ಲವ್ ಯೂ ರಚ್ಚು ಚಿತ್ರೀಕರಣದ ವೇಳೆ ನಡೆದ ಘಟನೆ, ದುರಂತ ಸಾವು.. ಹಳೆಯ ಘಟನೆಗಳನ್ನೆಲ್ಲ ನೆನಪಿಸಿಕೊಳ್ಳುವಂತೆ ಮಾಡಿದೆ. ಚಿತ್ರರಂಗಕ್ಕೆ ಇಂತಹ ದುರಂತಗಳು ಹೊಸದಲ್ಲ. ಪ್ರಾಣ ಕಳೆದುಕೊಂಡಿರುವುದು, ಗಾಯಾಳುಗಳಾಗಿರುವುದೂ ಹೊಸದಲ್ಲ.
ಇತ್ತೀಚೆಗೆ ಕನ್ನಡಿಗರಿಗೆ ನೆನಪಿರುವ ಅತಿ ದೊಡ್ಡ ಪ್ರಕರಣ ಮಾಸ್ತಿಗುಡಿ ದುರಂತದ್ದು. 2016ರ ನವೆಂಬರ್‍ನಲ್ಲಿ ನಡೆದಿದ್ದ ಘಟನೆಯಲ್ಲಿ ಉದಯೋನ್ಮುಖ ಕಲಾವಿದರಾದ ಅನಿಲ್ ಮತ್ತು ಉದಯ್ ಮೃತಪಟ್ಟಿದ್ದರು.
2019ರಲ್ಲಿ ರಣಂ ಚಿತ್ರದ ಚಿತ್ರೀಕರಣದ ವೇಳೆ ಸಿಲಿಂಡರ್ ಸ್ಫೋಟ ಸಂಭವಿಸಿತ್ತು. ಪ್ರಾಣಹಾನಿಯೂ ಆಗಿತ್ತು. ಶೂಟಿಂಗ್ ನೋಡಲು ಬಂದಿದ್ದ ಇಬ್ಬರು ಮೃತಪಟ್ಟಿದ್ದರು.
1997ರಲ್ಲಿ ಸಿಂಹದ ಮರಿ ಚಿತ್ರೀಕರಣದ ವೇಳೆ ಕ್ಯಾಮೆರಾ ಆಪರೇಟರ್ ವಿಜಿ ಪ್ರಾಣ ಕಳೆದುಕೊಂಡಿದ್ದರು.
ಹಲೋ ಸಿಸ್ಟರ್ ಚಿತ್ರೀಕರಣದಲ್ಲಿ ವಿದ್ಯುತ್ ತಂತಿ ತಗುಲಿ ಇಬ್ಬರು ಯುವಕರು ಸುಟ್ಟು ಕರಕಲಾಗಿದ್ದರು.
ಆದರೆ ಚಿತ್ರರಂಗವನ್ನು ಬೆಚ್ಚಿ ಬೀಳಿಸಿದ್ದ ಪ್ರಕರಣ ಲಾಕಪ್ ಡೆತ್ ಚಿತ್ರೀಕರಣದ ವೇಳೆ ನಡೆದ ದುರಂತ. ಶೂಟಿಂಗ್ ವೇಳೆ ಸ್ಟಂಟ್ ಕಲಾವಿದನೊಬ್ಬ ಪ್ರಾಣ ಕಳೆದುಕೊಂಡ ಮೊದಲ ಪ್ರಕರಣ ಅದು.
1999ರಲ್ಲಿ ಟಿಕೆಟ್ ಟಿಕೆಟ್ ಚಿತ್ರದ ಶೂಟಿಂಗ್‍ನಲ್ಲಿ ಪೆಟ್ರೋಲ್ ಬಾಂಬ್ ತಯಾರಿಸುತ್ತಿದ್ದ ಬಾಂಬ್ ರವಿ, ಸ್ಫೋಟದಲ್ಲಿ ಸಾವನ್ನಪ್ಪಿದ್ದರು.
2000ದಲ್ಲಿ ರೌಡಿ ಅಳಿಯ ಶೂಟಿಂಗ್‍ನಲ್ಲಿ ಡಿಫರೆಂಟ್ ಡ್ಯಾನಿ ಅದೃಷ್ಟವಶಾತ್ ಸಾವನ್ನು ಗೆದ್ದಿದ್ದರು.
ಹಾಯ್ ಬೆಂಗಳೂರು ಚಿತ್ರದ ಶೂಟಿಂಗ್‍ನಲ್ಲಿ ಇಬ್ಬರು ಸ್ಟಂಟ್ ಕಲಾವಿದರು ಗಾಯಗೊಂಡಿದ್ದರು.
ಕಿರಣ್ ಬೇಡಿ ಚಿತ್ರೀಕರಣದಲ್ಲಿ ನಟ ಸರಿಗಮ ವಿಜಿ ಅವರಿಗೆ ಪೆಟ್ಟಾಗಿತ್ತು.
ಬ್ಲಾಕ್ & ವೈಟ್ ಚಿತ್ರಗಳ ಕಾಲದಲ್ಲೂ ಅವಘಡಗಳು ಸಂಭವಿಸಿದ್ದವು. ಕಠಾರಿ ವೀರ ಚಿತ್ರದಲ್ಲಿ ರಾಜ್ ಕಣ್ಣಿಗೆ ಕಠಾರಿಯ ಪೆಟ್ಟು ಬಿದ್ದಿತ್ತು. ಮಿಂಚಿನ ಓಟ ಚಿತ್ರೀಕರಣದಲ್ಲಿ ನಟ ಲೋಕನಾಥ್ ಗಾಯಗೊಂಡಿದ್ದರು. ಹಾಗೆ ನೋಡಿದರೆ ಇಂತಹ ಪ್ರಕರಣಗಳು ಕನ್ನಡ ಚಿತ್ರರಂಗದಲ್ಲಿಯೇ ಕಡಿಮೆ. ಬಾಲಿವುಡ್ ಸೇರಿದಂತೆ ಬೇರೆ ಬೇರೆ ಚಿತ್ರರಂಗಗಳಲ್ಲಿ ದುರಂತಗಳಿಗೆ ಲೆಕ್ಕವೂ ಇಲ್ಲ. ಸಾವಿಗೂ ಲೆಕ್ಕ ವಿಲ್ಲ.