` rashmika, - chitraloka.com | Kannada Movie News, Reviews | Image

rashmika,

  • ಚಮಕ್ ಇಟಲಿಯಲ್ಲಿ ಹೆಡ್‍ಲೈನ್ ನ್ಯೂಸ್ ಆದಾಗ..

    chamak movie image

    ಚಮಕ್, ತಿಂಗಳ ಕೊನೆಯಲ್ಲಿ ಡಿ.29ಕ್ಕೆ ತೆರೆಗೆ ಬರುತ್ತಿದೆ. ಚಿತ್ರದ ಟೀಸರ್, ಹಾಡುಗಳು, ತರಲೆ, ತಮಾಷೆಗಳ ಕಥೆಗಳು ಪ್ರೇಕ್ಷಕರಲ್ಲಿ ವಿಚಿತ್ರ ಕುತೂಹಲ ಹುಟ್ಟುಹಾಕಿವೆ. ಜೊತೆಗೆ ಡಿ.29, ರಶ್ಮಿಕಾ ಹಾಗೂ ಗಣೇಶ್‍ಗೆ ಲಕ್ಕಿ ದಿನಗಳು ಬೇರೆ. ಇಂಥ ಸಂಭ್ರಮಗಳ ನಡುವೆ ಚಮಕ್ ಇಟಲಿಯ ಸ್ಥಳೀಯ ಪತ್ರಿಕೆಗಳಲ್ಲಿ ಹೆಡ್‍ಲೈನ್ ಆಗಿದ್ದ ಕಥೆ  ಗೊತ್ತಾ..?

    ಇಟಲಿಯಲ್ಲಿ ಚಮಕ್ ಚಿತ್ರದ ಹಾಡುಗಳ ಶೂಟಿಂಗ್ ಆಗಿದೆ. ಚಿತ್ರತಂಡ ಎಲ್ಲ ಕಡೆ ಸಾರ್ವಜನಿಕ ಸಾರಿಗೆಯನ್ನೇ ಬಳಸಿರುವುದು ವಿಶೇಷ. ಇಟಲಿಯ ಬೆಲಾಜಿಯೋ ಎಂಬ ಹಳ್ಳಿಯಲ್ಲಿ, ಟೊರಿನೋ, ಕೊಮೊ, ಮಿಲನ್ ಎಂಬ ಸರೋವರಗಳ ಸುತ್ತ ಶೂಟಿಂಗ್ ಆಗಿದೆ. ಗಣೇಶ್ ಇಂಟ್ರೊಡಕ್ಷನ್ ಸೀನ್ ಹಾಗೂ ಚಿತ್ರದ ಕ್ಲೈಮಾಕ್ಸ್ ಸೀನ್ ಶೂಟಿಂಗ್ ಆಗಿರುವುದು ಅಲ್ಲೆ. ಅಲ್ಲಿಯ ವಿಶೇಷವೆಂದರೆ, ಸೂರ್ಯ ರಾತ್ರಿ 9 ಗಂಟೆಯವರೆಗೂ ಮುಳುಗುವುದಿಲ್ಲ. ಹಗಲಿನ ವಾತಾವರಣವೇ ಇರುತ್ತದಂತೆ. 

    ಹೀಗೆ ಅಲ್ಲಿ ಶೂಟಿಂಗ್ ಮುಗಿಸಿಕೊಂಡು ಬಂದ ಮೇಲೆ ಚಿತ್ರತಂಡಕ್ಕೊಂದು ಅಚ್ಚರಿ ಕಾದಿತ್ತು. ಇಟಲಿಯ ಸ್ಥಳೀಯ ಪತ್ರಿಕೆಯೊಂದರಲ್ಲಿ ಗಣೇಶ್ ಅವರ ಬಗ್ಗೆ ಲೇಖನ ಬಂದಿತ್ತು. ಕನ್ನಡ ಮೂವೀ ಸ್ಟಾರ್ ಎಂದು ಬಣ್ಣಿಸಲಾಗಿತ್ತು. ಅದನ್ನು ಚಿತ್ರತಂಡ ಕನ್ನಡದ ಮಾಧ್ಯಮಗಳಿಗೂ ತಿಳಿಸಿ ಖುಷಿ ಪಟ್ಟಿತ್ತು. ಆದರೆ, ಕೆಲವು ದಿನಗಳ ನಂತರ ಗೊತ್ತಾಗಿದ್ದೇನೆಂದರೆ, ಆ ಲೇಖನದಲ್ಲಿ ಗಣೇಶ್ ಅವರನ್ನು ಹೊಗಳುವ ಸುದ್ದಿಯೇನೂ ಇರಲಿಲ್ಲ. ಬದಲಿಗೆ ಚಿತ್ರತಂಡ ಅನುಮತಿಯನ್ನೇ ಪಡೆಯದೆ ಶೂಟಿಂಗ್ ಮಾಡಿದೆ ಎಂದು ವರದಿಯಾಗಿತ್ತು. 

    ಅನುಮತಿಯನ್ನು ಪಡೆದೇ ಚಿತ್ರೀಕರಣ ಮಾಡಿದ್ದ ಚಮಕ್ ಟೀಂಗೆ ಅದು ಶಾಕಿಂಗ್ ನ್ಯೂಸ್. ಹಾಗೆಂದು ಟೆನ್ಷನ್ ಮಾಡಿಕೊಳ್ಳಲು ಹೋಗಲಿಲ್ಲವಂತೆ. ಏಕೆಂದರೆ ಅಷ್ಟು ಹೊತ್ತಿಗೆ ಶೂಟಿಂಗೇ ಮುಗಿದಿತ್ತಂತೆ. ಅಲ್ಲಿಯೇ ಚಿತ್ರೀಕರಿಸಿರುವ ಖುಷಿಖುಷಿ ಹಾಡು ಹಿಟ್  ಆಗಿರುವ ವೇಳೆ ನಿರ್ದೇಶಕ ಸುನಿ ಇವೆಲ್ಲ ಘಟನೆಗಳನ್ನು ನೆನಪಿಸಿಕೊಂಡಿದ್ದಾರೆ.

  • ಚಮಕ್ ಕಚಗುಳಿಗೆ ಕಿಲಕಿಲ ನಗ್ತೀರ

    chamak image

    ಗಣೇಶ್‍ರ ಹೊಸ ಮ್ಯಾನರಿಸಂ, ರಶ್ಮಿಕಾ ಅವರ ಮುಗ್ದತೆ, ಎದೆಯೊಳಕ್ಕೇ ಕಚಗುಳಿ ಇಡುವ ಸಂಭಾಷಣೆ, ಕಲ್ಪನೆಗೆ ಸಾವಿರ ರೂಪ ಕಟ್ಟಿಕೊಡುವ ತುಂಟಾಟದ ಸನ್ನಿವೇಶ.. ಇವೆಲ್ಲವನ್ನೂ ಸೃಷ್ಟಿಸಿರುವ ಕಚಗುಳಿಗೆ ನಾಳೆ ಬಿಡುಗಡೆ ಭಾಗ್ಯ.

    ಕಿರಿಕ್ ಪಾರ್ಟಿ ರಶ್ಮಿಕಾ ಮಂದಣ್ಣ ಅವರಿಗೆ ಇದು 3ನೇ ಸಿನಿಮಾ. ಕಳೆದ ವಾರವಷ್ಟೇ ಅವರ 2ನೇ ಸಿನಿಮಾ ಅಂಜನೀಪುತ್ರ ರಿಲೀಸ್ ಆಗಿದೆ. ಅದು ಥಿಯೇಟರ್‍ನಲ್ಲಿ ಅಬ್ಬರಿಸುತ್ತಿರುವಾಗಲೇ, ಚಮಕ್ ನಗೆಯ ಅಲೆಯೆಬ್ಬಿಸಲು ಬರುತ್ತಿದೆ.

    ಗಣೇಶ್‍ಗೆ ಇದು ಮತ್ತೆ ಮತ್ತೆ ಮುಂಗಾರು ಮಳೆ ನೆನಪಿಸುತ್ತಿದ್ದರೆ, ಅದಕ್ಕೆ ಕಾರಣ, ಚಿತ್ರ ರಿಲೀಸ್ ಆಗುತ್ತಿರುವ ಡೇಟು. ಇದರ ಹಿಂದೆ ಯಾವುದೇ ಮೂಢನಂಬಿಕೆ ಇಲ್ಲ ಎನ್ನುವ ಗಣೇಶ್, ಡಿಸೆಂಬರ್‍ನಲ್ಲಿ ರಿಲೀಸ್ ಆದ ತಮ್ಮ ಚಿತ್ರಗಳೆಲ್ಲವೂ ಹಿಟ್ ಆಗಿವೆ ಎಂದು ಮುಗುಳ್ನಗುತ್ತಾರೆ.

    ಕಾಮಿಡಿ ಕಾಮಿಡಿಯಾಗಿಯೇ ಸೆಂಟಿಮೆಂಟ್ ಹರಿಸುವ ಸುನಿ, ಚಿತ್ರದಲ್ಲಿ ಹಲವು ವಿಶೇಷಗಳನ್ನೂ ಕೊಟ್ಟಿದ್ದಾರಂತೆ. ಸಂದೇಶವೂ ಇದೆಯಂತೆ. ಮನರಂಜನೆಗೆ ಮೋಸವಿಲ್ಲ ಎನ್ನುವ ಸುನಿ ಮಾತನ್ನು ನಂಬಬಹುದು.

  • ಚಮಕ್ ಸೆನ್ಸೇಷನ್ - ಲೈಟ್ ಯಾವಾಗ ಆಫ್ ಮಾಡ್ತೀರಾ..?

    chamak image

    ಚಮಕ್, ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಸಿಂಪಲ್ ಖ್ಯಾತಿಯ ಸುನಿ ಮತ್ತು ಕಿರಿಕ್ ಪಾರ್ಟಿಯ ರಶ್ಮಿಕಾ ಸಂಗಮದ ಸಿನಿಮಾ. ಚಿತ್ರದ ಕುರಿತಂತೆ ಅಭಿಮಾನಿಗಳಿಗೆ ಯಾವ ಪರಿ ಕುತೂಹಲ ಇದೆಯೆಂದರೆ, ಚಿತ್ರದ ಕಥೆ ಏನು ಅನ್ನೋದನ್ನು ಕಲ್ಪನೆ ಮಾಡಿಕೊಳ್ಳೋಕೂ ಆಗ್ತಾ ಇಲ್ಲ. ಅದಕ್ಕೆ ಕಾರಣವಾಗಿರೋದು ಚಮಕ್ ಚಿತ್ರದ ಫಸ್ಟ್ ನೈಟ್ ಟೀಸರ್.

    ಸುನಿ ರಿಲೀಸ್ ಮಾಡಿದ ಫಸ್ಟ್ ನೈಟ್ ಟೀಸರ್‍ನಲ್ಲಿನ ತುಂಟತನವಿದೆಯಲ್ಲ.. ಅದು ಪ್ರೇಕ್ಷಕರಿಗೆ ಸಿಕ್ಕಾಪಟ್ಟೆ ಇಷ್ಟವಾಗಿಬಿಟ್ಟಿದೆ. ಏನೋ ಆಗುತ್ತೆ ಅಂತಾ ಕಾಯ್ತಿರ್ತಾರೆ. ಏನೂ ಆಗಲ್ಲ. ಸುನಿ ಸ್ಟೈಲ್‍ನಲ್ಲೊಂದು ಸಿಂಗಲ್ ಮೀನಿಂಗ್ ಡೈಲಾಗ್ ಆದರೂ ಇರುತ್ತಾ ಅಂದ್ರೆ, ಅದೂ ಬರಲ್ಲ. ಆದರೂ.. ಆ ಟೀಸರ್ ಒಂದು ರೋಮಾಂಚನ ಸೃಷ್ಟಿಸಿಬಿಟ್ಟಿದೆ. ಕಲ್ಪನೆಯ ಬಲೂನುಗಳನ್ನು ಪ್ರೇಕ್ಷಕರ ಎದೆಗೂಡಲ್ಲಿ ನೆಟ್ಟುಬಿಟ್ಟಿದೆ.

    ಹೀಗಾಗಿಯೇ ರಿಲೀಸ್ ಡೇಟ್ ಅನೌನ್ಸ್ ಆಗುವ ಮುನ್ನವೇ, ಎಲ್ಲರೂ ಕೇಳ್ತಿರೋ ಪ್ರಶ್ನೆ ಅದೊಂದೇ. ಲೈಟ್ ಯಾವಾಗ ಆಫ್ ಮಾಡ್ತೀರಾ ಅಂತಾ. ಅಫ್‍ಕೋರ್ಸ್, ಸಿನಿಮಾ ರಿಲೀಸ್ ಆದ ಮೇಲೆ ಥಿಯೇಟರ್‍ನಲ್ಲಿ ಲೈಟ್ ಆಫ್ ಆಗೇ ಆಗುತ್ತೆ ಅಂತಾ ಹೇಳೋ ಸುನಿ, ಪ್ರೆಕ್ಷಕರ ತಲೆಗೆ ಹುಳ ಬಿಡ್ತಾರೆಯೇ ಹೊರತು, ಕಥೆ ಮಾತ್ರ ಹೇಳಲ್ಲ. ಎಷ್ಟು ದಿನ ಹೇಳಲ್ಲ..? ಸಿನಿಮಾ ರಿಲೀಸ್ ಆಗುತ್ತಲ್ವಾ..? ನೋಡ್ತೀವಿ ಬಿಡಿ ಅಂಥಾ ಪ್ರೇಕ್ಷಕರೇ ಸುನಿಗೆ ಚಾಲೆಂಜ್ ಹಾಕಿ ಕಾದು ಕೂರುವಂತಾಗಿದೆ.

  • ಚಮಕ್‍ಗೆ ರಶ್ಮಿಕಾ ಲಕ್

    chamak image

    ಚಮಕ್, ಇದೇ ತಿಂಗಳು ಅಂದರೆ ಡಿಸೆಂಬರ್ 29ರಂದು ಬಿಡುಗಡೆಯಾಗ್ತಿದೆ. ಈ ಡಿಸೆಂಬರ್ ರಶ್ಮಿಕಾಗೆ ಲಕ್ಕಿ. ಕಳೆದ ವರ್ಷ ಡಿಸೆಂಬರ್ 30ಕ್ಕೆ ಕಿರಿಕ್ ಪಾರ್ಟಿ ರಿಲೀಸ್ ಆಗಿತ್ತು. ಈಗ, ಒಂದು ದಿನ ಮುಂಚಿತವಾಗಿ ಚಮಕ್ ರಿಲೀಸ್ ಆಗ್ತಿದೆ.

    ಅಷ್ಟೇ ಅಲ್ಲ, ಗಣೇಶ್‍ಗೂ ಡಿಸೆಂಬರ್ ಲಕ್ಕಿ ತಿಂಗಳು. ಮುಂಗಾರು ಮಳೆ ರಿಲೀಸ್ ಆಗಿದ್ದುದೇ ಡಿಸೆಂಬರ್‍ನಲ್ಲಿ. ಹೀಗಾಗಿ ಎರಡು ಲಕ್ಕುಗಳ ಜೊತೆ ತುಂಟ ನಿರ್ದೇಶಕ ಎಂದೇ ಫೇಮಸ್ ಆಗಿರೋ ಸುನಿ ನಿರ್ದೇಶನದ ಚಮಕ್ ರಿಲೀಸ್ ಆಗ್ತಿದೆ.

  • ಚೆಂದ ಚೆಂದ ಚೆಂದ ಚೆಂದ ನನ್ ಹೆಂಡ್ತಿ.. ಏನ್ ಹವಾರೀ..

