ಗಂಡ ಹೆಂಡತಿ ಸಿನಿಮಾ, ಆ ಸಿನಿಮಾ ಕುರಿತಂತೆ ಸಂಜನಾ ಗಲ್ರಾನಿ ಮಾಡಿದ ಆರೋಪ ಟೀಕೆಗಳ ಯುದ್ಧಕ್ಕೆ ಕಾರಣವಾಗಿದೆ. ರವಿ ಶ್ರೀವತ್ಸ, ನಿರ್ದೇಶಕರ ಸಂಘಕ್ಕೆ ದೂರು ನೀಡಿ, ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ಸಂಜನಾ, ರವಿ ಶ್ರೀವತ್ಸ ಹಾಗೂ ನಿರ್ದೇಶಕರ ಸಂಘದ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದೆ ನಿರ್ದೇಶಕ ಸಂಘ. ಶುಕ್ರವಾರದ ಒಳಗಾಗಿ ಕ್ಷಮೆ ಕೇಳುವಂತೆ ಡೆಡ್ಲೈನ್ ಕೊಟ್ಟಿದೆ.
ಗಂಡ ಹೆಂಡತಿ ಚಿತ್ರದ ಸಕ್ಸಸ್ ರುಚಿಯನ್ನು ಇಡೀ ಚಿತ್ರತಂಡ ಅನುಭವಿಸಿದೆ. ಆದರೆ, ಈಗ ಅದೇ ಅಗುಳನ್ನ, ಊಟದ ತಟ್ಟೆಯಲ್ಲಿ ಉಗುಳುವ ಕೆಲಸ ಮಾಡ್ತಿರೋದು ಸರಿಯಲ್ಲ. ಸಂಜನಾ ಆರೋಪಕ್ಕೆ ಆಧಾರವಿಲ್ಲ. ಅವರು ರವಿ ಶ್ರೀವತ್ಸ ಅವರ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ಹೋರಾಟ ಮಾಡುವುದಾಗಿ ಎಚ್ಚರಿಕೆ ಕೊಟ್ಟಿದ್ದಾರೆ. ಇದಾದ ಮೇಲೂ ಸಂಜನಾ ಸುಮ್ಮನಾಗಿಲ್ಲ.
ಸಂಜನಾ : ನಾನು ನಿರ್ದೇಶಕರ ಸಂಘದ ಕ್ಷಮೆ ಕೇಳುತ್ತೇನೆ. ರವಿ ಶ್ರೀವತ್ಸ ಕ್ಷಮೆ ಕೇಳಲ್ಲ.
ರವಿ ಶ್ರೀವತ್ಸ : ನಾನೀಗ ಮಾಗಿದ್ದೇನೆ. 30 ವರ್ಷದಿಂದ ಸಿನಿಮಾದಲ್ಲಿದ್ದೇನೆ. ಮಾಲಾಶ್ರೀ ಸೇರಿದಂತೆ ಹಿರಿಯರ ಸಿನಿಮಾಗಳನ್ನೂ ಡೈರೆಕ್ಟ್ ಮಾಡಿದ್ದೇನೆ. ಅವರು ಸರ್ಟಿಫಿಕೇಟ್ ಕೊಡಲಿ. ಸಂಜನಾ, ತಾವು ಮಾಡಿದ ಆರೋಪಕ್ಕೆ ಬೆಲೆ ತೆರಲೇಬೆಕು.
ಸಂಜನಾ : ಗಂಡ ಹೆಂಡತಿ ಒಪ್ಪಿಕೊಂಡಾಗ ನನಗೆ 16 ವರ್ಷ. ಅವರು ನನಗೆ ಬೈದು, ಬೆದರಿಸಿ ಹಿಂಸೆ ನೀಡಿದ್ದಾರೆ.ರವಿ ಶ್ರೀವತ್ಸ : ಗಂಡ ಹೆಂಡತಿ ಟೈಮಲ್ಲಿ ಅವರ ತಂಗಿ ನಿಕ್ಕಿ ಗಲ್ರಾನಿ ವಯಸ್ಸೇ 17. ತಂಗಿಗಿಂತಲೂ ಅಕ್ಕನೇ ಚಿಕ್ಕವರಾ..?
