ಸಿನಿಮಾ ಸೃಷ್ಟಿಸುತ್ತಿರೋ ದಾಖಲೆ ಒಂದಾದ್ರೆ.. ಫ್ಯಾನ್ಸ್ ಸೃಷ್ಟಿಸಿದ ದಾಖಲೆಗಳೇ ಬೇರೆ..
ಇದೊಂಥರಾ ನೋಡೋಕೆ ಮಜಾ. ಒಂದು ಕಡೆ ಕೆಜಿಎಫ್ ಚಾಪ್ಟರ್ 2 ಚಿತ್ರವನ್ನು ದಾಖಲೆಗಳ ಮೇಲೆ ದಾಖಲೆ ಬರೆದು ಪ್ರೇಕ್ಷಕರಿಗೆ ತಲುಪಿಸೋ ಸಾಹಸ ಮಾಡುತ್ತಿರೋದು ಹೊಂಬಾಳೆ ಫಿಲಮ್ಸ್. ಪ್ರಶಾಂತ್ ನೀಲ್-ಯಶ್-ವಿಜಯ್ ಕಿರಗಂದೂರ ಕಾಂಬಿನೇಷನ್‍ನ ಸಿನಿಮಾ ಸೃಷ್ಟಿಸುತ್ತಿರೋ ದಾಖಲೆಗಳು ಒಂದೆರಡಲ್ಲ. ರಾಕಿಂಗ್ ಸ್ಟಾರ್ ಜೊತೆ ಈ ಬಾರಿ ಸಂಜಯ್ ದತ್, ರವೀನಾ ಟಂಡನ್ ಕೂಡಾ ಇರೋದ್ರಿಂದ ಇಡೀ ಚಿತ್ರದ ತೂಕವೇ ಹೆಚ್ಚಾಗಿದೆ. ಶ್ರೀನಿಧಿ ಶೆಟ್ಟಿ, ನಾಗಾಭರಣ, ಮಾಳವಿಕಾ ಅವಿನಾಶ್, ವಸಿಷ್ಠ ಸಿಂಹ ಜೊತೆಗೆ ಈ ಬಾರಿ ಪ್ರಕಾಶ್ ರೈ ಕೂಡಾ ಬಂದಿದ್ದಾರೆ. ಅಂದಹಾಗೆ ಕೆಜಿಎಫ್ 2 ಬರೆಯುತ್ತಿರೋ ಇನ್ನಷ್ಟು ದಾಖಲೆಗಳ ಲೆಕ್ಕವನ್ನೊಮ್ಮೆ ನೋಡೋಣ.
ಕೆಜಿಎಫ್ 2 ರಿಲೀಸ್ ಆಗುತ್ತಿರೋದು 10 ಸಾವಿರಕ್ಕೂ ಹೆಚ್ಚು ಸ್ಕ್ರೀನ್‍ಗಳಲ್ಲಿ. ಜಗತ್ತಿನಾದ್ಯಂತ ಏಕಕಾಲಕ್ಕೆ ರಿಲೀಸ್ ಆಗುತ್ತಿರೋ ಕೆಜಿಎಫ್ 2, ಆರ್.ಆರ್.ಆರ್.ಗಿಂತಲೂ ಹೆಚ್ಚು ಸ್ಕ್ರೀನ್‍ಗಳಲ್ಲಿ ಪ್ರದರ್ಶನವಾಗುತ್ತಿದೆ.
ಫ್ರಾನ್ಸ್‍ನಲ್ಲಿ ಒಂದು ಪ್ರೀಮಿಯರ್ ಶೋ ಇಟ್ಟುಕೊಳ್ಳಲಾಗಿದೆ. ಫ್ರೆಂಚರ ಊರಿನಲ್ಲಿ ಪ್ರೀಮಿಯರ್ ಶೋ ಆಗುತ್ತಿರೋ ಮೊದಲ ಕನ್ನಡ ಸಿನಿಮಾ ಕೆಜಿಎಫ್ ಚಾಪ್ಟರ್ 2.
ರಿಲೀಸ್ ಆಗುತ್ತಿರೋ ಎಲ್ಲ ದೇಶಗಳಲ್ಲಿ ಚಿತ್ರದ ಎಲ್ಲ ಭಾಷೆಗಳ ವರ್ಷನ್ ಕೂಡಾ ರಿಲೀಸ್ ಆಗುತ್ತಿರೋದು ವಿಶೇಷ.
ವಿದೇಶಗಳಲ್ಲಿ ಕೂಡಾ ಅಭಿಮಾನಿಗಳ ಒತ್ತಾಯದ ಮೇಲೆ ಮಧ್ಯರಾತ್ರಿ ಶೋ ಆಗುತ್ತಿರೋದು ವಿಶೇಷ.
ಚಿತ್ರತಂಡದವರೇ ಹೀಗಿರೋವಾಗ ಅಭಿಮಾನಿಗಳೆನು ಕಡಿಮೆ. ಮುಂಬೈನಲ್ಲೊಬ್ಬ ಯಶ್ ಅಭಿಮಾನಿ.. ಒಬ್ಬನೇ 100 ಟಿಕೆಟ್ ಖರೀದಿಸಿ ಸ್ನೇಹಿತರಿಗೆಲ್ಲ ಸಿನಿಮಾ ತೋರಿಸುತ್ತಿದ್ದಾನೆ. ಸ್ವತಃ ಕಾರ್ತಿಕ್ ಗೌಡ ಇದನ್ನು ಹಂಚಿಕೊಂಡು ಖುಷಿಪಟ್ಟಿದ್ದಾರೆ. ತಮಿಳುನಾಡಿನಲ್ಲಿ ವಿಜಯ್ ಅಭಿನಯದ ಬೀಸ್ಟ್ ಪೈಪೋಟಿಯಿದ್ದರೂ ಬುಕಿಂಗ್ ಶುರುವಾದ ಕೆಲವೇ ನಿಮಿಷಗಳಲ್ಲಿ ಸೋಲ್ಡ್ ಔಟ್ ಆಗಿರೋದು ಸ್ಪೆಷಲ್.
ಅತ್ತ ಹೈದರಾಬಾದಿಗೆ ಹೋದರೆ.. ಅಲ್ಲಿ ಆಗ್ತಿರೋದೇ ಬೇರೆ. ಚಿತ್ರದ ಡೈಲಾಗ್‍ನ್ನು ಸ್ವಲ್ಪ ಚೇಂಜ್ ಮಾಡಿದ್ದಾರೆ ಹೈದರಾಬಾದ್ ಸಿಟಿ ಪೊಲೀಸ್. ಹೆಲ್ಮೆಟ್ ಹೆಲ್ಮೆಟ್ ಹೆಲ್ಮೆಟ್.. ಐ ಡೋಂಟ್ ಲೈಕ್ ಹೆಲ್ಮೆಟ್.. ಬಟ್ ಹೆಲ್ಮೆಟ್ ಸೇವ್ಸ್ ಮೀ. ಐ ಕಾಂಟ್ ಅವಾಯ್ಡ್ ಇಟ್.. ಎನ್ನೋ ಸ್ಲೋಗನ್ ಬರೆದು ಹೆಲ್ಮೆಟ್ ಜಾಗೃತಿ ಅಭಿಯಾನ ಆರಂಭಿಸಿದ್ದಾರೆ.