ಮೀಟೂ ಅಭಿಯಾನ ಹಲವು ಸ್ಟಾರ್‍ಗಳನ್ನು ಮಾಧ್ಯಮಗಳ ಕಟಕಟೆಯಲ್ಲಿ ನಿಲ್ಲಿಸಿದ್ದರೆ, ಮೀಟೂ ಅಭಿಯಾನಕ್ಕೆ ಆಸರೆ ಎನಿಸಿದ್ದ ಫೈರ್ ಸಂಸ್ಥೆಯೇ ಬಿರುಕುಬಿಟ್ಟಿದೆ. ಫೈರ್ ಸಂಸ್ಥೆಯಿಂದ ಪ್ರಿಯಾಂಕ ಉಪೇಂದ್ರ ನಿರ್ಗಮಿಸಿದ್ದಾರೆ. ಅರ್ಜುನ್ ಸರ್ಜಾ ವಿರುದ್ಧ ಆರೋಪಿಸಿದ್ದ ಶೃತಿ ಹರಿಹರನ್ ಜೊತೆಗೆ ನಿಂತಿದ್ದದ್ದು, ಇದೇ ಫೈರ್ ಸಂಸ್ಥೆ. ಈ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷೆ ಪ್ರಿಯಾಂಕಾ ಉಪೇಂದ್ರ. ಈಗ ತಾವೇ ಸ್ಥಾಪಿಸಿದ್ದ ಸಂಸ್ಥೆಯಿಂದ ಹೊರನಡೆದಿದ್ದಾರೆ ಪ್ರಿಯಾಂಕಾ ಉಪೇಂದ್ರ. ಅವರ ನಿರ್ಗಮನಕ್ಕೆ ಕಾರಣ, ದಾರಿ ತಪ್ಪುತ್ತಿರುವ ಮೀಟೂ ಅಭಿಯಾನ ಮತ್ತು ಸಂಸ್ಥೆಯ ಸದಸ್ಯನಾಗಿರುವ ನಟ ಚೇತನ್‍ರ ಆತುರ, ಅತಿರೇಕದ ವರ್ತನೆ.
ಹೆಣ್ಣು ಮಕ್ಕಳ ನೋವಿಗೆ ದನಿಯಾಗುತ್ತಿದ್ದ ಫೈರ್‍ನಲ್ಲಿ ಪ್ರಿಯಾಂಕ 2 ವರ್ಷಗಳಿಂದ ಅಧ್ಯಕ್ಷೆಯಾಗಿದ್ದರು. ಈಗ..
ಪ್ರಿಯಾಂಕಾ ಉಪೇಂದ್ರ, ನಟ ಚೇತನ್ ಸಂಸ್ಥೆಯ ದಾರಿ ತಪ್ಪಿಸುತ್ತಿದ್ದಾರೆ. ಅವರಿಗೆ ಸಮಸ್ಯೆ ಬಗೆಹರಿಯುವುದಕ್ಕಿಂತ, ಮಾಧ್ಯಮಗಳು, ಸೋಷಿಯಲ್ ಮೀಡಿಯಾಗಳ ಎದುರು ಹೋಗಿ ಪ್ರಚಾರ ಗಿಟ್ಟಿಸುವುದೇ ಮುಖ್ಯವಾಗಿದೆ ಎಂದಿದ್ದಾರೆ. ಪ್ರಿಯಾಂಕಾ ಅಷ್ಟೇ ಅಲ್ಲ, ಸಂಸ್ಥೆಯಿಂದ ವೀಣಾ ಸುಂದರ್ ಕೂಡಾ ಹೊರಬಂದಿದ್ದಾರೆ.
ಚಿತ್ರರಂಗ ಒಂದು ಮನೆಯಿದ್ದಂತೆ. ಮನೆಯಲ್ಲಿ ಏನಾದರೂ ಗಲಾಟೆ ಆದಾಗ ಸೋಷಿಯಲ್ ಮೀಡಿಯಾದಲ್ಲಿ ಹಾಕುತ್ತೇವೋ.. ಅಥವಾ ಹಿರಿಯರ ಜೊತೆ ಕುಳಿತು ಬಗೆಹರಿಸಿಕೊಳ್ಳುತ್ತೇವೋ.. ಚಿತ್ರರಂಗ ಒಂದು ಫ್ಯಾಮಿಲಿ ಅನ್ನೋದನ್ನ ಮೀಟೂ ಅಥವಾ ಫೈರ್ ಸಂಸ್ಥೆಯನ್ನು ದಾರಿ ತಪ್ಪಿಸುತ್ತಿರುವವರೇ ಹೇಳಬೇಕು ಎಂದಿದ್ದಾರೆ ಪ್ರಿಯಾಂಕಾ ಉಪೇಂದ್ರ.
