‘‘ಈ ಗಂಡು ಅನ್ನೋ ಒಬ್ಬ ಕಚಡ ನನ್ ಮಗಾನೂ ಪ್ರೀತಿ ಮಾಡುವಾಗ ಸತ್ಯ ಹೇಳಲ್ವಲ್ಲ ಯಾಕೆ ಸರ್?
ಎಲ್ಲನೂ ಫ್ರೀಯಾಗಿ ಮುಗಿಸ್ಕೋಬಹುದು ಅಂತಾನಾ..? ’’
ಇದು ಜಿಂದಾ ಚಿತ್ರದಲ್ಲಿ ಮೇಘನಾ ರಾಜ್ ಪಾತ್ರದ ಡೈಲಾಗ್. ಮತ್ತೊಮ್ಮೆ ಓದಿಕೊಳ್ಳಿ. ಈ ಡೈಲಾಗ್ ಹೇಳೋದು ಮೇಘನಾ ರಾಜ್ ಅಲ್ಲ. ಮೇಘನಾ ರಾಜ್ ಅಭಿನಯಿಸಿರುವ ಪಾತ್ರ.
ಅದೊಂದು ಡೈಲಾಗ್ಗೆ ಕೆಲವು ಸಂಘಟನೆಗಳು ಸಿಡಿದೆದ್ದು ನಿಂತುಬಿಟ್ಟಿವೆ. ಮೇಘನಾ ರಾಜ್, ಇಡೀ ಗಂಡಸು ಜಾತಿಗೇ ಅವಮಾನ ಮಾಡಿದ್ದಾರೆ. ಅವರು ಕ್ಷಮೆ ಕೇಳಬೇಕು. ಸಿನಿಮಾದಲ್ಲಿ ಆ ಡೈಲಾಗ್ ತೆಗೆದುಹಾಕಬೇಕು ಎಂದು ಕೂಗು ಹಾಕುತ್ತಿವೆ.
ಇಷ್ಟಕ್ಕೂ ಹಾಗೆ ಕೂಗುತ್ತಿರುವವರಿಗೆ ಚಿತ್ರದ ಡೈಲಾಗ್ ಬರೆದವರು ನಿರ್ದೇಶಕ ಮುಸ್ಸಂಜೆ ಮಹೇಶ್ ಅನ್ನೋದು ಗೊತ್ತಾ..? ಆ ಬಗ್ಗೆ ಅನುಮಾನವಿದೆ. ಇನ್ನು ಆ ಡೈಲಾಗ್ನ್ನ ಮೇಘನಾ ರಾಜ್ ಪಾತ್ರ ಹೇಳೋದು ದೇವರಾಜ್ ಅನ್ನೋ ಸೀನಿಯರ್ ನಟನ ಎದುರಿಗೆ. ಚಿತ್ರದಲ್ಲಿ ನಟಿಸಿರುವ ದೇವರಾಜ್ಗೆ ನೂರಾರು ಚಿತ್ರಗಳಲ್ಲಿ ನಟಿಸಿರುವ ಕಲಾವಿದ. ಈ ಹಿಂದಿನ ಚಿತ್ರಗಳಲ್ಲೂ ದೇವರಾಜ್ ತಮ್ಮ ಸಂಭಾಷಣೆಯ ಜವಾಬ್ದಾರಿ ಇಟ್ಟುಕೊಂಡೇ ಬಂದವರು.
ನಿರ್ದೇಶಕ ಮುಸ್ಸಂಜೆ ಮಹೇಶ್ ಕೂಡಾ ಸದಭಿರುಚಿಯ ಚಿತ್ರಗಳಿಂದಲೇ ಬೆಳಕಿಗೆ ಬಂದ ಪ್ರತಿಭೆ. ಚಿತ್ರದ ನಿರ್ಮಾಪಕರಾದ ದತ್ತಾತ್ರೇಯ ಬಚ್ಚೇಗೌಡ ಮತ್ತು ಭಾನು ದತ್ತಾ ಕೂಡಾ ಅಂತಹ ಡೈಲಾಗ್ ಪ್ರೇಮಿಗಳಲ್ಲ. ಮೇಘನಾ ರಾಜ್ಗೂ ಅಷ್ಟೆ. ಅವರ ಹೆತ್ತವರ ಹೆಸರು ಕೆಡದಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ತನ್ನ ಮೇಲಿದೆ ಎನ್ನುವ ಅರಿವೂ ಇದೆ.
