ಶಿವರಾಜ್ ಕುಮಾರ್ ಅಭಿನಯದ ಮಾಸ್ ಲೀಡರ್ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಸಿನಿಮಾ ಸೆನ್ಸಾರ್ ಆಗಿ, ರಿಲೀಸ್ ಡೇಟ್ ಅನೌನ್ಸ್ ಆಗಿ, ಚಿತ್ರಮಂದಿರಗಳ ಪಟ್ಟಿಯೂ ಪ್ರಕಟವಾಗಿದೆ. ಸಿನಿಮಾ ಬಿಡುಗಡೆ ಹೊಸ್ತಿಲಲ್ಲಿರುವಾಗ ನಿರ್ದೇಶಕ, ನಿರ್ಮಾಪಕ ಎಎಂಆರ್ ರಮೇಶ್ ಮತ್ತು ಅವರ ಪತ್ನಿ ಇಂದುಮತಿ ಕೋರ್ಟ್ ಮೆಟ್ಟಿಲೇರಿದ್ದಾರೆ. ಲೀಡರ್ ಟೈಟಲ್ ನನ್ನ ಹೆಸರಲ್ಲಿ ರಿಜಿಸ್ಟರ್ ಆಗಿದೆ. ಚಿತ್ರದ ಟೈಟಲ್ ಕಾರ್ಡ್ನಲ್ಲಿ ಮಾಸ್ ಎಂಬ ಹೆಸರನ್ನು ಚಿಕ್ಕದಾಗಿಟ್ಟು, ಲೀಡರ್ ಹೆಸರನ್ನು ದೊಡ್ಡದಾಗಿ ತೋರಿಸಲಾಗಿದೆ. ಇದು ಕಾಪಿರೈಟ್ ಉಲ್ಲಂಘನೆ ಎನ್ನುವುದು ಎಎಂಆರ್ ರಮೇಶ್ ವಾದ. ಸಿಟಿ ಸಿವಿಲ್ ಕೋರ್ಟ್ ಚಿತ್ರಕ್ಕೆ ತಡೆಯಾಜ್ಞೆ ನೀಡಿರುವುದು ಕೂಡಾ ಎಲ್ಲರಿಗೂ ಗೊತ್ತಿರುವ ವಿಚಾರ.
ಕೋರ್ಟ್ ತಡೆ ನೀಡಿರುವುದರಿಂದ ಸಿನಿಮಾ ನಿಗದಿಯಂತೆ ಆಗಸ್ಟ್ 11ಕ್ಕೆ ಬಿಡುಗಡೆಯಾಗುವುದು ಅನುಮಾನ. ಮಾಸ್ ಲೀಡರ್ ಚಿತ್ರ ನಿರ್ಮಿಸಿರುವ ತರುಣ್ ಟಾಕೀಸ್ ನಿರ್ಮಾಣ ಸಂಸ್ಥೆ ಹಾಗೂ ನಿರ್ಮಾಪಕ ತರುಣ್ ಶಿವಪ್ಪ ಸಿಟಿ ಸಿವಿಲ್ ಕೋರ್ಟ್ನಲ್ಲಿ ತಮ್ಮ ವಾದ ಮಂಡಿಸಬೇಕು. ಈ ಹಂತದಲ್ಲಿ ಸುಪ್ರೀಂಕೋರ್ಟ್ನ ಹಳೆಯ ತೀರ್ಪೊಂದು ಮಾಸ್ ಲೀಡರ್ ಚಿತ್ರತಂಡದ ನೆರವಿಗೆ ಬರುವ ಸಾಧ್ಯತೆಗಳಿವೆ.
ಸುಪ್ರೀಂಕೋರ್ಟ್ ತೀರ್ಪು ಏನು ಹೇಳುತ್ತೆ..?
