ಶೃತಿ ಹರಿಹರನ್ ದೂರು ಕೊಟ್ಟಿದ್ದಾರೆ. 4 ಘಟನೆಗಳನ್ನು ವಿವರವಾಗಿ ಹೇಳಿದ್ದಾರೆ. ಸ್ಥಳದ ಮಹಜರು ಕೂಡಾ ಆಗಿದೆ. ಅರ್ಜುನ್ ಸರ್ಜಾ ಅರೆಸ್ಟ್ ಆಗ್ತಾರಾ..? ಈಗಲೇ ಹೇಳೋಕೆ ಸಾಧ್ಯವಿಲ್ಲ. ಮಹಿಳಾ ಸಬ್‍ಇನ್ಸ್‍ಪೆಕ್ಟರ್ ರೇಣುಕಾ ಸಮ್ಮುಖದಲ್ಲಿ ಕೇಸ್ ದಾಖಲಾಗಿದೆ. ಅರೆಸ್ಟ್ ಮಾಡುತ್ತೇವೆ ಎಂದು ಈಗಲೇ ಹೇಳುವುದು ಆತುರದ ನಿರ್ಧಾರವಾಗುತ್ತದೆ. ವಿಚಾರಣೆ ಈಗಷ್ಟೇ ಆರಂಭವಾಗಿದೆ ಎಂದಿದ್ದಾರೆ ಡಿಸಿಪಿ ದೇವರಾಜ್.
ಶೃತಿ ಹರಿಹರನ್ ದೂರಿನಲ್ಲಿರುವ ಮಾಹಿತಿ ಪ್ರಕಾರ, ಶೃತಿಯವರ ಸ್ಟಾಫ್ ಬೋರೇಗೌಡ, ಕಿರಣ್, ಅಸೋಸಿಯೇಟ್ ಡೈರೆಕ್ಟರುಗಳಾದ ಭರತ್ ನೀಲಕಂಠ, ಮೋನಿಕಾ ಹಾಗೂ ಶೃತಿ ಸ್ನೇಹಿತೆ ಯಶಸ್ವಿನಿಯನ್ನು ಪೊಲೀಸರು ವಿಚಾರಣೆ ನಡೆಸುತ್ತಾರೆ. ಈ ಐದೂ ಜನ ಸರ್ಜಾ ವಿರುದ್ಧವಾಗಿ, ಪ್ರತ್ಯಕ್ಷದರ್ಶಿಗಳಾಗಿ ಹೇಳಿಕೆ ನೀಡಿದರೆ, ಸರ್ಜಾ ಬಂಧನಕ್ಕೊಳಗಾಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.
ಈ ಐವರೂ ಸಾಕ್ಷಿಗಳಿಗೆ ಪೊಲೀಸರು ನೋಟಿಸ್ ನೀಡಿದ್ದಾರೆ. ಸರ್ಜಾ ವಿರುದ್ಧ 4 ಸೆಕ್ಷನ್‍ಗಳ ಅಡಿಯಲ್ಲಿ ಕೇಸು ದಾಖಲಿಸಲಾಗಿದೆ.
ಐಪಿಸಿ 354 : ಮಹಿಳಾ ಗೌರವಕ್ಕೆ ಧಕ್ಕೆ. 3 ವರ್ಷಗಳ ಜೈಲು ಶಿಕ್ಷ ಮತ್ತು ದಂಡ ವಿಧಿಸಬಹುದು
ಐಪಿಸಿ 354ಎ : ಲೈಂಗಿಕ ಕಿರುಕುಳ ನೀಡಿದ್ದಕ್ಕೆ 1 ವರ್ಷ ಜೈಲು ಶಿಕ್ಷೆ ವಿಧಿಸಬಹುದು
ಐಪಿಸಿ 506 : ಜೀವ ಬೆದರಿಕೆ ಹಾಕಿದ್ದಕ್ಕೆ 2 ವರ್ಷ ಜೈಲು ಮತ್ತು ದಂಡ ಎರಡನ್ನೂ ವಿಧಿಸಬಹುದು
ಐಪಿಸಿ 509 : ಸನ್ನೆ ಮೂಲಕ ಲೈಂಗಿಕ ಕಿರುಕುಳ ನೀಡಿರುವುದು. ಇದರಲ್ಲಿ ಶಿಕ್ಷೆ, ದಂಡ ಪ್ರಮಾಣ, ನ್ಯಾಯಾಧೀಶರ ವಿವೇಚನೆಗೆ ಸೇರಿರುತ್ತೆ.
ಇಷ್ಟೆಲ್ಲ ಆಗಿಯೂ, ದೂರು ಕೊಟ್ಟಿರುವಂತೆ ಈ ಸೆಕ್ಷನ್‍ಗಳಡಿಯಲ್ಲಿ ಕೇಸು ದಾಖಲಾಗಿದೆಯೇ ಹೊರತು, ಯಾವುದೂ ಸಾಬೀತಾಗಿಲ್ಲ. ಈ ಕುರಿತು ಪೊಲೀಸರು ವಿಚಾರಣೆ ಮಾಡಿ, ಚಾರ್ಜ್‍ಶೀಟ್ ಸಲ್ಲಿಸಬೇಕು. ಈ ವೇಳೆ ಸರ್ಜಾ ಅವರನ್ನು ಬಂಧಿಸಿಯೇ ವಿಚಾರಣೆ ನಡೆಸಬೇಕು ಎಂದು ಕಂಡುಬಂದರೆ ಕೋರ್ಟ್ ಅನುಮತಿ ಪಡೆಯಬೇಕಾಗಬಹುದು. ಅರೆಸ್ಟ್ ಮಾಡದೆಯೂ ವಿಚಾರಣೆ ನಡೆಸಬಹುದು. ಪೊಲೀಸರ ವಿಚಾರಣೆಗೆ ಅರ್ಜುನ್ ಸರ್ಜಾ ಸಂಪೂರ್ಣ ಸಹಕಾರ ನೀಡಿದರೆ ಅರೆಸ್ಟ್ ಮಾಡುವ ಸಾಧ್ಯತೆ ಇರುವುದಿಲ್ಲ.