ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯ ಹಾಗೂ ನಿರ್ದೇಶನದ ರಾಜೇಂದ್ರ ಪೊನ್ನಪ್ಪ, ರಾಜ್ಯೋತ್ಸವಕ್ಕೆ ಬಿಡುಗಡೆಯಾಗುವ ಸಾಧ್ಯತೆ ಇದೆ. ಕಳೆದ 10 ವರ್ಷಗಳಲ್ಲಿ ಸ್ವತಃ ರವಿಚಂದ್ರನ್ ನಿರ್ದೇಶಿಸಿರುವ 3ನೇ ಸಿನಿಮಾ ಇದು. ರಾಜೇಂದ್ರ ಪೊನ್ನಪ್ಪ, ರವಿಚಂದ್ರನ್ ಅವರ ಹಿಟ್ ಸಿನಿಮಾ ಆಗಿರುವ ದೃಶ್ಯ ಚಿತ್ರದ ಪಾತ್ರಧಾರಿಯ ಹೆಸರು. ಆದರೆ, ಇದು ದೃಶ್ಯ ಚಿತ್ರದ ಮುಂದುವರಿದ ಭಾಗ ಅಲ್ಲ.
ರವಿಚಂದ್ರನ್ ಕನ್ನಡ ಚಿತ್ರರಂಗದ ಸ್ಟಾರ್ ಡೈರೆಕ್ಟರ್‍ಗಳಲ್ಲಿ ಒಬ್ಬರು. ಅವರು ಇದುವರೆಗೆ ನಿರ್ದೇಶಿಸಿರುವುದು 23 ಸಿನಿಮಾ. ಇದು ಅವರ 24ನೇ ಸಿನಿಮಾ ಆಗಲಿದೆ. ಅಪೂರ್ವ ಸಿನಿಮಾ ನಂತರ ರವಿಚಂದ್ರನ್ ನಿರ್ದೇಶಿಸುತ್ತಿರುವ ಸಿನಿಮಾ ಇದು. ಇತ್ತೀಚೆಗೆ ಹೀರೋ ಪಾತ್ರಗಳನ್ನು ಬಿಟ್ಟು, ಯಂಗ್‍ಸ್ಟಾರ್‍ಗಳ ಜೊತೆ ಹಿರಿಯ ಪಾತ್ರಧಾರಿಯಾಗಿ ಕಾಣಿಸಿಕೊಳ್ಳುತ್ತಿರುವ ರವಿಚಂದ್ರನ್, ಈ ಚಿತ್ರದಲ್ಲಿ ಹೀರೋ. ಅವರೇ ಹೀರೋ.. ಅವರೇ ಡೈರೆಕ್ಟರ್.
ರವಿಚಂದ್ರನ್‍ಗೆ ನಾಯಕಿಯಾಗಿರೋದು ರಾಧಿಕಾ ಕುಮಾರಸ್ವಾಮಿ. ಆದರೆ, ಚಿತ್ರದ ಪೋಸ್ಟರ್‍ಗಳಲ್ಲಿ ಕೇವಲ ರವಿಚಂದ್ರನ್ ಮಾತ್ರ ಕಾಣಿಸುತ್ತಿದ್ದಾರೆ. ಹಾಗಾದರೆ, ಚಿತ್ರದಲ್ಲಿ ರಾಧಿಕಾ ಕುಮಾರಸ್ವಾಮಿ ಕಂಟಿನ್ಯೂ ಆಗಿದ್ದಾರಾ.. ಇಲ್ಲವಾ.. ಅದಕ್ಕೆ ಉತ್ತರ ಸಿಕ್ಕಿಲ್ಲ.
ಆದರೆ ಪೋಸ್ಟರ್ ಮೇಲಿರುವ ಡೈಲಾಗುಗಳು ವಿಚಿತ್ರ ಕುತೂಹಲ ಹುಟ್ಟಿಸಿವೆ. ಸುಮ್ಮನೆ ಸ್ಯಾಂಪಲ್ ನಓಡಿ. ಕಾಸಿದ್ದೋನೇ ಇಲ್ಲಿ ಯಜಮಾನ, ತಲೆ ಇದ್ದೋನು ಇಲ್ಲಿ ಜವಾನ.. ತಪ್ ಮಾಡ್ದೋನ್ಗೆ ಇಲ್ಲಿ ಸನ್ಮಾನ, ತೆಪ್ಗಿದ್ದೋನ್ಗೆ ಬರೀ ಅವಮಾನ.. ನನ್ನ ಕಾಲ ಮೇಲೆ ನಿಂತು ಸಾಯ್ತೀನೇ ಹೊರತು, ಮಂಡಿಯೂರಿ ಸಾಯಲ್ಲ.. ನಿನಗೆ ಸರಿ ಅನ್ಸಿದ್ದಕ್ಕೆ ನಿಂತ್ಕೋ, ಏಕಾಂಗಿ ಆದ್ರೂ ಸರಿ... ಇಂತಹ ತರಹೇವಾರಿ ಡೈಲಾಗುಗಳು ಪೋಸ್ಟರ್ ಮೇಲಿವೆ. ಕುತೂಹಲ ಹುಟ್ಟಿಸೋಕೆ ಅಷ್ಟು ಸಾಕೇನೋ..