ಕರ್ನಾಟಕದಲ್ಲಿ ಮಲ್ಟಿಪ್ಲೆಕ್ಸ್‍ಗಳು ರಾಜಕೀಯ ಮಾಡುತ್ತವೆ. ಪರಭಾಷೆ ಚಿತ್ರಗಳನ್ನು ನೋಡುವ ರೀತಿಗೂ, ಕನ್ನಡ ಚಿತ್ರಗಳನ್ನು ನೋಡುವ ರೀತಿಗೂ ವ್ಯತ್ಯಾಸಗಳಿವೆ. ಕನ್ನಡ ಚಿತ್ರ ಸಕ್ಸಸ್ ಆಗಿದ್ದರೂ, ಏಕಾಏಕಿ ಶೋ ರದ್ದು ಮಾಡಿ, ದಿಢೀರ್ ಎಂದು ಬೇರೆ ಭಾಷೆ ಸಿನಿಮಾ ಪ್ರದರ್ಶಿಸಿದ ಘಟನೆಗಳೂ ಜರುಗಿವೆ. ಕನ್ನಡ ಚಿತ್ರಗಳಿಗೆ ಶೋ ಕೊಡದೆ ಸತಾಯಿಸುವವರಿಗೆನೂ ಕೊರತೆಯಿಲ್ಲ. ಇದು ಇಂದು ನಿನ್ನೆಯ ಕಥೆಯೇನೂ ಅಲ್ಲ. ಆದರೆ, ಈ ಬಾರಿ ಮಲ್ಟಿಪ್ಲೆಕ್ಸ್‍ಗಳ ವಿರುದ್ಧ ಗುಡುಗಿರುವುದು ಶಿವರಾಜ್‍ಕುಮಾರ್.
ಈ ಬಾರಿ ಇಂತಹ ಅನುಭವ ಅವರ ಚಿತ್ರಕ್ಕೂ ಆಗುತ್ತಿದೆ. ಮಲ್ಟಿಪ್ಲೆಕ್ಸ್‍ಗಳು ಕನ್ನಡ ಚಿತ್ರ ನಿರ್ಮಾಪಕರಿಗೆ ಬೇರೆ ಭಾಷೆಯ ಚಿತ್ರಗಳಿಗಿಂತ ಕಡಿಮೆ ಶೇರ್ ಕೊಡುತ್ತಾರೆ. ಬೇರೆ ಭಾಷೆಯವರಿಗೆ ನೀಡಿದಂತೆಯೇ ಕನ್ನಡ ಚಿತ್ರಗಳಿಗೂ ಶೇರ್ ಕೊಡಿ ಎಂದು ಮನವಿ ಮಾಡಿತ್ತು ದಿ ವಿಲನ್ ಚಿತ್ರತಂಡ. ಆದರೆ, ಇದಕ್ಕೆ ಸ್ಥಳೀಯ ಮಲ್ಟಿಪ್ಲೆಕ್ಸ್‍ನವರು ಬಿಟ್ಟರೆ, ಬೇರೆಯವರು ಕ್ಯಾರೇ ಎಂದಿಲ್ಲ. ಇದರ ವಿರುದ್ಧ ನಿರ್ದೇಶಕ ಜೋಗಿ ಪ್ರೇಮ್ ಧಿಕ್ಕಾರವನ್ನೇ ಕೂಗಿದ್ದರು. ಈಗ ಶಿವಣ್ಣ ಮಾತನಾಡಿದ್ದಾರೆ.
ಚೆನ್ನಾಗಿ ಹೋಗುತ್ತಿರುವ ಕನ್ನಡ ಚಿತ್ರಗಳ ಶೋಗಳನ್ನು ಏಕಾಏಕಿ ರದ್ದು ಮಾಡಿದರೆ, ಅದರ ವಿರುದ್ಧ ನಾನು ನಿಲ್ಲಬೇಕಾಗುತ್ತದೆ. ಬೇರೆ ಭಾಷೆಗಳವರಿಗೆ ಕೊಡುವ ಪ್ರಾಧಾನ್ಯತೆಯನ್ನು ಕನ್ನಡಿಗರಿಗೂ ಕೊಡಿ. ಬಿಸಿನೆಸ್ ಮಾಡೋಕೆ ಎಂದು ಬಂದವರು ಇಲ್ಲಿನ ನೆಲ, ಜಲ, ಭಾಷೆ, ಸಂಸ್ಕøತಿಗೆ ಗೌರವ ಕೊಡಬೇಕು. ನೀವು ಹೇಳಿದ್ದನ್ನು ಕೇಳಿಕೊಂಡು ಇರೋಕೆ ನಾವೇನೂ ಮುಠ್ಠಾಳರಲ್ಲ ಎಂದಿದ್ದಾರೆ ಶಿವಣ್ಣ.
ಮಲ್ಟಿಪ್ಲೆಕ್ಸ್‍ಗಳ ಆಟಾಟೋಪದ ವಿರುದ್ಧ ಈ ಬಾರಿ ದೊಡ್ಡ ಸಮರವೊಂದು ಶುರುವಾಗಿದೆ.