ಅರ್ಜುನ್ ಸರ್ಜಾ ವಿರುದ್ಧ ಶೃತಿ ಹರಿಹರನ್ ಮಾಡಿರುವ ಲೈಂಗಿಕ ಕಿರುಕುಳದ ಆರೋಪ, ಈಗ ಕೋರ್ಟ್‍ನಲ್ಲಿದೆ. ಇದೊಂದು ಸುಳ್ಳು ಆರೋಪ. ಹೀಗಾಗಿ ಎಫ್‍ಐಆರ್ ರದ್ದು ಮಾಡಬೇಕು ಎಂದು ಅರ್ಜುನ್ ಸರ್ಜಾ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಪ್ರಕರಣದ ವಿಚಾರಣೆ ಆರಂಭಿಸಿರುವ ನ್ಯಾಯಾಲಯ, ವಿಚಾರಣೆಗೇನೂ ತಡೆ ಕೊಟ್ಟಿಲ್ಲ. ಆದರೆ, ನವೆಂಬರ್ 14ರವರೆಗೆ ಸರ್ಜಾರನ್ನು ಬಂಧಿಸದಂತೆ ಪೊಲೀಸರಿಗೆ ಸೂಚನೆ ಕೊಟ್ಟಿದೆ. ಈ ವಿಚಾರಣೆ ವೇಳೆ ದೇಶದ ಪ್ರಖ್ಯಾತ ವಕೀಲರಲ್ಲಿ ಒಬ್ಬರಾದ ಬಿ.ವಿ.ಆಚಾರ್ಯ, ಹೈಕೋರ್ಟ್‍ನಲ್ಲಿ ಮಂಡಿಸಿದ ವಾದ ಹೀಗಿತ್ತು.
ಇಡೀ ಪ್ರಕರಣ ಅಕ್ಟೋಬರ್ 20ರಿಂದ ಫೇಸ್‍ಬುಕ್‍ನಲ್ಲಿ ಸ್ಟೇಟಸ್ ಹಾಕುವುದರಿಂದ ಶುರುವಾಯ್ತು. ಅರ್ಜುನ್ ಸರ್ಜಾಗೆ ವಯಸ್ಸಿಗೆ ಬಂದ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ದೊಡ್ಡ ಮಗಳಿಗೆ ಶೃತಿಯವರಷ್ಟೇ ವಯಸ್ಸು. ಅಜುನ್, ದಕ್ಷಿಣ ಭಾರತದ ಖ್ಯಾತ. ಹಲವು ಭಾಷೆಗಳಲ್ಲಿ ನಟಿಸಿರುವ ಸರ್ಜಾ ವಿರುದ್ಧ ಯಾವುದೇ ಕಪ್ಪು ಚುಕ್ಕೆ ಇಲ್ಲ. ಮೀಟೂ ಅಭಿಯಾನ ಕ್ಯಾತೆ ತೆಗೆಯುವ ಅಭಿಯಾನವಾಗಿದೆ. ವಿಸ್ಮಯ ಚಿತ್ರದಲ್ಲಿ ಅವರಿಬ್ಬರೂ ಗಂಡ ಹೆಂಡತಿಯ ಪಾತ್ರ ಮಾಡಿದ್ದಾರೆ. ಪಾತ್ರಕ್ಕೆ ತಕ್ಕಂತೆ ತಬ್ಬಿಕೊಳ್ಳುವ ದೃಶ್ಯಗಳಲ್ಲಿ ನಟಿಸಿದ್ದಾರೆ. ಗಂಡ ಹೆಂಡತಿ ಪಾತ್ರಧಾರಿಗಳು ಪರಸ್ಪರ ದೇಹ ಸ್ಪರ್ಶಿಸದೇ ನಟಿಸಲು ಹೇಗೆ ಸಾಧ್ಯ..? ಹಿಂದೆ ಟಚ್ ಮಾಡಿದ್ದಾರೆ ಎನ್ನುತ್ತಿರುವ ಶೃತಿ ಆಗ ಏನು ಮಾಡ್ತಾ ಇದ್ರು. ನಿರ್ದೇಶಕರು ಈ ದೃಶ್ಯಗಳ ಬಗ್ಗೆ ಮೊದಲೇ ಹೇಳಿರುತ್ತಾರೆ. ನಿರ್ದೇಶಕರು ದೃಶ್ಯ ಸರಿಯಾಗಿ ಬರುವವರೆಗೂ ರಿಹರ್ಸಲ್ ಮಾಡಿಸುತ್ತಾರೆ. ಶೂಟಿಂಗ್‍ನಲ್ಲಿ ಅರ್ಜುನ್ ಸರ್ಜಾ ಕೈಗಳು ಅಕ್ಕಪಕ್ಕದಲ್ಲಿ ಚಲಿಸಿದವು ಎನ್ನುತ್ತಾರೆ. ಆ ಶೂಟಿಂಗ್ ನಡೆಯುವಾಗ 50ರಿಂದ 60 ಜನ ಇರುತ್ತಾರೆ. ಅಷ್ಟೂ ಜನರ ಎದುರು ಲೈಂಗಿಕ ಕಿರುಕುಳ ಕೊಡೋಕೆ ಸಾಧ್ಯವೇ..? ಕಿರುಕುಳ ಆಗಿದ್ದರೆ ಅಂದೇ ಹೇಳಬಹುದಿತ್ತು. ತಬ್ಬಿಕೊಳ್ಳುವ ಉರುಳಾಡುವ ದೃಶ್ಯಗಳಲ್ಲಿ ಕೈಗಳು ದೇಹಕ್ಕೆ ಟಚ್ ಆಗೋದು ಸಹಜ. ಸಹಜ ನಟನೆಗೆ ಅಲ್ಲಿಬೇಡಿಕೆ ಇರುತ್ತೆ.
