್ರತಂಡಕ್ಕೂ ಆಗಿದೆ. ಇನ್ನೇನಿದ್ರೂ ಸಂಭ್ರಮದ ಸಮಯ. ಈ ವಾರ ಸಿನಿಮಾ ರಿಲೀಸ್.