ಇನ್ನು ಚಿತ್ರದ ವಿಷಯಕ್ಕೆ ಬರೋಣ. ಚಿತ್ರ ರಿಲೀಸ್ ಆಗುತ್ತಿರುವುದು ಮುಂದಿನ ವಾರ. ಚಿತ್ರದ ಟ್ರೇಲರ್ ನೋಡಿದರೆ, ಅದು ಕ್ರೈಂ, ಪ್ರೀತಿ ಮತ್ತು ವಂಚನೆಯ ಸುತ್ತ ಹೆಣೆದಿರುವ ಕಥೆಯಂತೆ ಕಾಣುತ್ತಿದೆ. ಚಿತ್ರದ ಯಾವ ಸನ್ನಿವೇಶದಲ್ಲಿ ಆ ಡೈಲಾಗ್ ಬರುತ್ತೆ. ಚಿತ್ರದ ಕಥೆಗೆ ಅದು ಎಷ್ಟು ಮುಖ್ಯ..? ಅದು ನಿರ್ದೇಶಕರಿಗಷ್ಟೇ ಗೊತ್ತು. ಒಂದೊಂದು ಡೈಲಾಗ್ ಹೊಸೆಯುವಾಗಲೂ ನಿರ್ದೇಶಕರು ಅಳೆದು ತೂಗಿ ತೆಗೆದುಕೊಳ್ಳುತ್ತಾರೆ. ಹಾಗೇನಾದರೂ ಈ ಪ್ರತಿಭಟನೆಗೆ ಮಣಿದರೆ, ನಿರ್ದೇಶಕನ ಸ್ವಾತಂತ್ರ್ಯಕ್ಕೆ ಬೆಲೆಯೇ ಇರಲ್ಲ.
ಇಷ್ಟಕ್ಕೂ ಅದು ಮೇಘನಾ ರಾಜ್ ನಟಿಸಿರುವ ಪಾತ್ರ ಒಪ್ಪಿಸುವ ಸಂಭಾಷಣೆ ಎನ್ನುವುದು ಪ್ರತಿಭಟಿಸುವವರ ನೆನಪಿನಲ್ಲಿರಬೇಕು. ಆ ಪಾತ್ರ ಯಾವ ಸಂದರ್ಭದಲ್ಲಿ ಆ ಡೈಲಾಗ್ ಹೇಳುತ್ತದೋ..ಅದನ್ನು ತಿಳಿದುಕೊಳ್ಳೋಕೆ ಜಿಂದಾ ಚಿತ್ರ ಬಿಡುಗಡೆಯಾಗುವವರೆಗೂ ಕಾಯಬೇಕು. ಇಷ್ಟಾಗಿ, ಚಿತ್ರದಲ್ಲಿ ಆ ಡೈಲಾಗ್ ಇಷ್ಟವಾಗದೇ ಹೋದರೆ, ಆಗಲೂ ಪ್ರತಿಭಟಿಸುವ ಹಕ್ಕು ಯಾರಿಗೂ ಇಲ್ಲ.
ಜಿಂದಾ ಟ್ರೇಲರ್ ನೋಡಿದರೆ, ಹೊಸತನದ ಸ್ಪರ್ಶವಿದೆ. ಒಂದು ಹೊಸ ಚಿತ್ರವನ್ನು ವಿನಾಕಾರಣದ ವಿವಾದಗಳಲ್ಲಿ ಸಿಲುಕಿಸುವುದು ಬೇಡ. ಚಿತ್ರ ಬಿಡುಗಡೆಯಾಗಲಿ. ಯಶಸ್ವಿಯಾಗಲಿ. ಹಾಗೆಂದು ಹಾರೈಸೋಣ.
Related Articles :-
Youths Protest In Front Of Meghana Raj's House