ದಿ ವಿಲನ್. ಶಿವರಾಜ್‍ಕುಮಾರ್ ಮತ್ತು ಕಿಚ್ಚ ಸುದೀಪ್‍ರನ್ನು ಒಗ್ಗೂಡಿಸಿದ್ದೇ ಪ್ರೇಮ್ ಮಾಡಿದ ಮೊದಲ ದಾಖಲೆ. ಕನ್ನಡ ಚಿತ್ರರಂಗದ ಎರಡು ಧ್ರುವ ನಕ್ಷತ್ರಗಳನ್ನು ಒಟ್ಟುಗೂಡಿಸುವುದು ಸುಲಭದ ಮಾತಲ್ಲ. ಹಾಗೆ ಶುರುವಾದ ಚಿತ್ರ, ಬಿಡುಗಡೆಗೂ ಮುನ್ನವೇ ದಾಖಲೆಗಳ ಮೇಲೆ ದಾಖಲೆ ಬರೆಯುತ್ತಿರುವುದು ವಿಶೇಷ.
ದಿ ವಿಲನ್.. ಒಟ್ಟಾರೆ ತೋರಿಸಿದ್ದು 4 ನಿಮಿಷಗಳ ಟೀಸರ್. ಕನ್ನಡ ಚಿತ್ರರಂಗದಲ್ಲಷ್ಟೇ ಅಲ್ಲ, ಭಾರತ ಚಿತ್ರರಂಗದ ಇತಿಹಾಸದಲ್ಲೇ ಟೀಸರ್ ಬಿಡುಗಡೆಗಾಗಿ ಪ್ರೇಕ್ಷಕರಿಂದಲೇ ಹಣ ವಸೂಲಿ ಮಾಡಿದ ಉದಾಹರಣೆಗಳೇ ಇಲ್ಲ ಎನ್ನಬೇಕು. ಇದು ದಾಖಲೆಯೇ ಸರಿ.
ಇಡೀ ಚಿತ್ರ ನೋಡೋದು ಬಿಡಿ, 4 ನಿಮಿಷಗಳ ಟೀಸರ್ ನೋಡೋಕೆ ಜನ 500 ರೂ. ಕೊಟ್ಟಿದ್ದಾರೆ. ಅಫ್‍ಕೋರ್ಸ್, ಆ ಹಣವನ್ನು ನಿರ್ಮಾಪಕ ಸಿ.ಆರ್.ಮನೋಹರ್ ಸಂಕಷ್ಟದಲ್ಲಿರುವ ನಿರ್ದೇಶಕರಿಗೇ ನೀಡಿರುವುದು ಸ್ವಾಗತಾರ್ಹ.
ಆನಂದ್ ಪಿ.ರಾಜು, ಎ.ಟಿ.ರಘು, ಬೂದಾಳ ಕೃಷ್ಣಮೂರ್ತಿ, ಹಿರೇಮಠ್ ಅವರಿಗೆ ಟೀಸರ್ ಪ್ರದರ್ಶನದಿಂದ ಬಂದ ಹಣವನ್ನು ಸಂದಾಯ ಮಾಡಲಾಗಿದೆ. ಅದು ಅವರ ಸಂಕಷ್ಟದ ಬದುಕಿದೆ ದಿ ವಿಲನ್ ಸ್ಪಂದಿಸಿದ ರೀತಿ.
ಟೈಮೆಕ್ಸ್ ಹಾಗೂ ಡೈರಿ ಡೇ ಸಂಸ್ಥೆಗಳು, ದಿ ವಿಲನ್ ಚಿತ್ರಕ್ಕೆ ಬ್ರಾಂಡ್ ಪಾರ್ಟ್‍ನರ್ ಆಗಿರುವುದು ವಿಶೇಷ. ಇದು ಕನ್ನಡಕ್ಕೆ ಹೊಸದೇನಲ್ಲವಾದರೂ, ಟೈಮೆಕ್ಸ್ ಸಂಸ್ಥೆ ದಿ ವಿಲನ್ ಹೆಸರಿನಲ್ಲೇ ವಾಚ್ ತರುತ್ತಿರುವುದು ಹೊಸದು. ಒನ್ಸ್ ಎಗೇಯ್ನ್, ಇದೂ ಕೂಡಾ ದಾಖಲೆ.
ಚಿತ್ರದ ಟೀಸರ್‍ನ್ನು ಮುಖ್ಯಮಂತ್ರಿ ಕುಮಾರಸ್ವಾಮಿಯವರೇ ಬಿಡುಗಡೆಗೊಳಿಸಿದ್ದು ವಿಶೇಷ. ಅಂದಹಾಗೆ ದಿ ವಿಲನ್ ಚಿತ್ರತಂಡ, ಮೊದಲು ಶುರು ಮಾಡಿದ್ದು ಕಲಿ ಚಿತ್ರವನ್ನ. ಆ ಚಿತ್ರವನ್ನು ಲಾಂಚ್ ಮಾಡಿದ್ದವರು ಆಗ ಸಿಎಂ ಆಗಿದ್ದ ಸಿದ್ದರಾಮಯ್ಯ. ಅದಾದ ಮೇಲೆ ಕಥೆಯೂ ಬದಲಾಗಿ ದಿ ವಿಲನ್ ಸಿದ್ಧವಾಯ್ತು. ಈ ಚಿತ್ರದ ಟೀಸರ್ ರಿಲೀಸ್ ಮಾಡಿದ್ದು ಈಗಿನ ಸಿಎಂ ಕುಮಾರಸ್ವಾಮಿ. ಒನ್ ಮೋರ್ ಸ್ಪೆಷಲ್.
ಇನ್ನು ಚಿತ್ರದ ಎರಡೂ ಟೀಸರ್‍ಗಳು, ದಾಖಲೆ ಪ್ರಮಾಣದಲ್ಲಿ ಹಿಟ್ಸ್ ಪಡೆಯತ್ತಿರುವುದು ವಿಶೇಷ. ಕನ್ನಡ ಚಿತ್ರದ ಟೀಸರ್‍ವೊಂದು, ಬಿಡುಗಡೆ ದಿನವೇ ಟ್ವಿಟರ್‍ನಲ್ಲಿ ಟ್ರೆಂಡ್ ಆಗಿದ್ದು ಕೂಡಾ ದಿ ವಿಲನ್ ಸೃಷ್ಟಿಸಿದ ದಾಖಲೆಯೇ..