ಡಾ.ರಾಜ್ರನ್ನು ಬಿಟ್ಟರೆ, ಅಂಥಾದ್ದೊಂದು ಧೈರ್ಯ, ಸಾಹಸ ಮೆರೆದಿರುವುದು ಕೇವಲ ದರ್ಶನ್. ಇಂಥಾದ್ದೊಂದು ಮಾತು ಹೇಳಿರುವುದು ರವಿಶಂಕರ್ ಗೌಡ. ಸಿಲ್ಲಿ ಲಲ್ಲಿ ಧಾರಾವಾಹಿಯ ಮೂಲಕವೇ ಸ್ಟಾರ್ ಆದ ರವಿಶಂಕರ್ ಗೌಡ, ಸಮಾರಂಭವೊಂದರಲ್ಲಿ ಈ ವಿಷಯವನ್ನು ಹಂಚಿಕೊಂಡಿದ್ದಾರೆ.
ರವಿಶಂಕರ್ ಗೌಡ, ಇಂಥಾದ್ದೊಂದು ಹೇಳಿಕೆ ಕೊಡೋಕೆ ಕಾರಣ, ಕುರುಕ್ಷೇತ್ರ. ಕುರುಕ್ಷೇತ್ರ ಚಿತ್ರದಲ್ಲಿ ದರ್ಶನ್ ನಟಿಸುತ್ತಿರುವುದು ದುರ್ಯೋಧನನ ಪಾತ್ರದಲ್ಲಿ. ಅದು ಮಹಾಭಾರತದ ಖಳನಾಯಕನ ಪಾತ್ರ. ಮಾಸ್ ಹೀರೋ ಆಗಿದ್ದುಕೊಂಡು ಇಂಥ ಖಳನಟನ ಪಾತ್ರ ಮಾಡೋಕೆ ಎಂಟೆದೆ ಬೇಕು. ಅಂಥಾದ್ದೊಂದು ಧೈರ್ಯ ಡಾ.ರಾಜ್ ಅವರಿಗೆ ಇತ್ತು ಎಂದಿದ್ದಾರೆ ರವಿಶಂಕರ್.
ಡಾ.ರಾಜ್, ತಮ್ಮ ಖ್ಯಾತಿಯ ಉತ್ತುಂಗದಲ್ಲಿದ್ದಾಗ ಭಕ್ತ ಪ್ರಹ್ಲಾದ ಚಿತ್ರದಲ್ಲಿ ಹಿರಣ್ಯಕಶಿಪು ಪಾತ್ರದಲ್ಲಿ ನಟಿಸಿದ್ದರು. ಅದು ದೇವರನ್ನೇ ದ್ವೇಷಿಸುವ, ತನ್ನನ್ನು ತಾನೇ ದೇವರು ಎಂದು ಕರೆದುಕೊಳ್ಳುವ ರಾಕ್ಷಸನ ಪಾತ್ರ. ಇಂದಿಗೂ ಅಭಿಮಾನಿಗಳ ಕಣ್ಣೆದುರು ಅಣ್ಣಾವ್ರ ಆ ಪಾತ್ರದ ಗತ್ತು, ಗಾಂಭೀರ್ಯ, ನಡಿಗೆ, ಧ್ವನಿ ಕಣ್ಣಿಗೆ ಕಟ್ಟಿದಂತಿದೆ. ಈಗ ದರ್ಶನ್, ದುರ್ಯೋಧನನ ಪಾತ್ರ ಮಾಡುತ್ತಿದ್ದಾರೆ.
ದರ್ಶನ್ ದುರ್ಯೋಧನನ ಗೆಟಪ್ನಲ್ಲಿ ಎಷ್ಟು ಚೆನ್ನಾಗಿ ಕಾಣಿಸುತ್ತಿದ್ದಾರೆ ಅಂದ್ರೆ, ಯಾರ ದೃಷ್ಟಿಯೂ ದರ್ಶನ್ ಮೇಲೆ ಬೀಳದಿರಲಿ ಎಂದು ಹಾರೈಸಿದ್ದಾರೆ ರವಿಶಂಕರ್ ಗೌಡ.