ಜಮೀರ್ ಅಹ್ಮದ್, ಅಧಿಕಾರದಲ್ಲಿರಲಿ.. ಬಿಡಲಿ.. ಸದಾ ಸುದ್ದಿಯಲ್ಲಿರುವ ನಾಯಕ. ಸದ್ಯ ಕುಮಾರಸ್ವಾಮಿ ಸರ್ಕಾರದಲ್ಲಿ ಸಚಿವರಾಗಿರುವ ಜಮೀರ್ ಅಹ್ಮದ್, ವರ್ಣರಂಜಿತ ರಾಜಕಾರಣಿ. ಈಗ ಅವರ ಪುತ್ರನನ್ನು ಬೆಳ್ಳಿತೆರೆಗೆ ಪರಿಚಯಿಸಲು ಸಿದ್ಧತೆ ನಡೆಸಿದ್ದಾರೆ. ಜಮೀರ್ ಅವರ ಪುತ್ರ ಜಾಹಿದ್ ಖಾನ್, ಕನ್ನಡ ಚಿತ್ರದ ಮೂಲಕವೇ ಚಿತ್ರರಂಗ ಪ್ರವೇಶಿಸಲಿದ್ದಾರೆ ಎಂಬ ಸುದ್ದಿಗೆ ಜೀವ ಬಂದಿದೆ.
ಜಮೀರ್ ಪುತ್ರನ ಸಿನಿಮಾ ಎಂಟ್ರಿ ಜವಾಬ್ದಾರಿಯನ್ನು ಜಮೀರ್, ನಿರ್ದೇಶಕ ಜಯತೀರ್ಥ ಅವರಿಗೆ ಕೊಟ್ಟಿದ್ದಾರೆ. ಅದನ್ನು ಒಪ್ಪಿಕೊಂಡಿರುವ ಜಯತೀರ್ಥಗೆ ಜಾಹಿದ್ ಖಾನ್ ಓಕೆ ಎನಿಸಿದ್ದಾರೆ. ಈಗಾಗಲೇ ಜಾಹಿದ್ ಖಾನ್, ಮುಂಬೈನಲ್ಲಿ ನಟನಾ ತರಬೇತಿ ಪಡೆಯುತ್ತಿದ್ದಾರೆ. ನಿಮ್ಮನ್ನು ಒಬ್ಬ ಸ್ಟಾರ್ ಎಂಬ ರೀತಿ ಪರಿಚಯಿಸುವುದಿಲ್ಲ, ಒಳ್ಳೆಯ ನಟ ಎನ್ನುವ ರೀತಿಯಲ್ಲಿ ಪರಿಚಯಿಸುತ್ತೇನೆ ಎಂದಿದ್ದಾರಂತೆ ಜಯತೀರ್ಥ. ಆಫರ್ ಬಂದಿರುವುದು ನಿಜ ಎನ್ನುವ ಜಯತೀರ್ಥ, ಅದಕ್ಕೆ ತಕ್ಕಂತೆ ಕಥೆ ಸಿದ್ಧಪಡಿಸುತ್ತಿದ್ದೇನೆ ಎಂದಿದ್ದಾರೆ.
ಜಯತೀರ್ಥ, ಒಲವೇ ಮಂದಾರ, ಬುಲೆಟ್ ಬಸ್ಯಾ, ಟೋನಿ, ಬ್ಯೂಟಿಫುಲ್ ಮನಸುಗಳು, ಬೆಲ್‍ಬಾಟಂನಂತರಹ ವೆರೈಟಿ ಚಿತ್ರಗಳನ್ನು ನೀಡಿದವರು. ಹೊಸಬರನ್ನು ಪರಿಚಯಿಸಿ ಗೆದ್ದಿರುವ ನಿರ್ದೇಶಕ. ಬಹುಶಃ 2010ರ ಆರಂಭದಲ್ಲಿ ಜಮೀರ್ ಪುತ್ರನ ಸಿನಿಮಾಗೆ ಜೀವ ಬರಬಹುದು.