ಕೋಟಿಗೊಬ್ಬ 3, ಎಲ್ಲವೂ ಸರಿಯಾಗಿದ್ದರೆ ಆಯುಧಪೂಜೆಯ ದಿನವೇ ಅಬ್ಬರಿಸಬೇಕಿತ್ತು. ಆದರೆ, ಆಗಲಿಲ್ಲ. ಕಟ್ಟಕಡೆಯ ಕ್ಷಣದಲ್ಲಿ ಸುದೀಪ್ ಎಂಟ್ರಿ ಕೊಡದೇ ಹೋಗಿದ್ದರೆ ಸಿನಿಮಾ ರಿಲೀಸ್ ಆಗುವುದೇ ಕಷ್ಟವಿತ್ತು. ಸಿನಿಮಾ ಡಿಸ್ಟ್ರಿಬ್ಯೂಷನ್ ರೈಟ್ಸ್ ಪಡೆದಿದ್ದ ಕೆಲ ನಿರ್ಮಾಪಕರು, ಹಣ ನೀಡದೇ ಕೈಕೊಟ್ಟಿದ್ದೇ ಎಲ್ಲ ಸಮಸ್ಯೆಗಳಿಗೂ ಕಾರಣವಾಗಿತ್ತು ಅನ್ನೋದನ್ನ ಸೂರಪ್ಪ ಬಾಬು ಹೇಳಿಕೊಂಡರು. ವಿತರಣೆಯ ಹಕ್ಕನ್ನು ಸೈಯದ್ ಸಲಾಂ, ಬಿ.ಕೆ.ಗಂಗಾಧರ್ ಮತ್ತು ಜಾಕ್ ಮಂಜು ಪಡೆದುಕೊಂಡರು. ಒಂದು ದಿನ ತಡವಾಗಿ ಸಿನಿಮಾ ರಿಲೀಸ್ ಆಯ್ತು. ಇದೆಲ್ಲದರಿಂದ ನಿರ್ಮಾಪಕರಿಗೆ ಆದ ಲಾಸ್ ಎಷ್ಟು?
300ಕ್ಕೂ ಹೆಚ್ಚು ಥಿಯೇಟರು ಮತ್ತು ಮಲ್ಟಿಪ್ಲೆಕ್ಸ್ಗಳಲ್ಲಿ ಮೊದಲ ದಿನ ಇದ್ದ ಶೋಗಳ ಸಂಖ್ಯೆ 1600ಕ್ಕೂ ಹೆಚ್ಚು. ಲೆಕ್ಕಾಚಾರದ ಪ್ರಕಾರ ಒಂದು ಶೋ ಹೌಸ್ಫುಲ್ ಆದರೆ, ನಿರ್ಮಾಪಕರ ಶೇರ್ 50ರಿಂದ 75 ಸಾವಿರದವರೆಗೂ ಇರುತ್ತದೆ. ಸುದೀಪ್ ಸಿನಿಮಾ ಅಂದ್ರೆ ಹೌಸ್ಫುಲ್ ಪ್ರಾಬ್ಲಂ ಅಂತೂ ಇರಲ್ಲ. ಅಂದರೆ ಮೊದಲ ದಿನ ಕಳೆದುಕೊಂಡ ಒಟ್ಟಾರೆ ಶೇರ್ 10 ಕೋಟಿಗೂ ಹೆಚ್ಚು.
ಇದೆಲ್ಲವನ್ನೂ ವಿತರಕ ಜಾಕ್ ಮಂಜು ಹೇಳಿದ್ದಾರೆ. ಚಿತ್ರರಂಗದ ಕೆಲವು ನಿರ್ಮಾಪಕರು ವಿತರಕರಿಗೆ ಹಣ ಸಿಗದಂತೆ ಅಡ್ಡಿ ಪಡಿಸಿದರು. ಥಿಯೇಟರಿನವರಿಗೆ ಫೋನ್ ಮಾಡಿ ಸುದೀಪ್ ಚಿತ್ರಕ್ಕೆ ಥಿಯೇಟರ್ ಕೊಡಬೇಡಿ ಎಂದು ಹೇಳಿದ್ದಾರೆ ಎಂದಿರೋ ಜಾಕ್ ಮಂಜು, ಗಂಡಸಾಗಿದ್ದರೆ ಒಳ್ಳೆಯ ರೀತಿಯಲ್ಲಿ ಬದುಕಿ. ನಮ್ಮನ್ನೂ ಬದುಕಲು ಬಿಡಿ. ಈ ರೀತಿ ಬದುಕಬೇಡಿ ಎಂದಿದ್ದಾರೆ ಜಾಕ್ ಮಂಜು.
ಇದೆಲ್ಲದರ ಮಧ್ಯೆ ಕನ್ನಡ ಚಿತ್ರರಂಗ ಖುಷಿಯಾಗೋ ಇನ್ನೊಂದು ಸುದ್ದಿಯನ್ನೂ ಅವರೇ ಹೇಳಿದ್ದಾರೆ. ಚಿತ್ರದ ಬಿಡುಗಡೆಗೆ ನೆರವಾದವರಲ್ಲಿ ಇನ್ನೊಬ್ಬರು ಕೆ.ಪಿ.ಶ್ರೀಕಾಂತ್. ಒಂದು ಕಡೆ ಅವರದ್ದೇ ನಿರ್ಮಾಣದ ಸಲಗ ರಿಲೀಸ್ ಆಗಿತ್ತು. ಅದಕ್ಕೆ ಯಾವ ಸಮಸ್ಯೆಯೂ ಆಗಲಿಲ್ಲ. ತಮ್ಮ ಚಿತ್ರಕ್ಕೆ ಎದುರಾಳಿಯಾಗಿ ಬಂದಿದ್ದರೂ ಕೆ.ಪಿ.ಶ್ರೀಕಾಂತ್, ಕೋಟಿಗೊಬ್ಬ ಚಿತ್ರದ ಸಮಸ್ಯೆ ಬಗೆಹರಿಸಲು ಸಹಾಯ ಮಾಡಿದ್ದಾರೆ. ಚಿತ್ರದ ಬಿಡುಗಡೆಗೆ ಸಹಕರಿಸಿದ್ದಾರೆ. ಇದನ್ನು ಜಾಕ್ ಮಂಜು ಕೂಡಾ ಖುಷಿಯಿಂದಲೇ ಹೇಳಿಕೊಂಡಿದ್ದಾರೆ.