ಅನುಮಾನವೇ ಇಲ್ಲ, ಈತ ಕನ್ನಡದ ಹೊಸ ನವರಸ ನಾಯಕ. ಖಾಸಗಿ ಚಾನೆಲ್ಲು ಒಂದರಲ್ಲಿ ಈತನ ಪ್ರಲಾಪವನ್ನು ನೋಡಿದ ಮೇಲೆ ನಾನು ಈ ತೀರ್ಮಾನಕ್ಕೆ ಬಂದಿದ್ದೇನೆ. ನಾನೊಬ್ಬನೇ ಅಲ್ಲ, ಲಕ್ಷಾಂತರ ಕನ್ನಡಿಗರು ಯೂ ಟ್ಯೂಬಲ್ಲಿ ಈ ವಿಡಿಯೋವನ್ನು ನೋಡಿ ಆನಂದಿಸಿದ್ದಾರೆ. ಒಟ್ಟಾರೆ ಹಿಟ್ಸ್ ಗಳು ಎರಡು ಲಕ್ಷವನ್ನೂ ಮೀರಿದೆ ಅನ್ನುತ್ತಿದೆ ವರದಿ. ಎಂಬಲ್ಲಿಗೆ ಕನ್ನಡದ ಯಾವ ನಟನಿಗೂ ಇಲ್ಲಿಯ ತನಕ ದೊರಕದೇ ಇರುವಷ್ಟು ಹಿಟ್ಸ್ ಈ ವ್ಯಕ್ತಿಗೆ ದಕ್ಕಿದೆ. ಇದು ಇತ್ತೀಚಿನ ದಿನಗಳಲ್ಲಿ ಯೂ ಟ್ಯೂಬಲ್ಲಿ ಪ್ರಸಾರವಾದ ಮೋಸ್ಟ್ ಫನ್ನಿ ವಿಡಿಯೋ ಅನ್ನುವ ಹೆಗ್ಗಳಿಕೆಯೂ ಸೇರಿಕೊಂಡಿದೆ.
ಫನ್ನಿ ಅಂದರೇನು? ತಮಾಷೆ ಅಂತ ನೀವಂದುಕೊಂಡಿದ್ದರೆ ತಪ್ಪು. ಬದಲಾದ ಕಾಲಮಾನದಲ್ಲಿ ಫನ್ನಿಯ ವ್ಯಾಖ್ಯಾನವೂ ಬದಲಾಗಿದೆ. ಯಾವುದೋ ಒಬ್ಬ ವ್ಯಕ್ತಿಯ ತೇಜೋವಧೆಯಾಗುವುದನ್ನು ಮಿಕ್ಕವರೆಲ್ಲರೂ ಆನಂದತುಂದಿಲರಾಗಿ ವೀಕ್ಷಿಸುವುದೇ ಫನ್ನಿ. ಅದು ಕಾಮಿಕ್ ಅಲ್ಲ, ಕಾಮೆಡಿಯೂ ಅಲ್ಲ. ಜಸ್ಟ್ funny ಅಷ್ಟೆ. ಉದಾಹರಣೆಗೆ ಭಗ್ನಹೃದಯಿ ಕುಡುಕನೊಬ್ಬ ಇಡೀ ಜಗತ್ತನ್ನು ದೂಷಿಸುತ್ತಾ ರಸ್ತೆಯಲ್ಲಿ ತೂರಾಡುತ್ತಿದ್ದರೆ ಜನ ಗುಂಪುಕಟ್ಟಿ ನೋಡುವುದು ಯಾಕೆ ಹೇಳಿ? ಅವರ ಕಣ್ಣಿಗೆ ಅದು ಫನ್ನಿ. ಇನ್ನೊಬ್ಬನ ನೋವು, ಹತಾಶೆ, ನಿರಾಸೆಗಳು ನಮಗೆ ಫನ್ನಿಯಾಗಿ ಕಾಣಿಸುತ್ತವೆ. ಆತ ಬಿಕ್ಕಿಬಿಕ್ಕಿ ಅಳುತ್ತಿದ್ದರೆ ನಾವು ಬಿದ್ದುಬಿದ್ದು ನಗುತ್ತೇವೆ. ಪಕ್ಕದ ಮನೆಯ ಜಗಳ ಯಾವತ್ತೂ ಕಾಮೆಡಿಯೇ, ಅದೇ ನಮ್ಮನೇಲಿ ಆದಾಗ ಮಾತ್ರ ಟ್ರಾಜೆಡಿ.