ಸಂಜನಾ : ಒಂದೆರಡು ಕಿಸ್ಸಿಂಗ್ ಸೀನ್ ಇರುತ್ತೆ ಎಂದಿದ್ದರು. ಚಿತ್ರೀಕರಣಕ್ಕೆ ಹೋದಾಗ ಕಿಸ್ಸಿಂಗ್ ಸೀನ್ಗಳಿಗೆ ಲೆಕ್ಕವೇ ಇರಲಿಲ್ಲ.
ರವಿ ಶ್ರೀವತ್ಸ : ಅವರಿಗೆ ಎಲ್ಲವೂ ಗೊತ್ತಿತ್ತು. ಮರ್ಡರ್ ಚಿತ್ರದ ರೀಮೇಕ್ ಅನ್ನೋದು ಗೊತ್ತಿತ್ತು. 2000ಕ್ಕೂ ಹೆಚ್ಚು ಫೋಟೋಶೂಟ್ ಆಗಿತ್ತು. ಪಾತ್ರಗಳಿಗೆ ಸ್ವಲ್ಪ ಬೆತ್ತಲಾಗುವುದು ಅನಿವಾರ್ಯ ಎಂದು ಅವರೇ ಆಗಲೇ.. ಪತ್ರಿಕೆಗಳಿಗೆ ಹೇಳಿದ್ದರು.
ಸಂಜನಾ : ಗಂಡ ಹೆಂಡತಿ ಶೂಟಿಂಗ್ ವೇಳೆ ಕ್ಯಾಮೆರಾ ಆ್ಯಂಗಲ್ಗಳು ವಿಚಿತ್ರವಾಗಿರುತ್ತಿದ್ದವು. ನನಗೇ ಗೊತ್ತಿಲ್ಲದಂತೆ ಶೂಟ್ ಮಾಡುತ್ತಿದ್ದರು.
ರವಿ ಶ್ರೀವತ್ಸ : ಬೇರೆ ಥರ ತೋರಿಸಿದ್ದರೆ ಅದು ಬೇರೆಯೇ ಚಿತ್ರವಾಗುತ್ತಿತ್ತು. ರಾಜಾಸಿಂಹ ಚಿತ್ರದಲ್ಲಿನ ಅವರ ದೃಶ್ಯಗಳನ್ನೇ ನೋಡಿ. ಆ ಪರಿಯ ಕ್ಯಾಮೆರಾ ಆ್ಯಂಗಲ್ನ್ನು ನಾವು ಇಟ್ಟಿಲ್ಲ.
ಸಂಜನಾ : ನನ್ನ ಆರೋಪ ಪಬ್ಲಿಸಿಟಿಗಾಗಿ ಅಲ್ಲ. ಪುಟಗೋಸಿ ಪಬ್ಲಿಸಿಟಿ ನನಗೆ ಬೇಕಿಲ್ಲ.
ರವಿ ಶ್ರೀವತ್ಸ : ನನ್ನ ವರ್ತನೆ ಸರಿ ಇಲ್ಲ ಅನ್ನೋದಾದ್ರೆ, ಅಕ್ಟೋಬರ್ 14ರರೆಗೆ ನನ್ನ ಜೊತೆ ಚೆನ್ನಾಗಿಯೇ ಇದ್ದು, ಸಂಪರ್ಕದಲ್ಲೂ ಇದ್ದು, ಇದ್ದಕ್ಕಿದ್ದಂತೆ ಆರೋಪ ಮಾಡಿದ್ದೇಕೆ..? ಹೋಗಲಿ, ಸಂಜನಾ ಅವರ ಆಸ್ತಿ ಎಷ್ಟು..? ಐಟಿಗೆ ಲೆಕ್ಕ ಕೊಟ್ಟಿದ್ದಾರಾ..?
ಸಂಜನಾ : ಹೌದು, ನನಗೆ ಸೈಟು, ಮನೆ, ಕಾರುಗಳು ಎಲ್ಲ ಇವೆ. ಅವೆಲ್ಲವನ್ನೂ ನಾನು ಕಷ್ಟಪಟ್ಟು ದುಡಿದು ಸಂಪಾದಿಸಿದ್ದೇನೆ. ಈಗ ದುಡಿಯದೆ ಇನ್ಯಾವಾಗ ದುಡಿಯಲಿ. ನಾನು ಕನ್ನಡ ಅಷ್ಟೇ ಅಲ್ಲ, ತಮಿಳು, ತೆಲುಗು ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಸಿದ್ದೇನೆ. ಮರೆಯಬೇಡಿ.