` kfcc, - chitraloka.com | Kannada Movie News, Reviews | Image

kfcc,

 • ಇಂದು ಪುನೀತ ನಮನ

  ಇಂದು ಪುನೀತ ನಮನ

  ಇಡೀ ಕರುನಾಡನ್ನು ಆಘಾತಕ್ಕೆ ತಳ್ಳಿದ ದುರಂತ ಸಾವು ಪುನೀತ್ ರಾಜ್‍ಕುಮಾರ್ ಅವರ ಅಕಾಲಿಕ ನಿಧನ. ಸಾವಿರಾರು ಅಭಿಮಾನಿಗಳು ಇಂದಿಗೂ ಆ ಶಾಕ್‍ನಿಂದ ಹೊರಬಂದಿಲ್ಲ. ಕುಟುಂಬದ ಪರಿಸ್ಥಿತಿಯೂ ಹಾಗೆಯೇ ಇದೆ. ಪುನೀತ್ ಅವರಿಗಾಗಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಇಂದು ಪುನೀತ್ ನಮನ ಕಾರ್ಯಕ್ರಮ ಆಯೋಜಿಸಿದೆ.

  ಬೆಂಗಳೂರಿನ ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ಪುನೀತ್ ನಮನ ಕಾರ್ಯಕ್ರಮ ನಡೆಯಲಿದೆ. ಕನ್ನಡ ಚಿತ್ರರಂಗದ ಸುಮಾರು 150 ಕಲಾವಿದರರು, ಪರಭಾಷೆಯ 40ಕ್ಕೂ ಹೆಚ್ಚು ಕಲಾವಿದರು ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ. ಕಮಲಹಾಸನ್ ಸೇರಿದಂತೆ ಕೆಲವು ನಟರು ವಿದೇಶದಲ್ಲಿರುವ ಕಾರಣ ಬರಲು ಸಾಧ್ಯವಾಗುತ್ತಿಲ್ಲ ಎಂದು ಸಂತಾಪ ತಿಳಿಸಿದ್ದಾರೆ.

  ಹಾಲಿ ಸಿಎಂ ಬೊಮ್ಮಾಯಿ, ಮಾಜಿ ಸಿಎಂಗಳಾದ ಯಡಿಯೂರಪ್ಪ, ಸಿದ್ದರಾಮಯ್ಯ, ಕುಮಾರಸ್ವಾಮಿ, ಇಡೀ ಸಚಿವ ಸಂಪುಟ, ಮಹಾರಾಜ ಯದುವೀರ್  ಕೂಡಾ ಬರುತ್ತಿದ್ದಾರೆ.

  ಕಾರ್ಯಕ್ರಮದಲ್ಲಿ ಪುನೀತ್ ಅವರಿಗಾಗಿ ನಾಗೇಂದ್ರ ಪ್ರಸಾದ್ ಹಾಡು ಬರೆದಿದ್ದು, ವಿಜಯಪ್ರಕಾಶ್, ಗುರುಕಿರಣ್ ಸೇರಿದಂತೆ ಹಲವು ಗಾಯಕರು ಗೀತ ನಮನ ಸಲ್ಲಿಸಲಿದ್ದಾರೆ. ಕಿಚ್ಚ ಸುದೀಪ್ ಕೂಡಾ ಹಾಡಿಗೆ ಧ್ವನಿ ನೀಡಿದ್ದಾರೆ.

  ಅಭಿಮಾನಿಗಳು ಅರಮನೆ ಮೈದಾನದ ಕಡೆ ಬರಬೇಡಿ. ಎಲ್ಲ ಚಾನೆಲ್ಲುಗಳಲ್ಲೂ ಲೈವ್ ಇರಲಿದೆ. ಇದು ಚಿತ್ರರಂಗದ ಕಾರ್ಯಕ್ರಮ. ಚಿತ್ರರಂಗದವರಿಗೆ ಮಾತ್ರವೇ ಪ್ರವೇಶ. ಅದರಲ್ಲೂ ಪಾಸ್ ಇದ್ದವರಿಗೆ ಮಾತ್ರ ಪ್ರವೇಶ.

 • ಈ ಬಾರಿಯಾದರೂ ಚಿತ್ರೋದ್ಯಮದ ಬೇಡಿಕೆ ಈಡೇರುತ್ತಾ..?

  ಈ ಬಾರಿಯಾದರೂ ಚಿತ್ರೋದ್ಯಮದ ಬೇಡಿಕೆ ಈಡೇರುತ್ತಾ..?

  ಚಿತ್ರರಂಗ ಉದ್ಯಮವೇನೋ ಹೌದು. ಆದರೆ, ಅದಕ್ಕೆ ಸರ್ಕಾರದಿಂದ ಉದ್ಯಮ ಎಂಬ ಮಾನ್ಯತೆ ಸಿಕ್ಕಿಲ್ಲ. ಹಾಗಂತ ಕಟ್ಟುವ ತೆರಿಗೆ ಇತ್ಯಾದಿಗಳಲ್ಲಿ ಯಾವ ವ್ಯತ್ಯಾಸವೂ ಇಲ್ಲ. ರಿಯಾಯಿತಿಯೂ ಇಲ್ಲ. ಆದರೆ, 2020ರಲ್ಲಿ ಶುರುವಾದ ಕೊರೊನಾದಿಂದಾಗಿ ಅತೀ ಹೆಚ್ಚು ನಷ್ಟಕ್ಕೊಳಗಾಗಿರುವುದು ಚಿತ್ರೋದ್ಯಮ. ನಡುವೆ 2 ತಿಂಗಳ ಕಾಲಾವಧಿ ಬಿಟ್ಟರೆ ಚಿತ್ರಮಂದಿರಗಳು ಬಾಗಿಲು ಮುಚ್ಚಿವೆ. ಆದರೆ, ಇಂಡಸ್ಟ್ರಿಯ ಬಾಗಿಲು ಹಾಕಿಸಿದ ಸರ್ಕಾರ ಕನಿಷ್ಠ ರಿಯಾಯಿತಿಗಳನ್ನೂ ನೀಡಿಲ್ಲ.

  ಈ ಬಾರಿಯೂ ಮತ್ತೊಮ್ಮೆ ಚಿತ್ರರಂಗ ಸರ್ಕಾರದ ಮುಂದೆ ಮನವಿ ಪತ್ರಗಳನ್ನಿಟ್ಟು ನಿಂತಿದೆ. ಅದರಲ್ಲೂ ಚಿತ್ರ ಮಂದಿರಗಳಿಗೆ ವಿಧಿಸಲಾಗುತ್ತಿರುವ ತೆರಿಗೆ, ವಿದ್ಯುತ್ ಬಿಲ್, ನೀರಿನ ಬಿಲ್‍ಗಳಲ್ಲಿ ರಿಯಾಯಿತಿ ಕೇಳುತ್ತಿದ್ದಾರೆ ಚಿತ್ರ ಪ್ರದರ್ಶಕರು.

  ಇನ್ನು ಚಿತ್ರರಂಗದ ಕಾರ್ಮಿಕರನ್ನು ಸಂಘಟಿತ ಕಾರ್ಮಿಕರ ವ್ಯಾಪ್ತಿಗೆ ಸೇರಿಸಬೇಕು ಹಾಗೂ ಚಿತ್ರೋದ್ಯಮವನ್ನು ಉದ್ಯಮ ಎಂದು ಪರಿಗಣಿಸಬೇಕು ಎನ್ನುವುದು ಮನವಿ.

  ಕಳೆದ ವರ್ಷದಿಂದ ಬೇಡಿಕೆ ಇಡುತ್ತಲೇ ಇದ್ದೇವೆ. ಆದರೆ ಸರ್ಕಾರದಿಂದ ಸಕಾರಾತ್ಮಕ ಸ್ಪಂದನೆ ಸಿಕ್ಕಿಲ್ಲ. ನೋಡೋಣ.. ಪರಿಶೀಲನೆ ಮಾಡುತ್ತಿದ್ದೇವೆ ಎಂದಷ್ಟೇ ಹೇಳುತ್ತಿದ್ದಾರೆ ಎನ್ನುವುದು ಪ್ರದರ್ಶಕರ ಸಂಘದ ಅಧ್ಯಕ್ಷ ಕೆ.ವಿ.ಚಂದ್ರಶೇಖರ್ ಮಾತು. ಏನ್ ಮಾಡುತ್ತೋ ಸರ್ಕಾರ..?

 • ಈ ವಾರವೂ ಹೊಸ ಸಿನಿಮಾ ಬಿಡುಗಡೆ ಇಲ್ಲ

  vishal, sa ra govindu

  ದಕ್ಷಿಣ ಭಾರತ ಚಿತ್ರರಂಗ ಹಾಗೂ ಯುಎಫ್‍ಒ & ಕ್ಯೂಬ್ ಸಂಸ್ಥೆಗಳ ನಡುವಿನ ಬಿಕ್ಕಟ್ಟು ಬಗೆಹರಿದಿಲ್ಲ. ಎರಡೂ ಸಂಸ್ಥೆಗಳ ವಿರುದ್ಧ ಕನ್ನಡ, ತಮಿಳು, ತೆಲುಗು ಹಾಗೂ ಮಲಯಾಳಂ ಚಿತ್ರರಂಗಗಳು ಒಗ್ಗಟ್ಟಾಗಿಯೇ ಹೋರಾಟ ಆರಂಭಿಸಿವೆ. ಬೇರೆ ರಾಜ್ಯಗಳಲ್ಲಿ ಹೊಸ ಚಿತ್ರಗಳ ಬಿಡುಗಡೆ ತಡೆಹಿಡಿದು 2 ವಾರ ಪೂರೈಸಿದೆ. ಕರ್ನಾಟಕದಲ್ಲಿ ಮೊದಲ ವಾರ. ಈ ವಾರ ಬಗೆಹರಿಯಬಹುದು ಎಂದುಕೊಂಡಿದ್ದವರಿಗೀಗ ನಿರಾಸೆ. ಯುಎಫ್‍ಒ ಮತ್ತು ಕ್ಯೂಬ್ ಸಂಸ್ಥೆಗಳು ಹಠಮಾರಿತನದ ಧೋರಣೆಯಿಂದ ಹಿಂದೆ ಸರಿಯುತ್ತಿಲ್ಲ. ಹೀಗಾಗಿ ಈ ವಾರವೂ ಯಾವುದೇ ಹೊಸ ಚಿತ್ರ ಬಿಡುಗಡೆ ಇಲ್ಲ.