ಚಿತ್ರರಂಗದಲ್ಲಿ ತೊಂದರೆಗೊಳಗಾದ ಹೆಣ್ಣು ಮಕ್ಕಳಿಗೆ ಧೈರ್ಯ ಹೇಳುವುದು, ಕಾನೂನು ನೆರವು ನೀಡುವುದು ಹಾಗೂ ಸಮಸ್ಯೆ ಬಗೆಹರಿಸುವುದು ನಮ್ಮ ಉದ್ದೇಶವಾಗಿತ್ತು. ಹಿರಿಯರನ್ನು ಒಳಗೊಂಡೇ ಫೈರ್ ಸಂಸ್ಥೆ ರೂಪಿಸಿದ್ದೆವು. ಅಲ್ಲಿಯೂ ಸಮಸ್ಯೆ ಬಗೆಹರಿಯದೇ ಹೋದಾಗ ಕಾನೂನಿನ ಮೊರೆ ಹೋಗುವುದು ನಮ್ಮ ಉದ್ದೇಶವಾಗಿತ್ತು. ಆದರೆ, ಸಂಸ್ಥೆಗೆ ಸೇರಿದ ಚೇತನ್‍ಗೆ ಬೇರೆಯದೇ ಉದ್ದೇಶಗಳಿದ್ದವು. ಪ್ರತಿಯೊಂದನ್ನೂ ಸುದ್ದಿ ಮಾಡುವ, ದೊಡ್ಡದಾಗಿ ಮಾತನಾಡುವ, ಎಲ್ಲದಕ್ಕೂ ಮೀಡಿಯಾಗಳ ಮುಂದೆ ಹೋಗುವ ಹುಚ್ಚು. ಸೂಕ್ಷ್ಮ ವಿಚಾರಗಳನ್ನು ಬೀದಿಯಲ್ಲಿ ಮಾತನಾಡಬಾರದು ಎಂಬ ಸೂಕ್ಷ್ಮತೆಯೇ ಅವರಿಗೆ ಇಲ್ಲ ಎಂದಿದ್ದಾರೆ ಪ್ರಿಯಾಂಕಾ ಉಪೇಂದ್ರ.
ಪ್ರತಿಯೊಂದನ್ನೂ ದೊಡ್ಡ ದನಿಯಲ್ಲೇ ಮಾತನಾಡುವ ಚೇತನ್, ಅಂಬರೀಶ್ ಅವರ ಎದುರೂ ಕೂಗಾಡಿದ್ದರಂತೆ. ಆಗ ಪ್ರಿಯಾಂಕಾ ಉಪೇಂದ್ರ ಬುದ್ದಿ ಹೇಳಿದ್ದರಂತೆ. ಅಷ್ಟೇ ಅಲ್ಲ, ವಾಣಿಜ್ಯ ಮಂಡಳಿಗೆ ಕೊಡುವ ದೂರುಗಳನ್ನು ನಮಗೇ ಕೊಡಿ ಎನ್ನುತ್ತಿದ್ದಾರೆ ಚೇತನ್. ಏನು ಅದರ ಅರ್ಥ..? ನಿಮಗಿಂತ ನಾವೇ ದೊಡ್ಡವರು ಎಂದು ಹೇಳಿದಂತೆ ಅಲ್ಲವಾ ಅದು..? ಇದು ಪ್ರಿಯಾಂಕಾ ಉಪೇಂದ್ರ ಪ್ರಶ್ನೆ.
ಈಗಿನ ಶೃತಿ ಹರಿಹರನ್ ವಿವಾದವನ್ನು ಪ್ರಸ್ತಾಪಿಸಿರುವ ಪ್ರಿಯಾಂಕಾ, ಗಲಾಟೆಯಾಯಿತು. ಸುದ್ದಿಯಾಯಿತು. ವಿವಾದವಾಯಿತು. ಏನೂ ಆಗದೇ ಹೋದಾಗ.. ನೊಂದವರ ಧ್ವನಿಯನ್ನೇ ಅನುಮಾನದಿಂದ ನೋಡುವಂತಾಗುತ್ತೆ. ಅಷ್ಟೇ ಎಂದಿದ್ದಾರೆ.