ಈ ಫನ್ನಿ ವ್ಯಕ್ತಿಯ ಹೆಸರು ವೆಂಕಟೇಶ್ ಏಲಿಯಾಸ್ ವೆಂಕಟ್ ಏಲಿಯಾಸ್ ಹುಚ್ಚ ವೆಂಕಟ್. ಅದೆಷ್ಟೋ ವರ್ಷಗಳ ಹಿಂದೆ ಸ್ವತಂತ್ರ ಪಾಳ್ಯ ಎಂಬ ಚಿತ್ರವನ್ನು ನಿರ್ದೇಶಿಸಿ ನಟಿಸಿದ ದಾಖಲೆ ಈತನ ಹೆಸರಲ್ಲಿದೆ. ಈತನ ಎರಡನೇ ಚಿತ್ರವೇ ಹುಚ್ಚ ವೆಂಕಟ್. ಆತನೇ ಸೂತ್ರಧಾರಿ, ಆತನೇ ಪಾತ್ರಧಾರಿ. ತನ್ನನ್ನು ತಾನೇ ಹುಚ್ಚ ಎಂದು ಕರೆದುಕೊಳ್ಳುವಷ್ಟು ಉದಾರಿ. ಬುದ್ಧನಿಗೆ ಬೋಧಿವೃಕ್ಷದ ಕೆಳಗೆ ಜ್ಞಾನೋದಯವಾದ ಹಾಗೆ ವೆಂಕಟ್ ಗೆ ಗಾಂಧಿನಗರದ ಅದ್ಯಾವುದೋ ಕಟ್ಟಡದ ಕೆಳಗೆ ತಾನು ಹುಚ್ಚ ಎಂದು ಜ್ಞಾನೋದಯವಾಗಿದ್ದಿರಬಹುದು. ಇದೇ ವೆಂಕಟ್ ಈ ಹಿಂದೆಯೂ ಸುದ್ದಿ ಮಾಡಿದ್ದ. ರಮ್ಯನನ್ನು ಪ್ರೀತಿಸುತ್ತೇನೆ ಅನ್ನುತ್ತಾ ತನ್ನಷ್ಟಕ್ಕೇ ಆಕೆಯ ಜೊತೆ ಮದುವೆ ದಿನಾಂಕವನ್ನೂ ನಿಗದಿ ಪಡಿಸಿ ಪತ್ರಕರ್ತರೆಲ್ಲರೂ ಬನಶಂಕರಿ ದೇವಾಲಯದಲ್ಲಿ ನಡೆಯುವ ಶುಭಕಾರ್ಯಕ್ಕೆ ತಪ್ಪದೇ ಬರಬೇಕು ಎಂದು ಆಹ್ವಾನ ನೀಡಿದ್ದ. ಅದಾಗಿ ಎರಡೇ ದಿನಗಳಲ್ಲಿ ಮದುಮಗ ಕಂಬಿ ಎಣಿಸುತ್ತಿದ್ದ. ಲಾಡ್ಜ್ ಒಂದರ ಮಾಣಿಗೆ ವಿನಾಕಾರಣ ಬಡಿದು ಮತ್ತೊಮ್ಮೆ ಲಾಕಪ್ಪು ನೋಡಿ ಬಂದಿದ್ದ. ಈ ಸುದ್ದಿಗಳೆಲ್ಲವೂ ಮಾಧ್ಯಮಗಳ ಮೂಲಕ ಅಷ್ಟೇ ಜನರನ್ನು ತಲುಪಿದ್ದವು, ಹಾಗಾಗಿ ವೆಂಕಟ್ ನ ಅಸಲಿ ಪ್ರತಿಭೆಯ ದರ್ಶನ ಪ್ರೇಕ್ಷಕರಿಗೆ ದೊರಕಿರಲಿಲ್ಲ. ಅದು ಸಾಧ್ಯವಾಗಿದ್ದು ಹುಚ್ಚ ವೆಂಕಟ್ ಚಿತ್ರದ ಬಿಡುಗಡೆಯ ದಿನದಂದು. ಚಿತ್ರ ನೋಡುವುದಕ್ಕೆ ಬೆರಳಣಿಕೆಯಷ್ಟು ಜನರಷ್ಟೇ ಬಂದಾಗ ವೆಂಕಟ್ ಗೆ ಭಯಂಕರ ಸಿಟ್ಟು ಬಂತು, ಥಿಯೇಟರಲ್ಲೇ ಚಾನೆಲ್ಲು ಒಂದರ ಕೆಮರಾ ಎದುರು ನಿಂತು ಗಾಯಗೊಂಡ ಸೈನಿಕನಂತೆ ಹೆಗಲು ಕುಣಿಸುತ್ತಾ ಕನ್ನಡಿಗರನ್ನು ವಾಚಾಮಗೋಚರ ನಿಂದಿಸಿದ. ಕನ್ನಡಿಗರು ನನ್ನನ್ನು ತುಳೀತಿದ್ದಾರೆ, ಕನ್ನಡಿಗರಿಗೆ ನನ್ನ ಸಿನಿಮಾ ನೋಡುವ ಯೋಗ್ಯತೆ ಇಲ್ಲ, ನನ್ನ ಎಕ್ಕಡವೂ ಕನ್ನಡ ಚಿತ್ರರಂಗಕ್ಕೆ ಬರೋಲ್ಲ, ಎಂದೆಲ್ಲಾ ಘರ್ಜಿಸಿದ. ಮಾತಿನ ಮಧ್ಯೆ ಅರ್ಥ ಆಯ್ತಾ, ನನ್ ಮಗಂದು ಮೊದಲಾದ ಪದವಿಶೇಷಣಗಳೂ ಸೇರಿಕೊಂಡು ಅದೊಂದು ಭರ್ಜರಿ ಕ್ಲಿಪಿಂಗ್ ಆಗಿ ಹೊರಹೊಮ್ಮಿತು. ವೆಂಕಟ್ ಕೈಯಿಂದ ಉಗಿಸಿಕೊಂಡ ಕನ್ನಡಿಗರೇ ಈ ಐದು ನಿಮಿಷಗಳ ದೃಶ್ಯಕಾವ್ಯವನ್ನು ಮನಸಾರೆ ಮೆಚ್ಚಿಕೊಂಡರು. ಹೀಗೆ ಹುಚ್ಚ ವೆಂಕಟ್ ಎಂಬ ಚಿತ್ರ ಫ್ಲಾಪ್ ಆದ ಬೆನ್ನಿಗೇ, ಹುಚ್ಚ ವೆಂಕಟ್ ಎಂಬ ವ್ಯಕ್ತಿ ಜನಪ್ರಿಯನಾದಂಥ ಎರಡು ವಿರೋಧಾಭಾಸಗಳು ಏಕಕಾಲಕ್ಕೆ ಸಂಭವಿಸಿದವು.
ಆದರೆ ವೆಂಕಟ್ ಮಾತಲ್ಲಿ ವಿಷಾದವಿತ್ತು (ನನ್ನ ಸಿನಿಮಾ ಯಾರೂ ನೋಡಲಿಲ್ಲ), ಕೋಪವಿತ್ತು (ಕನ್ನಡಿಗರಿಗೆ ಯೋಗ್ಯತೆಯಿಲ್ಲ), ಆಕ್ರೋಶವಿತ್ತು (ತುಳೀತಾರೆ), ಸಂಕಟವಿತ್ತು (ನನ್ನಪ್ಪನ ದುಡ್ಡು ಪೋಲು ಮಾಡಿದೆ), ಗರ್ವವಿತ್ತು (ನಾನು ಯಾವತ್ತೂ ಬೀದಿಗೆ ಬರೋಲ್ಲ), ಆಗ್ರಹವಿತ್ತು (ಐಟಂ ಡ್ಯಾನ್ಸ್ ಬ್ಯಾನ್ ಮಾಡಬೇಕು), ಹುಂಬತನವಿತ್ತು (ಹಾಲಿವುಡ್ ಲೆವೆಲ್ ಸಿನಿಮಾ ಮಾಡ್ತೀನಿ), ನೇರವಂತಿಕೆಯಿತ್ತು (ನಾನು ಎಣ್ಣೆ ಹೊಡೀತೀನಿ). ಇದರ ಜೊತೆಗೆ ಆಗಾಗ ಕನ್ನಡ ಪ್ರೇಕ್ಷಕರಿಗೆ ಅಪ್ಪಣೆ ಕೊಡಿಸುವ ಶೈಲಿ (ಮಾಡ್ ಬೇಕ್, ನೋಡ್ ಬೇಕ್), ಇವೆಲ್ಲವೂ ಸೇರಿಕೊಂಡು ಅದೊಂದು ರಂಜನೀಯ ದೃಶ್ಯವಾಯಿತು. ಇಲ್ಲಿದ್ದಿದ್ದು ವ್ಯಕ್ತಿಗತ ದೂಷಣೆ ಅಲ್ಲ, ಇಡೀ ಸಮೂಹವನ್ನೇ ಬೈಯ್ಯುವ ಪ್ರಕ್ರಿಯೆ. ಧ್ವನಿಯ ಏರಿಳಿತ ಇನ್ನೊಂದು ಆಕರ್ಷಣೆ. ಸಪಾಟು ರಸ್ತೆಯಲ್ಲಿ ಓಡುತ್ತಿರುವ ಬಸ್ಸಿಗೆ ಇದ್ದಕ್ಕಿದ್ದ ಹಾಗೆ ಹಂಪ್ಸ್ ಎದುರಾದಾಗ ಅದು ಎಗರಿ ಬೀಳುವ ರೀತಿಯಲ್ಲಿ ವೆಂಕಟ್ ಮಂದ್ರದಿಂದ ತಾರಕಕ್ಕೆ ಜಿಗಿಯುತ್ತಿದ್ದ. ಬೈಗುಳ ಕೂಡಾ ಇಷ್ಟೊಂದು ರಸವತ್ತಾಗಿರಬಹುದಾ ಎಂದು ಬೆರಗಾಗುವ ರೀತಿಯಲ್ಲಿ ವೆಂಕಟ್ ವಿಜೃಂಭಿಸಿದ್ದ.
ಚಾನೆಲ್ಲಿಗಷ್ಟೇ ವೆಂಕಟ್ ಸ್ವಗತ ಸೀಮಿತವಾಗಿದ್ದರೆ ಅದು ಇಷ್ಟೊಂದು ಜನಪ್ರಿಯತೆಯನ್ನು ಕಾಣುತ್ತಿರಲಿಲ್ಲ. ಸಾಮಾಜಿಕ ಜಾಲಗಳಲ್ಲಿ ಅದು ಕಾಣಿಸಿಕೊಂಡಿತು ನೋಡಿ, ಅಲ್ಲಿಂದ ವೆಂಕಟ್ ಮೇನಿಯಾ ಶುರುವಾಯಿತು. ಈಗ ವೆಂಕಟ್ ಶೈಲಿಯನ್ನೇ ಅನುಕರಿಸುವ ಹತ್ತು ವಿಡಿಯೋಗಳು ಯೂ ಟ್ಯೂಬಲ್ಲಿ ಸಿಗುತ್ತವೆ. ಸಾಫ್ಟ್ ವೇರ್ ಇಂಜಿನಿಯರ್, ಫೇಸ್ ಬುಕ್ ಕವಿ, ಹೀಗೇ ನಾನಾ ಅವತಾರದಲ್ಲಿ ವೆಂಕಟ್ ನ ತದ್ರೂಪಿಗಳು ರಂಜಿಸುತ್ತಿದ್ದಾರೆ. ಕನ್ನಡಿಗರು ಮೂಲತಃ ರಿಯಾಕ್ಷನ್ ಪ್ರಿಯರು. ಅಂದರೆ ನಾವು act ಮಾಡೋದಕ್ಕಿಂತ, react ಮಾಡುವುದರಲ್ಲೇ ಜಾಸ್ತಿ ಸುಖ ಕಾಣುತ್ತೇವೆ. ಕ್ರಿಯೆಗಿಂತ ಪ್ರತಿಕ್ರಿಯೆ ನೀಡುವುದೇ ಸುಲಭದ ಮಾರ್ಗ ಎಂದು ನಂಬಿದವರು ನಾವು. ವೆಂಕಟನ ತದ್ರೂಪಿ ವಿಡಿಯೋಗಳ ಹಿಂದಿರುವುದು ಇದೇ ಮನಸ್ಥಿತಿ.