  ಬೆಂಗಳೂರಿನ ಚಲನಚಿತ್ರ ವಾಣಿಜ್ಯ ಮಂಡಳಿ ಸಭೆಯಲ್ಲಿ ತಮಿಳು ನಿರ್ಮಾಪಕರ ಸಂಘದ ಅಧ್ಯಕ್ಷ ವಿಶಾಲ್, ಉಪಾಧ್ಯಕ್ಷ ಪ್ರಕಾಶ್ ರೈ, ಕನ್ನಡ ನಿರ್ಮಾಪಕರ ಸಂಘದ ಅಧ್ಯಕ್ಷ ಮುನಿರತ್ನ ಅವರ ಜೊತೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು ಸಭೆ ನಡೆಸಿದರು. ಸಭೆಯ ನಂತರ ಮಾತನಾಡಿದ ಸಾ.ರಾ.ಗೋವಿಂದು, ಈಗ ಪ್ರದರ್ಶನವಾಗುತ್ತಿರುವ ಚಿತ್ರಗಳಿಗೆ ಯಾವುದೇ ತೊಂದರೆ ಇಲ್ಲ. ಆದರೆ, ಹೊಸ ಚಿತ್ರಗಳ ಬಿಡುಗಡೆ ಇಲ್ಲ ಎಂದು ಸ್ಪಷ್ಟಪಡಿಸಿದರು.

  ತಮಿಳುನಾಡಿನಲ್ಲಿ ಸಿನಿಮಾ ಕುರಿತ ಎಲ್ಲ ಚಟುವಟಿಕೆಯನ್ನೂ ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ. ಆದರೆ, ಕರ್ನಾಟಕದಲ್ಲಿ ಸಿನಿಮಾ ಬಿಡಗಡೆ ಹೊರತುಪಡಿಸಿ ಉಳಿದ ಕೆಲಸಗಳು ನಡೆಯಲಿವೆ. ಯುಎಫ್‍ಓ ಮತ್ತು ಕ್ಯೂಬ್ ಸಂಸ್ಥೆಗಳ ಜೊತೆಗಿನ ಮಾತುಕತೆ ಮುರಿದುಬಿದ್ದಿದ್ದು, ಪರ್ಯಾಯ ಸಂಸ್ಥೆಯನ್ನೇ ಹುಟ್ಟಿಹಾಕಲು ಚಿಂತನೆ ನಡೆದಿದೆ.

 • ಕನ್ನಡ ಚಿತ್ರ ಪ್ರದರ್ಶನ ರದ್ದಿಲ್ಲ - ಫಿಲಂ ಚೇಂಬರ್

  film screening will continue as it is

  ಕೇರಳದಲ್ಲಿ ಕೊರೋನಾ ಎಫೆಕ್ಟಿನಿಂದಾಗಿ ಚಿತ್ರ ಪ್ರದರ್ಶನಗಳನ್ನೇ ಬಂದ್ ಮಾಡಲಾಗಿದೆ. ಇನ್ನೂ ಹಲವು ರಾಜ್ಯಗಳಲ್ಲಿ ಸಿನಿಮಾ ಶೋ ರದ್ದು ಮಾಡಬೇಕೇ ಬೇಡವೇ ಎಂಬ ಚರ್ಚೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಸಭೆ ಸೇರಿದ್ದ ಚಲನಚಿತ್ರ ವಾಣಿಜ್ಯ ಮಂಡಳಿ, ಚಿತ್ರ ಪ್ರದರ್ಶನ ರದ್ದು ಮಾಡದೇ ಇರಲು ನಿರ್ಧರಿಸಿದೆ.

  ಚಿತ್ರ ಪ್ರದರ್ಶನವನ್ನೇ ರದ್ದು ಮಾಡುವಂತಹ ಭೀಕರ ಪರಿಸ್ಥಿತಿ ಇನ್ನೂ ಬಂದಿಲ್ಲ. ಹೀಗಾಗಿ ಚಿತ್ರ ಪ್ರದರ್ಶನ ರದ್ದು ಮಾಡುವ ಯೋಚನೆ ಇಲ್ಲ. ಹಾಗೇನಾದರೂ ಸರ್ಕಾರವೇ ಸೂಚನೆ ನೀಡಿದರೆ ಖಂಡಿತಾ ಪಾಲಿಸುತ್ತೇವೆ ಎಂದಿದ್ದಾರೆ ಫಿಲಂ ಚೇಂಬರ್ ಅಧ್ಯಕ್ಷ ಜೈರಾಜ್.

  ಕೊರೋನಾ ಎಫೆಕ್ಟಿನಿಂದಾಗಿ ಚಿತ್ರ ಮಂದಿರಕ್ಕೆ ಬರುವವರ ಸಂಖ್ಯೆ ಶೇ.10ರಷ್ಟು ಕಡಿಮೆಯಾಗಿರಬಹುದೇನೋ.. ಖಚಿತ ಮಾಹಿತಿ ಇಲ್ಲ. ಮಾಲ್‍ಗಳಲ್ಲಿ ಶೇ.25ರಷ್ಟು ಹೊಡೆತ ಬಿದ್ದಿದೆ. ಟೆಕ್ಕಿಗಳು, ಶ್ರೀಮಂತರು ಹೆದರಿದ್ದಾರೆ, ಅಷ್ಟೆ. ಉಳಿದಂತೆ ಜಿಲ್ಲೆಗಳಲ್ಲಿ ಸಮಸ್ಯೆ ಇಲ್ಲ ಎಂದಿದ್ದಾರೆ ಚಿತ್ರ ಮಂದಿರ ಮಾಲೀಕರೂ ಆದ ಚಂದ್ರಶೇಖರ್.

 • ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ 75

  kfcc celebrates 75th anniversary

  ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಯಶಸ್ವಿಯಾಗಿ 75 ವರ್ಷ ಪೂರೈಸಿದೆ. 1944ರಲ್ಲಿ ಶುರುವಾದ ಮಂಡಳಿ 75ನೇ ವಸಂತದ ಸಂಭ್ರಮದಲ್ಲಿದೆ. ಈ ಸಂಭ್ರಮಕ್ಕಾಗಿಯೇ ವಿಶೇಷ ಲಾಂಛನವನ್ನು ರೂಪಿಸಿ ಬಿಡುಗಡೆ ಮಾಡಿದೆ ಫಿಲಂ ಚೇಂಬರ್. ಈ ಕಾರ್ಯಕ್ರಮಕ್ಕೆ ಅತಿಥಿಯಾಗಿದ್ದವರು ಗೃಹ ಸಚಿವ ಬಸವರಾಜ ಬೊಮ್ಮಾಯಿ.

  ಚಿತ್ರರಂಗದ ಸಾಧನೆಯನ್ನು ಪ್ರಶಂಸಿಸುತ್ತಲೇ ಮಲ್ಟಿಪ್ಲೆಕ್ಸ್‍ನವರು ಮಾಡಿದ ದ್ರೋಹವನ್ನು ತೆರೆದಿಟ್ಟರು ಬಸವರಾಜ ಬೊಮ್ಮಾಯಿ. ಕನ್ನಡ ಚಿತ್ರಗಳಿಗೆ ಆದ್ಯತೆ ಎಂದು ಹೇಳಿ ಈಗ ಕನ್ನಡವನ್ನು ಕಡೆಗಣಿಸುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕುತ್ತೇವೆ ಎಂದು ಭರವಸೆ ಕೊಟ್ಟರು.

  1983ರಲ್ಲಿಯೇ ವಿ.ರವಿಚಂದ್ರನ್ ಚಿತ್ರನಗರಿಯ ಕನಸು ಕಂಡಿದ್ದನ್ನು ಪ್ರಸ್ತಾಪಿಸಿದ ಸಾ.ರಾ.ಗೋವಿಂದು, ಚಿತ್ರನಗರಿಯ ಕನಸು ನನಸಾಗಲಿ ಎಂದು ಹಾರೈಸಿದರು. ರವಿಚಂದ್ರನ್, ಜಗ್ಗೇಶ್, ಕುಮಾರ್ ಬಂಗಾರಪ್ಪ, ಉಪೇಂದ್ರ ಸೇರಿದಂತೆ ಚಿತ್ರರಂಗದ ಕಲಾವಿದರು, ತಂತ್ರಜ್ಞರು ಸಮಾರಂಭದ ಕಳೆ ಹೆಚ್ಚಿಸಿದ್ದರು.

  ಫಿಲಂ ಚೇಂಬರ್ ಅಧ್ಯಕ್ಷ ಜೈರಾಜ್, ಮಾಜಿ ಅಧ್ಯಕ್ಷರಾದ ಸಾ.ರಾ.ಗೋವಿಂದು,

  ಜಯಮಾಲಾ, ಕೆ.ವಿ.ಚಂದ್ರಶೇಖರ್, ಥಾಮಸ್, ಚಿನ್ನೇಗೌಡ, ಉಮೇಶ್ ಬಣಕಾರ್, ಎಂ.ಎನ್.ಸುರೇಶ್ ಸೇರಿದಂತೆ ವಾಣಿಜ್ಯ ಮಂಡಳಿ, ನಿರ್ಮಾಪಕರ ಸಂಘ, ನಿರ್ದೇಶಕರ ಸಂಘದ ಗಣ್ಯರು ಸಮಾರಂಭದಲ್ಲಿದ್ದರು.

