ಕನ್ನಡ ಚಿತ್ರರಂಗಕ್ಕೆ ಕೊನೆಗೂ ಒಬ್ಬ ಲೀಡರ್ ಸಿಕ್ಕಿದ್ದಾರೆ. ಶಿವರಾಜ್ ಕುಮಾರ್ ರೂಪದಲ್ಲಿ. ಶಿವಣ್ಣ ಮನೆಯಲ್ಲಿ ಸಭೆ ಸೇರಿದ್ದ ಚಿತ್ರರಂಗದ ಪ್ರಮುಖ ಸದಸ್ಯರೆಲ್ಲ ಶಿವಣ್ಣ ಅವರಿಗೆ ಲೀಡರ್ ಪಟ್ಟ ಕಟ್ಟಿದ್ದಾರೆ. ನಿರ್ಮಾಪಕರು, ನಿರ್ದೇಶಕರು, ವಿತರಕರು, ಪ್ರದರ್ಶಕರು ಎಲ್ಲ ಸಂಘಟನೆಗಳ ಸದಸ್ಯರೂ ಫಿಲಂ ಚೇಂಬರ್ ನೇತೃತ್ವದಲ್ಲಿ ಶಿವಣ್ಣ ಮನೆಯಲ್ಲಿ ಸಭೆ ಸೇರಿದ್ದರು.
ಸಭೆಯ ನಂತರ ಮಾತನಾಡಿದ ಎಸ್.ವಿ.ರಾಜೇಂದ್ರ ಸಿಂಗ್ ಬಾಬು ಕನ್ನಡ ಚಿತ್ರರಂಗಕ್ಕೆ ಒಬ್ಬ ನಾಯಕನ ಅಗತ್ಯ ಇದೆ. ಶಿವರಾಜ್ ಕುಮಾರ್ ಅವರೇ ನೇತೃತ್ವ ವಹಿಸಿಕೊಳ್ಳಲಿ ಎಂದು ನಿರ್ಧರಿಸಿದ್ದೇವೆ ಎಂದರು.
ಈ ಹಿಂದೆಲ್ಲ ಚಿತ್ರರಂಗದ ಯಾವುದೇ ಸಮಸ್ಯೆ ಇರಲಿ, ಅಣ್ಣಾವ್ರ ಮನೆಯಲ್ಲಿ ಸಭೆಯಾಗಿ ತೀರ್ಮಾನವಾಗುತ್ತಿತ್ತು. ಇನ್ನು ಮುಂದೆ ಶಿವಣ್ಣ ನೇತೃತ್ವದಲ್ಲಿ ಚಿತ್ರರಂಗ ಮುನ್ನಡೆಯಲಿದೆ ಎಂದು ಸಾ.ರಾ.ಗೋವಿಂದು ತಿಳಿಸಿದರು.

ನಂತರ ಮಾತನಾಡಿದ ಶಿವಣ್ಣ ಎಲ್ಲ ಸ್ಟಾರ್ ನಟರ ಜೊತೆ ಕುಳಿತು ಮಾತನಾಡುತ್ತೇನೆ. ಸಾವಿರ ಜನರನ್ನು ಹಿಂದೆ ಇಟ್ಟುಕೊಂಡು ಹೋಗುವುದು ನಾಯಕತ್ವ ಅಲ್ಲ, ಎಲ್ಲರನ್ನೂ ಜೊತೆಗೆ ಕರೆದುಕೊಂಡು ಹೋಗುವುದು ನಾಯಕತ್ವ. ನನಗೆ ಹಾಗೆ ಎಲ್ಲರೊಂದಿಗೆ ಹೋಗುವ ನಾಯಕತ್ವದಲ್ಲಿ ನಂಬಿಕೆ ಇದೆ ಎಂದರು.
ಇತ್ತೀಚೆಗೆ ಚಿತ್ರೀಕರಣ ಶುರು ಮಾಡಿರುವ ಫ್ಯಾಂಟಮ್ ಚಿತ್ರತಂಡವನ್ನು ಹೊಗಳಿದ ಶಿವಣ್ಣ, ನಾವೂ ಹಾಗೆ ಮಾಡಬೇಕು. ಮೊದಲು ನಾವೇನು ಮಾಡಬೇಕು, ಮಾಡಬಹುದು ಅನ್ನೋದನ್ನ ತೀರ್ಮಾನ ಮಾಡಿ ಮುಂದೆ ಹೆಜ್ಜೆ ಇಡೋಣ. ಯಾರೂ ಎದೆಗುಂದುವ ಅಗತ್ಯ ಇಲ್ಲ ಎಂದಿದ್ದಾರೆ.
ಸಭೆಯಲ್ಲಿ ಎಸ್.ವಿ.ರಾಜೇಂದ್ರ ಸಿಂಗ್ ಬಾಬು, ಸಾ.ರಾ.ಗೋವಿಂದು, ಕೆ.ಪಿ.ಶ್ರೀಕಾಂತ್, ಅಶೋಕ್, ಎಸ್.ಎ.ಚಿನ್ನೇಗೌಡ, ಜಯಣ್ಣ, ಭೋಗೇಂದ್ರ, ಆರ್.ಎಸ್.ಗೌಡ್ರು, ಕಾರ್ತಿಕ್ ಗೌಡ, ಕೋಟಿ ರಾಮು, ಕೆ.ಮಂಜು, ಗುರುಕಿರಣ್, ಪ್ರವೀಣ್ ಕುಮಾರ್, ಸಾಧು ಕೋಕಿಲ, ಉಮೇಶ್ ಬಣಕಾರ್, ಎನ್.ಎಂ.ಸುರೇಶ್, ಎ.ಗಣೇಶ್, ಡಿ.ಕೆ.ರಾಮಕೃಷ್ಣ, ಭಾ.ಮಾ.ಹರೀಶ್, ಜೆ.ಕೃಷ್ಣ ಸೇರಿದಂತೆ ಹಲವು ಗಣ್ಯರು, ವಿವಿಧ ಸಂಘಟನೆಗಳ ಸದಸ್ಯರು, ಪ್ರಮುಖರು ಭಾಗವಹಿಸಿದ್ದರು.