    Anjaniputra chanda chanda song trending

    ಅಂಜನಿಪುತ್ರ ಚಿತ್ರ ಒಂದು ಕಡೆ ಥಿಯೇಟರುಗಳಲ್ಲಿ ಭರ್ಜರಿ ಪ್ರರ್ದಶನ ಕಾಣುತ್ತಿರುವಾಗಲೇ, ಅದಕ್ಕಿಂತ ದೊಡ್ಡ ಹವಾ ಎಬ್ಬಿಸಿರುವುದು ಚೆಂದ ಚೆಂದ ಚೆಂದ ಚೆಂದ ನನ್ ಹೆಂಡ್ತಿ.. ಹಾಡು ಸಿಕ್ಕಾಪಟ್ಟೆ ಕ್ರೇಜ್ ಸೃಷ್ಟಿಸಿಬಿಟ್ಟಿದೆ. ಎಷ್ಟರಮಟ್ಟಿಗೆ ಎಂದರೆ, ಹಾಡಿಗೆ ಅವರವರೇ ಕಾನ್ಸೆಪ್ಟ್ ಮಾಡಿಕೊಂಡು, ಅವರವರೇ ಸ್ಟೆಪ್ಸ್ ಹಾಕಿ ಆನ್‍ಲೈನ್‍ಗೆ ಅಪ್‍ಲೋಡ್ ಮಾಡುತ್ತಿದ್ದಾರೆ.

    ಮೊನ್ನೆ ಮೊನ್ನೆಯಷ್ಟೇ ಉಜಿರೆಯ ಎಸ್‍ಡಿಎಂ ಕಾಲೇಜ್‍ನ ಶಿಕ್ಷಕಿಯರು ಹಾಗೂ ವಿದ್ಯಾರ್ಥಿಗಳ ಸ್ಟೆಪ್ಸ್ ವೈರಲ್ ಆಗಿತ್ತು. ಈಗ ಸಾಫ್ಟ್‍ವೇರ್ ಉದ್ಯೋಗಿಗಳ ಸರದಿ. ಮೈಸೂರಿನ ಇನ್ಫೋಸಿಸ್ ಉದ್ಯೋಗಿಗಳೆಲ್ಲ ಸೇರಿಕೊಂಡು ಚೆಂದ ಚೆಂದ ಚೆಂದ ಚೆಂದ ನನ್ ಹೆಂಡ್ತಿ.. ಹಾಡನ್ನು ಮರುಸೃಷ್ಟಿ ಮಾಡಿದ್ದಾರೆ.

    ಶಿವರಾಜ್ ಕುಮಾರ್ ಹಾಗೂ ಪುನೀತ್ ಅಭಿಮಾನಿಗಳಂತೂ ವಿಭಿನ್ನವಾಗಿ ಹಾಡುಗಳನ್ನು ತಾವೇ ಸೃಷ್ಟಿಸಿ ಆನ್‍ಲೈನ್‍ಗೆ ಅಪ್‍ಲೋಡ್ ಮಾಡುತ್ತಿದ್ದಾರೆ. ಹೆಂಡ್ತಿಯನ್ನು ಪ್ರೀತಿಸುವವರು ಯಾರು ತಾನೇ ಹಾಡನ್ನು ನಿರಾಕರಿಸ್ತಾರೆ ಹೇಳಿ.

  • ಚೆಂದ ಚೆಂದ ಚೆಂದ ಚೆಂದ ನನ್ನ ಹೆಂಡ್ತಿ ಕಾರು

    rashmika mandanna, rakshith shetty

    ಡಿ.29 ಬಂತೆಂದರೆ, ಎಲ್ಲರಿಗಿಂತ ಹೆಚ್ಚು ಖುಷಿಯಾಗಿರುವವರಲ್ಲಿ ರಶ್ಮಿಕಾ ಇರುತ್ತಾರೆ. ಅದು ಕಳೆದ ವರ್ಷ ಅವರ ಮೊದಲ ಸಿನಿಮಾ ಕಿರಿಕ್ ಪಾರ್ಟಿ ರಿಲೀಸ್ ಆದ ದಿನ. ಈ ವರ್ಷ ಅವರ 3ನೇ ಸಿನಿಮಾ ಚಮಕ್ ರಿಲೀಸ್ ಆದ ದಿನ. ವಾರದ ಹಿಂದಷ್ಟೇ ಅವರ ಅಭಿಯನದ 2ನೇ ಸಿನಿಮಾ ಅಂಜನಿಪುತ್ರ ಬಿಡುಗಡೆಯಾಗಿತ್ತು. ಹೀಗೆ ಡಿಸೆಂಬರ್ ತಿಂಗಳಲ್ಲಿ ಭಾರಿ ಖುಷಿಯಲ್ಲಿರುವ ರಶ್ಮಿಕಾ ಅವರ ಸಂಭ್ರಮಕ್ಕೆ ಹೊಸ ಸೇರ್ಪಡೆ ಆಡಿ ಕಾರು.

    ರಶ್ಮಿಕಾ ಫಳಫಳ ಹೊಳೆಯುವ ಕೆಂಬಣ್ಣದ ಆಡಿ ಕಾರು ಖರೀದಿಸಿದ್ದಾರೆ. ಭಾವೀ ಪತ್ನಿಯ ಹೊಸ ಕಾರು ಖರೀದಿಗೆ ಸಾಕ್ಷಿಯಾಗಿದ್ದವರು ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ. ಜೀವದ ಗೆಳೆಯನ ಜೊತೆ ಮೊದಲ ಡ್ರೈವ್ ಮಾಡಿ ಬಂದ ರಶ್ಮಿಕಾ ಮುಖದ ರಂಗು, ಥೇಟು ಅವರ ಕಾರಿನ ಬಣ್ಣಕ್ಕೇ ತಿರುಗಿದೆ.

  • ತೀರ್ಥಾನೂ.. ವೋಡ್ಕಾನೂ ಮಿಕ್ಸ್ ಆದ್ರೆ ಚಮಕ್

    chamak movie image

    ಚಮಕ್ ಟೀಸರ್ ನೋಡಿದವರಿಗೆಲ್ಲ ಕಾಡ್ತಾ ಇರೋ ಒಂದೇ ಪ್ರಶ್ನೆ ಏನೆಂದರೆ, ಇದು ಗಣೇಶ್ ಸ್ಟೈಲ್ ಸಿನಿಮಾನಾ..? ಸುನಿ ಸ್ಟೈಲ್ ಸಿನಿಮಾನಾ ಅನ್ನೋದು. ಗಣೇಶ್ ಚಿತ್ರಗಳಲ್ಲಿ ತುಂಟತನವಿರುತ್ತದೆಯಾದರೂ ಅದೊಂದು ಗೆರೆ ದಾಟದಂತೆ ನೋಡಿಕೊಳ್ತಾರೆ. ಸುನಿ, ಒಂದು ಗೆರೆ ದಾಟಿದರೂ, ಮುಜುಗರವಾಗದಂತೆ ನೋಡಿಕೊಳ್ತಾರೆ. ಹೀಗಿರುವಾಗ ಚಮಕ್ ಹೇಗಿರಬಹುದು ಅನ್ನೋ ಕುತೂಹಲಕ್ಕೆ ಸ್ವತಃ ಗಣೇಶ್ ಉತ್ತರ ಕೊಟ್ಟಿದ್ದಾರೆ.

    ಗಣೇಶ್ ಚಿತ್ರದಲ್ಲಿ ಬಿಯರ್ ಮಾದರಿಯ ವೋಡ್ಕಾ ಇದ್ದ ಹಾಗೆ. ರಶ್ಮಿಕಾ ನೀರಿನ ಹಾಗೆ ಕಾಣೋ ತೀರ್ಥ ಇದ್ದ ಹಾಗೆ. ಅಂದ್ರೆ ಇಷ್ಟೆ, ಗಣೇಶ್ ಮೇಲ್ನೋಟಕ್ಕೆ ಸಭ್ಯಸ್ಥನ ಪೋಸು ಕೊಟ್ಟಿರುವ ತುಂಟ ಹುಡುಗ. ರಶ್ಮಿಕಾ ಮೇಲ್ನೋಟಕ್ಕೆ ಸರಳ ಯುವತಿಯಂತೆ ಕಾಣುವ ಮುಗ್ದ, ಸಂಪ್ರದಾಯಸ್ಥ ಹುಡುಗಿ. 

    ನೀರು, ವೋಡ್ಕಾ ಮಿಕ್ಸ್ ಆಗುತ್ತೆ. ತೀರ್ಥ, ವೋಡ್ಕಾ ಮಿಕ್ಸ್ ಆಗುತ್ತಾ..? ಮಿಕ್ಸ್ ಆದರೆ ಹೇಗಿರುತ್ತೆ..? ಅದನ್ನು ಚಮಕ್‍ನಲ್ಲೇ ನೋಡಬೇಕು. ಮತ್ಯಾಕ್ ತಡ.. 

