ಬೇರೆ ಬೇರೆ ಪ್ರಶಸ್ತಿ ಪ್ರದಾನ ಸಮಾರಂಭಗಳಲ್ಲಿ ಕ್ರಿಟಿಕ್ಸ್ ಅವಾರ್ಡ್, ವಿಮರ್ಶಕರ ಪ್ರಶಸ್ತಿ, ವಿಮರ್ಶಕರ ಪ್ರಶಂಸೆಗೊಳಗಾದ ಸಿನಿಮಾ ಎಂಬ ಪದಗಳ ಮೆರವಣಿಗೆಯನ್ನು ಕೇಳಿರುತ್ತೀರಿ, ನೋಡಿರುತ್ತೀರಿ. ಆದರೆ.. ವಿಮರ್ಶಕರೇ ಒಂದು ಸಂಘ ಕಟ್ಟಿಕೊಂಡು, ಸಿನಿಮಾಗಳನ್ನು ಆಯ್ಕೆ ಮಾಡಿ, ವಿಮರ್ಶೆ ಮಾಡಿ ಪ್ರಶಸ್ತಿ ನೀಡುವ ಸಂಪ್ರದಾಯ ಎಲ್ಲಾದರೂ ಕೇಳಿದ್ದೀರಾ..? ಅಂತಹುದೊಂದು ಪ್ರಯತ್ನ ಕನ್ನಡದಲ್ಲಿಯೇ ಶುರುವಾಗಿದೆ. ಸಿನಿಮಾ ಪತ್ರಕರ್ತರೆಲ್ಲ ಒಗ್ಗೂಡಿ ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ ಆರಂಭಿಸಿದ್ದಾರೆ.
ಈ ಅಕಾಡೆಮಿಯಲ್ಲಿ 20 ಪ್ರಶಸ್ತಿಗಳನ್ನು ನೀಡಲು ಯೋಜನೆ ಹಾಕಿಕೊಳ್ಳಲಾಗಿದೆ. ವಿಮರ್ಶಕರೇ ಚಿತ್ರಗಳನ್ನು ನಾಮ ನಿರ್ದೇಶನ ಮಾಡಲಿದ್ದಾರೆ. ಪ್ರಶಸ್ತಿ ಪುರಸ್ಕøತರ ಹೆಸರು, ಪ್ರಶಸ್ತಿ ಪ್ರದಾನ ಸಮಾರಂಭದ ದಿನವೇ ಘೋಷಣೆಯಾಗಲಿದೆ.
ಈ ವರ್ಷದ ಜ್ಯೂರಿಗಳಾಗಿ ಪತ್ರಕರ್ತರಾದ ಬಿ.ಎನ್.ಸುಬ್ರಹ್ಮಣ್ಯ, ಕೆ.ಎಚ್.ಸಾವಿತ್ರಿ, ಜಿ.ಎಸ್. ಕುಮಾರ್, ಡಿ.ಸಿ.ನಾಗೇಶ್, ಮುರಳೀಧರ ಖಜಾನೆ, ಮಹೇಶ್ ದೇವಶೆಟ್ಟಿ, ಸ್ನೇಹಪ್ರಿಯ ನಾಗರಾಜ್, ಕೆ.ಎಸ್.ವಾಸು ಮತ್ತು ಗಣೇಶ್ ಕಾಸರಗೋಡು ಇರಲಿದ್ದಾರೆ.
ಅಕಾಡೆಮಿಯ ಲಾಂಛನವನ್ನು ಅನಾವರಣ ಮಾಡಿದ ಶಿವರಾಜ್ ಕುಮಾರ್, ರಾಕ್ಲೈನ್ ವೆಂಕಟೇಶ್ ಹೊಸ ಪ್ರಯತ್ನಕ್ಕೆ ಅಭಿನಂದನೆ ಸಲ್ಲಿಸಿದ್ರು. ಡಾ.ರಾಜ್ಕುಮಾರ್, ಪಾರ್ವತಮ್ಮ ರಾಜ್ಕುಮಾರ್, ವಿಷ್ಣುವರ್ಧನ್, ಅಶ್ವತ್ಥ್ ಹೆಸರಲ್ಲಿ ಪ್ರಶಸ್ತಿ ನೀಡಿದಲ್ಲಿ ಅದಕ್ಕೆ ನಮ್ಮ ಪ್ರೋತ್ಸಾಹವಿದೆ. ಸಹಕಾರವೂ ಇದೆ ಎಂದು ರಾಕ್ಲೈನ್ ಹೇಳಿದರೆ, ಇದು ಆಮಿಷವಲ್ಲ, ಪ್ರೀತಿ ಎಂದು ತಿದ್ದಿದರು ಶಿವರಾಜ್ಕುಮಾರ್.