ಪ್ರಥಮ್ ಅಭಿನಯದ ಎಂಎಲ್‍ಎ ಚಿತ್ರದಲ್ಲಿ ಸಿಎಂ ಆಗಿ ರಾಜ್ಯದ ಪ್ರಮುಖ ರಾಜಕಾರಣಿಯೊಬ್ಬರು ನಟಿಸಲಿದ್ದಾರೆ. ಮುಖ್ಯಮಂತ್ರಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಇದೇ ಚಿತ್ರಲೋಕದಲ್ಲಿ ಓದಿದ್ದಿರಿ. ನೆನಪಿದೆಯಾ.. ಆಗ ಆ ರಾಜಕಾರಣಿ ಯಾರು ಅನ್ನೋದನ್ನು ಚಿತ್ರತಂಡ ಗುಟ್ಟಾಗಿಟ್ಟಿತ್ತು. ಈಗದು ಬಹಿರಂಗವಾಗಿದೆ. ಪ್ರಥಮ್ ಚಿತ್ರದಲ್ಲಿ ಮುಖ್ಯಮಂತ್ರಿಯಾಗಿ ಕಾಣಿಸಿಕೊಳ್ಳುತ್ತಿರುವ ರಾಜಕಾರಣಿ ಹೆಚ್.ಎಂ.ರೇವಣ್ಣ.
ಹೆಚ್.ಎಂ. ರೇವಣ್ಣ ಪ್ರಸ್ತುತ ಸಿದ್ದರಾಮಯ್ಯ ಸರ್ಕಾರದಲ್ಲಿ ಸಾರಿಗೆ ಖಾತೆ ಸಚಿವರು. ಸಿದ್ದರಾಮಯ್ಯನವರ ಆಪ್ತ ಸ್ನೇಹಿತರು ಹಾಗೂ ಪ್ರಭಾವಿ ರಾಜಕಾರಣಿ. ಕೊನೆಗೂ ಪ್ರಮುಖ ರಾಜಕಾರಣಿಯೊಬ್ಬರ ಕೈಲಿ ಸಿಎಂ ಪಾತ್ರ ಮಾಡಿಸುವ ಹಠ ತೊಟ್ಟಿದ್ದ ಪ್ರಥಮ್, ತಮ್ಮ ಹಠದಲ್ಲಿ ಗೆದ್ದಿದ್ದಾರೆ.
ಪ್ರಥಮ್, ರಾಜಕಾರಣಿಗಳ ಮನವೊಲಿಸುವುದರಲ್ಲಿ ಎತ್ತಿದ ಕೈ. ಅವರು ತಮ್ಮ ಮೊದಲ ಚಿತ್ರ ದೇವ್ರೌವ್ನೆ ಬಿಡು ಗುರು ಚಿತ್ರದಲ್ಲಿ ಮಾಜಿ ಪ್ರಧಾನಿ ದೇವೇಗೌಡರೇ ಕಾಣಿಸಿಕೊಂಡಿದ್ದರು. ಇನ್ನು ಎಂಎಲ್‍ಎ ಚಿತ್ರದ ಮುಹೂರ್ತಕ್ಕೆ ಸಿಎಂ ಸಿದ್ದರಾಮಯ್ಯನವರನ್ನೇ ಕರೆಸುವಲ್ಲಿ ಯಶಸ್ವಿಯಾಗಿದ್ದರು. ಈಗ, ಹೆಚ್.ಎಂ.ರೇವಣ್ಣನವರನ್ನು ತಮ್ಮ ಚಿತ್ರದಲ್ಲಿ ನಟಿಸಲು ಮನವೊಲಿಸಿದ್ದಾರೆ.
ಎಲ್ಲ ಸರಿ, ಪ್ರಥಮ್ ಅವರ ಮುಂದಿನ ಗುರಿ ಸಿನಿಮಾನಾ..? ರಾಜಕೀಯಾನಾ..? ಲೆಕ್ಕಾಚಾರ ನಿಮಗೇ ಬಿಟ್ಟಿದ್ದು.