ಮೊನ್ನೆ ಮೊನ್ನೆಯಷ್ಟೇ ಡಾರ್ಲಿಂಗ್ ಕೃಷ್ಣ ಮತ್ತು ಡಿಂಪಲ್ ಕ್ವೀನ್ ರಚಿತಾ ರಾಮ್ ಕಾಂಬಿನೇಷನ್ನಿನ ಬಹುನಿರೀಕ್ಷಿತ ಚಿತ್ರಕ್ಕೆ ಲವ್ ಮೀ ಆರ್ ಹೇಟ್ ಮಿ ಚಿತ್ರ ಘೋಷಣೆಯಾಗಿತ್ತು. ಟೈಟಲ್ ಹೊರಬಿದ್ದ ಬೆನ್ನಲ್ಲೇ ವಿವಾದ ಸುತ್ತಿಕೊಂಡಿದೆ.
ಈ ಚಿತ್ರದ ಟೈಟಲ್ ನನ್ನದು ಎಂದು ತಗಾದೆ ತೆಗೆದಿದ್ದಾರೆ ನಿರ್ದೇಶಕ ವಿ.ದೇವದತ್ತ. ವಿ. ದೇವದತ್ತ ಸೈಕೋ ಚಿತ್ರವನ್ನು ನಿರ್ದೇಶಿಸಿದ್ದವರು. ಚಿತ್ರದ ಟೈಟಲ್ ಪ್ರಶ್ನಿಸಿ ದೇವದತ್ತ ಫಿಲಂ ಚೇಂಬರ್ ಮೆಟ್ಟಿಲೇರಿದ್ದಾರೆ.
ಇತ್ತ ನಿರ್ದೇಶಕ ದೀಪಕ್ ಗಂಗಾಧರ್. ಲವ್ ಮೀ ಆರ್ ಹೇಟ್ ಚಿತ್ರವನ್ನು ಶ್ರೀ ವೆಂಕಟೇಶ್ವರ ಇಂಟರ್ನ್ಯಾಷನಲ್ ಬ್ಯಾನರ್ ಅಡಿಯಲ್ಲಿ ಮಾಡುತ್ತಿದ್ದು, ಬಿ.ಕೆ.ರವಿಕಿರಣ್ ನಿರ್ಮಾಪಕರಾಗಿದ್ದಾರೆ. ಈಗಾಗಲೇ ಚಿತ್ರದ ಫಸ್ಟ್ ಲುಕ್ ಮತ್ತು ಪ್ರೋಮೋ ಶೂಟಿಂಗ್ ಆಗಿದೆ. ಹೀಗಾಗಿ ಚಿತ್ರದ ಟೈಟಲ್ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ ದೀಪಕ್ ಗಂಗಾಧರ್.
ವಿವಾದಕ್ಕೆ ಕಾರಣ ಏನೆಂದು ಹುಡುಕಿದರೆ ಎರಡು ಫಿಲಂ ಚೇಂಬರ್ಗಳ ಕಥೆ ಹೊರಬಿದ್ದಿದೆ. ಕರ್ನಾಟಕ ಫಿಲಂ ಚೇಂಬರ್, ರಾಜ್ಯದ ಅಧಿಕೃತ ಮೂಲ ಸಂಸ್ಥೆ. ಚಿತ್ರರಂಗದ ಬಹುತೇಕ ವ್ಯವಹಾರಗಳು ನಡೆಯುವುದು ಈ ಸಂಸ್ಥೆಯ ಅಡಿಯಲ್ಲಿ. ದೇಶದ ಹಾಗೂ ದಕ್ಷಿಣ ಭಾರತದ ಫಿಲಂ ಚೇಂಬರ್ಗಳಲ್ಲಿಯೂ ಈ ಸಂಸ್ಥೆಗೆ ಅಧಿಕೃತ ಮಾನ್ಯತೆ ಇದೆ. ಇದರ ನಡುವೆ ಕೆಲವು ವರ್ಷಗಳ ಹಿಂದೆ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಎಂಬ ಮತ್ತೊಂದು ಪರ್ಯಾಯ ಚೇಂಬರ್ ಹುಟ್ಟುಹಾಕಲಾಯಿತು.
ಈಗ ದೀಪಕ್ ಗಂಗಾಧರ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಟೈಟಲ್ ನೋಂದಾಯಿಸಿದ್ದಾರೆ. ಅತ್ತ ದೇವದತ್ತ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಟೈಟಲ್ ರಿಜಿಸ್ಟ್ರಾರ್ ಮಾಡಿಸಿದ್ದಾರೆ. ಎರಡು ಫಿಲಂ ಚೇಂಬರುಗಳಲ್ಲಿ ಯಾವ ಚೇಂಬರ್ನಲ್ಲಿರುವ ಟೈಟಲ್ಗೆ ಮಾನ್ಯತೆ ಸಿಗಲಿದೆ ಎನ್ನುವುದು ಕುತೂಹಲಕಾರಿ.