ಒಬ್ಬ ನಿರ್ದೇಶಕರ ನಿರ್ಮಾಣದ ಸಿನಿಮಾಗೆ ಇನ್ನೊಬ್ಬ ನಿರ್ದೇಶಕ, ನಿರ್ದೇಶನ ಮಾಡುವುದು ಇತ್ತೀಚೆಗೆ ಟ್ರೆಂಡ್ ಆಗುತ್ತಿದೆ. ಆ ಚೆಂದದ ಬೆಳವಣಿಗೆಯಲ್ಲಿ ಶಶಾಂಕ್, ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ, ರಾಜ್ ಬಿ.ಶೆಟ್ಟಿ, ಯೋಗರಾಜ್ ಭಟ್, ಗುರು ದೇಶಪಾಂಡೆ.. ಮೊದಲಾದವರು ಆಗಲೇ ಹೆಜ್ಜೆ ಗುರುತು ಮೂಡಿಸಿದ್ದಾರೆ. ಆ ಹೆಜ್ಜೆಗೆ ಜೊತೆಯಾಗಿದ್ದಾರೆ ನಿರ್ದೇಶಕ ಹೇಮಂತ್ ರಾವ್.
ಗೋಧಿಬಣ್ಣ ಸಾಧಾರಣ ಮೈಕಟ್ಟು, ಕವಲುದಾರಿ ಚಿತ್ರಗಳ ಮೂಲಕ ವ್ಹಾವ್ ಎನಿಸಿದ್ದ ಹೇಮಂತ್ ರಾವ್ ಸದ್ಯಕ್ಕೆ ಸಪ್ತ ಸಾಗರದಾಚೆ ಎಲ್ಲೋ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಹಂಬಲ್ ಪೊಲಿಟಿಷಿಯನ್ ನೊಗ್ರಾಜ್ ಚಿತ್ರದ ನಿರ್ಮಾಪಕರಲ್ಲಿ ಒಬ್ಬರಾಗಿದ್ದ ಹೇಮಂತ್ ಈಗ ಅಜ್ಞಾತವಾಸಿ ಅನ್ನೋ ಚಿತ್ರಕ್ಕೆ ನಿರ್ಮಾಪಕರಾಗುತ್ತಿದ್ದಾರೆ.
ಈ ಚಿತ್ರಕ್ಕೆ ಌಕ್ಷನ್ ಕಟ್ ಹೇಳುತ್ತಿರೋದು ಜರ್ನಾದನ್ ಚಿಕ್ಕಣ್ಣ. ಗುಳ್ಟು ಚಿತ್ರದ ಮೂಲಕ ಗಮನ ಸೆಳೆದಿದ್ದ ಜನಾರ್ದನ್ ಚಿಕ್ಕಣ್ಣ, ನಾಯಕರನ್ನಾಗಿ ಆಯ್ಕೆ ಮಾಡಿಕೊಂಡಿರೋದು ರಂಗಾಯಣ ರಘು ಅವರನ್ನು.
ನನ್ನ ಗುರುಗಳಾದ ಕೃಷ್ಣರಾಜ್ ಅವರು ಬರೆದಿರೋ ಕಥೆ ಇದು. 1997ರಲ್ಲಿ ಮಲೆನಾಡಿನಲ್ಲಿ ನಡೆದ ಕೊಲೆಯೊಂದರ ಸುತ್ತ ನಡೆಯೋ ಕಥೆ. ಇದೊಂದು ಕನ್ನಡದಲ್ಲಿ ಈವರೆಗೂ ಬಂದಿರದ ಮರ್ಡರ್ ಮಿಸ್ಟರಿ ಅನ್ನಬಹುದು. ಅದು ನನಗೆ ಇಷ್ಟವಾಯಿತು ಆನಂತರ ಹೇಮಂತ್ ರಾವ್ ಅವರನ್ನು ಭೇಟಿಯಾಗಿ ಕಥೆ ಹೇಳಿದೆ. ಅರ್ಧಗಂಟೆಯಲ್ಲಿ ಅವರು ನಿರ್ಮಾಣಕ್ಕೆ ಒಪ್ಪಿಕೊಂಡರು. ರಂಗಾಯಣ ರಘು ಚಿತ್ರದಲ್ಲಿ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಸಿದ್ದು ಮೂಲಿಮನಿ, ಪಾವನ ಗೌಡ ಅವರ ಪಾತ್ರ ಪ್ರೇಕ್ಷಕರಿಗೆ ಇಷ್ಟವಾಗಲಿದೆ ಎಂದು ಆತ್ಮವಿಶ್ವಾಸದಿಂದ ಹೇಳಿದ್ದಾರೆ ಜನಾರ್ದನ್ ಚಿಕ್ಕಣ್ಣ.
ಚಿತ್ರ ನಿರ್ಮಾಣಕ್ಕೆ ಒಂದು ರೀತಿ ನನಗೆ ಪುನೀತ್ ಸರ್ ಸ್ಫೂರ್ತಿ. ರಂಗಾಯಣ ರಘು ಅವರ ಬಗ್ಗೆ ಅವರು ಹೇಳಿದ್ದ ಮಾತು ಇವತ್ತಿಗೂ ನನ್ನ ಮನಸ್ಸಿನಲ್ಲಿದೆ. ರಂಗಾಯಣ ರಘು ಅವರ ಅಭಿನಯ ನೋಡೋಕೆ ನಿರ್ಮಾಪಕ ಎನ್ನುವುದಕ್ಕಿಂತ ಹೆಚ್ಚಾಗಿ ಒಬ್ಬ ಅಭಿಮಾನಿಯಾಗಿ ಕಾಯುತ್ತಿದ್ದೇನೆ ಎಂದಿದ್ದಾರೆ ಹೇಮಂತ್ ರಾವ್.
ಗುಳ್ಟು ಚಿತ್ರದಲ್ಲಿ ನಟಿಸಿದ್ದ ರಂಗಾಯಣ ರಘು ನಾನು ಜ್ಯೋತಿಷಿಗಳಿಗಿಂತ ಹೆಚ್ಚಾಗಿ ಜನಾರ್ದನ್ ಚಿಕ್ಕಣ್ಣ ಅವರನ್ನು ನಂಬುತ್ತೇನೆ. ಏಕೆಂದರೆ ಅವರು ಗುಳ್ಟುವಿನಲ್ಲಿ ಹೇಳಿದ್ದು ಆಮೇಲೆ ನಿಜವಾಯಿತು. ಹೇಮಂತ್ ಮತ್ತು ಜನಾರ್ದನ್, ಇಬ್ಬರ ಯೋಚನಾ ಶೈಲಿಯೇ ಬೇರೆ. ನಟಿಸಲು ಕುತೂಹಲದಿಂದ ಕಾಯುತ್ತಿದ್ದೇನೆ ಎಂದಿದ್ದಾರೆ ರಂಗಾಯಣ ರಘು.