ಶಿವರಾಜ್ ಕುಮಾರ್, ಸುದೀಪ್, ಪುನೀತ್ ರಾಜ್‍ಕುಮಾರ್, ಯಶ್, ರಾಕ್‍ಲೈನ್ ವೆಂಕಟೇಶ್, ಸಿ.ಆರ್.ಮನೋಹರ್, ಜಯಣ್ಣ, ವಿಜಯ್ ಕಿರಗಂದೂರು ಮೇಲೆ ನಡೆದಿರುವ ಐತಿಹಾಸಿಕ ಐಟಿ ರೇಡ್ ಹಿಂದಿರೋ ನಿಜವಾದ ಕಾರಣ ಏನಿರಬಹುದು..? ಅದು ಈಗ ಎಲ್ಲೆಡೆ ಚರ್ಚೆಯಾಗುತ್ತಿರುವ ವಿಷಯ. ಏಕೆಂದರೆ, ಈ ಹಿಂದೆ ಚಿತ್ರರಂಗದವರ ಐಟಿ ದಾಳಿ ಆಗಿಯೇ ಇಲ್ಲ ಎಂದಲ್ಲ. ಹಲವಾರು ಬಾರಿ ಆಗಿವೆ. ಅತೀ ಹೆಚ್ಚು ಐಟಿ ತನಿಖೆ ಎದುರಿಸಿರುವುದು ಬಾಲಿವುಡ್ ಮಂದಿ. ಅವರನ್ನು ತಮಿಳು, ತೆಲುಗು ಚಿತ್ರನಟರು, ನಿರ್ಮಾಪಕರ ಮನೆಗಳಿಗೆ ಐಟಿ ಮಂದಿ ಹೋಗಿ ಬಂದಿದ್ದಾರೆ. ಆದರೆ.. ಹೀಗೆ.. ಇಷ್ಟು ದೊಡ್ಡ ಮಟ್ಟದಲ್ಲಿ.. ಒಂದೇ ದಿನ.. ಇಷ್ಟೊಂದು ನಟರ ಮೇಲೆ, ನಿರ್ಮಾಪಕರ ಮೇಲೆ ಏಕಕಾಲದಲ್ಲಿ ದಾಳಿ ನಡೆದಿದ್ದು ದೇಶದಲ್ಲಿ ಇದೇ ಮೊದಲು.
ಸುಮಾರು 300 ಅಧಿಕಾರಿಗಳ ತಂಡ ದಾಳಿ, ಪರಿಶೀಲನೆ, ವಿಚಾರಣೆಯಲ್ಲಿ ನಿರತವಾಗಿದ್ದಾರೆ. ದಾಳಿ ಎದುರಿಸುತ್ತಿರುವುದು 10ಕ್ಕೂ ಹೆಚ್ಚು ಮಂದಿ. 100 ಇನ್ನೋವಾ ಕಾರುಗಳಲ್ಲಿ ಬಂದಿರುವ ಅಧಿಕಾರಿಗಳು, ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದು ದಾಳಿ ಆರಂಭಿಸುವ ಅರ್ಧಗಂಟೆಗೂ ಮುನ್ನ. ಅದು ಐಟಿ ಅಧಿಕಾರಿಗಳ ದಾಳಿಯ ವೈಖರಿ.
ಒಂದು ಮೂಲದ ಪ್ರಕಾರ, ಇತ್ತೀಚೆಗೆ ಬಂದಂತಹ ವಿಲನ್, ಕೆಜಿಎಫ್ ಚಿತ್ರಗಳು ನೂರಾರು ಕೋಟಿ ಗಳಿಸಿವೆ ಎಂಬ ಸುದ್ದಿಯೇ ಇದಕ್ಕೆಲ್ಲ ಕಾರಣ ಎನ್ನಲಾಗಿದೆ. ಚಿತ್ರಕ್ಕೆ ಅಷ್ಟು ದೊಡ್ಡ ಮೊತ್ತ ಹೂಡಿಕೆ ಮಾಡಿದ್ದು ಹೇಗೆ..? ಆ ಹಣ ಎಲ್ಲಿಂದ ಬಂತು..? ಅದು ಕಪ್ಪುಹಣವಾ..? ಹಾಗಾದರೆ, ಕಪ್ಪುಹಣದ ಮೂಲ ಎಲ್ಲಿ..? ಯಾರು..? ಇಷ್ಟೂ ಹಣಕ್ಕೆ ತೆರಿಗೆ ಕಟ್ಟಿದ್ದಾರಾ..? ಇಲ್ಲವಾ..? ಹೀಗೆ ಹಲವಾರು ಅನುಮಾನಗಳ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ ಎನ್ನಲಾಗಿದೆ.