ಅದೇನೇ ಇರಲಿ, ವೆಂಕಟನ ಭಾವೋದ್ವೇಗದ ಪರಾಕಾಷ್ಟೆ ಮನೋಶಾಸ್ತ್ರಜ್ಞರಿಗೆ ಅಧ್ಯಯನಕ್ಕೊಂದು ಒಳ್ಳೆಯ ವಸ್ತುವಾದೀತು. ಈತ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದಾನೆ ಅನ್ನುವುದು ಮೇಲ್ನೋಟಕ್ಕೇ ಸ್ಪಷ್ಟ. ಹಾಗಂತ ಅದನ್ನು ಹುಚ್ಚು ಎಂದು ಕರೆಯುವುದು ಅಮಾನವೀಯವಾದೀತು. ಜಗತ್ತಿನಲ್ಲಿರುವ ಅಸಾಧಾರಣ ಪ್ರತಿಭಾನ್ವಿತರೆಲ್ಲಾ ಅರೆಹುಚ್ಚರೇ ಅನ್ನುವ ಮಾತಿದೆ. ಆ ಕೆಟಗರಿಗಂತೂ ಈತ ಸೇರುವುದಿಲ್ಲ. ಹಾಗಿದ್ದರೆ ವೆಂಕಟ್ ಇದನ್ನೆಲ್ಲಾ ಉದ್ದೇಶಪೂರ್ವಕವಾಗಿ ಮಾಡಿದನೇ? ಬಹುಶಃ ಇಲ್ಲ. ಯಾಕೆಂದರೆ ತನ್ನ ಸಿನಿಮಾವನ್ನು ಜನರು ಸಾರಾಸಗಟಾಗಿ ತಿರಸ್ಕರಿಸಿದ್ದಕ್ಕೆ ಆತನಿಗೆ ಅವಮಾನವಾಗಿರುವುದು ನಿಜ. ಅದಕ್ಕೊಂದು ಅಭಿವ್ಯಕ್ತಿ ನೀಡುವುದಕ್ಕೆ ಆತ ಕಂಡುಕೊಂಡ ಮಾರ್ಗವೆಂದರೆ ನಿಂದನಾಸ್ತುತಿ. ಆದರೆ ಅನಂತರ ಇನ್ನೊಂದು ಚಾನೆಲ್ಲಿನ ಕಾರ್ಯಕ್ರಮದಲ್ಲಿ ಭಾಗಿಯಾಗುವ ಹೊತ್ತಿಗೆ ವೆಂಕಟನಿಗೆ ತಾನು ಬಯಸದೇ ಬಂದ ಜನಪ್ರಿಯತೆಯ ಅರಿವು ಆಗಿದ್ದಿರಬಹುದು. ಹಾಗಾಗಿ ಅದನ್ನೇ ಕ್ಯಾಶ್ ಮಾಡಿಕೊಳ್ಳುವ ತಂತ್ರಕ್ಕೆ ಆತ ಶರಣಾಗಿರಬಹುದು. ಯಾಕೆಂದರೆ ನೆಗೆಟಿವ್ ಪಬ್ಲಿಸಿಟಿಯನ್ನು ಆನಂದಿಸುವ ಹಲವು ಪ್ರತಿಭೆಗಳನ್ನು ನಾವೀಗಾಗಲೇ ನೋಡಿದ್ದೇವೆ.
ವೆಂಕಟ್ ಜಾಗದಲ್ಲಿ ಒಬ್ಬ ಜನಪ್ರಿಯ ನಟನನ್ನು ಒಂದು ಸಾರಿ ಕಲ್ಪಿಸಿಕೊಳ್ಳಿ. ಆತ ಏನಾದರೂ ಇದೇ ರೀತಿ ಕನ್ನಡ ಪ್ರೇಕ್ಷಕರನ್ನು ಬೈದಿದ್ದರೆ ದಕ್ಕಿಸಿಕೊಳ್ಳುವುದಕ್ಕೆ ಸಾಧ್ಯವಿತ್ತಾ? ಅದೊಂದು ದೊಡ್ಡ ವಿವಾದವಾಗಿ ಕೊನೆಗೆ ಆ ನಟ ಕ್ಷಮೆ ಕೇಳುವಂಥಾ ಪ್ರಸಂಗ ನಿರ್ಮಾಣವಾಗುತ್ತಿರಲಿಲ್ಲವೇ? ವೆಂಕಟ್ ವಿಷಯದಲ್ಲಿ ಹಾಗೇನೂ ಆಗಿಲ್ಲ. ಆತನ ಮಾತು