 • ಕೊಡಗು ಸಂತ್ರಸ್ತರಿಗೆ ಫಿಲಂ ಚೇಂಬರ್‍ನಿಂದ 20 ಲಕ್ಷ

  kfcc hands over flood relief cheque

  ಧಾರಾಕಾರ ಮಳೆ, ಪ್ರವಾಹ, ಭೂಕುಸಿತಕ್ಕೆ ಕೊಚ್ಚಿ ಹೋಗಿರುವ ಕೊಡಗು ಜಿಲ್ಲೆಯ ಜನರಿಗೆ ನೆರವಿನ ಮಹಾಪೂರವೇ ಹರಿದುಬರುತ್ತಿದೆ. ಕನ್ನಡ ಚಿತ್ರೋದ್ಯಮವೂ ಸ್ಪಂದಿಸಿದೆ. ಮುಖ್ಯಮಂತ್ರಿ ಪರಿಹಾರ ನಿಧಿಗೆ ಕರ್ನಾಟಕ ಚಲನಚಿತ್ರ  ವಾಣಿಜ್ಯ ಮಂಡಳಿ, 20 ಲಕ್ಷ ರೂ. ದೇಣಿಗೆ ನೀಡಿದೆ. ಕೇರಳ ಸಂತ್ರಸ್ತರಿಗೆ 5 ಲಕ್ಷ ರೂ. ದೇಣಿಗೆ ನೀಡಿದೆ.

  ಇದು ಆರಂಭವಷ್ಟೇ. ಮುಂದಿನ ದಿನಗಳಲ್ಲಿ ಕೊಡಗು ಜನರಿಗೆ ಯಾವ ರೀತಿ ನೆರವಾಗಬಹುದು ಎಂಬ ನಿಟ್ಟಿನಲ್ಲಿ ಚರ್ಚಿಸಿ, ಸೂಕ್ತ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಚೇಂಬರ್ ಅಧ್ಯಕ್ಷ ಚಿನ್ನೇಗೌಡರು ತಿಳಿಸಿದ್ದಾರೆ. ಸರ್ಕಾರ ಕೈಗೊಳ್ಳುವ ಪರಿಹಾರ ಕಾರ್ಯಗಳಲ್ಲೂ ಚಿತ್ರೋದ್ಯಮ ಕೈ ಜೋಡಿಸಲಿದೆ ಎಂದು ಚಿನ್ನೇಗೌಡ ತಿಳಿಸಿದ್ದಾರೆ.

 • ಚಿತ್ರಮಂದಿರ ರೀ-ಓಪನ್`ಗೆ ಫಿಲ್ಮ್ ಚೇಂಬರ್ ಮನವಿ

  ಚಿತ್ರಮಂದಿರ ರೀ-ಓಪನ್`ಗೆ ಫಿಲ್ಮ್ ಚೇಂಬರ್ ಮನವಿ

  ಕೇರಳ, ಆಂಧ್ರ ಪ್ರದೇಶ, ತೆಲಂಗಾಣದಲ್ಲಿ ಈಗಾಗಲೇ ಚಿತ್ರಮಂದಿರಗಳ ರೀ-ಓಪನ್‍ಗೆ ಅವಕಾಶ ಸಿಕ್ಕಿದೆ. ಆದರೆ ಕರ್ನಾಟಕದಲ್ಲಿ ಮಾತ್ರ ಇಲ್ಲ. ಅನ್‍ಲಾಕ್ 3.0ನಲ್ಲೂ ಅನುಮತಿ ಸಿಗಲಿಲ್ಲ. ಈಗ ಕೊರೊನಾದಿಂದಾಗಿ ಬಾಗಿಲು ಮುಚ್ಚಿರುವುದು ಥಿಯೇಟರ್`ಗಳು ಮಾತ್ರ.

  ಚಿತ್ರಮಂದಿರಗಳನ್ನು ತೆರೆಯಲು ಅವಕಾಶ ನೀಡಿ ಎಂದು ಕರ್ನಾಟಕ ಫಿಲ್ಮ್ ಚೇಂಬರ್ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದೆ. ಜುಲೈ ತಿಂಗಳ ಕಾರ್ಯಕಾರಿಣಿ ಸಭೆಯಲ್ಲಿ ಈ ಕುರಿತು ಚೇಂಬರ್ ನಿರ್ಣಯ ತೆಗೆದುಕೊಂಡಿದೆ.

  ರಾಜ್ಯ ಸರ್ಕಾರ ಚಿತ್ರಮಂದಿರಗಳನ್ನು ತೆರೆಯಲು ಅವಕಾಶ ಕೊಡಬೇಕು. ಚಿತ್ರಮಂದಿರಗಳ ಕರೆಂಟ್ ಬಿಲ್ ಮತ್ತು ಟ್ಯಾಕ್ಸ್ ಮನ್ನಾ ಮಾಡಬೇಕು ಎನ್ನುವ ಬೇಡಿಕೆಯನ್ನು ಪ್ರದರ್ಶಕರ ವಲಯ ಮುಂದಿಟ್ಟಿದೆ. ಪ್ರದರ್ಶಕರ ಬೇಡಿಕೆ ನ್ಯಾಯಯುತವಾಗಿದ್ದರೂ, ನ್ಯಾಯಯುತ ಬೇಡಿಕೆಗಳನ್ನು ತಿರುಗಿಯೂ ನೋಡದ ಸರ್ಕಾರ ಇದರತ್ತಲೂ ಗಮನ ಹರಿಸುವ ಸಾಧ್ಯತೆ ಇಲ್ಲ. ಹೀಗಾಗಿಯೇ ಕೊರೊನಾ ಮೊದಲನೇ ಅಲೆ ಮುಗಿದಾಗ  150ಕ್ಕೂ ಹೆಚ್ಚು ಚಿತ್ರಮಂದಿರಗಳು ಓಪನ್ ಆಗಲೇ ಇಲ್ಲ. 2ನೇ ಅಲೆ ಮುಗಿದಾಗ ಅದೆಷ್ಟು ಟಾಕೀಸ್ ಬಾಗಿಲು ಮುಚ್ಚುತ್ತವೋ ದೇವರೇ ಬಲ್ಲ.

  50% ಅವಕಾಶ ಕೊಟ್ಟರೂ ನಾವು ಚಿತ್ರಮಂದಿರ ತೆರೆಯಲು ಸಿದ್ಧರಿದ್ದೇವೆ. ಆದರೆ ಸಿನಿಮಾದವರೇ ಮನಸು ಮಾಡೋದು ಕಷ್ಟ. 100% ಅವಕಾಶ ಸಿಗುವವರೆಗೂ ಅವರೂ ಧೈರ್ಯ ಮಾಡಲ್ಲ. ಸ್ಟಾರ್ ಸಿನಿಮಾ ರಿಲೀಸ್ ಮಾಡೋಕೆ ಪ್ಲಾನ್ ಮಾಡಬೇಕಿದೆ ಎಂದಿದ್ದಾರೆ ಪ್ರದರ್ಶಕರ ಸಂಘದ ಅಧ್ಯಕ್ಷ ಕೆ.ವಿ.ಚಂದ್ರಶೇಖರ್.

 • ಚಿತ್ರರಂಗದ ಒಗ್ಗಟ್ಟಿಗೆ ಮಣಿದ ಸರ್ಕಾರ : ಥಿಯೇಟರ್ 100% ಓಪನ್ - Editorial

  ಚಿತ್ರರಂಗದ ಒಗ್ಗಟ್ಟಿಗೆ ಮಣಿದ ಸರ್ಕಾರ : ಥಿಯೇಟರ್ 100% ಓಪನ್

  ಇದು ಚಿತ್ರರಂಗದ ಒಗ್ಗಟ್ಟಿನ ಗೆಲುವು. ಬಹುಶಃ ಇತ್ತೀಚೆಗೆ ಯಾವುದೇ ವಿಷಯಕ್ಕೆ ಚಿತ್ರರಂಗ ಈ ಮಟ್ಟಿಗೆ ಒಗ್ಗಟ್ಟಿನ ಪ್ರದರ್ಶನ ಮಾಡಿರಲೇ ಇಲ್ಲ. ಒಗ್ಗಟ್ಟಿನಲ್ಲಿ ಬಲವಿದೆ ಅನ್ನೋದನ್ನು ಸಾಬೀತು ಮಾಡಿದ ಗೆಲುವು ಇದು.

  ಮಾರುಕಟ್ಟೆ ಓಪನ್ ಇದೆ.. ಬಸ್ ರಶ್ ಇದೆ. ದೇವಸ್ಥಾನ, ಪ್ರವಾಸಿ ಸ್ಥಳ ಎಲ್ಲವೂ ಮುಕ್ತವಾಗಿವೆ. ಮಾಲ್ಗಳಲ್ಲಿ ನಿರ್ಬಂಧ ಇಲ್ಲ. ನಮಗೆ ಮಾತ್ರ ಯಾಕೆ ಈ ನಿರ್ಬಂಧ ಎಂದು ಮೊದಲು ಟ್ವೀಟ್ ಮಾಡಿದ್ದು  ಧ್ರುವ ಸರ್ಜಾ. ಅವರ ಪೊಗರು ಫೆಬ್ರವರಿ 19ಕ್ಕೆ ರಿಲೀಸ್ ಆಗುತ್ತಿದೆ. ಈ ವರ್ಷದ ಮೊದಲ ಸ್ಟಾರ್ ಸಿನಿಮಾ ಪೊಗರು. ಆದರೆ, ಧ್ರುವ ಸರ್ಜಾ ಟ್ವೀಟ್ ಮಾಡಿದ ಬೆನ್ನಲ್ಲೇ ಚಿತ್ರರಂಗದ ಎಲ್ಲರೂ ಒಟ್ಟುಗೂಡಿ ಬಂದಿದ್ದು ಈ ಬಾರಿಯ ವಿಶೇಷ.

