ಸ್ಟಾರ್‍ಗಳು ಏನು ಹೇಳಿದರೂ, ಅಭಿಮಾನಿಗಳು ಕಿವಿಗೊಟ್ಟು ಕೇಳ್ತಾರೆ. ಅವರು ಹೇಳಿದಂತೆಯೇ ಮಾಡ್ತಾರೆ. ಆದರೆ, ಅತಿರೇಕದ ಅಭಿಮಾನವೊಂದನ್ನು ಬಿಟ್ಟು. ಈ ಬಾರಿಯೂ ಹಾಗೆಯೇ ಆಗಿದೆ. ದಿ ವಿಲನ್ ಟೀಸರ್‍ಗಳು ರಿಲೀಸ್ ಆಗುತ್ತಿದ್ದಂತೆ, ಯೂಟ್ಯೂಬ್, ಸೋಷಿಯಲ್ ಮೀಡಿಯಾಗಳಲ್ಲಿ ಟ್ರೆಂಡ್ ಆಯ್ತು. ನೋಡಿದವರೆಲ್ಲರೂ ಮೆಚ್ಚಿ ಹೊಗಳಿದರೆ, ಅದರಲ್ಲೂ ಕೆಲವರು ಅತಿರೇಕದ ಅಭಿಮಾನ ಮೆರೆದರು. ಈ ಬಾರಿ ಅಂತಹ ಅತಿರೇಕದ ದಾಳಿಗೆ ಗುರಿಯಾಗಿದ್ದು ರಿಷಬ್ ಶೆಟ್ಟಿ ಹಾಗೂ ಡ್ಯಾನಿಶ್ ಸೇಟ್. ಇಬ್ಬರೂ ಕೂಡಾ ಟ್ವಿಟರ್‍ನಲ್ಲಿ ಸುದೀಪ್ ಅವರ ಟೀಸರ್ ಬಗ್ಗೆ ಅಭಿಪ್ರಾಯ ಹೇಳಿಕೊಂಡರು. ಅವರಷ್ಟೇ ಅಲ್ಲ, ಬಹುತೇಕ ಕಲಾವಿದರು ಸುದೀಪ್ ಅವರ ಟೀಸರ್‍ನ್ನು ಟ್ವಿಟರ್‍ನಲ್ಲಿ ಹೊಗಳಿದರು.
ಅತಿರೇಕದ ಅಭಿಮಾನಿಗಳಿಗೆ ಅಷ್ಟು ಸಾಕಿತ್ತು. ನೀವ್ಯಾಕೆ ಶಿವರಾಜ್‍ಕುಮಾರ್ ಟೀಸರ್‍ನ್ನು ಹೊಗಳಲಿಲ್ಲ ಎಂದು ಮುಗಿಬಿದ್ದರು. ಆಗ ಡ್ಯಾನಿಶ್ ಸೇಟ್, ರಿಷಬ್ ನೆರವಿಗೆ ಬಂದ ಸುದೀಪ್, ಅಭಿಮಾನಿಗಳಿಗೆ ಬುದ್ದಿವಾದ ಹೇಳಿದರು. ಶಿವರಾಜ್‍ಕುಮಾರ್ ಹಿರಿಯ ಕಲಾವಿದ. ಅವರನ್ನು ಪ್ರತಿಯೊಬ್ಬರೂ ಪ್ರೀತಿಸುತ್ತೇವೆ, ಗೌರವಿಸುತ್ತೇವೆ. ದಯವಿಟ್ಟು ಇಂತಹ ಟ್ವೀಟ್‍ಗಳನ್ನು ನೋಡಲು ಬೇಸರವಾಗುತ್ತಿದೆ ಎಂದರು.
ಡ್ಯಾನಿಶ್ ಸೇಟ್ ಕೂಡಾ ಅಭಿಮಾನಿಗಳಿಗೆ ನಾನು ಶಿವರಾಜ್‍ಕುಮಾರ್ ಅವರನ್ನು ಗೌರವಿಸುತ್ತೇನೆ, ಅವರು ನನಗೆ ಸ್ಫೂರ್ತಿ ಎಂದರಷ್ಟೇ ಅಲ್ಲ, ಟ್ವಿಟರ್‍ನಲ್ಲಿ ಶಿವರಾಜ್‍ಕುಮಾರ್ ಇಲ್ಲ ಎಂಬ ವಿಷಯವನ್ನೂ ಅಭಿಮಾನಿಗಳ ಗಮನಕ್ಕೆ ತಂದರು. ಶಿವರಾಜ್‍ಕುಮಾರ್ ಟೀಸರ್ ಕೂಡಾ ವಂಡರ್‍ಫುಲ್ ಎಂದರು.
ಅಷ್ಟೇ ಅಲ್ಲ, ಇಬ್ಬರು ದೊಡ್ಡ ಸ್ಟಾರ್‍ಗಳು ನಟಿಸಿರುವ ಚಿತ್ರದ ಬಗ್ಗೆ ಮಾತನಾಡುವಾಗ, ಒಬ್ಬ ನಟನನ್ನು ಮರೆಯುವವನೇ ಚಿತ್ರದ ವಿಲನ್ ಎಂದು ಚಟಾಕಿ ಹಾರಿಸುವ ಮೂಲಕ, ಸೀರಿಯಸ್ಸಾಗಿ ಹೋಗುತ್ತಿದ್ದ ವಿಷಯವನ್ನು ತಿಳಿಗೊಳಿಸಿದರು.
ದಿ ವಿಲನ್ ಟೀಸರ್‍ಗೆ ಸುನಿಲ್ ಶೆಟ್ಟಿ, ರಾಮ್‍ಗೋಪಾಲ್ ವರ್ಮಾ ಸೇರಿದಂತೆ ಬಾಲಿವುಡ್ ಮಂದಿಯೂ ಮೆಚ್ಚುಗೆ ಸೂಸಿರುವುದು ವಿಶೇಷ. ಪ್ರೇಮ್ ಅವರ ಶ್ರಮ ಟೀಸರ್‍ನಲ್ಲಿ ಎದ್ದು ಕಾಣುತ್ತಿದೆ.