ಎರಡು ವರ್ಷಗಳ ಹಿಂದೆ ಅಕ್ಷಯ್ ಕುಮಾರ್ ಅಭಿನಯದ ಹಿಂದಿ ಚಿತ್ರ Desi Boyz ವಿರುದ್ಧ Desi Boys ಚಿತ್ರತಂಡದ ಕಥೆಗಾರ ದೇವ್ಕಟ್ಟಾ ಎಂಬುವರು ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. Desi Boyz ಚಿತ್ರದ ಟೈಟಲ್ನ್ನು ಪ್ರಶ್ನಿಸಿದ್ದರು. ಎರಡೂ ಚಿತ್ರಗಳ ಟೈಟಲ್ನಲ್ಲಿದ್ದ ವ್ಯತ್ಯಾಸ S & Z ಎಂಬ ಸ್ಪೆಲ್ಲಿಂಗ್ ಬದಲಾವಣೆಯಷ್ಟೆ. ಆ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿದ್ದ ತೀರ್ಪು ಕಾಪಿರೈಟ್ ವಿವಾದಗಳಲ್ಲಿ ಐತಿಹಾಸಿಕ ಎಂದೇ ಪರಿಗಣಿಸಲ್ಪಟ್ಟಿದೆ.
ಚಿತ್ರದ ಕಥೆ, ಚಿತ್ರಕಥೆಯ ಬಗ್ಗೆ ಕಾಪಿರೈಟ್ ಇರುತ್ತದೆಯೇ ಹೊರತು, ಚಿತ್ರದ ಟೈಟಲ್ ಮೇಲೆ ಯಾರೂ ಕೂಡಾ ಕಾಪಿರೈಟ್ ಇಟ್ಟುಕೊಳ್ಳಲು ಸಾಧ್ಯವಿಲ್ಲ. ಅವು ಪದಗಳಷ್ಟೆ. ಆ ಪದವನ್ನೇ ಟೈಟಲ್ ಆಗಿಟ್ಟುಕೊಂಡು ಕೊಂಡು ಮತ್ತೊಬ್ಬರು ಬೇರೆ ಸಿನಿಮಾ ಮಾಡಿದರೂ ಅದು ಕಾಪಿರೈಟ್ ಉಲ್ಲಂಘನೆ ಆಗುವುದಿಲ್ಲ ಎಂದಿತ್ತು ಸುಪ್ರೀಂಕೋರ್ಟ್. ಸುಪ್ರೀಂಕೋರ್ಟ್ ತೀರ್ಪಿನ ಪ್ರಕಾರ Desi ಅಥವಾ Boys ಅಥವಾ Boys ನಿಘಂಟಿನಲ್ಲಿರುವ ಪದಗಳಷ್ಟೇ.
ಮಾಸ್ ಲೀಡರ್ ಚಿತ್ರದ ಟೈಟಲ್ ವಿವಾದದಲ್ಲಿ ಹೈಕೋರ್ಟ್ ಸುಪ್ರೀಂಕೋರ್ಟ್ನ ಈ ತೀರ್ಪನ್ನು ಪರಿಗಣಿಸಿದರೆ, ಎಎಂಆರ್ ರಮೇಶ್ ವಾದಕ್ಕೆ ಹಿನ್ನಡೆಯಾಗಬಹುದು. ಏಕೆಂದರೆ, ಇದೇ ತೀರ್ಪನ್ನು ಆಧರಿಸಿ ಈ ಹಿಂದೆ ಮುರುಗನ್ ದಾಸ್ ನಿರ್ದೇಶನದ ರಾಜರಾಣಿ ಎಂಬ ತಮಿಳು ಚಿತ್ರದ ವಿವಾದದ ಬಗ್ಗೆ ಮದ್ರಾಸ್ ಹೈಕೋರ್ಟ್ ತೀರ್ಪು ನೀಡಿತ್ತು. ರಾಜ ರಾಣಿ ಎಂಬುದು ಪದಗಳಷ್ಟೇ. ಆ ಪದಗಳ ಮೇಲೆ ಯಾರೂ ಕಾಪಿರೈಟ್ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿತ್ತು.