ದಿ ವಿಲನ್ ಚಿತ್ರದ ಕಥೆ ಕೊನೆಗೂ ಗೊತ್ತಾಗಿ ಹೋಗಿದೆ. ಒಂದಲ್ಲ.. ಎರಡಲ್ಲ.. ಇದುವರೆಗೆ ಆರು ಟೀಸರ್ ಬಿಟ್ಟಿರುವ ಪ್ರೇಮ್, ಕಥೆಯನ್ನು ಗುಟ್ಟಾಗಿಯೇ ಇಟ್ಟುಕೊಂಡಿದ್ದರೂ, ಸಿನಿಮಾ ಕಥೆ ಗೊತ್ತಾಗಿಬಿಟ್ಟಿದೆ. ವಿಲನ್ ಕಥೆಯನ್ನು ಬಹಿರಂಗಪಡಿಸಿರುವುದು ಬೇರೆ ಯಾರೂ ಅಲ್ಲ, ವಿಲನ್‍ಗಾಗಿ ಕಾಯ್ತಿರೋ ಅಭಿಮಾನಿಗಳು. ಟೀಸರ್‍ಗಳನ್ನು ನೋಡಿ, ಕಥೆ ಹೀಗೆಯೇ ಇರಬಹುದು ಎಂಬ ಕಲ್ಪನೆಯನ್ನು ಹರಿಬಿಟ್ಟಿದ್ದಾರೆ ಫ್ಯಾನ್ಸ್.
ಕಥೆ ನಂ.1 - ಸುದೀಪ್ ಮತ್ತು ಶಿವರಾಜ್‍ಕುಮಾರ್, ಇಬ್ಬರೂ ಚಿತ್ರದಲ್ಲಿ ರೌಡಿ ಅಥವಾ ವಿಲನ್‍ಗಳು. ಇಬ್ಬರೂ ಕೂಡಾ ಒಬ್ಬರನ್ನು (ಆ್ಯಮಿ ಜಾಕ್ಸನ್)ರನ್ನು ಹುಡುಕುತ್ತಿರುತ್ತಾರೆ. ಆ ಬೇಟೆಯನ್ನು ನಾನೇ ಆಡಬೇಕು ಎಂದು ಹಠಕ್ಕೆ ಬೀಳ್ತಾರೆ. ಅಲ್ಲಿ ಹೋರಾಟ ನಡೆಯುತ್ತೆ. ಮಧ್ಯೆ ಮದರ್ ಸೆಂಟಿಮೆಂಟ್ ಕೂಡಾ ಇದೆ.
ಕಥೆ ನಂ.2 - ಸುದೀಪ್ ವಿಲನ್. ಶಿವಣ್ಣ ರಾವಣ. ಇಬ್ಬರೂ ನೆಗೆಟಿವ್ ಶೇಡ್ ಕ್ಯಾರೆಕ್ಟರ್‍ಗಳೇ. ಒಬ್ಬರು ಲೋಕಲ್, ಇನ್ನೊಬ್ಬರು ಇಂಟರ್‍ನ್ಯಾಷನಲ್. ಇಬ್ಬರ ನಡುವೆ ಪರಸ್ಪರ ಬೇಟೆಯಾಡುವ ಕಥೆ ಇದೆ. ಇಬ್ಬರ ನಡುವೆ ಟ್ವಿಸ್ಟ್ ಕೊಡೋದು ಆ್ಯಮಿ ಜಾಕ್ಸನ್.
ಕಥೆ ನಂ. 3 - ಇದು ಅಂಡರ್‍ವಲ್ರ್ಡ್ ಸ್ಟೋರಿ. ಡಾನ್ ಯಾರಾಗಬೇಕು ಎಂದು ಇಬ್ಬರ ನಡುವೆ ಫೈಟ್ ಶುರುವಾಗುತ್ತೆ. ಅಥವಾ ಇಬ್ಬರೂ ತಮ್ಮ ತಮ್ಮ ಬಾಸ್‍ಗಳಿಗಾಗಿ ಫೈಟ್ ಶುರು ಮಾಡ್ತಾರೆ. ಆ್ಯಮಿ ಜಾಕ್ಸನ್ ತನಿಖಾಧಿಕಾರಿಯಾಗಿ ಇಬ್ಬರ ನಡುವೆ ದ್ವೇಷ ತಂದಿಟ್ಟು, ಗೇಮ್ ಆಡ್ತಾರೆ.
ಸದ್ಯಕ್ಕೆ ಅಭಿಮಾನಿಗಳಿಂದ ಹೊರಬಿದ್ದಿರುವ ಕಥೆಗಳು ಈ ಮೂರು. ಜೋಗಿ ಪ್ರೇಮ್ ಈ ಕಥೆಗಳಲ್ಲೇ ಹೊಸದೊಂದು ಕಥೆ ಸೃಷ್ಟಿಸಿದರೂ ಆಶ್ಚರ್ಯ ಪಡಬೇಡಿ. ನಿಜವಾದ ಕಥೆ ಏನು ಅನ್ನೋದನ್ನು ಪ್ರೇಮ್ ಇದುವರೆಗೂ ಸೀಕ್ರೆಟ್ ಆಗಿಯೇ ಇಟ್ಟಿದ್ದಾರೆ. ಆದರೆ, ಸಿನಿಮಾವೊಂದರ ಕಥೆಯ ಬಗ್ಗೆ ಅಭಿಮಾನಿಗಳಲ್ಲಿ ಈ ರೀತಿಯ ಕುತೂಹಲ ಮೂಡಿರುವುದು, ತಮ್ಮ ತಮ್ಮಲ್ಲೇ ಕಥೆ ಹೀಗೂ ಇರಬಹುದು ಎಂಬ ಚರ್ಚೆ ಶುರುವಾಗಿರೋದು ಚಿತ್ರದ ಮೇಲಿನ ನಿರೀಕ್ಷೆಗೆ ಒಂದು ಪುಟ್ಟ ಸಾಕ್ಷಿ.