  • ತೆಲುಗಿಗೂ ಚಮಕ್ ಚಮಕ್ ಚಲೋ..

    chamak in telugu

    ಚಮಕ್. ಗಣೇಶ್, ರಶ್ಮಿಕಾ ಅಭಿನಯದ ಸಿನಿಮಾ ಈಗ ಸೂಪರ್ ಹಿಟ್. ನಿರ್ದೇಶಕ ಸುನಿ ಪ್ರೇಕ್ಷಕರ ಹೃದಯಗಳಲ್ಲಿ ಕಚಗುಳಿ ಇಡುವುದರಲ್ಲಿ ಗೆದ್ದುಬಿಟ್ಟಿದ್ದಾರೆ. ಚಿತ್ರ ಈಗ ಹೊರರಾಜ್ಯ, ವಿದೇಶಗಳಲ್ಲೂ ತೆರೆ ಕಾಣುತ್ತಿದೆ. ಹೀಗಿರುವಾಗಲೇ ಚಮಕ್ ಚಿತ್ರವನ್ನು ತೆಲುಗಿನಲ್ಲೂ ನಿರ್ಮಿಸಲು ನಿರ್ಮಾಪಕ ಟಿ.ಆರ್.ಚಂದ್ರಶೇಖರ್ ಮುಂದಾಗಿದ್ದಾರೆ.

    ಸಿನಿಮಾವನ್ನು ತೆಲುಗಿಗೆ ರೀಮೇಕ್ ಮಾಡಲು ಹಲವರು ರೈಟ್ಸ್ ಕೇಳಿಕೊಂಡು ಬಂದಿದ್ದರಂತೆ. ಆದರೆ, ಯಾರಿಗೂ ಸಿನಿಮಾ ಹಕ್ಕುಗಳನ್ನು ಕೊಡದ ಚಂದ್ರಶೇಖರ್, ತೆಲುಗಿನಲ್ಲಿಯೂ ತಾವೇ ಚಿತ್ರ ನಿರ್ಮಿಸಲು ನಿರ್ಧರಿಸಿದ್ದಾರೆ. ತೆಲುಗಿಗೆ ಪರಿಚಯವಾಗುತ್ತಿರುವ ರಶ್ಮಿಕಾ ಅವರನ್ನೇ ತೆಲುಗು ಚಮಕ್‍ನಲ್ಲೂ ಮುಂದುವರಿಸಲು ತೀರ್ಮಾನಿಸಿರುವ ಚಂದ್ರಶೇಖರ್, ಹೀರೋ ಪಾತ್ರಕ್ಕೆ ನಾನಿ ಅವರನ್ನು ಆಯ್ಕೆ ಮಾಡಿಕೊಳ್ಳುವ ಯೋಜನೆಯಲ್ಲಿದ್ದಾರೆ.

    ಸದ್ಯಕ್ಕೆ ಯಾವುದೂ ಫೈನಲ್ ಆಗಿಲ್ಲ. ತಂತ್ರಜ್ಞರನ್ನೂ ಸೇರಿದಂತೆ ಕೆಲವರನ್ನು ಸಂಪರ್ಕಿಸಲಾಗಿದೆ. ಸದ್ಯಕ್ಕೆ ಚಮಕ್ ಭರ್ಜರಿ ಪ್ರದರ್ಶನ ನೀಡುತ್ತಿದ್ದು, ಮಲ್ಟಿಪ್ಲೆಕ್ಸ್‍ಗಳಲ್ಲಿ ಚಿತ್ರದ ಶೋಗಳನ್ನು ಹೆಚ್ಚಿಸಲಾಗಿದೆ. ಅಮೆರಿಕದಲ್ಲಿ 30 ಹಾಗೂ ಕೆನಡಾದಲ್ಲಿ 2 ಕೇಂದ್ರಗಳಲ್ಲಿ ಕೂಡಾ ಚಮಕ್ ರಿಲೀಸ್ ಆಗಿದ್ದು, ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದೆ. 

  • ತೆಲುಗು ಶೋನಲ್ಲಿ ಕನ್ನಡಾಭಿಮಾನ ಮೆರೆದ ರಶ್ಮಿಕಾ

    rashmika expresses her love for kannada

    ರಶ್ಮಿಕಾ ಮಂದಣ್ಣ, ಕೊಡಗಿನ ಹುಡುಗಿ. ಸ್ಯಾಂಡಲ್‍ವುಡ್‍ನಲ್ಲಿ ಆಕೆ ನಟಿಸಿರುವ ಮೂರೂ ಚಿತ್ರಗಳು ಹಿಟ್. ತೆಲುಗಿನಲ್ಲಿಯೂ ಅಷ್ಟೆ. ನಟಿಸಿದ ಚಿತ್ರಗಳೆಲ್ಲ ಹಿಟ್. ಇತ್ತೀಚೆಗೆ ಬಿಡುಗಡೆಯಾದ ಗೀತಗೋವಿಂದಂ ಸಿನಿಮಾ, 100 ಕೋಟಿ ಕ್ಲಬ್ ಸೇರಿದೆ. ತೆಲುಗು ಚೆನ್ನಾಗಿಯೇ ಮಾತನಾಡುವ ರಶ್ಮಿಕಾ, ಇತ್ತೀಚೆಗೆ ಚಾನೆಲ್‍ವೊಂದರ ಕಾರ್ಯಕ್ರಮಕ್ಕೆ ಜಡ್ಜ್ ಆಗಿ ಹೋಗಿದ್ದರು. ಆ ವೇಳೆ, ಶಿವಮೊಗ್ಗದ ಹುಡುಗಿಯೊಬ್ಬಳ ನೃತ್ಯ ಅದ್ಬುತವಾಗಿತ್ತು. 

    ಆ ಪುಟಾಣಿಯ ನೃತ್ಯಕ್ಕೆ ಎಲ್ಲರೂ ಬೆರಗಾದಾಗ, ನಿರೂಪಕರು, ಆ ಹುಡುಗಿಯ ಊರು ಯಾವುದು ಕೇಳಿ ಎಂದು ರಶ್ಮಿಕಾಗೇ ಹೇಳಿದರು. ಆಗ, ಆ ಬಾಲಕಿ ಮಹಾಲಕ್ಷ್ಮಿ, ಸೊರಬ ತಾಲೂಕಿನ ಹುಡುಗಿ ಎಂದು ಗೊತ್ತಾಯ್ತು. ಆಗ, ತಾನು ಕೊಡಗಿನವಳು ಎಂದು ಹೆಮ್ಮೆಯಿಂದ ಹೇಳಿಕೊಂಡರು ರಶ್ಮಿಕಾ.

  • ದರ್ಶನ್ 51ನೇ ಸಿನಿಮಾ ಆರಂಭ

    darshan's 51st film

    ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಯನದ 51ನೇ ಸಿನಿಮಾ ಯಾವಾಗ ಶುರು ಅನ್ನೋದಕ್ಕೆ ಉತ್ತರ ಕೊನೆಗೂ ಸಿಕ್ಕುಬಿಟ್ಟಿದೆ. ಬೆಂಗಳೂರಿನ ಚಂದ್ರಾಲೇಔಟ್‍ನಲ್ಲಿರುವ ಗಣಪತಿ ದೇವಸ್ಥಾನದಲ್ಲಿ ಸಿನಿಮಾ ಮುಹೂರ್ತ ಸರಳವಾಗಿ ನೆರವೇರಿದೆ. ಚಿತ್ರದ ಶೂಟಿಂಗ್ ಮುಂದಿನ ತಿಂಗಳು ಶುರುವಾಗಲಿದ್ದು, ಚಿತ್ರೀಕರಣ ಒಂದೇ ಹಂತದಲ್ಲಿ ಮುಗಿಯಲಿದೆ.