ವಿವಾದವಾಗುವ ಬದಲು ವಿನೋದವಾಯಿತು. ಇದನ್ನು ಮೂರು ಹೊತ್ತೂ ಉನ್ಮಾದದ ಸ್ಥಿತಿಯಲ್ಲಿರುವ ವ್ಯಕ್ತಿಯೊಬ್ಬನ ಪ್ರಲಾಪ ಎಂದಷ್ಟೇ ಜನ ಅಂದುಕೊಂಡರು. ನೀವು ಈ ಜಗತ್ತಲ್ಲಿ ಏನೂ ಆಗಿಲ್ಲ ಅಂದರೆ ಏನು ಬೇಕಾದರೂ ಮಾತಾಡುವ ಲೈಸೆನ್ಸ್ ನಿಮಗೆ ಸಿಗುತ್ತದೆ. ನೀವು ಯಾರನ್ನು ಬೇಕಾದರೂ ಬೈಯ್ಯಬಹುದು, ಅವಹೇಳನ ಮಾಡಬಹುದು, ನಿಮ್ಮನ್ನೇ ನೀವು ಗೇಲಿ ಮಾಡಿಕೊಳ್ಳಬಹುದು. ಅವೆಲ್ಲದಕ್ಕೂ ಪ್ರಚಾರ ಸಿಗಬೇಕು ಅಷ್ಟೆ. ಆಗ ಜನ ನಿಮಗೊಂದು ರೇಟಿಂಗ್ ಕೊಡುತ್ತಾರೆ. ನಿಮಗೊಂದು ಐಡೆಂಟಿಟಿ ಸಿಗುತ್ತದೆ.
ಇಷ್ಟೆಲ್ಲಾ ಹೇಳಿದ ಮೇಲೂ ನನಗೆ ಈ ವೆಂಕಟ್ ಎಂಬ ವಿಚಿತ್ರ ಆಸಾಮಿಯ ಬಗ್ಗೆ ಕುತೂಹಲವಿದೆ, ಸಹಾನುಭೂತಿಯೂ ಇದೆ, ತಂದೆಯ ಬಗ್ಗೆ ಆತನಿಗಿರುವ ಅಬ್ಸೆಷನ್ ನನಗಿಷ್ಟವಾಗಿದೆ. ಆದರೆ ಆತ ತೆರೆಯ ಮೇಲೆ ಮಾಡಬೇಕಾಗಿರುವುದನ್ನು ತೆರೆಯೀಚೆಗೆ ಮಾಡುತ್ತಿದ್ದಾನೆ. ನಿಜಜೀವನದಲ್ಲೂ ತಾನೊಂದು ಪಾತ್ರದಂತೆ ಆತ ಬದುಕುತ್ತಿದ್ದಾನೆ. ತನ್ನ ನೇರವಂತಿಕೆಯಿಂದಾಗಿಯೇ ತಾನು ಜನಪ್ರಿಯನಾಗಿದ್ದೇನೆ ಎಂಬ ಭ್ರಮೆ ಆತನನ್ನು ಆವರಿಸಿದೆ. ನಟನಾಗಿ ಆತನಿಗೆ ಚಿತ್ರರಂಗದಲ್ಲಿ ಭವಿಷ್ಯ ಇದೆ ಅನ್ನುವ ಬಗ್ಗೆ ನನಗೆ ಅನುಮಾನವಿದೆ. ಹಾಗಂತ ನಮ್ಮನಿಮ್ಮಂತೆ ಬದುಕುವುದಕ್ಕೇನೂ ಅಡ್ಡಿಯಿಲ್ಲವಲ್ಲ. ಆತನಿಗೆ ಈಗ ಬೇಕಾಗಿರುವುದು ಮನೋಚಿಕಿತ್ಸೆ. ಜೊತೆಗೆ ತನ್ನನ್ನು ಇನ್ನಷ್ಟು ಹುಚ್ಚನನ್ನಾಗುವಂತೆ ಹುರಿದುಂಬಿಸುತ್ತಿರುವ ಮಾಧ್ಯಮಗಳಿಂದ ಆತ ದೂರ ಉಳಿಯಬೇಕಾಗಿದೆ. ಆತನ ಪೋಷಕರೋ, ಆತ್ಮೀಯರೋ ಆ ಕೆಲಸವನ್ನು ತುರ್ತಾಗಿ ಮಾಡಬೇಕಾಗಿದೆ.
ಆತನೇ ಹೇಳಿಕೊಂಡಂತೆ ನಾನು ಇನ್ನು ಮುಂದೆ ಸಂತೋಷವಾಗಿರುತ್ತೇನೆ ಅನ್ನುವ ಮಾತು ನಿಜವಾಗಲಿ.