  ಅಷ್ಟೇ ಅಲ್ಲ, ಚಿತ್ರರಂಗದ ಸಾಂಸ್ಥಿಕ ಶಕ್ತಿಯೂ ಆಗಿರುವ ಫಿಲಂ ಚೇಂಬರ್ ಚಿತ್ರರಂಗದ ಒಕ್ಕೊರಲ ನಾಯಕರೂ ಆಗಿರುವ ಶಿವರಾಜ್ ಕುಮಾರ್ ನೇತೃತ್ವದಲ್ಲಿ ಸರ್ಕಾರದ ಎದುರು ಪ್ರಬಲವಾಗಿ ವಾದ ಮಂಡಿಸಿ ಗೆದ್ದಿದ್ದು ಈ ಬಾರಿಯ ಚಿತ್ರರಂಗದ ಒಗ್ಗಟ್ಟು.

  ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯ ಸಚಿವ ಎರಡೂ ಆಗಿರುವ ಡಿ.ಸುಧಾಕರ್, ಸಿಎಂ ಯಡಿಯೂರಪ್ಪ ಸೂಚನೆ ಮೇರೆಗೆ ಸಭೆ ನಡೆಸಿ ಚಿತ್ರರಂಗಕ್ಕೆ ಅನುಕೂಲವಾಗುವ ರೀತಿಯ ತೀರ್ಮಾನ ಹೊರಡಿಸಿದರು. ಈ ಹೋರಾಟದಲ್ಲಿ ಚಿತ್ರರಂಗವನ್ನು ಸರ್ಕಾರದಲ್ಲಿ ಪ್ರತಿನಿಧಿಸುತ್ತಿರುವ ಸಚಿವ ಬಿ.ಸಿ.ಪಾಟೀಲ್ ಕೂಡಾ ಚಿತ್ರರಂಗದೊಟ್ಟಿಗೇ ಇದ್ದರು.

  ಆ ಎಲ್ಲದರ ಪ್ರತಿಫಲ ಥಿಯೇಟರ್ 100% ಓಪನ್ ಮಾಡಲು ಆದೇಶ ಸಿಕ್ಕಿದ್ದು. ಗುರುವಾರವೇ ಆದೇಶ ಹೊರಬೀಳುವ ಸಾಧ್ಯತೆ ಇದೆ. ಶುಕ್ರವಾರದಿಂದ ಥಿಯೇಟರ್ 100% ಓಪನ್ ಆಗೋಕೆ ಯಾವುದೇ ಸಮಸ್ಯೆಗಳಿರೋದಿಲ್ಲ. ಅಫ್ಕೋರ್ಸ್.. ಥಿಯೇಟರ್ ಮಾಲೀಕರು ಮತ್ತು ಪ್ರೇಕ್ಷಕರು ಕಡ್ಡಾಯವಾಗಿ ಕೆಲವು ಕಠಿಣ ಸೂತ್ರಗಳನ್ನು ಪಾಲಿಸಲೇಬೇಕಿದೆ. ಪಾಲಿಸಿದರೆ ಆಯಿತು.

  ಥಿಯೇಟರ್ 100% ಓಪನ್ ಆಗಿದ್ದಕ್ಕಿಂತಲೂ ಹೆಚ್ಚಿನ ದೊಡ್ಡ ಖುಷಿ, ಚಿತ್ರರಂಗದ ಒಗ್ಗಟ್ಟು. ಈ ಒಗ್ಗಟ್ಟು ಹೀಗೆಯೇ ಇರಲಿ.

  ಕೆ.ಎಂ.ವೀರೇಶ್

  ಚಿತ್ರಲೋಕ ಸಂಪಾದಕರು

 • ಚಿತ್ರರಂಗದವರಿಗೆ ವ್ಯಾಕ್ಸಿನ್ : ಚೇಂಬರ್ ಮನವಿಗೆ ಧ್ವನಿಗೂಡಿಸಿದ ಮಾಳವಿಕಾ ಅವಿನಾಶ್

  ಚಿತ್ರರಂಗದವರಿಗೆ ವ್ಯಾಕ್ಸಿನ್ : ಚೇಂಬರ್ ಮನವಿಗೆ ಧ್ವನಿಗೂಡಿಸಿದ ಮಾಳವಿಕಾ ಅವಿನಾಶ್

  ದೇಶದೆಲ್ಲೆಡೆ ಕೊರೊನಾ ಏರುಗತಿಯಲ್ಲಿರುವಾಗಲೇ ವ್ಯಾಕ್ಸಿನ್ ಅಭಿಯಾನವೂ ದೊಡ್ಡ ಮಟ್ಟದಲ್ಲಿ ನಡೆಯುತ್ತಿದೆ. ಆದರೆ, ಹಲವೆಡೆ ಸ್ಟಾಕ್ ಕೊರತೆ. ಹೀಗಾಗಿ ಚಿತ್ರರಂಗದವರಿಗೆ ವ್ಯಾಕ್ಸಿನ್ ನೀಡುವಂತೆ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಆರೋಗ್ಯ ಸಚಿವ ಡಾ.ಸುಧಾಕರ್ ಅವರಿಗೆ ಮನವಿ ಮಾಡಿದೆ.

  ಫಿಲಂ ಚೇಂಬರ್ ಉಪಾಧ್ಯಕ್ಷ ನಾಗಣ್ಣ, ಮಾಜಿ ಅಧ್ಯಕ್ಷ  ಸಾ.ರಾ.ಗೋವಿಂದು, ಖಜಾಂಚಿ ವೆಂಕಟೇಶ್ ಮತ್ತು ಚಿತ್ರಲೋಕ ವೀರೇಶ್ ಸುಧಾಕರ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ.

  ಕೊರೊನಾದಿಂದಾಗಿ ಚಿತ್ರರಂಗದ ಹಲವರು ಮೃತಪಟ್ಟಿದ್ದಾರೆ. ಇದರ ನಡುವೆ ಚಿತ್ರರಂಗದ ಕಾರ್ಮಿಕರು, ಕಲಾವಿದರು, ತಂತ್ರಜ್ಞರು ಎಲ್ಲರಿಗೂ ವ್ಯಾಕ್ಸಿನ್ ಒದಗಿಸುವಂತೆ ಮನವಿ ಸಲ್ಲಿಸಲಾಗಿದೆ.

  ಚೇಂಬರ್‍ನ ಮನವಿ ಜೊತೆ ನಟಿ ಹಾಗೂ ಬಿಜೆಪಿ ನಾಯಕಿಯೂ ಆಗಿರುವ ಮಾಳವಿಕಾ ಅವಿನಾಶ್ ಇದು ತುರ್ತು ಅಗತ್ಯವಾಗಿದ್ದು ಚಿತ್ರರಂಗದ ಎಲ್ಲರಿಗೂ ವ್ಯಾಕ್ಸಿನ್ ಒದಗಿಸಿ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮನವಿ ಮಾಡಿಕೊಂಡಿದ್ದಾರೆ.

 • ಡೆಡ್ಲಿ ಕೊರೋನಾ ; ಸಿನಿಮಾ ಟೈಟಲ್ ಫಿಕ್ಸ್

  corona title registered in film chamber

  ಇಡೀ ಜಗತ್ತನ್ನೇ ಕೊರೋನಾ ವೈರಸ್ ತಲ್ಲಣಗೊಳಿಸುತ್ತಿದ್ದರೆ, ಕನ್ನಡದಲ್ಲಿ ಅದೇ ಹೆಸರಿನ ಸಿನಿಮಾವೊಂದು ಸೆಟ್ಟೇರಲು ರೆಡಿಯಾಗಿದೆ. ನಿರ್ಮಾಪಕ ಉಮೇಶ್ ಬಣಕಾರ್ `ಕೊರೋನಾ' ಎಂಬ ಟೈಟಲ್‍ನ್ನು ಫಿಲಂ ಚೇಂಬರ್‍ಗೆ ಸಲ್ಲಿಸಿದ್ದಾರೆ. ಇಲ್ಲಷ್ಟೇ ಎಂದುಕೊಳ್ಳಬೇಡಿ, ಮುಂಬೈ ಫಿಲಂ ಚೇಂಬರ್‍ಗೆ ಡೆಡ್ಲಿ ಕೊರೋನಾ ಎಂಬ ಟೈಟಲ್‍ಗೆ ಮನವಿ ಬಂದಿದೆ.

