ಕಿಚ್ಚ ಸುದೀಪ್, ಉಪೇಂದ್ರ, ಲೀಲಾವತಿ ಚಿತ್ರರಂಗದ ಕಲಾವಿದರು, ತಂತ್ರಜ್ಞರಿಗೆ ನೆರವಾಗುತ್ತಿರುವ ಬೆನ್ನಲ್ಲೇ ಇನ್ನಷ್ಟು ಕಲಾವಿದರು, ನಿರ್ಮಾಪಕರು ನೆರವಿನ ಹಸ್ತ ಚಾಚಿದ್ದಾರೆ. ನಟ ಸೋನು ಸೂದ್, ರಾಗಿಣಿ ದ್ವಿವೇದಿ ಕೂಡಾ ಕೊರೊನಾ ವಾರಿಯರ್ಸ್ ನೆರವಿಗೆ ಕೈ ಜೋಡಿಸಿದ್ದಾರೆ. ಪ್ರಕಾಶ್ ರೈ ಬೇರೆಯದೇ ರೀತಿಯಲ್ಲಿ ದೊಡ್ಡಮಟ್ಟದಲ್ಲಿ ನೆರವು ನೀಡುವ ಕೈಂಕರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.
ಇದೀಗ ಕೆಜಿಎಫ್, ಯುವರತ್ನ ಚಿತ್ರಗಳ ನಿರ್ಮಾಪಕ ವಿಜಯ್ ಕಿರಗಂದೂರು ಮಂಡ್ಯ ಜಿಲ್ಲೆಯ ಜನರ ನೆರವಿಗೆ ಧಾವಿಸಿದ್ದಾರೆ. ಮಂಡ್ಯ, ವಿಜಯ್ ಕಿರಗಂದೂರು ಅವರ ಹುಟ್ಟೂರು ಎನ್ನುವುದು ವಿಶೇಷ.
ವಿಜಯ್ ಕಿರಗಂದೂರು ಮಂಡ್ಯದ ಜನರಿಗಾಗಿ 500 ಎಲ್ಪಿಎಂ ಸಾಮಥ್ರ್ಯದ 2 ಆಕ್ಸಿಜನ್ ಘಟಕ ಅಥವಾ 50 ಆಕ್ಸಿಜನ್ ಬೆಡ್ ವ್ಯವಸ್ಥೆ ಮಾಡಿಕೊಡಲು ನಿರ್ಧರಿಸಿದ್ದಾರೆ. ಹೊಂಬಾಳೆ ಫಿಲಮ್ಸ್ ಮೂಲಕ ಇವುಗಳಲ್ಲಿ ಯಾವುದು ಅಗತ್ಯವಿದೆಯೋ.. ಅದಕ್ಕೆ ನೆರವು ನೀಡುವುದಾಗಿ ಹೇಳಿದ್ದಾರೆ. ಈ ನಿಟ್ಟಿನಲ್ಲಿ ಸರ್ಕಾರದೊಂದಿಗೆ ನಿರಂತರ ಸಂಪರ್ಕದಲ್ಲೂ ಇದ್ದಾರೆ.
ಅತ್ತ ಪ್ರಕಾಶ್ ರೈ ತಮಿಳುನಾಡಿನ ಭೂಮಿಕಾ ಟ್ರಸ್ಟ್ ಸಹಯೋಗದಲ್ಲಿ 500ಕ್ಕೂ ಹೆಚ್ಚು ಆಕ್ಸಿಜನ್ ಕಾನ್ಸಂಟ್ರೇಟರ್ ಒದಗಿಸಿದ್ದಾರೆ.
ನಟ, ಸಂಗೀತ ನಿರ್ದೇಶಕ ಸಾಧುಕೋಕಿಲ ಆರ್ಕೆಸ್ಟ್ರಾ ಕಲಾವಿದರಿಗಾಗಿ ಎರಡೂವರೆ ಲಕ್ಷ ರೂ.ಗಳನ್ನು ಉಪೇಂದ್ರ ಅವರಿಗೆ ನೀಡಿದ್ದು, ಸಹಾಯ ನೀಡಲು ಕೋರಿದ್ದಾರೆ. ಹಿರಿಯನಟಿ ಬಿ.ಸರೋಜಾದೇವಿ 4 ಲಕ್ಷ ರೂ.ಗಳನ್ನು ಸಹಕಲಾವಿದರ ಕುಟುಂಬಕ್ಕೆ ಕಿಟ್ ವಿತರಿಸುವ ಸಲುವಾಗಿ ನೀಡಿದ್ದಾರೆ.
ನಿರ್ದೇಶಕ ಪವನ್ ಒಡೆಯರ್ 20 ಸಾವಿರ ರೂ.ಗಳನ್ನು ನೀಡಿದ್ದಾರೆ. ಹಿರಿಯ ನಟ ಶೋಭರಾಜ್ 10 ಸಾವಿರ ರೂ. ನೀಡಿದ್ದಾರೆ. ನಟ ಶ್ರೀಮುರಳಿ 5 ಆಸ್ಪತ್ರೆಗಳ ಕೊರೊನಾ ವಾರಿಯರ್ಸ್ಗೆ ಊಟದ ವ್ಯವಸ್ಥೆ ಮಾಡಿಕೊಡುತ್ತಿದ್ದಾರೆ. ನಟಿ ಸಂಜನಾ ಗಲ್ರಾನಿ ಬಡವರಿಗಾಗಿ ಆಹಾರದ ಕಿಟ್ ವಿತರಿಸುತ್ತಿದ್ದಾರೆ.
ಅಮೆರಿಕದಲ್ಲಿ ನೆಲೆಸಿರುವ ನಟಿ ಮಾನ್ಯ ಉಪೇಂದ್ರ ಅವರಿಗೆ 1 ಲಕ್ಷ ರೂ. ಕಳಿಸಿಕೊಟ್ಟಿದ್ದಾರೆ.
ನಟ ಕಿಚ್ಚ ಸುದೀಪ್ ತಮ್ಮ ಚಾರಿಟಬಲ್ ಟ್ರಸ್ಟ್ ಮೂಲಕ ಕೊರೊನಾದಿಂದಾಗಿ ಅನಾಥರಾದ ಕೆಲವು ಮಕ್ಕಳನ್ನು ದತ್ತು ತೆಗೆದುಕೊಳ್ಳಲು ನಿರ್ಧರಿಸಿದ್ದು ಮಾಹಿತಿ ಕಲೆಹಾಕುತ್ತಿದೆ. ಅದರಲ್ಲಿಯೂ ಚಾಮರಾಜನಗರದ ಆಕ್ಸಿಜನ್ ದುರಂತದಲ್ಲಿ ಪ್ರಾಣ ಕಳೆದುಕೊಂಡವರ ಕುಟುಂಬಗಳ ಮಾಹಿತಿ ಸಂಗ್ರಹಿಸುತ್ತಿದೆ. ಮೊದಲ ಹಂತದಲ್ಲಿ ಆ ಕುಟುಂಬಗಳಿಗೆ ಆಹಾರದ ಕಿಟ್ ನೀಡುತ್ತಿದ್ದು, ಕೊರೊನಾ ಮುಗಿದ ನಂತರ ಮುಂದಿನ ನೆರವಿನ ಯೋಜನೆ ರೂಪಿಸುವುದಾಗಿ ಹೇಳಿದೆ.