    ಪಿ.ಕುಮಾರ್ ನಿರ್ದೇಶನದ ಸಿನಿಮಾಗೆ ರಶ್ಮಿಕಾ ಮಂದಣ್ಣ ನಾಯಕಿ. ಶೈಲಜಾ ನಾಗ್ ಹಾಗೂ ಬಿ.ಸುರೇಶ್ ನಿರ್ಮಾಣದ ಚಿತ್ರಕ್ಕೆ ಹರಿಕೃಷ್ಣ ಸಂಗೀತ ಸಂಯೋಜನೆ ಇರುತ್ತದೆ. ಇದೊಂದು ಪಕ್ಕಾ ಕಮರ್ಷಿಯಲ್ ಚಿತ್ರ ಎಂದು ಹೇಳಿಕೊಂಡಿದೆ ಚಿತ್ರತಂಡ.

    Related Articles :-

    Darshan's 51st Film Launched

  • ದರ್ಶನ್ ಇದ್ರೆ ನಗುವಿಗೆ ಬರವಿಲ್ಲ - ರಶ್ಮಿಕಾ

    rashmika praises darshan

    ಚಾಲೆಂಜಿಂಗ್ ಸ್ಟಾರ್ ದರ್ಶನ್, ಸೆಟ್‍ನಲ್ಲಿದ್ರೆ, ನಗು ತುಂಬಿಕೊಂಡಿರುತ್ತೆ. ಮುಖ ಊದಿಸಿಕೊಂಡು ಸೀರಿಯಸ್ ಆಗಿರಲ್ಲ. ಸದಾ ಎಲ್ಲರನ್ನೂ ಮಾತನಾಡಿಸುತ್ತಾ, ನಗುತ್ತಾ.. ನಗಿಸುತ್ತಾ ಇರುತ್ತಾರೆ. ಇದು ರಶ್ಮಿಕಾ ಮಂದಣ್ಣ ಅವರು ಹೇಳಿರೋ ಮಾತು. 

    ದರ್ಶನ್ ಅಭಿನಯದ ಯಜಮಾನ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಹೀರೋಯಿನ್. ಮೊದಲು ಕಥೆ ಇಷ್ಟವಾಯ್ತು. ನಂತರ, ದರ್ಶನ್, ನಿರ್ಮಾಪಕರಾದ ಶೈಲಜಾನಾಗ್, ನಿರ್ದೇಶಕ ಪಿ.ಕುಮಾರ್.. ಹೀಗೆ ಒಳ್ಳೆಯ ತಂಡ ಇರುವ ಚಿತ್ರ. ಹಾಗಾಗಿ ಚಿತ್ರವನ್ನು ಒಪ್ಪಿಕೊಂಡೆ ಎಂದು ಹೇಳಿಕೊಂಡಿದ್ದಾರೆ ರಶ್ಮಿಕಾ.

    ಸದ್ಯಕ್ಕೆ ಯಜಮಾನ ಬಿಟ್ಟರೆ, ಬೇರ್ಯಾವುದೇ ಕನ್ನಡ ಚಿತ್ರದಲ್ಲಿ ರಶ್ಮಿಕಾ ನಟಿಸುತ್ತಿಲ್ಲ. ಬೇರೆ ಯಾವ ಚಿತ್ರವನ್ನು ಒಪ್ಪಿಕೊಂಡೂ ಇಲ್ಲ. ಕೆಲವು ಚಿತ್ರಗಳ ಮಾತುಕತೆ ನಡೆದಿದೆಯಾದರೂ ಫೈನಲ್ ಆಗಿಲ್ಲ ಎಂದು ತಿಳಿಸಿದ್ದಾರೆ ರಶ್ಮಿಕಾ ಮಂದಣ್ಣ.

  • ದರ್ಶನ್ ಜೊತೆ ನಟಿಸಿದ ಮೇಲೆ ರಶ್ಮಿಕಾಗೆ ಗೊತ್ತಾಗಿದ್ದು ಏನೆಂದರೆ..

    rashmika learns one important thing from darshan

    ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ ಯಜಮಾನ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಾಯಕಿ. ಕಿರಿಕ್ ಪಾರ್ಟಿ ಚೆಲುವೆ ಚಮಕ್ ತೋರಿಸಿ ಹೋದ ನಂತರ ಕನ್ನಡದಲ್ಲಿ ಕಾಣಿಸಿಕೊಂಡೇ ಇಲ್ಲ. 2018ರಲ್ಲಿ ರಶ್ಮಿಕಾರ ಒಂದೇ ಒಂದು ಕನ್ನಡ ಸಿನಿಮಾ ಇರಲಿಲ್ಲ. 2019ರ ಆರಂಭದಲ್ಲೇ ಯಜಮಾನ ಜೊತೆ ಕಾಣಿಸಿಕೊಳ್ತಿರೋ ರಶ್ಮಿಕಾ ಮಂದಣ್ಣ, ಚಿತ್ರದ ಅನುಭವ ಹಂಚಿಕೊಂಡಿದ್ದಾರೆ.

    ಚಿತ್ರದ ಹಾಡುಗಳ ಚಿತ್ರೀಕರಣದ ವೇಳೆ ದರ್ಶನ್ ಅವರಿಗೆ ಆ್ಯಕ್ಸಿಡೆಂಟ್ ಆಗಿ ಕೈಗೆ ಪೆಟ್ಟಾಗಿತ್ತು. ಕೆಲವೇ ದಿನ ವಿಶ್ರಾಂತಿ ಬಳಿಕ ಅವರು ಶೂಟಿಂಗಿಗೆ ಬಂದರು. ಯಾವುದೇ ನೆಪ ಹೇಳಲಿಲ್ಲ. ನಮ್ಮ ನೋವು ಏನೇ ಇದ್ದರೂ, ನೆಪ ಹೇಳದೆ ಕೆಲಸ ಮಾಡಬೇಕು ಅನ್ನೋದು ದರ್ಶನ್ ಅವರನ್ನು ನೋಡಿದ ನಂತರ ಗೊತ್ತಾಯಿತು ಎಂದಿದ್ದಾರೆ ರಶ್ಮಿಕಾ.

    ನಮ್ಮ ನೋವನ್ನು ಒಳಗೇ ಇಟ್ಟುಕೊಂಡು ಮುಂದುವರಿಯಬೇಕು. ಇಲ್ಲದೇ ಹೋದರೆ ನಾವು ಕೆಲಸಕ್ಕೆ ಗೌರವ ಕೊಡುತ್ತಿಲ್ಲ ಎಂದರ್ಥ. ದರ್ಶನ್ ಎಷ್ಟು ಶ್ರಮಜೀವಿ ಅನ್ನೋದು ಆಮೇಲೆ ಗೊತ್ತಾಯ್ತು ಎಂದಿದ್ದಾರೆ ರಶ್ಮಿಕಾ.

    ಯಜಮಾನ ಚಿತ್ರದ ಒಂದು ಮುಂಜಾನೆ.. ಹಾಡಿನ ಲಿರಿಕಲ್ ವಿಡಿಯೋ ರಿಲೀಸ್ ಆಗಿದ್ದು ಭರ್ಜರಿ ಸದ್ದು ಮಾಡುತ್ತಿದೆ. 

  • ಧ್ರುವ ಸರ್ಜಾ ಪೊಗರಿಳಿಸೋಕೆ ಡಬಲ್ ಬ್ಯೂಟಿ ಕ್ವೀನ್ಸ್..!

    dhuva's double pogaru

    ಧ್ರುವ ಸರ್ಜಾ ಅಭಿನಯದ ಪೊಗರು ಚಿತ್ರದ ಸ್ಕ್ರಿಪ್ಟ್ ಕೆಲಸ ಮುಗಿದಿದೆ. ಈ ಬಾರಿ ಧ್ರುವ ಸರ್ಜಾ 2 ವರ್ಷ ಕಾಯುವುದಿಲ್ಲ ಎನ್ನುವ ಭರವಸೆ ಇದೆ. ಏಕೆಂದರೆ, ಚಿತ್ರದ ನಿರ್ದೇಶಕ ನಂದಕಿಶೋರ್. ಡಿಸೆಂಬರ್ 14ಕ್ಕೆ ಪೊಗರು ಚಿತ್ರದ ಮುಹೂರ್ತ ಫಿಕ್ಸ್ ಆಗಿದೆ. ಚಿತ್ರೀಕರಣ ಶುರುವಾಗುವುದು ಮುಂದಿನ ತಿಂಗಳು. ಅಂದಹಾಗೆ ಚಿತ್ರಕ್ಕೆ ಕ್ಲಾಪ್ ಮಾಡಲಿರುವುದು ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್.