  ಬಿಸಿರಕ್ತ ಖ್ಯಾತಿಯ ಶಿವಕುಮಾರ್, ಈ ಚಿತ್ರದ ನಿರ್ದೇಶಕ ಎಂದು ಮಾಹಿತಿ ನೀಡಿದ್ದಾರೆ ಉಮೇಶ್ ಬಣಕಾರ್. ಅಂದಹಾಗೆ ಎರಡೂ ಕಡೆ ಚಿತ್ರದ ಟೈಟಲ್‍ಗೆ ಅರ್ಜಿ ಹಾಕಿರೋದು ಉಮೇಶ್ ಬಣಕಾರ್ ಅವರೇ. ಇನ್ನು 15 ದಿನಗಳಲ್ಲಿ ಚಿತ್ರದ ತಾಂತ್ರಿಕ ವರ್ಗದ ಆಯ್ಕೆ, ಕಲಾವಿದರ ಆಯ್ಕೆ ಕೆಲಸ ಮುಗಿಯಲಿದ್ದು, ಚಿತ್ರ ಶುರುವಾಗಲಿದೆಯಂತೆ

 • ನ.16ಕ್ಕೆ ಅರಮನೆ ಮೈದಾನದಲ್ಲಿ ಪುನೀತ ನಮನ

  ನ.16ಕ್ಕೆ ಅರಮನೆ ಮೈದಾನದಲ್ಲಿ ಪುನೀತ ನಮನ

  ಪುನೀತ್ ರಾಜ್‍ಕುಮಾರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲು ಚಲನಚಿತ್ರ ವಾಣಿಜ್ಯ ಮಂಡಳಿ ಪುನೀತ ನಮನ ಕಾರ್ಯಕ್ರಮ ಹಮ್ಮಿಕೊಂಡಿದೆ. ಅರಮನೆ ಮೈದಾನದಲ್ಲಿ ನವೆಂಬರ್ 16ರಂದು ಕಾರ್ಯಕ್ರಮ ನಡೆಯಲಿದೆ. ಮುಖ್ಯ ಅತಿಥಿಯಾಗಿ ಸಿಎಂ ಬಸವರಾಜ ಬೊಮ್ಮಾಯಿ, ವಿಶೇಷ ಆಹ್ವಾನಿತರಾಗಿ ಮಾಜಿ ಸಿಎಂಗಳಾದ ಬಿ.ಎಸ್.ಯಡಿಯೂರಪ್ಪ, ಹೆಚ್.ಡಿ.ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ಭಾಗವಹಿಸಲಿದ್ದಾರೆ.

  ಮುಖ್ಯಮಂತ್ರಿ ಬೊಮ್ಮಾಯಿಯವರನ್ನು ಚೇಂಬರ್ ಪರವಾಗಿ ಮಾಜಿ ಅಧ್ಯಕ್ಷ ಸಾ.ರಾ.ಗೋವಿಂದು, ಎನ್.ಎಂ.ಸುರೇಶ್, ಎ.ಗಣೇಶ್ ಆಹ್ವಾನಿಸಿದರು.

  ನ.16ರಂದು ದಕ್ಷಿಣ ಭಾರತ ಚಿತ್ರರಂಗದ ಗಣ್ಯಾತಿಗಣ್ಯರು ಭಾಗವಹಿಸುತ್ತಿದ್ದಾರೆ. ಗುರುಕಿರಣ್ ಅವರು ಸಂಗೀತ ನಮನ ಸಲ್ಲಿಸಲಿದ್ದಾರೆ. ಡಾ.ವಿ.ನಾಗೇಂದ್ರ ಪ್ರಸಾದ್ ಪುನೀತ್ ಅವರಿಗಾಗಿ ಬರೆದಿರುವ ಹಾಡನ್ನು ಬಿಡುಗಡೆ ಮಾಡಲಿದ್ದಾರೆ.

 • ನೆರೆ ಪರಿಹಾರ ನಿಧಿಗೆ ಫಿಲಂ ಚೇಂಬರ್ 25 ಲಕ್ಷ ರೂ.

  kfcc president jairaj image

  ಇಡೀ ರಾಜ್ಯವನ್ನು ನಡುಗಿಸಿರುವ, ಕಂಡು ಕೇಳರಿಯದ ಪ್ರವಾಹಕ್ಕೆ ಹಲವೆಡೆಇಯಿಂದ ಪರಿಹಾರ ಧನ ಹರಿದು ಬರುತ್ತಿದೆ. ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಸಿಎಂ ಪರಿಹಾರ ನಿಧಿಗೆ 25 ಲಕ್ಷ ರೂ. ನೀಡಲು ತೀರ್ಮಾನಿಸಿದೆ. ಫಿಲಂ ಚೇಂಬರ್ ಅಧ್ಯಕ್ಷ ಜೈರಾಜ್ ನೇತೃತ್ವದಲ್ಲಿ ನಡೆದ ಪದಾಧಿಕಾರಿಗಳ ಸಭೆಯಲ್ಲಿ ಈ ನಿರ್ಣಯ ತೆಗೆದುಕೊಳ್ಳಲಾಗಿದೆ.

  ರಾಜ್ಯದ ಅದರಲ್ಲೂ ವಿಶೇಷವಾಗಿ ಉ.ಕರ್ನಾಟಕದ ಜನರು ಪ್ರವಾಹದಿಂದ ನಲುಗಿರುವುದು ನೋವು ತಂದಿದೆ. ಅವರ ನೆರವಿಗೆ ನಿಲ್ಲುವುದು ನಮ್ಮ ಕರ್ತವ್ಯ ಎಂದಿದ್ದಾರೆ ಜೈರಾಜ್. ಶೀಘ್ರದಲ್ಲೇ ಸಿಎಂ ಯಡಿಯೂರಪ್ಪರನ್ನು ಭೇಟಿಯಾಗಿ ಚೆಕ್ ನೀಡುತ್ತೇವೆ ಎಂದು ತಿಳಿಸಿದ್ದಾರೆ.

 • ಫಿಲಂ ಚೇಂಬರ್ ಚುನಾವಣೆಗೆ ಸಾ.ರಾ.ಗೋವಿಂದು ತಂಡ ನಾಮಪತ್ರ ಸಲ್ಲಿಕೆ

  ಫಿಲಂ ಚೇಂಬರ್ ಚುನಾವಣೆಗೆ ಸಾ.ರಾ.ಗೋವಿಂದು ತಂಡ ನಾಮಪತ್ರ ಸಲ್ಲಿಕೆ

  ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಮೇ 28ರಂದು ಚುನಾವಣೆ ನಡೆಯುತ್ತಿದೆ. ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಶುರುವಾಗಿದ್ದು, ಇಂದು ಹಿರಿಯ ನಿರ್ಮಾಪಕ, ಹೋರಾಟಗಾರ ಸಾ.ರಾ.ಗೋವಿಂದು ವಾಣಿಜ್ಯ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದಾರೆ.

  ಅಧ್ಯಕ್ಷನಾಗಿದ್ದಾಗ ನಾನು ಮಾಡಿದ ಕೆಲಸ ಎಲ್ಲರಿಗೂ ಗೊತ್ತಿದೆ. ಸ್ನೇಹಿತರ ಒತ್ತಾಯದ ಮೇರೆಗೆ ಚುನಾವಣೆಗೆ ನಿಂತಿದ್ದೇನೆ. ಚುನಾವಣೆಯನ್ನು ಸ್ಪರ್ಧಾತ್ಮಕವಾಗಿ ತೆಗೆದುಕೊಳ್ಳೋಣ. ಗೆದ್ದವರು ಕೆಲಸ ಮಾಡೋಣ. ಸೋತವರು ಗೆದ್ದವರಿಗೆ ಬೆನ್ನೆಲುಬಾಗಿ ನಿಲ್ಲೋಣ ಎಂಬ ಕ್ರೀಡಾ ಮನೋಭಾವ ಪ್ರದರ್ಶಿಸಿದರು.

  ಸಾ.ರಾ.ಗೋವಿಂದು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿ ನಾಮಪತ್ರ ಸಲ್ಲಿಸಿದ್ದರೆ, ಅವರ ತಂಡದಲ್ಲಿರುವ ಚಿತ್ರಲೋಕ ವೀರೇಶ್ ನಿರ್ಮಾಪಕರ ವಲಯದ ಗೌರವ ಕಾರ್ಯದರ್ಶಿ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದಾರೆ. ಕರಿಸುಬ್ಬು (ವಿ.ಸುಬ್ರಮಣಿ)ನಿರ್ಮಾಪಕರ ವಲಯದ ಉಪಾಧ್ಯಕ್ಷ ಸ್ಥಾನಕ್ಕೆ ಉಮೇದುವಾರಿಕೆ ಸಲ್ಲಿಸಿದ್ದಾರೆ. ವಿತರಕರ ವಲಯದ ಉಪಾಧ್ಯಕ್ಷ ಸ್ಥಾನಕ್ಕೆ ಪಿ.ಎಸ್.ಜ್ಞಾನೇಶ್ವರ ಐತಾಳ್, ಪ್ರದರ್ಶಕರ ಉಪಾಧ್ಯಕ್ಷ ಸ್ಥಾನಕ್ಕೆ ಜಿ.ಪಿ.ಕುಮಾರ್ ನಾಮಪತ್ರ ಸಲ್ಲಿಸಿದ್ದಾರೆ.

  ಕೆ.ಸಿ.ಎನ್. ಕುಮಾರ್ (ಎಂ.ಎನ್.ಕುಮಾರ್) ವಿತರಕರ ವಲಯದ ಗೌರವ ಕಾರ್ಯದರ್ಶಿ ಸ್ಥಾನಕ್ಕೆ, ಪ್ರದರ್ಶಕರ ವಲಯದ ಗೌರವ ಕಾರ್ಯದರ್ಶಿ ಸ್ಥಾನಕ್ಕೆ ಎಲ್.ಸಿ.ಕುಶಾಲ್ ಹಾಗೂ ಗೌರವ ಖಜಾಂಚಿ ಸ್ಥಾನಕ್ಕೆ ಬಿ.ಕೆ.ಜಯಸಿಂಹ ಮುಸರಿ ನಾಮಪತ್ರ ಸಲ್ಲಿಸಿದ್ದಾರೆ.

  ಮೇ 28ರಂದು ಮಧ್ಯಾಹ್ನ 2 ಗಂಟೆಯಿಂದ ಸಂಜೆ 6 ಗಂಟೆವರೆಗೆ ಮತದಾನ ನಡೆಯಲಿದೆ.

