ಎಲ್ಲರೂ ಸಂತೋಷದಿಂದಿರಬೇಕು ಎಂಬ ಸೂತ್ರವನ್ನೇ ಚಿತ್ರ ಮಾಡಿ ಗೆದ್ದ ರಾಜಕುಮಾರ ಚಿತ್ರತಂಡ, ಚಿತ್ರದ ಯಶಸ್ಸಿನಲ್ಲೂ ಅದೇ ಸೂತ್ರ ಅನುಸರಿಸುತ್ತಿದೆ. ರಾಜಕುಮಾರ ಚಿತ್ರದ ಶತದಿನೋತ್ಸವ ಸಮಾರಂಭ ಜುಲೈ 7ಕ್ಕೆ ನಡೆಯಲಿದೆ. ಅದರ ಜೊತೆಯಲ್ಲೇ ಇನ್ನೊಂದು ಸಿಹಿ ಸುದ್ದಿಯೂ ಇದೆ.
ಚಿತ್ರ ಬಾಕ್ಸಾಫೀಸ್ನಲ್ಲಿ ದಾಖಲೆ ಬರೆದಿದ್ದು ನಿಜ. ಹಾಗೆ ಚಿತ್ರದಿಂದ ಲಾಭಾಂಶವನ್ನೂ ಹಂಚಲು ನಿರ್ಧರಿಸಿದ್ದಾರೆ ನಿರ್ಮಾಪಕ ಕಾರ್ತಿಕ್ ಗೌಡ. ಚಿತ್ರದಲ್ಲಿ ನಟಿಸಿದ ಕಲಾವಿದರ, ದುಡಿದ ತಂತ್ರಜ್ಞರು, ಕಾರ್ಮಿಕರು..ಹೀಗೆ ಪ್ರತಿಯೊಬ್ಬರಿಗೂ ಚಿತ್ರದ ಲಾಭಾಂಶದಲ್ಲಿ ಪಾಲು ನೀಡಲು ಮುಂದಾಗಿದ್ದಾರೆ. ಈ ಮೂಲಕ ಕನ್ನಡ ಚಿತ್ರರಂದಲ್ಲಿ ಹೊಸ ಸತ್ ಸಂಪ್ರದಾಯದವೊಂದಕ್ಕೆ ಮುನ್ನುಡಿ ಬರೆಯುತ್ತಿದ್ದಾರೆ.
ಜುಲೈ 7ರಂದು ಪ್ಯಾಲೇಸ್ ಗ್ರೌಂಡ್ನಲ್ಲಿ ಬೃಹತ್ ಸಮಾರಂಭ ನಡೆಯಲಿದೆ. ಚಿತ್ರತಂಡದ ಸಂಭ್ರಮದಲ್ಲಿ ಚಿತ್ರರಂಗವೇ ಪಾಲ್ಗೊಳ್ಳುತ್ತಿದೆ. ವೇದಿಕೆಯಲ್ಲಿ ಚಿತ್ರಕ್ಕೆ ಬೆವರು ಸುರಿಸಿದ ತಂತ್ರಜ್ಞರನ್ನು ಸನ್ಮಾನಿಸುವ ಕಾರ್ಯಕ್ರಮವೂ ಇವೆ. ಆ ವಿಶೇಷ ಕಾರ್ಯಕ್ರಮಕ್ಕೆ ಕನ್ನಡ ಚಿತ್ರರಂಗದ ಗಣ್ಯಾತಿಗಣ್ಯರೆಲ್ಲ ಆಗಮಿಸಿ ಶುಭ ಹಾರೈಸುತ್ತಿದ್ದಾರೆ. ಡಾ. ರಾಜ್ ಕುಟುಂಬದ ಜೊತೆಗೆ ರವಿಚಂದ್ರನ್, ಸುದೀಪ್, ಉಪೇಂದ್ರ, ಯಶ್, ಗಣೇಶ್, ಜಗ್ಗೇಶ್ ಸೇರಿದಂತೆ, ಚಿತ್ರರಂಗಕ್ಕೆ ಚಿತ್ರರಂಗವೇ ಒಂದಾಗಿ ರಾಜಕುಮಾರನ ಈ ಗೆಲವನ್ನು ಸಂಭ್ರಮಿಸುತ್ತಿದೆ.