    ಅದ್ದೂರಿಯಾಗಿ ತೆರೆಗೆ ಬಂದ ಬಹಾದ್ದೂರ್‍ನ `ಪೊಗರು' ಇಳಿಸೋಕೆ ಇಬ್ಬರು ಬ್ಯೂಟಿ ಕ್ವೀನ್‍ಗಳು ಭರ್ಜರಿಯಾಗಿ ಎಂಟ್ರಿ ಕೊಡ್ತಿರೋದು ವಿಶೇಷ. ಒಬ್ಬರು ರಶ್ಮಿಕಾ ಮಂದಣ್ಣ. ಮತ್ತೊಬ್ಬರು ಶಾನ್ವಿ ಶ್ರೀವಾಸ್ತವ್. ಗಂಗಾಧರ್ ನಿರ್ಮಾಣದ ಚಿತ್ರದಲ್ಲಿ ಜಗಪತಿ ಬಾಬು, ಚಿಕ್ಕಣ್ಣ, ಸಾಧು ಕೋಕಿಲ, ಪ್ರಕಾಶ್ ರೈ ಮೊದಲಾದ ದೊಡ್ಡ ಕಲಾವಿದರ ದಂಡೇ ಇದೆ. 

     

     

  • ಧ್ರುವಾ ಪೊಗರಿಗೆ ಕಿರಿಕ್ ರಶ್ಮಿಕಾ ಜೋಡಿ

    rashmika to act with dhruva sarja

    ಕಿರಿಕ್ ಪಾರ್ಟಿಯಿಂದ ಗುರುತಿಸಿಕೊಂಡ ರಶ್ಮಿಕಾ ಮಂದಣ್ಣ, ನಂತರ ಕನ್ನಡದಲ್ಲಿ ನಟಿಸಿದ್ದು ಅಂಜನೀಪುತ್ರ, ಚಮಕ್ ಚಿತ್ರಗಳಲ್ಲಿ. ತೆಲುಗಿನಲ್ಲಿ ಗೀತ ಗೋವಿಂದಂ ಹಿಟ್ ಆದ ನಂತರ ಸ್ಟಾರ್ ಆದ ರಶ್ಮಿಕಾ, ತೆಲುಗಿನಲ್ಲಿಯೇ ಹೆಚ್ಚು ಬ್ಯುಸಿಯಾಗಿಬಿಟ್ಟರು. ಸದ್ಯಕ್ಕೆ ಯಜಮಾನ ಚಿತ್ರದಲ್ಲಿ ದರ್ಶನ್‍ಗೆ ನಾಯಕಿಯಾಗಿ ನಟಿಸುತ್ತಿರುವ ರಶ್ಮಿಕಾ ಮಂದಣ್ಣ, ಮತ್ತೊಂದು ಕನ್ನಡ ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ರಶ್ಮಿಕಾ ಮಂದಣ್ಣ ಮುಂದಿನ ಸಿನಿಮಾ ಪೊಗರು.

    ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಪೊಗರು ಸಿನಿಮಾಗೆ ರಶ್ಮಿಕಾ ಓಕೆ ಎಂದಿದ್ದಾರೆ. ನಂದ ಕಿಶೋರ್ ನಿರ್ದೇಶನದ ಪೊಗರು ಚಿತ್ರಕ್ಕೆ ಚಿತ್ರಕಥೆ ಬರೆದಿರುವುದು ಅರ್ಜುನ್ ಸರ್ಜಾ. ಪೊಗರು ಚಿತ್ರದ 2ನೇ ಹಂತದ ಚಿತ್ರೀಕರಣ ನವೆಂಬರ್ 20ರಿಂದ ಶುರುವಾಗಲಿದೆ.

  • ನನ್ನ ಹೃದಯ ಚೂರಾಗಿ ಹೋಯ್ತು ಅಂದ್ರು ರಶ್ಮಿಕಾ ಮಂದಣ್ಣ

    rashmika shocked over bellandur lake's condition

    ಅಬ್ಬಾ.. ಇದರ ಬಗ್ಗೆ ಕೇಳಿದ್ದೆ. ಆದರೆ, ಇದು ಇಷ್ಟೊಂದು ಹಾಳಾಗಿದೆ ಎಂಬುದು ಗೊತ್ತಿರಲಿಲ್ಲ. ಹೃದಯ ಚೂರು ಚೂರಾಗಿದೆ.. ಇದು ಬೆಳ್ಳಂದೂರು ಕೆರೆಯ ಕುರಿತು ರಶ್ಮಿಕಾ ಮಂದಣ್ಣ ಹೇಳಿರುವ ಮಾತು.

    ಬೆಳ್ಳಂದೂರು ಕೆರೆಯಲ್ಲಿ ಜಲ ಮಾಲಿನ್ಯದ ಅರಿವು ಮೂಡಿಸುವ ಕುರಿತು ಡಾಕ್ಯುಮೆಂಟರಿ ಮಾಡುತ್ತಿದ್ದು, ರಶ್ಮಿಕಾ ಅದರ ಫೋಟೋಶೂಟ್‍ನಲ್ಲಿ ಭಾಗವಹಿಸಿದ್ದಾರೆ. ಕೆರೆಯ ಸಮೀಪದಲ್ಲಿ ಫೋಟೋಶೂಟ್‍ನಲ್ಲಿ ಪಾಲ್ಗೊಂಡಿದ್ದ ರಶ್ಮಿಕಾ, ಬೆಳ್ಳಂದೂರು ಕೆರೆಯ ದುಸ್ಥಿತಿ ನೋಡಿ ಮರುಗಿದ್ದಾರೆ.

    ಬೆಳ್ಳಂದೂರು ಕೆರೆಯಲ್ಲಿ ಕೆಮಿಕಲ್ ನೊರೆಯೇ ತುಂಬಿಕೊಂಡಿದ್ದು, ಕಳೆದ 1 ವರ್ಷದಿಂದ ದೇಶಾದ್ಯಂತ ಸುದ್ದಿಯಾಗಿದೆ. ಇದುವರೆಗೆ ಬೆಳ್ಳಂದೂರು ಕೆರೆ ಶುದ್ಧೀಕರಣ ಕುರಿತು ತೆಗೆದುಕೊಂಡ ನಾಮ್‍ಕಾವಸ್ತೆ ಕ್ರಮಗಳು ಯಾವುದೇ ಪರಿಣಾಮ ಬೀರಿಲ್ಲ.

  • ಪುನೀತ್ ಸ್ಟಾರ್ ಎನಿಸಲೇ ಇಲ್ಲ - ರಶ್ಮಿಕಾ

    rashmika shares anjaniputra experience

    ಅಂಜನೀಪುತ್ರ ರಿಲೀಸ್‍ಗೆ ಸಿದ್ಧವಾಗಿರುವಾಗುತ್ತಿದೆ. ರಾಜಕುಮಾರ ಚಿತ್ರದ ಅದ್ಭುತ ಯಶಸ್ಸಿನ ಬರುತ್ತಿರುವ ಅಂಜನೀಪುತ್ರದಲ್ಲಿ ಕಿರಿಕ್ ಯಶಸ್ಸಿನ ರಶ್ಮಿಕಾ ಮಂದಣ್ಣ ನಾಯಕಿ. ಕಿರಿಕ್ ಪಾರ್ಟಿ ನಂತರ ತೆರೆಗೆ ಬರುತ್ತಿರುವ ರಶ್ಮಿಕಾರ ಮೊದಲ ಚಿತ್ರ ಅಂಜನೀಪುತ್ರ. ಈ ಚಿತ್ರದಲ್ಲಿ ಪುನೀತ್ ಜೊತೆಗಿನ ಹಾಗೂ ಚಿತ್ರತಂಡದ ಜೊತೆಗಿನ ಅನುಭವಗಳನ್ನು ರಶ್ಮಿಕಾ ಹೇಳಿಕೊಂಡಿದ್ದಾರೆ.

    ಪುನೀತ್ ಜೊತೆ ನಟಿಸುವಾಗ, ಸಣ್ಣದೊಂದು ಆತಂಕವಿದ್ದದ್ದು ಹೌದು. ಆದರೆ, ಅವರ ಜೊತೆ ನಟಿಸುವಾಗ, ಅವರೊಬ್ಬ ದೊಡ್ಡ ಸ್ಟಾರ್ ಎಂದು ನನಗೆ ಅನ್ನಿಸಲೇ ಇಲ್ಲ. ಅವರು ಅಷ್ಟು ಸಹಜವಾಗಿ ಸಿಂಪಲ್ ಆಗಿದ್ದರು. ಸ್ಟಾರ್ ನಟರೆಲ್ಲ ಹೀಗೆ ಇರುತ್ತಾರೇನೋ.. ಎತ್ತರಕ್ಕೆ ಬೆಳೆದವರು ಹೇಗೆ ಇರಬೇಕು ಅನ್ನೋದನ್ನು ಪುನೀತ್ ಅವರಿಂದ ಕಲಿಯಬೇಕು ಎಂದು ಹೊಗಳಿದ್ದಾರೆ ರಶ್ಮಿಕಾ.

    ಶೂಟಿಂಗ್ ವೇಳೆ ಚಿತ್ರತಂಡದಲ್ಲಿದ್ದ ದೊಡ್ಡ ದೊಡ್ಡ ಕಲಾವಿದರೆಲ್ಲ ನನ್ನನ್ನು ಹೊಸ ನಟಿ ಎಂಬಂತೆ ನೋಡಲೇ ಇಲ್ಲ. ಅದು ನನಗೆ ಖುಷಿ ಕೊಟ್ಟಿತು ಎಂದಿದ್ದಾರೆ ರಶ್ಮಿಕಾ. ನಿರ್ದೇಶಕ ಹರ್ಷ ಅವರಂತೂ ರಶ್ಮಿಕಾ ಅವರನ್ನು ಮಗುವಿನ ಹಾಗೆ ಟ್ರೀಟ್ ಮಾಡಿದರಂತೆ. ಆದರೆ, ಶೂಟಿಂಗ್ ವೇಳೆ ತಾವು ಅಂದುಕೊಂಡಿದ್ದನ್ನು ಎಷ್ಟೇ ಕಷ್ಟವಾದರೂ ಪಡೆದೇ ತೀರುತ್ತಿದ್ದರು ಎಂದಿದ್ದಾರೆ ರಶ್ಮಿಕಾ.

     

  • ಪುನೀತ್ ಹೇಳಿದ ಮುತ್ತಿನಂತಾ ಮಾತುಗಳು

    appu speak up

    ಪುನೀತ್ ರಾಜ್‍ಕುಮಾರ್ ಹೆಸರಾಗಿರುವುದು ಸರಳತೆಗೆ. ವಿನಯಕ್ಕೆ. ಆ ಗುಣವೇ ಅವರನ್ನು ಪವರ್ ಸ್ಟಾರ್ ಆಗಿಸಿದೆ. ಎಲ್ಲರನ್ನೂ ಪ್ರೀತಿಸುವ ಅವರ ಆ ಗುಣವೇ ಚಿತ್ರರಂಗದಲ್ಲಿ ಅವರ ಗೌರವ ಇಮ್ಮಡಿಗೊಳ್ಳುವಂತೆ ಮಾಡಿದೆ. ಈಗ ಅಂಜನೀಪುತ್ರದ ಬಿಡುಗಡೆಯ ಸಮಯ. ರಾಜಕುಮಾರನ ಸಕ್ಸಸ್ ನಂತರ ಬಿಡುಗಡೆಯಾಗುತ್ತಿರುವ ಚಿತ್ರ, ಭರ್ಜರಿ ನಿರೀಕ್ಷೆ ಹುಟ್ಟಿಸಿದೆ. ಈ ಸಮಯದಲ್ಲಿ ಅವರು ಆಡಿರುವ ಈ ಮಾತುಗಳೇ, ಅವರೇಕೆ ರಾಜಕುಮಾರ ಎಂಬುದನ್ನು ಸಾರಿ ಹೇಳುತ್ತವೆ.

    ಹರ್ಷ ಅವರ ಜೊತೆ ನನ್ನ ಸ್ನೇಹ ಸುಮಾರು 20 ವರ್ಷಗಳದ್ದು. ಅವರು ಕೊರಿಯಾಗ್ರಫರ್ ಆದ ದಿನದಿಂದಲೂ ಒಟ್ಟಿಗೇ ಸಿನಿಮಾ ಮಾಡುವ ಆಸೆಯಿತ್ತು. ಅದು ಈಗ ಈಡೇರಿದೆ. 

    ಮೇಕಿಂಗ್ ವಿಚಾರಕ್ಕೆ ಬಂದರೆ, ಹರ್ಷ ಅವರ ಎಂಜಾಯ್ ಮಾಡುತ್ತಾ ಶೂಟಿಂಗ್ ಮುಗಿಸಿದ್ದೇನೆ. ಅದರ ಕ್ರೆಡಿಟ್ ಸಲ್ಲಬೇಕಿರೋದು ನಿರ್ಮಾಪಕ ಎಂ.ಎನ್.ಕುಮಾರ್ ಹಾಗೂ ನಿರ್ದೇಶಕ ಹರ್ಷ ಅವರಿಗೆ.

    ಇದು ರೀಮೇಕ್ ಆಗಿದ್ದರೂ, ವೊರಿಜಿನಲ್ ಚಿತ್ರಕ್ಕೂ ಈ ಚಿತ್ರಕ್ಕೂ ತುಂಬಾ ವ್ಯತ್ಯಾಸ ಇದೆ. ಹಾಡುಗಳು ಹಾಗೂ ಸಾಹಸ ದೃಶ್ಯಗಳು ನನಗೇ ಅಚ್ಚರಿ ಹುಟ್ಟಿಸುವಂತೆ ಮೂಡಿಬಂದಿವೆ. ಥ್ಯಾಕ್ಸ್ ಟು ರವಿವರ್ಮ.

    ರಶ್ಮಿಕಾ ಅವರಿಗೆ ನನ್ನ ವಯಸ್ಸಿನ ಅರ್ಧದಷ್ಟು ವಯಸ್ಸು. ಆದರೆ, ರಿಯಲಿ ವಂಡರ್‍ಫುಲ್.

    ರಮ್ಯ ಕೃಷ್ಣ ಅವರ ಜೊತೆ ನಟಿಸಿದ್ದೇನೆ ಎನ್ನುವುದೇ ನನಗೆ ಖುಷಿ. ಸಾಧುಕೋಕಿಲ, ರವಿಶಂಕg, ಮುಖೇಶ್ ತಿವಾರಿ, ಅಖಿಲೇಂದ್ರ ಮಿಶ್ರಾ.. ಅವರ ಬಗ್ಗೆ ನಾನು ಹೇಳುವುದೇನೂ ಇಲ್ಲ. ಅವರೆಲ್ಲ ಜೊತೆ ನಾನೂ ನಟಿಸಿದ್ದೆನೆ ಎಂಬ ಸಂಭ್ರಮವಿದೆ.

     

    ಹೀಗೆ ಪುನೀತ್ ನಿರರ್ಗಳವಾಗಿ ಮಾತನಾಡುತ್ತಾ, ಸಹಕಲಾವಿದರನ್ನು ಹೊಗಳುತ್ತಾ ಹೋಗುತ್ತಾರೆ. ಅದು ಕೇವಲ ತೋರಿಕೆಗೆ ಅನ್ನಿಸೋದಿಲ್ಲ. ಏಕೆಂದರೆ, ಅವರು ಇರೋದೇ ಹಾಗೆ. ಅದ್ಸರಿ, ಅಂಜನೀಪುತ್ರ ನೋಡಿದ್ರಾ..?

