ಪೈಲ್ವಾನ್, ಕನ್ನಡದ ಅದ್ದೂರಿ ಸಿನಿಮಾ. ಮುಂದಿನ ವಾರ ಪ್ರಪಂಚದಾದ್ಯಂತ 5 ಭಾಷೆಗಳಲ್ಲಿ ರಿಲೀಸ್ ಆಗುತ್ತಿರುವ ಸಿನಿಮಾ ಇದು. ಅದ್ದೂರಿ ಸಿನಿಮಾ.. ಅದ್ದೂರಿ ಬಜೆಟ್.. ಅದ್ದೂರಿ ತಾರಾಗಣ. ಚಿತ್ರಕ್ಕೆ ನಿರ್ಮಾಪಕಿ ಸ್ವಪ್ನಾ ಕೃಷ್ಣ. ನಿರ್ದೇಶಕ ಕೃಷ್ಣ.
ಇಂಥಾದ್ದೊಂದು ದುಬಾರಿ ಬಜೆಟ್‍ನ ಚಿತ್ರಕ್ಕೆ ನಿರ್ಮಾಪಕಿಯಾಗುವ ಧೈರ್ಯ ಮಾಡಿದ್ದು ಹೇಗೆ..? ಎಂಬ ಪ್ರಶ್ನೆಯನ್ನು ಸ್ವಪ್ನಾ ಮುಂದಿಟ್ಟರೆ ಅವರ ಕೊಡುವ ಉತ್ತರ `ಸುದೀಪ್'.
ನಿರ್ದೇಶಕ ಕೃಷ್ಣ, ಪೈಲ್ವಾನ್ ಕಥೆಯನ್ನು ಸುದೀಪ್ ಅವರಿಗೆ ಹೇಳಿದಾಗ ಮೊದಲು ಇದು ನನಗಲ್ಲ ಎಂದು ವಾಪಸ್ ಕಳಿಸಿದ್ದ ಸುದೀಪ್, ಮತ್ತೆ ಕೃಷ್ಣ ಅವರನ್ನು ಕರೆಸಿಕೊಂಡರಂತೆ. ಸ್ವಪ್ನಾ ಅವರು ಕೂಡಾ ಪತಿಯ ಜೊತೆಗಿದ್ದರು.
`ಈ ಸಿನಿಮಾವನ್ನು ನಾನು ಮಾಡುತ್ತೇನೆ. ಆದರೆ, ಚಿತ್ರದಲ್ಲಿ ದೇಹಪ್ರದರ್ಶನದ ದೃಶ್ಯಗಳ ಚಿತ್ರೀಕರಣವನ್ನು ಕೊನೆಯಲ್ಲಿಟ್ಟುಕೊಳ್ಳಬೇಕು. ಅಷ್ಟು ಹೊತ್ತಿಗೆ ನಾನು ತಯಾರಾಗಿರುತ್ತೇನೆ' ಎಂದರಂತೆ ಸುದೀಪ್. ಓಕೆ ಎಂದ ನಂತರ ಸುದೀಪ್ ಹಾಕಿದ 2ನೇ ಕಂಡೀಷನ್ ನೀವೇ ಪ್ರೊಡ್ಯೂಸ್ ಮಾಡಬೇಕು ಅನ್ನೋದು.
ಏನು ಮಾಡೋದು ಎಂಬ ಗೊಂದಲದಲ್ಲಿದ್ದ ಸ್ವಪ್ನಾ ಕೃಷ್ಣ ತಾವೂ ಒಂದು ಷರತ್ತು ಹಾಕಿದರು. ಜೊತೆಯಲ್ಲಿರುತ್ತೇನೆ ಎಂಬ ಧೈರ್ಯ ನೀಡಿದರೆ ರೆಡಿ ಎಂದರು. ನಾನಿದ್ದೇನೆ ಅನ್ನೋ ಮಾತು ಕೊಟ್ಟರು ಸುದೀಪ್. ಅದರಂತೆಯೇ ನಡೆದುಕೊಂಡರು ಕೂಡಾ.
ಈಗ ಪೈಲ್ವಾನ್ ಸಿನಿಮಾ ರಿಲೀಸ್ ಆಗೋಕೆ ರೆಡಿಯಾಗಿ ನಿಂತಿದೆ. ಚಿತ್ರದ ಪ್ರತಿ ಹಂತದಲ್ಲೂ ಸುದೀಪ್ ಬೆನ್ನೆಲುಬಾಗಿದ್ದಾರೆ. ಅವರು ನೀಡಿದ ಧೈರ್ಯವೇ ಇಷ್ಟು ದೊಡ್ಡ ಚಿತ್ರಕ್ಕೆ ನಿರ್ಮಾಪಕಿಯಾಗಲು ಪ್ರೇರಣೆ ಎಂದಿದ್ದಾರೆ ಸ್ವಪ್ನಾ ಕೃಷ್ಣ.
ಸ್ವಪ್ನಾ ಕೃಷ್ಣ ಅವರಿಗೆ ನಿರ್ಮಾಣ ಹೊಸದೇನಲ್ಲ. ಅವರ್ ಆರ್‍ಆರ್‍ಆರ್ ಪ್ರೊಡಕ್ಷನ್ಸ್‍ನಲ್ಲಿ ಸೀರಿಯಲ್ ನಿರ್ಮಾಣ ಮಾಡಿದ ಅನುಭವ ಇದೆ. ನಟಿಯಾಗಿದ್ದ ಅವರಿಗೆ ಸಿನಿಮಾ ಕೂಡಾ ಹೊಸದಲ್ಲ. ಆದರೆ ಇಷ್ಟು ದೊಡ್ಡ ಕ್ಯಾನ್‍ವಾಸ್‍ನ ಪೈಲ್ವಾನ್ ಹೊಸದು. ಸುದೀಪ್ ಜೊತೆಗಿದ್ದ ಕಾರಣ ಎಲ್ಲವೂ ಸಲೀಸಾಯ್ತು ಎನ್ನುತ್ತಾರೆ ಸ್ವಪ್ನಾ.