 • ಫಿಲಂ ಚೇಂಬರ್, ಅಂಬರೀಷ್ ಮೀಟೂ ಸಂಧಾನ ವಿಫಲ

  me too meeting failed

  ಅರ್ಜುನ್ ಸರ್ಜಾ ವರ್ಸಸ್ ಶೃತಿ ಹರಿಹರನ್ ಮೀಟೂ ಆರೋಪ ಪ್ರತ್ಯಾರೋಪಗಳ ಕುರಿತಂತೆ ಫಿಲಂಚೇಂಬರ್‍ನಲ್ಲಿ ನಡೆದ 3 ತಾಸುಗಳ ಸುದೀರ್ಘ ಸಂಧಾನ ಸಭೆ ವಿಫಲಗೊಂಡಿದೆ. ಶೃತಿ ಹರಿಹರನ್ ಆಗಲೀ, ಅರ್ಜುನ್ ಸರ್ಜಾ ಆಗಲೀ ಕ್ಷಮೆ ಕೇಳುವುದಿಲ್ಲ ಎಂದು ಪಟ್ಟು ಹಿಡಿದ ಹಿನ್ನೆಲೆಯಲ್ಲಿ ಅಂಬರೀಷ್ ಕೂಡಾ ವಿವಾದ ಬಗೆಹರಿಸುವಲ್ಲಿ ವಿಫಲರಾಗಿದ್ದಾರೆ. 

  ಕೋರ್ಟ್‍ನಲ್ಲಿ ಕೇಸು ಹಾಕಿದ್ದೇನೆ. ಅಲ್ಲಿಯೇ ನೋಡಿಕೊಳ್ಳುತ್ತೇನೆ ಎಂದು ಅರ್ಜುನ್ ಸರ್ಜಾ ಹೇಳಿದರೆ, ನಾನೂ ಅಲ್ಲಿಯೇ ನೋಡಿಕೊಳ್ತೇನೆ ಎಂದಿದ್ದಾರೆ ಶೃತಿ ಹರಿಹರನ್. ಚಿತ್ರೋದ್ಯಮದ ಗೌರವ, ಕಲಾವಿದರ ಭವಿಷ್ಯವನ್ನು ಹಾಳು ಮಾಡಬೇಡಿ ಎಂದು ಅಂಬರೀಷ್ ನೇತೃತ್ವದ ಸಮಿತಿ ವಿನಂತಿ ಮಾಡಿಕೊಂಡಿತು. ಆದರೆ, ಇಬ್ಬರೂ ಕೂಡಾ ತಮಗೆ ಅನ್ಯಾಯವಾಗಿದೆ. ನೋವಾಗಿದೆ. ಸಂಧಾನ ಸಾಧ್ಯವಿಲ್ಲ. ಕ್ಷಮೆ ಕೋರುವ ಪ್ರಶ್ನೆಯೇ ಇಲ್ಲ ಎಂದರು. ಈಗಾಗಿ ಸಭೆ ವಿಫಲಗೊಂಡಿತು.

  ಸಂಧಾನ ಸಭೆಯಲ್ಲಿ ಅಂಬರೀಷ್, ಫಿಲಂ ಚೇಂಬರ್ ಅಧ್ಯಕ್ಷ ಚಿನ್ನೇಗೌಡ, ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್, ನಿರ್ಮಾಪಕರ ಸಂಘದ ಅಧ್ಯಕ್ಷ ಮುನಿರತ್ನ, ಚೇಂಬರ್‍ನ ಮಾಜಿ ಅಧ್ಯಕ್ಷ ಸಾ.ರಾ.ಗೋವಿಂದು ಭಾಗವಹಿಸಿದ್ದರು.

 • ಫಿಲಂ ಚೇಂಬರ್, ನಿರ್ದೇಶಕರ ಸಂಘದ ವಿರುದ್ಧ ಹುಚ್ಚ ವೆಂಕಟ್ ಗರ್ಜನೆ..!

  huccha venkat talks against film chamber

  ನನ್‍ಮಗಂದ್.. ನಿಮ್ಮ ಮನೆಯಲ್ಲಿ ಅಕ್ಕ ತಂಗೀರು ಇಲ್ವಾ..? ಹೆಣ್ಮಕ್ಳಳ ಕಷ್ಟ ನಿಮಗೆ ಗೊತ್ತಿಲ್ವಾ..? ನಟಿಯರನ್ನು ಬ್ಯಾನ್ ಮಾಡೋಕೆ ನೀವ್ಯಾರು..? ಕೋರ್ಟ್‍ನಲ್ಲಿ ನಿರ್ಧಾರವಾಗುತ್ತೆ. ನೀವ್ಯಾರು ಅದನ್ನೆಲ್ಲ ಕೇಳೋಕೆ..? ನಿಮ್ಮನೆ ಹೆಣ್ಮಕ್ಕಳನ್ನ ಬಚ್ಚಿಡ್ತೀರಾ..? ಬೇರೆಯವರ ಹೆಣ್ಮಕ್ಕಳ ಬಗ್ಗೆ ಹೀಗೆಲ್ಲ ಮಾತಾಡ್ತೀರ. ಚಿತ್ರರಂಗಕ್ಕೆ ಬರುವ ಹುಡುಗಿಯರು ಕೆಟ್ಟ ಸಿನಿಮಾ ಮಾಡಬೇಕು ಅಂತಾ ಬರಲ್ಲ. ನಿರ್ದೇಶಕರೇ ದಾರಿ ತಪ್ಪಿಸ್ತಾರೆ. ಈ ಸಿನಿಮಾದಲ್ಲಿ ಐಟಂ ಸಾಂಗ್ ಮಾಡು. ಮುಂದಿನ ಸಿನಿಮಾಗೆ ನೀನೇ ಹೀರೋಯಿನ್ ಅಂತಾರೆ. ಇವರೆಲ್ಲ ನನ್ ಎಕ್ಕಡಕ್ ಸಮಾನ.. ಹೀಗೆ ಮುಂದುವರೆಯುತ್ತೆ ಹುಚ್ಚ ವೆಂಕಟ್ ಗರ್ಜನೆ.

  ನಿರ್ದೇಶಕ ಗುರುಪ್ರಸಾದ್, ಸಂಗೀತಾ ಭಟ್ ವಿರುದ್ಧ ಮಾಡಿರುವ ಟೀಕೆ, ಬಳಸಿರುವ ಪದಗಳ ಬಗ್ಗೆ ವೆಂಕಟ್ ಗರಂ ಆಗಿದ್ದಾರೆ.

 • ಫಿಲಂ ಚೇಂಬರ್‍ಗೆ ಹೊಸ ಅಧ್ಯಕ್ಷ - ಅವಿರೋಧ ಆಯ್ಕೆ

  film chamber gets new president

  ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ನೂತನ ಅಧ್ಯಕ್ಷರ ಆಯ್ಕೆಯಾಗಿದೆ. ಪ್ರದರ್ಶಕ ಗುಬ್ಬಿ ಜೈರಾಜ್, ಮಂಡಳಿಯ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ರಾಕ್‍ಲೈನ್ ವೆಂಕಟೇಶ್, ಸುಂದರ್‍ರಾಜ್ ಹಾಗೂ ನರಸಿಂಹಲು ಕಣದಿಂದ ಹಿಂದೆ ಸರಿದ ಕಾರಣ, ಜೈರಾಜ್ ಅವಿರೋಧವಾಗಿ ಆಯ್ಕೆಯಾದರು.

  ಜೂನ್ 29ಕ್ಕೆ ವಾಣಿಜ್ಯ ಮಂಡಳಿಯ ವಿವಿಧ ಪದಾಧಿಕಾರಿಗಳ ಆಯ್ಕೆಗೆ ಚುನಾವಣೆ ನಡೆಯಲಿದೆ. ನೂತನ ಅಧ್ಯಕ್ಷ ಜೈರಾಜ್ ಹಿಂದಿನ ಅಧ್ಯಕ್ಷ ಚಿನ್ನೇಗೌಡರು ಹಾಗೂ ನೂತನವಾಗಿ ಆಯ್ಕೆಯಾಗುವ ಪದಾಧಿಕಾರಿಗಳೊಂದಿಗೆ ಚರ್ಚಿಸಿ, ಚಿತ್ರೋದ್ಯಮದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ದುಡಿಯುತ್ತೇನೆ ಎಂದಿದ್ದಾರೆ ಜೈರಾಜ್.

  ಅಧ್ಯಕ್ಷ ಸ್ಥಾನದ ಜೊತೆಗೆ ಗೌರವ ಕಾರ್ಯದರ್ಶಿಯಾಗಿ ವಿತರಕ ವಲಯದಿಂದ ಎಂ.ನರಸಿಂಹಲು, ಉಪಾಧ್ಯಕ್ಷ ಸ್ಥಾನಕ್ಕೆ ಪ್ರದರ್ಶಕ ವಲಯದಿಂದ ವೆಂಕಟರಮಣ ಆಯ್ಕೆಯಾಗಿದ್ದಾರೆ. ಕಾರ್ಯಕಾರಿ ಸಮಿತಿ ಸದಸ್ಯರಾಗಿ ಎಸ್.ಎ.ಗೋವಿಂದರಾಜು, ಅವಿನಾಶ್ ಶೆಟ್ಟಿ, ಎಸ್‍ವಿ ಜೋಷಿ, ಶ್ರವಣ್‍ಕುಮಾರ್, ಬಿ.ಮಹೀಂದ್ರಕರ್, ರಂಗಸ್ವಾಮಿ, ನಾಗರಾಜ್ ಸಿ ಆಯ್ಕೆಯಾಗಿದ್ದಾರೆ.

 • ಫಿಲಂ ಚೇಂಬರ್‍ಗೆ ಹೊಸ ಸಾರಥಿಗಳು

  kfcc gets new office bearers

  ಕರ್ನಾಟಕ ಫಿಲಂ ಚೇಂಬರ್‍ಗೆ ಹೊಸ ಸಾರಥಿಗಳ ಆಗಮನವಾಗಿದೆ. ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ಇಂದು ನೂತನ ಸದಸ್ಯರು ಆದಿಕಾರ ಸ್ವೀಕರಿಸಲಿದ್ದಾರೆ. ಇಂದು 11 ಗಂಟೆಗೆ ವಿಜಯಶಾಲಿಯಾಗಿರುವ ಸದಸ್ಯರು ಪದಗ್ರಹಣ ಮಾಡಲಿದ್ದಾರೆ.

