ರಾಧಿಕಾ ಕುಮಾರಸ್ವಾಮಿ ಒಂದು ತಿಂಗಳು ಹೊರಗೆ ಕಾಣಿಸಿಕೊಳ್ಳದೇ ಹೋಗಿ, ಆಮೇಲೆ ಪ್ರತ್ಯಕ್ಷರಾದರೆ ಅವರಿಗೆ ಎದುರಾಗುವ ಅತಿ ದೊಡ್ಡ ಪ್ರಶ್ನೆ ಅದು. ನೀವೂ ಕುಮಾರಸ್ವಾಮಿ ಬೇರೆಯಾಗಿದ್ದೀರಾ..? ನೀವೂ ಕುಮಾರಸ್ವಾಮಿ ಒಟ್ಟಿಗೇ ಇದ್ದೀರಾ...? ಇಲ್ಲವಾ..? ನಿಮ್ಮ ಹೆಸರಿನ ಜೊತೆ ಕುಮಾರಸ್ವಾಮಿ ಹೆಸರನ್ನು ಸೇರಿಸಬಹುದೇ..? ಇಂಥ ಪ್ರಶ್ನೆಗಳು ತಾನೇ ತಾನಾಗಿ ಮೂಡುತ್ತವೆ. ಇವುಗಳಿಗೆ ರಾಧಿಕಾ ಉತ್ತರ ಕೊಡುತ್ತಲೇ ಇದ್ದಾರೆ.
ಅಂಥದ್ದೇ ಪ್ರಶ್ನೆ ಕಾಂಟ್ರ್ಯಾಕ್ಟ್ ಚಿತ್ರದ ಸುದ್ದಿಗೋಷ್ಟಿಯಲ್ಲೂ ಆಯ್ತು. ಆ ಚಿತ್ರದಲ್ಲಿ ರಾಧಿಕಾ ನಾಯಕಿ. ಜೆಡಿ ಚಕ್ರವರ್ತಿ ನಾಯಕ. ಅಷ್ಟೂ ಪ್ರಶ್ನೆಗಳಿಗೆ ರಾಧಿಕಾ ಉತ್ತರಿಸಿದ್ದಾರೆ.
ಪ್ರಶ್ನೆ - ನೀವೂ ಕುಮಾರಸ್ವಾಮಿ ಬೇರೆ ಬೇರೆಯಾಗಿದ್ದೀರಾ..?
ರಾಧಿಕಾ - ನಾನು ಅವರು ಬೇರೆಯಾಗಿದ್ದೇವೆ ಎಂದು ಹೇಳಿದ್ದು ಯಾರು? ನಾನು ಹೇಳಿದ್ನಾ..? ಅವರು ಹೇಳಿದ್ರಾ..? ಎಲ್ಲವನ್ನೂ ನೀವೇ ಊಹೆ ಮಾಡಿಕೊಳ್ಳುತ್ತೀರಿ. ಬರೆಯುತ್ತೀರಿ. ನಾನೂ ಅವರು ದೂರವಾಗಿಲ್ಲ.
ಪ್ರಶ್ನೆ - ನಿಮ್ಮ ಬಗ್ಗೆ, ನಿಮ್ಮ ಸಂಸಾರದ ಬಗ್ಗೆ ತುಂಬಾ ಗಾಳಿಸುದ್ದಿಗಳಿವೆ
ರಾಧಿಕಾ - ಹೌದು, ಏನೇನೋ ಗಾಳಿ ಸುದ್ದಿಗಳಿವೆ. ನಾನು ಬೆಂಗಳೂರಿನಲ್ಲಿ ಇಲ್ಲ. ಲಂಡನ್ನಲ್ಲಿದ್ದೇನೆ, ಮಂಗಳೂರಿನಲ್ಲಿದ್ದೇನೆ ಅನ್ನೋ ಸುದ್ದಿಯಿದೆ. ಅಷ್ಟೇ ಯಾಕೆ, ನನಗೆ ಮೂವರು ಮಕ್ಕಳು. ಒಬ್ಬರನ್ನು ಲಂಡನ್ನಲ್ಲಿ, ಮತ್ತೊಬ್ಬರನ್ನು ಯಾರಿಗೋ ಕೊಟ್ಟು ಮಂಗಳೂರಿನಲ್ಲಿ ಸಾಕಿಸುತ್ತಿದ್ದೇನೆ, ಒಂದು ಮಗುವನ್ನು ಮಾತ್ರ ನಾನು ಸಾಕುತ್ತಿದ್ದೇನೆ ಎಂದೆಲ್ಲ ಸುಳ್ಳು ಸುದ್ದಿಗಳಿವೆ. ಏನು ಹೇಳೋದು. ನಾನು ಈಗಲೂ ಬೆಂಗಳೂರಿನಲ್ಲೇ ಇದ್ದೇನೆ. ನಮಗೆ ಇರುವುದು ಒಂದೇ ಮಗು.
ಪ್ರಶ್ನೆ - ಈ ಗಾಳಿಸುದ್ದಿಗಳು ಹುಟ್ಟಿಕೊಳ್ಳೋದು ಏಕೆ?
ರಾಧಿಕಾ - ನನಗೂ ಗೊತ್ತಿಲ್ಲ. ಆದರೆ, ಎಷ್ಟು ಬಾರಿ ಸ್ಪಷ್ಟನೆ ಕೊಡೋದು.?
ಪ್ರಶ್ನೆ - ಕುಮಾರಸ್ವಾಮಿ ಜೊತೆ ಈಗ ಸಂಬಂಧ ಹೇಗಿದೆ?
ರಾಧಿಕಾ - ನಾನೂ, ಅವರು ದೂರವಾಗಿಲ್ಲ. ನನ್ನ ಮಗಳು ಸ್ಕೂಲ್ಗೆ ಹೋಗುತ್ತಿದ್ದಾಳೆ. ಅದು ಅವರಿಗೆ ಗೊತ್ತಿದೆ. ಹೀಗಾಗಿ ನಾವೂ ಕುಟುಂಬದವರ ಹಾಗೆಯೇ ಇದ್ದೇವೆ. ನನ್ನ ಹೆಸರು ಸಾಯುವ ತನಕ ಅವರ ಹೆಸರಿನ ಜೊತೆ ಇರುತ್ತೆ. ನನ್ನನ್ನು ಬರೀ ರಾಧಿಕಾ ಎಂದು ಬರೆಯಬೇಡಿ. ರಾಧಿಕಾ ಕುಮಾರಸ್ವಾಮಿ ಎಂದೇ ಬರೆಯಿರಿ.