ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್, ತಮ್ಮ ಚಿತ್ರಗಳಲ್ಲಿ ತಮ್ಮ ಕೇಶವಿನ್ಯಾಸ ಬದಲಾವಣೆ ಮಾಡಿಕೊಂಡಿದ್ದು ಬಹಳ ಕಡಿಮೆ. ಬಹುಶಃ ರಾಜ್ ದಿ ಶೋ ಮ್ಯಾನ್, ಯಾರೇ ಕೂಗಾಡಲಿ ಹೊರತುಪಡಿಸಿದರೆ, ಅಂತಹ ಬೇರೆ ಉದಾಹರಣೆಗಳು ಸಿಗುವುದು ಕಷ್ಟ. ಆದರೆ, ಈಗ ಸಿದ್ಧವಾಗುತ್ತಿರುವ ಹೊಸ ಚಿತ್ರಕ್ಕೆ ನಿರ್ದೇಶಕ ಪವನ್ ಒಡೆಯರ್ ಪುನೀತ್ ಹೇರ್‍ಸ್ಟೈಲ್‍ನ್ನೇ ಬದಲಾಯಿಸಿದ್ದಾರೆ.
ಪುನೀತ್ ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲವಾದರೂ, ಚಿತ್ರದಲ್ಲಿ ಪುನೀತ್ ಅವರದ್ದು ಎಲ್ಲರನ್ನೂ ಖುಷಿಯಾಗಿಸುವ ಪಾತ್ರವಂತೆ. ಸಂತೋಷ ಹಂಚುವುದೇ ಪುನೀತ್ ಕಾಯಕ. ತನಗೆ ಸರಿ ಅನ್ನಿಸಿದ್ದನ್ನು ಮಾಡುವ, ಸುತ್ತಲಿನವರನ್ನು ನಗಿಸುತ್ತಾ ಬದುಕುವ ಕೇರ್‍ಫ್ರೀ ಪಾತ್ರ ಎಂದಿದ್ದಾರೆ ಪವನ್ ಒಡೆಯರ್.
ಚಿತ್ರದಲ್ಲಿ ಬಿ.ಸರೋಜಾದೇವಿ ಕೂಡಾ ನಟಿಸುತ್ತಿದ್ದಾರೆ. ಪುನೀತ್ ರಾಜ್‍ಕುಮಾರ್ ಬಾಲನಟನಾಗಿ ನಟಿಸಿದ್ದ ಯಾರಿವನು ನಂತರ, ಸರೋಜಾದೇವಿ ಮತ್ತೆ ತೆರೆಗೆ ಬಂದೇ ಇರಲಿಲ್ಲ. ಈಗ ಮತ್ತೊಮ್ಮೆ ಪುನೀತ್ ಸಿನಿಮಾ ಮೂಲಕವೇ ಬೆಳ್ಳಿತೆರೆಗೆ ಬರುತ್ತಿದ್ದಾರೆ ಸರೋಜಾದೇವಿ. ಯಾರಿವನು ಚಿತ್ರದಲ್ಲಿ ಪುನೀತ್ ತಾಯಿಯ ಪಾತ್ರ ಮಾಡಿದ್ದ ಸರೋಜಾದೇವಿ, ಈ ಚಿತ್ರದಲ್ಲಿ ಸ್ವತಃ ಬಿ.ಸರೋಜಾದೇವಿಯಾಗಿಯೇ ಕಾಣಿಸಿಕೊಳ್ಳಲಿದ್ದಾರೆ.
ಹಾಗಾದರೆ, ಚಿತ್ರದ ಕಥೆ ಏನು ಎನ್ನುವ ಗುಟ್ಟನ್ನು ಹಾಗೆಯೇ ಉಳಿಸಿಕೊಂಡಿರುವ ಪವನ್, ಪುನೀತ್ ಪಾತ್ರವನ್ನಷ್ಟೇ ಬಾಯ್ಬಿಟ್ಟಿದ್ದಾರೆ. ರಾಕ್‍ಲೈನ್ ವೆಂಕಟೇಶ್ ನಿರ್ಮಾಣದ ಚಿತ್ರ, ಶೀಘ್ರದಲ್ಲೇ ಶೂಟಿಂಗ್ ಶುರು ಮಾಡಲಿದೆ.