  ಪೈಪೋಟಿಯಿಂದ ಕೂಡಿದ್ದ ಚುನಾವಣೆಯಲ್ಲಿ ಎ.ಚಿನ್ನೇಗೌಡ, 551 ಮತಗಳನ್ನು ಪಡೆದು ಜಯಶಾಲಿಯಾದರು. ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಪ್ರಬಲ ಪೈಪೋಟಿ ಒಡ್ಡಿದ್ದ ಮಾರ್ಸ್ ಸುರೇಶ್, 317 ಮತಗಳನ್ನು ಪಡೆದರು. 

  ಇದು ನನ್ನ ಗೆಲುವಲ್ಲ, ಚಿತ್ರೋದ್ಯಮದ ಗೆಲುವು. ಒಳ್ಳೆಯ ಕೆಲಸ ಮಾಡುವುದಕ್ಕೆ ಸಿಕ್ಕ ಒಳ್ಳೆಯ ಅವಕಾಶ ಇದು. ವಾಣಿಜ್ಯ ಮಂಡಳಿಯ ಘನತೆಯನ್ನು ಎತ್ತಿ ಹಿಡಿಯುತ್ತೇನೆ ಎಂದು ಹೇಳಿದ್ದಾರೆ ಚಿನ್ನೇಗೌಡ.

  ನಿರ್ಮಾಪಕರ ವಲಯದ ಉಪಾಧ್ಯಕ್ಷ ಸ್ಥಾನದಲ್ಲಿ ಗೆದ್ದವರು ಕರಿಸುಬ್ಬು (338 ಮತ), ತೀವ್ರ ಪೈಪೋಟಿ ಒಡ್ಡಿದ್ದ ಪ್ರಮೀಳಾ ಜೋಷಾಯ್ (277) ಹಾಗೂ ದಿನೇಶ್ ಗಾಂಧಿ (253) ಮತಗಳನ್ನು ಪಡೆದು ಪರಾಭವಗೊಂಡರು.

  ವಿತರಕರ ವಲಯದ ಉಪಾಧ್ಯಕ್ಷ ಸ್ಥಾನ ಒಲಿದಿದ್ದು ಕೆ.ಮಂಜು (274) ಅವರಿಗೆ. ಕೆ. ಮಂಜು ಅವರ ಸಮೀಪದ ಪ್ರತಿಸ್ಪರ್ಧಿಯಾಗಿದ್ದು ನಾಗಣ್ಣ (238). ಕುಟ್ಟಿ(153), ಕುಪ್ಪಸ್ವಾಮಿ(47), ಬಿ.ಆರ್.ಕೇಶವ(156) ಮತ ಪಡೆದರಷ್ಟೇ. ಅಂತಿಮವಾಗಿ ಗೆಲುವು ಒಲಿದಿದ್ದು ಕೆ. ಮಂಜುಗೆ.

  ನಿರ್ಮಾಪಕರ ವಲಯದ ಗೌರವ ಕಾರ್ಯದರ್ಶಿ ಸ್ಥಾನ ಗೆದ್ದವರು ಭಾಮಾ ಹರೀಶ್(573 ಮತ). ಪ್ರತಿಸ್ಪರ್ಧಿಯಾಗಿದ್ದ ಎ.ಗಣೇಶ್ (345 ಮತ) ಪಡೆದರು.

  ವಿತರಕರ ವಲಯದ ಗೌರವ ಕಾರ್ಯದರ್ಶಿ ಸ್ಥಾನ ಒಲಿದಿದ್ದು ಶಿಲ್ಪ ಶ್ರೀನಿವಾಸ್(295 ಮತ) ಅವರಿಗೆ. ಪ್ರತಿಸ್ಪರ್ಧಿಗಳಾಗಿದ್ದ ಜಿ.ವೆಂಕಟೇಶ್ (255), ಕೆ.ರಾಜಶೇಖರ್ (80) ಹಾಗೂ ಪಾರ್ಥಸಾರಥಿ (238) ಮತಗಳನ್ನಷ್ಟೇ ಪಡೆದರು.

  ಗೌರವ ಖಜಾಂಚಿ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕೆ.ಎಂ.ವೀರೇಶ್ 452 ಮತಗಳನ್ನು ಪಡೆದು ವಿಜಯಶಾಲಿಯಾದರು. ಸಮೀಪದ ಪ್ರತಿಸ್ಪರ್ಧಿ ಜಯಸಿಂಹ ಮುಸುರಿ 416 ಮತ ಪಡೆದು ಪರಭಾವಗೊಂಡರು.

  ಪ್ರದರ್ಶಕ ವಲಯದ ಉಪಾಧ್ಯಕ್ಷ ಸ್ಥಾನಕ್ಕೆ ಅಶೋಕ್ ಅವಿರೋಧವಾಗಿ ಆಯ್ಕೆಯಾಗಿದ್ದ ಕಾರಣ, ಚುನಾವಣೆ ನಡೆಯಲಿಲ್ಲ. ಪ್ರದರ್ಶಕರ ವಲಯದಿಂದ ಗೌರವ ಕಾರ್ಯದರ್ಶಿ ಸ್ಥಾನಕ್ಕೆ ಸುಂದರ್ ರಾಜು ಅವಿರೋಧವಾಗಿ ಆಯ್ಕೆಯಾಗಿದ್ದು, ಆ ಸ್ಥಾನಕ್ಕೂ ಚುನಾವಣೆ ನಡೆಯಲಿಲ್ಲ.

  ಇಂದು ಬೆಳಗ್ಗೆ 11 ಗಂಟೆಗೆ ನೂತನ ಅಧ್ಯಕ್ಷ ಚಿನ್ನೇಗೌಡರು ಹಾಗೂ ನೂತನ ಸದಸ್ಯರು ಅಧಿಕಾರ ಸ್ವೀಕಾರ ಮಾಡಲಿದ್ದಾರೆ.

 • ಫಿಲಂಚೇಂಬರ್ ಚುನಾವಣೆ.. ಕಣದಲ್ಲಿರುವುದು ಇವರೇ

  film chamber elections

  ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಜೂನ್ 26ಕ್ಕೆ ಚುನಾವಣೆ. ಚೇಂಬರ್ ಅಧ್ಯಕ್ಷ ಸ್ಥಾನ, ಉಪಾಧ್ಯಕ್ಷ ಸ್ಥಾನ, ಗೌರವ ಕಾರ್ಯದರ್ಶಿ, ಖಜಾಂಚಿ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.

  ba_ma_harish_rajasimha_musu.jpgಅಧ್ಯಕ್ಷ ಸ್ಥಾನಕ್ಕೆ ಸವೇಶ್ವರಿ ಕಂಬೈನ್ಸ್‍ನ ಚಿನ್ನೇಗೌಡ ಹಾಗೂ ಮಾರ್ಸ್ ಸುರೇಶ್ ಸ್ಪರ್ಧಿಸಿದ್ದಾರೆ.

  ನಿರ್ಮಾಪಕರ ವಲಯದಿಂದ ಉಪಾಧ್ಯಕ್ಷರ ಸ್ಥಾನಕ್ಕೆ ಸ್ಪರ್ಧೆಯಲ್ಲಿರುವುದು ದಿನೇಶ್ ಗಾಂಧಿ, ಪ್ರಮೀಳಾ ಜೋಷಾಯ್ ಹಾಗೂ ಕರಿಸುಬ್ಬು. ವಿತರಕರ ವಲಯದಿಂದ ಕುಟ್ಟಿ ಜಿ.ಕೆ., ಕುಪ್ಪುಸ್ವಾಮಿ, ಬಿ.ಆರ್.ಕೇಶವ, ನಾಗಣ್ಣ, ಕೆ.ಮಂಜು ಸ್ಪರ್ಧಿಸಿದ್ದಾರೆ. ಪ್ರದರ್ಶಕರ ವಲಯದಿಂದ ಅಶೋಕ ಥಿಯೇಟರ್ ಮಾಲೀಕ ಅಶೋಕ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

  ಗೌರವ ಕಾರ್ಯದರ್ಶಿ ಹುದ್ದೆಗೆ ನಿರ್ಮಾಪಕರ ವಲಯದಿಂದ ಸ್ಪರ್ಧಿಸಿರುವುದು ಎ. ಗಣೇಶ್ ಹಾಗೂ ಭಾ.ಮಾ.ಹರೀಶ್. ವಿತರಕರ ವಲಯದಿಂದ ಪಾರ್ಥಸಾರಥಿ, ರಾಜಶೇಖರ್, ವೆಂಕಟೇಶ್ ಹಾಗೂ ಶಿಲ್ಪ ಶ್ರೀನಿವಾಸ್ ಸ್ಪರ್ಧಿಸಿದ್ದಾರೆ.

  ಪ್ರದರ್ಶಕರ ವಲಯದಿಂದ ಸುಂದರ್ ರಾಜು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

  ಗೌರವ ಖಜಾಂಚಿ ಸ್ಥಾನಕ್ಕೆ ಚಿತ್ರಲೋಕ ಮೂವೀಸ್‍ನ ಕೆ.ಎಂ. ವೀರೇಶ್ ಮತ್ತು ಜಯಸಿಂಹ ಮುಸುರಿ ಮಧ್ಯೆ ಸ್ಪರ್ಧೆಯಿದೆ.

  ಕಾರ್ಯಕಾರಿ ಸಮಿತಿ ಸದಸ್ಯರ ಸ್ಥಾನಕ್ಕೆ ಕೂಡಾ ಚುನಾವಣೆ ನಡೆಯಲಿದೆ. 

