ರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತ, ಇಬ್ಬರು ಉದಯೋನ್ಮುಖ ಕಲಾವಿದರನ್ನು ಬಲಿ ಪಡೆದುಬಿಟ್ಟಿದೆ. ಒಬ್ಬರು ಮಹಾನದಿ ಧಾರಾವಾಹಿ ಖ್ಯಾತಿಯ ರಚನಾ. ಇನ್ನೊಬ್ಬರು ಜೀವನ್. ಆತ ಕೂಡಾ ಕಿರತೆರೆ ಕಲಾವಿದ. ಕಾಮಿಡಿಯನ್ ಆಗಬೇಕು ಎಂದು ದೊಡ್ಡ ಆಸೆ ಇಟ್ಟುಕೊಂಡಿದ್ದ ಹುಡುಗ.
ಧಾರಾವಾಹಿ, ಸಿನಿಮಾ, ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ್ದ ಜೀವನ್ನ ಪೂರ್ತಿ ಹೆಸರು ಜೀವನ್ ಸುರೇಶ್. ಎಲ್ಲರೂ ಪ್ರೀತಿಯಿಂದ ಸುಜೀವ್ ಎಂದೇ ಕರೆಯುತ್ತಿದ್ದರು. ವಯಸ್ಸು ಕೇವಲ 25. ಸಾಯುವ ವಯಸ್ಸಲ್ಲ. ದೊಡ್ಡ ಬದುಕಿಗೆ ಮುನ್ನುಗ್ಗುವ ವಯಸ್ಸು. ಆದರೆ, ಸಾವು ಹೇಳಿ ಕೇಳಿ ಬರೋದಿಲ್ಲ.
100 ಸಿನಿಮಾ, 40 ಧಾರಾವಾಹಿಯಲ್ಲಿ ಕೆಲಸ ಮಾಡಿದ್ದ ಜೀವನ್, ಇಂಡಸ್ಟ್ರಿಗೆ ಬಂದು ಆಗಲೇ 8 ವರ್ಷವಾಗಿತ್ತು. ಗುರುತಿಸಿಕೊಳ್ಳುವಂತಹ ದೊಡ್ಡ ಪಾತ್ರಗಳು ಸಿಕ್ಕಿರಲಿಲ್ಲ. ಕಲರ್ಸ್ ಕನ್ನಡ ವಾಹಿನಿಯ ಮಜಾಭಾರತದಲ್ಲಿ ಎಸ್. ನಾರಾಯಣ್, ಶೃತಿ, ಬುಲೆಟ್ ಪ್ರಕಾಶ್ ಹೊಗಳಿಕೆಯನ್ನು ಹೆಮ್ಮೆಯಿಂದ ಸಂಭ್ರಮಿಸಿದ್ದ ಹುಡುಗ ಜೀವನ್. ಕನ್ನಡ ಸಿನಿಮಾ ಲೋಕದಲ್ಲಿ ದೊಡ್ಡ ಹಾಸ್ಯನಟನಾಗಬೇಕು ಎಂದೇ ಕನಸು ಕಂಡಿದ್ದವ.
ದಢೂತಿ ದೇಹವಿದ್ದರೂ, ಅದನ್ನೇ ಪ್ಲಸ್ ಪಾಯಿಂಟ್ ಮಾಡಿಕೊಂಡು ಡ್ಯಾನ್ಸ್ ಮಾಡುತ್ತಿದ್ದ ಜೀವನ್, ಸ್ಕ್ರಿಪ್ಟ್ ಕೆಲಸ, ಡ್ರಾಯಿಂಗ್ ಕೂಡಾ ಮಾಡುತ್ತಿದ್ದ. ಗೆಳೆಯರಿಗೆ ನಾನ್ವೆಜ್ ಮಾಡಿ ಸ್ವತಃ ಬಡಿಸುವುದೆಂದರೆ, ಆತನಿಗೆ ಅದೇನೋ ಅಕ್ಕರೆ.
ಬಿಗ್ ಬಾಸ್ ಕನ್ನಡ-5ನಲ್ಲಿ ಭಾಗವಹಿಸಬೇಕು ಎಂದು ಕನಸು ಕಂಡಿದ್ದ ಜೀವನ್, ಕಾಮನ್ ಮ್ಯಾನ್ ವಿಭಾಗದಲ್ಲಿ ಸ್ಪರ್ಧೆ ಮಾಡಲು ತಮ್ಮದೇ ವಿಡಿಯೋ ಒಂದನ್ನು ಕೂಡಾ ಮಾಡಿ ಕಳುಹಿಸಿದ್ದ. ವಿದ್ಯೆ ನೈವೇದ್ಯವಾಗಿತ್ತು. ಕಾಮಿಡಿಯೇ ಉಸಿರಾಗಿತ್ತು. ಕಾಮಿಡಿ ನಟನ ಸಾವು ಹೈವೇಯಲ್ಲಿ ಕಾಯುತ್ತಿತ್ತು.
Related Articles :-
ಕುಕ್ಕೆಯಿಂದ ಬರುವಾಗ ಅಪಘಾತ - ಧಾರಾವಾಹಿ ನಟ, ನಟಿ ಸಾವು