  • ಪ್ರಿನ್ಸ್ ಮಹೇಶ್‍ಬಾಬು ಜೊತೆ ರಶ್ಮಿಕಾ ಮಂದಣ್ಣ

    rashmika to act with prince mahesh babu

    ಕಿರಿಕ್ ಪಾರ್ಟಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ರಶ್ಮಿಕಾ ಮಂದಣ್ಣ, ತೆಲುಗು ಚಿತ್ರರಂಗದಲ್ಲಿ ಹೊಳೆಯುತ್ತಿದ್ದಾರೆ. ವಿಜಯ್ ದೇವರಕೊಂಡ, ನಾನಿ, ನಾಗಾರ್ಜುನ ಜೊತೆ ನಟಿಸಿದ್ದ ರಶ್ಮಿಕಾ ಮಂದಣ್ಣ ಅವರಿಗೆ ಜ್ಯೂ.ಎನ್‍ಟಿಆರ್, ಅಲ್ಲು ಅರ್ಜುನ್ ಚಿತ್ರಗಳಿಂದಲೂ ಡಿಮ್ಯಾಂಡ್ ಇದೆ.

    ಇದೆಲ್ಲದರ ನಡುವೆ ರಶ್ಮಿಕಾ ಮಂದಣ್ಣ, ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಚಿತ್ರಕ್ಕೆ ಆಯ್ಕೆಯಾಗಿದ್ದಾರೆ. ಅದು ಸುಕುಮಾರ್ ನಿರ್ದೇಶನದ ಸಿನಿಮಾ. ಸದ್ಯಕ್ಕೆ ಕನ್ನಡದಲ್ಲಿ ಯಜಮಾನ ಚಿತ್ರದ ನಂತರ ಬೇರೆ ಯಾವುದೇ ಚಿತ್ರಗಳನ್ನು ರಶ್ಮಿಕಾ ಒಪ್ಪಿಕೊಂಡಿಲ್ಲ. 

  • ಬರ್ತಾವ್ನಪ್ಪೋ ಬರ್ತಾವ್ನೆ.. ಅಂಜನೀಪುತ್ರ ಬತ್ತಾವ್ನೆ..

    anjaniputra audio launch

    ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಗೂ ಹರ್ಷ ಕಾಂಬಿನೇಷನ್‍ನ ಮೊದಲ ಸಿನಿಮಾ ಅಂಜನೀಪುತ್ರ. ಜೊತೆಗೆ ರಶ್ಮಿಕಾ ಮಂದಣ್ಣ ಎಂಬ ಮುಂಜಾನೆಯ ಚೆಲುವೆ. ರಮ್ಯಕೃಷ್ಣ, ರವಿಶಂಕರ್, ಸಾಧುಕೋಕಿಲ, ಶೋಭರಾಜ್, ಚಿಕ್ಕಣ್ಣ, ವಿ.ಮನೋಹರ್ ಮೊದಲಾದ ಪ್ರತಿಭೆಗಳ ಮಿಲನ. ರವಿ ಬಸ್ರೂರ್ ಸಂಗೀತ ಇರೋ ಚಿತ್ರದ ಹವಾ ಜೋರಾಗಿಯೇ ಇದೆ.

    ಚಿತ್ರದ ಬಗ್ಗೆ ಸಿಕ್ಕಾಪಟ್ಟೆ ಸೀಕ್ರೆಟ್ ಕಾಪಾಡಿಕೊಂಡಿರುವ ಚಿತ್ರತಂಡ, ನೇರವಾಗಿ ಆಡಿಯೋ ರಿಲೀಸ್ ಮೂಲಕ ಹೊರಗೆ ಕಾಣಿಸಿಕೊಳ್ತಾ ಇದೆ. ನವೆಂಬರ್ 24ಕ್ಕೆ ಅಂಜನೀಪುತ್ರದ ಆಡಿಯೋ ರಿಲೀಸ್. ಚಿತ್ರದ ಆಡಿಯೋ ಪುನೀತ್ ರಾಜ್‍ಕುಮಾರ್ ಸ್ವಂತ ಆಡಿಯೋ ಕಂಪೆನಿ ಬ್ಯಾನರ್‍ನಿಂದ ಹೊರಬರುತ್ತಿದೆ. ಸಹಜವಾಗಿಯೇ ಚಿತ್ರದ ಮೇಲೆ ನಿರೀಕ್ಷೆಗಳು ಸಿಕ್ಕಾಪಟ್ಟೆ ಇವೆ.

  • ಬ್ರೇಕಪ್ ನ್ಯೂಸ್‍ಗೆ ರಕ್ಷಿತ್ ಶೆಟ್ಟಿ ಬ್ರೇಕ್

    rakshit shetty breaks silence on break up iwith rashmika

    ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ ನಡುವಿನ ಬ್ರೇಕಪ್ ನ್ಯೂಸ್ ಕುರಿತಂತೆ ರಕ್ಷಿತ್ ಶೆಟ್ಟಿ ಮೌನ ಮುರಿದಿದ್ದಾರೆ. ಅಷ್ಟೇ ಅಲ್ಲ, ತಾವು ದೂರವಾಗಿದ್ದ ಸಾಮಾಜಿಕ ಜಾಲತಾಣಕ್ಕೆ ಮತ್ತೆ ಬಂದಿರುವ ರಕ್ಷಿತ್ ಶೆಟ್ಟಿ, ರಶ್ಮಿಕಾ ಬೆಂಬಲಕ್ಕೆ ನಿಂತಿದ್ದಾರೆ. ನನ್ನ ಪ್ರೀತಿಪಾತ್ರರ ಬಗ್ಗೆ ಹರಿದಾಡುತ್ತಿರುವ ಕೆಲವು ಸಂಗತಿಗಳ ಕುರಿತು ಸ್ಪಷ್ಟನೆ ನೀಡಲು ಮತ್ತೆ ಬಂದಿದ್ದೇನೆ ಎಂದಿದ್ದಾರೆ ರಕ್ಷಿತ್ ಶೆಟ್ಟಿ.

    ರಶ್ಮಿಕಾ ಬಗ್ಗೆ ರೂಪುಗೊಳ್ಳುತ್ತಿರುವ ಅಭಿಪ್ರಾಯ ಬೇಸರ ತರಿಸಿದೆ. ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡು ಅಂತಾರೆ. ಆದರೆ ಈ ಸುದ್ದಿಗಳನ್ನು ನನ್ನನ್ನಾಗಲೀ ಅಥವಾ ರಶ್ಮಿಕಾ ಅವರನ್ನಾಗಲೀ ಸಂಪರ್ಕಿಸದೆ ಮಾಡಲಾಗಿದೆ. ರಶ್ಮಿಕಾ ನನಗೆ 2 ವರ್ಷಗಳಿಂದ ಚೆನ್ನಾಗಿ ಗೊತ್ತು. ಎಲ್ಲರಿಗಿಂತ ಚೆನ್ನಾಗಿ ಗೊತ್ತು. ದಯವಿಟ್ಟು ಬಜ್ ಮಾಡುವುದನ್ನು ನಿಲ್ಲಿಸಿ. ರಶ್ಮಿಕಾರನ್ನು ನೆಮ್ಮದಿಯಾಗಿರಲು ಬಿಡಿ ಎಂದು ಮನವಿ ಮಾಡಿದ್ದಾರೆ ರಕ್ಷಿತ್ ಶೆಟ್ಟಿ.

    ದಯವಿಟ್ಟು ಮಾಧ್ಯಮದ ಸುದ್ದಿಗಳನ್ನು ನಂಬಬೇಡಿ ಎಂದಿರುವ ರಕ್ಷಿತ್ ಶೆಟ್ಟಿ, ಅವೆಲ್ಲವೂ ಕಪೋಲಕಲ್ಪಿತ ಎಂದಿದ್ದಾರೆ. ನಾನು ಸಾಮಾಜಿಕ ಜಾಲತಾಣದಿಂದ ದೂರವಾಗೋಕೆ ಕಾರಣ, ನಾನು ಅದಕ್ಕೆ ಅಡಿಕ್ಟ್ ಆಗಿಬಿಟ್ಟಿದ್ದೆ. ಅದರಿಂದ ಹೊರಬರಬೇಕಿತ್ತು.  ಅಷ್ಟೇ ಹೊರತು, ಅದಕ್ಕೂ ರಶ್ಮಿಕಾಗೂ ಸಂಬಂಧ ಕಲ್ಪಿಸಬೇಡಿ ಎಂದು ಕೇಳಿಕೊಂಡಿದ್ದಾರೆ.