 • ಫಿಲಂಚೇಂಬರ್ ನೂತನ ಸದಸ್ಯರಿಂದ ಸಿಎಂಗೆ ಸನ್ಮಾನ

  kfcc new committee members honors cm hdk

  ಫಿಲಂಚೇಂಬರ್ ಚುನಾವಣೆಯ ಭರಾಟೆ ಮುಗಿಯುತ್ತಿದ್ದಂತೆ, ಚೇಂಬರ್‍ನ ನೂತನ ಸದಸ್ಯರು ಕೆಲಸವನ್ನೂ ಆರಂಭಿಸಿದ್ದಾರೆ. ಫಿಲಂಚೇಂಬರ್‍ನ ನೂತನ ಪದಾಧಿಕಾರಿಗಳೆಲ್ಲ ಅಧ್ಯಕ್ಷ ಚಿನ್ನೇಗೌಡರ ನೇತೃತ್ವದಲ್ಲಿ ಸಿಎಂ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ, ಕುಮಾರಸ್ವಾಮಿ ಅವರನ್ನು ಸನ್ಮಾನಿಸಿದರು. ಫಿಲಂಚೇಂಬರ್‍ನ ಕಾರ್ಯದರ್ಶಿ ಬಾ.ಮಾ.ಹರೀಶ್, ಶಿಲ್ಪಾ ಶ್ರೀನಿವಾಸ್, ಕರಿಸುಬ್ಬು, ಉಪಾಧ್ಯಕ್ಷರಾದ ಕೆ.ಮಂಜು, ಕೆ.ಸಿ ಅಶೋಕ್ ಮತ್ತು ಖಜಾಂಚಿಯಾಗಿರುವ ಕೆ.ಎಂ.ವೀರೇಶ್.. ಸಿಎಂ ಕುಮಾರಸ್ವಾಮಿ ಅವರನ್ನು ಸನ್ಮಾನಿಸಿದ್ರು.

  ಫಿಲಂಚೇಂಬರ್‍ನ ನೂತನ ಪದಾಧಿಕಾರಿಗಳು, ಅಧಿಕಾರ ಸ್ವೀಕಾರದ ನಂತರ, ಸಂಪ್ರದಾಯದಂತೆ ರಾಜ್ ಸಮಾಧಿ, ಪಾರ್ವತಮ್ಮ ರಾಜ್‍ಕುಮಾರ್ ಸಮಾಧಿಗೆ ಭೇಟಿ ಕೊಟ್ಟು ನಮನ ಸಲ್ಲಿಸಿದರು. ರಾಘವೇಂದ್ರ ರಾಜ್‍ಕುಮಾರ್ ಹಾಗೂ ಅಂಬರೀಷ್ ಅವರ ಮನೆಗೆ ತೆರಳಿ ಹೂಗುಚ್ಛ ನೀಡಿ ಸಹಕಾರ ಕೋರಿದರು.

 • ಫಿಲಂಚೇಂಬರ್‍ನಲ್ಲಿ ಸಾ.ರಾ.ಗೋವಿಂದು ಸಾಧನೆಗಳು

  kfcc ex president sa ra govindu

  ನೂತನ ಫಿಲಂಚೇಂಬರ್ ಪದಾಧಿಕಾರಿಗಳು ಅಧಿಕಾರ ವಹಿಸಿಕೊಳ್ಳುತ್ತಿದ್ದಂತೆಯೇ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷರಾದ ಸಾ.ರಾ.ಗೋವಿಂದು ಮತ್ತವರ ತಂಡ, ಕಳೆದ ಎರಡೂವರೆ ವರ್ಷಗಳಲ್ಲಿ ತಾವು ಮಾಡಿದ ಕೆಲಸಗಳ ವಿವರವನ್ನು ರಾಜ್ಯದ ಜನರ ಮುಂದಿಟ್ಟಿದೆ. ಎರಡೂವರೆ ವರ್ಷಗಳಲ್ಲಿ ಚಿತ್ರೋದ್ಯಮಕ್ಕಾಗಿ ಉತ್ತಮ ಕೆಲಸ ಮಾಡಿದ್ದೇವೆ. ನೂತನ ಅಧ್ಯಕ್ಷರು ಮತ್ತವರ ತಂಡ ಇನ್ನಷ್ಟು ಒಳ್ಳೆಯ ಕೆಲಸ ಮಾಡಲಿ ಎಂದು ಶುಭ ಹಾರೈಸಿದ್ದಾರೆ. 

  ಸಾ.ರಾ.ಗೋವಿಂದು, ತಮ್ಮ ಸೇವಾವಧಿಯಲ್ಲಿ ಮಾಡಿರುವ ಕೆಲಸಗಳ ದೊಡ್ಡಪಟ್ಟಿಯನ್ನೇ ಮುಂದಿಟ್ಟಿದ್ದಾರೆ. ಕನ್ನಡ ಚಿತ್ರಗಳಿಗೆ ಸಹಾಯಧನವನ್ನ 100 ಚಿತ್ರಗಳಿಂದ 125 ಚಿತ್ರಗಳಿಗೆ ಹೆಚ್ಚಿಸುವುದು, ಪ್ರತಿ ವರ್ಷ ಏಪ್ರಿಲ್ 24ರಂದೇ (ಡಾ.ರಾಜ್ ಜನ್ಮದಿನ) ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ ಕಡ್ಡಾಯ ಮಾಡುವುದು, ಜನತಾ ಚಿತ್ರಮಂದಿರಗಳಿಗೆ ತಲಾ 50 ಲಕ್ಷ ರೂ. ಪ್ರೋತ್ಸಾಹ ಧನ, ಹಳೆಯ ಚಿತ್ರಮಂದಿರಗಳ ನವೀಕರಣಕ್ಕೆ ತಲಾ 25 ಲಕ್ಷ ರೂ. ಪ್ರೋತ್ಸಾಹಧನ, ಮೈಸೂರಿನ ಹೊರವಲಯದಲ್ಲಿ ಚಿತ್ರನಗರಿ ಸ್ಥಾಪನೆಗೆ 100 ಎಕರೆ ಜಮೀನು ಕಾಯ್ದಿರಿಸುವುದು, ಕಾರ್ಮಿಕರ ವೇತನ ಪರಿಷ್ಕರಣೆ, ಯುಎಫ್‍ಓ, ಕ್ಯೂಬ್ ಸಂಸ್ಥೆಗಳ ಏಕಸ್ವಾಮ್ಯಕ್ಕೆ ಕಡಿವಾಣ, ಟಾಕೀಸ್ ಸುತ್ತಮುತ್ತ ಸಿನಿಮಾ ಪೋಸ್ಟರ್‍ಗಳಿಗೆ ತೆರಿಗೆ ವಿನಾಯಿತಿ, ರಾಜ್ಯದ ಚಿತ್ರಮಂದಿರಗಳಿಗೆ ತೆರಿಗೆ ವಿನಾಯಿತಿ, ಚಿತ್ರಮಂದಿರಗಳ ಲೈಸೆನ್ಸ್‍ಗೆ ಶುಲ್ಕ ಕಡಿತ, ಚಿತ್ರಮಂದಿರಗಳಿಗೆ ಆಸ್ತಿ ತೆರಿಗೆ ವಿನಾಯಿತಿ, ಮಲ್ಟಿಪ್ಲೆಕ್ಸ್‍ಗಳಲ್ಲಿ ಸಿನಿಮಾ ಪ್ರವೇಶದರ ನಿಗದಿ ಹಾಗೂ ಪ್ರೈಂಟೈಂನಲ್ಲಿ ಕನ್ನಡ ಚಿತ್ರ ಪ್ರದರ್ಶನಕ್ಕೆ ಆದ್ಯತೆ, ಡಾ.ರಾಜ್ ಸ್ಮಾರಕ ಸ್ಥಳದಲ್ಲಿ ಯೋಗ ಕೇಂದ್ರ,  ಬೈಲಾ ತಿದ್ದುಪಡಿ, ಗಣಕೀಕರಣ, ಹೊಸ ಗುರುತಿನ ಚೀಟಿ, ಕರ್ನಾಟಕ ಚಲನಚಿತ್ರ ಅಕಾಡೆಮಿ, ಕನ್ನಡ ಚಲನಚಿತ್ರ ನೀತಿ, ಕಲ್ಯಾಣ ನಿಧಿ, ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ, ಚೇಂಬರ್ ಕಟ್ಟಡದ ಮೇಲೆ ಸ್ಟೀಲ್ ಶೆಡ್ ನಿರ್ಮಾಣ, ಬೆಂಗಳೂರಿನಲ್ಲಿ ದಕ್ಷಿಣ ಭಾರತ ಚಲನಚಿತ್ರ ವಾಣಿಜ್ಯ ಮಂಡಳಿಯ ಸಭೆ ಹಾಗೂ ಹೆಚ್ಚುವರಿ ಸೆನ್ಸಾರ್ ಅಧಿಕಾರಿಯ ನೇಮಕಾತಿ ಸೇರಿದಂತೆ ಹಲವು ಕೆಲಸಗಳು ಗೋವಿಂದು ಅವರು ಅಧ್ಯಕ್ಷರಾಗಿದ್ದ ಅವಧಿಯಲ್ಲಿ ನಡೆದಿದ್ದವು. ಇನ್ನೂ ಹಲವು ಕೆಲಸಗಳು ಆರಂಭದ ಹಂತದಲ್ಲಿದ್ದು, ಅವುಗಳನ್ನು ಮುಂದುವರಿಸಿಕೊಂಡು ಹೋಗಬೇಕಾದ ಹೊಣೆಗಾರಿಕೆ ನೂತನ ಸದಸ್ಯರ ಮೇಲಿದೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery