ಶಿವಣ್ಣನ ಮಗಳ ಮದುವೆ ಆಯ್ತು. ಅವರೀಗ ಅಜ್ಜ ಆಗೋ ಸಮಯ ಬಂತು. ಆದರೂ ಸಿನಿಮಾ ರಿಲೀಸ್ ಮಾಡ್ತಾ ಇಲ್ಲ. ಈ ಪ್ರೇಮ್, ನನ್ನ ಮಗಳ ಮದುವೆವರೆಗೂ ಕಾಯ್ತಾನೇನೋ ಗೊತ್ತಿಲ್ಲ. ನನ್ನ ಎರಡು ಬೆರಳು ಇಟ್ಟುಕೊಂಡೇ ಟೀಸರ್ ರಿಲೀಸ್ ಮಾಡಿ ಸುದ್ದಿ ಮಾಡಿದ್ರು ಪ್ರೇಮ್. ಅದೇನೋ ದೊಡ್ಡ ಸೌಂಡ್ ಮಾಡ್ತು. ಅದರ ಕಷ್ಟ ಏನು ಅಂಥಾ ನಿರ್ಮಾಪಕರಿಗಷ್ಟೇ ಗೊತ್ತು.
ಪ್ರೇಮ್ ಕಥೆ ಹೇಳೋಕೆ ಒಂದ್ ವರ್ಷ ಮಾಡಿದ್ರು. ಇನ್ನೊಂದ್ ವರ್ಷ ಕ್ಲೈಮಾಕ್ಸ್ ಹೇಳಿದ್ರು. ಅದಾದ ಮೇಲೆ ಒಂದ್ ವರ್ಷ ಪ್ರೊಡ್ಯೂಸರ್ ಫಿಕ್ಸ್ ಮಾಡಿದ್ರು. ಆಮೇಲೆ ಗೊತ್ತಾಯ್ತು. ನಾನು ಶಿವಣ್ಣ ನಟಿಸ್ತಿದ್ದೀವಿ ಅಂಥಾ. ಆಮೇಲೆ, ನಾನಾಗ್ಲೀ, ಶಿವಣ್ಣ ಆಗಲೀ ಕಥೆ ಕೇಳಲೇ ಇಲ್ಲ.
ಇದು ದಿ ವಿಲನ್ ಆಡಿಯೋ ರಿಲೀಸ್ ವೇಳೆ ಸುದೀಪ್ ಹೇಳಿದ ಮಾತುಗಳು. ಸುದೀಪ್ ಹಾಗೆ ಶಿವಣ್ಣ, ಪ್ರೇಮ್ ಇಬ್ಬರ ಕಾಲು ಎಳೆಯುತ್ತಾ, ವೇದಿಕೆಯಲ್ಲಿದ್ದವರನ್ನೆಲ್ಲ ನಕ್ಕು ನಗಿಸುತ್ತಾ ಹೋದರು. ಜೊತೆ ಜೊತೆಗೆ ವಿಲನ್ ಚಿತ್ರದ ಹಾಡುಗಳೂ ಹೊರಬಿದ್ದವು. ಪ್ರೇಮ್ ಅವರ ಬಿಲ್ಡಪ್ ಬಗ್ಗೆ ಸಮರ್ಥನೆ ಮಾಡಿಕೊಂಡ ಸುದೀಪ್, ಪ್ರೇಮ್ ಅವರ ಸಿನಿಮಾಗೆ ಬಿಲ್ಡಪ್ ಕೊಡೋದ್ರಲ್ಲಿ ತಪ್ಪೇನಿದೆ. ಅವರಲ್ಲಿ ಸಿನಿಮಾ ಬಗ್ಗೆ ಒಂದು ಪ್ಯಾಷನ್ ಇದೆ. ಹೀಗೆಲ್ಲ ಮಾತಾಡಿಕೊಳ್ಳೋವ್ರು ಕೈಲಾಗದವರು ಮಾತ್ರ. ಅಂಥಾದ್ದೊಂದು ಪ್ಯಾಷನ್ ಇಲ್ಲದೇ ಇದ್ರೆ, ಅವರ ಜೊತೆ ಶಿವಣ್ಣ ಮೂರು ಸಿನಿಮಾ ಮಾಡ್ತಾ ಇರಲಿಲ್ಲ. ದಿ ವಿಲನ್ ಏನಾಗುತ್ತೋ ಏನೋ.. ನೋಡಬೇಕು. ಆದರೆ, ಪ್ರೇಮ್ ವೆರಿ ಗುಡ್ ವರ್ಕರ್. ಪ್ರೇಮ್ ಬಗ್ಗೆ ನನ್ನ ಅಭಿಪ್ರಾಯ ಯಾವತ್ತಿಗೂ ಬದಲಾಗಲ್ಲ ಅಂದ್ರು ಸುದೀಪ್.
ನಟಿ ಆಮಿ ಜಾಕ್ಸನ್‍ಗೆ ಪ್ರೇಮ್ ದೃಶ್ಯಗಳ ಬಗ್ಗೆ ವಿವರಣೆ ನೀಡುತ್ತಿದ್ದನ್ನು ಮನಸಾರೆ ಎಂಜಾಯ್ ಮಾಡಿ ಹೇಳಿದರು ಸುದೀಪ್.
ಪ್ರೇಮ್ ಆಮಿ ಜಾಕ್ಸನ್ ಅವರನ್ನ ಏಮಿ ಜಾಕ್ಸನ್ ಅಂತಾನೇ ಕರೀತಿದ್ರಂತೆ. ಅವರು ಪ್ರೇಮ್ ಜೀ ಎಂದ್ರೆ, ಯೆಸ್ ಅಮ್ಮಿ, ವಾಟ್ ಎನ್ನುತ್ತಿದ್ದರಂತೆ ಪ್ರೇಮ್. ಆಮಿ ಏನಾದ್ರೂ ಪಟಪಟ ಅಂಥಾ ಇಂಗ್ಲಿಷ್‍ನಲ್ಲಿ ಹೇಳಿಬಿಟ್ಟರೆ.. ಪ್ರೇಮ್ ಅಸಿಸ್ಟೆಂಟ್‍ಗಳನ್ನ ಕರೀತಿದ್ರಂತೆ. ನಿಮ್ಮಜ್ಜಿ ಬರ್ರಲೇ.. ಆಯಮ್ಮಂಗೆ ಸೀನ್ ಹೇಳ್ರೋ ಅನ್ನೋರಂತೆ. ಅವರೋ.. ಹೇಳಿ ಕೇಳಿ ಪ್ರೇಮ್ ಶಿಷ್ಯರು. ಕೊನೆಗೆ ಅದೂ ಫೇಲ್ ಆದಾಗ.. ಏಮಿ ಜಾಕ್ಸನ್ ಯು ಸೀ.. ಜಸ್ಟ್ ಯು ಫಾಲ್.. ಅಂಡ್ ಲುಕ್.. ಅಂಡ್ ಗೋ.. ದಟ್ಸ್ ಇಟ್ ಎಂದುಬಿಡ್ತಿದ್ದರಂತೆ.
ಇನ್ನೂ ಕೆಲವೊಮ್ಮೆ ಆಯಮ್ಮಂಗೆ ನೀನೇ ಸೀನ್ ಹೇಳಿಬಿಡು ಡಾರ್ಲಿಂಗ್ ಎಂದು ಸುದೀಪ್ ಬೆನ್ನು ಹತ್ತುತ್ತಿದ್ದರಂತೆ ಪ್ರೇಮ್. ನೀನೇ ಹೇಳು, ನಾನೇನು ನಿನ್ ಅಸಿಸ್ಟೆಂಟಾ ಅಂತಿದ್ರಂತೆ ಸುದೀಪ್.
ಪ್ರೇಮ್ ಇಂಗ್ಲಿಷ್ ಕೇಳಿದ್ರೆ, ಅಕ್ಸ್‍ಫರ್ಡ್ ಯುನಿವರ್ಸಿಟಿ ಬಾಗಿಲು ಮುಚ್ಚುತ್ತೆ ಎಂದು ನಕ್ಕರು ಸುದೀಪ್.
ಆಡಿಯೋ ರಿಲೀವ್ ವೇಳೆ ಹಾಡೊಂದಕ್ಕೆ ಹೆಜ್ಜೆ ಹಾಕಿದ ಶಿವರಾಜ್‍ಕುಮಾರ್, ಕೊಡಗಿನ ಸಂತ್ರಸ್ತರನ್ನು ಸ್ಮರಿಸಿದರು. ನಾನು ನಿರ್ದೇಶಕ ಹೇಳಿದಂತೆ ಕೇಳೋವ್ನು. ನಿರ್ದೇಶಕರು ಕಸ ಗುಡಿಸೋ ಪಾತ್ರ ಕೊಟ್ಟರೂ ಸೈ. ಮಾಡ್ತೀನಿ ಅಷ್ಟೆ ಎಂದರು. ರೆಬಲ್ ಸ್ಟಾರ್ ಅಂಬರೀಷ್ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಿದ್ರು.