ಹೆಣ್ಣಿನ ಮೇಲಿನ ದೌರ್ಜನ್ಯವನ್ನು ನಾನೂ ಖಂಡಿಸುತ್ತೇನೆ. ಆದರೆ, ಇಲ್ಲಿ ಕಾನೂನು ದುರ್ಬಳಕೆ ಆಗಿದೆ. ಕುಪ್ಪಸವನ್ನು ಮುಟ್ಟಿದ್ದರು ಎನ್ನುವ ಶೃತಿ ಆರೋಪವಿದೆಯಲ್ಲ, ಅದು ಕಾನೂನು ಪಂಡಿತರಿಂದ ಕೇಸ್‍ನ್ನು ಸ್ಟ್ರಾಂಗ್ ಮಾಡಲು ಸೇರಿಸಿರುವ ಆರೋಪ.
ಸಾರ್ವಜನಿಕ ಸ್ಥಳದಲ್ಲಿ ಕಿರುಕುಳ ಆಗಿದ್ದರೆ, ಆಗಲೇ ಸುದ್ದಿ ಹೊರಬರುತ್ತಿತ್ತು. ಎಫ್‍ಐಆರ್‍ನಲ್ಲಿ 354, 354ಎ, 506, 509 ಸೆಕ್ಷನ್‍ಗಳನ್ನು ಹಾಕಲಾಗಿದೆ. ಅಂದ್ರೆ, ದೂರಿನಲ್ಲೇ ಸೆಕ್ಷನ್‍ಗಳನ್ನೂ ಉಲ್ಲೇಖಿಸಿದ್ದಾರೆ. ಇದರಿಂದಲೇ ಇದೊಂದು ಸರ್ಜಾರನ್ನು ಕಾನೂನಿನಲ್ಲಿ ಸಿಲುಕಿಸುವ ಪ್ರಯತ್ನ ನಡೆದಿದೆ ಎನ್ನುವುದಕ್ಕೆ ಸಾಕ್ಷಿ.
ಚಿತ್ರೀಕರಣ ಹೊರತುಪಡಿಸಿ, ಸರ್ಜಾ.. ಶೃತಿ ಅವರನ್ನು ಹೊರಗೆ ಭೇಟಿ ಮಾಡಿಯೇ ಇಲ್ಲ. ಚಿತ್ರದಲ್ಲಿ ಹತ್ತು ಹಲವಾರು ದೃಶ್ಯಗಳಿವೆ. ದೃಶ್ಯವೊಂದರಲ್ಲಿ ಶೃತಿಯೇ ಸರ್ಜಾಗೆ ಮುತ್ತು ಕೊಡುವ ಸನ್ನಿವೇಶ ಇದೆ. ಇಷ್ಟೆಲ್ಲ ಮುಜುಗರ ಇರುವವರು ನಟಿಸೋಕೆ ಯಾಕೆ ಒಪ್ಪಿಕೊಳ್ಳಬೇಕಿತ್ತು?
ಸಿನಿಮಾ ರಿಹರ್ಸಲ್ ವೇಳೆ ಇದೆಲ್ಲ ನಡೆದಿದೆ ಅಂತಾರೆ. ರಿಹರ್ಸಲ್‍ನಲ್ಲಿ ನಡೆಯೋದು ದೃಶ್ಯಗಳ ತಯಾರಿ. ಅದನ್ನು ಲೈಂಗಿಕ ಕಿರುಕುಳ ಎಂದು ಕರೆಯುವುದು ಹೇಗೆ..? ಹೀಗೆ ಬಿ.ವಿ. ಆಚಾರ್ಯ ಹೈಕೋರ್ಟ್‍ನಲ್ಲಿ ವಾದ ಮಂಡಿಸಿದ್ದಾರೆ.
ತನಿಖೆಗೆ ತಡೆಯಾಜ್ಞೆ ನೀಡದ ಹೈಕೋರ್ಟ್, ತನಿಖೆಗೆ ಸಹಕರಿಸಿ ಎಂದು ಅರ್ಜುನ್ ಸರ್ಜಾಗೆ ಸೂಚಿಸಿದೆ. ನವೆಂಬರ್ 14ರಂದು ಮುಂದಿನ ವಿಚಾರಣೆಗೆ ದಿನ ನಿಗದಿ ಮಾಡಿದೆ. ಅದುವರೆಗೂ ಸರ್ಜಾರನ್ನು ಬಂಧಿಸಬೇಡಿ ಎಂದು ಪೊಲೀಸರಿಗೂ ಸೂಚನೆ ಕೊಟ್ಟಿದೆ.