ಕಳೆದ 27 ವರ್ಷಗಳ ಜೀವನದಲ್ಲಿ ನಾನು ಅಂಬರೀಷ್ ಅವರಲ್ಲಿ ಪತಿಯನ್ನಷ್ಟೇ ಅಲ್ಲ, ತಂದೆ, ಸ್ನೇಹಿತ, ಸಹೋದರ, ಒಳ್ಳೆಯ ಮಗ, ರಾಜಕೀಯ ನಾಯಕ, ಸಮಾಜ ಸೇವಕ, ಉತ್ಸಾಹಿ ಕ್ರೀಡಾಪಟು ಎಲ್ಲವನ್ನೂ ಕಂಡಿದ್ದೇನೆ. ಅಮರ್ ಚಿತ್ರವನ್ನು ನೋಡಬೇಕು ಅನ್ನೋದು ಅವರ ಕನಸಾಗಿತ್ತು. ಅದು ಸಾಧ್ಯವಾಗಿಲ್ಲ. ಅಂಬರೀಷ್‍ಗೆ ನೀಡಿದ ಆಶೀರ್ವಾದವನ್ನು ಮಗನಿಗೂ ನೀಡಿ..
ಇದು ಸುಮಲತಾ ಅಂಬರೀಷ್ ಅಂಬಿ ನಮನದಲ್ಲಿ ಅಭಿಮಾನಿಗಳನ್ನು ಕೇಳಿಕೊಂಡ ಮಾತು. ಮಂಡ್ಯದ ಜನತೆಗೆ, ಸಿಎಂ ಕುಮಾರಸ್ವಾಮಿ, ಅಭಿಮಾನಿಗಳು, ಚಿತ್ರರಂಗದ ಎಲ್ಲರಿಗೂ ಹಲವು ಬಾರಿ ಕೃತಜ್ಞತೆ ಅರ್ಪಿಸಿದ ಸುಮಲತಾ ಅಂಬರೀಷ್, ಭಾವುಕರಾಗಿಯೇ ಮಾತನಾಡುತ್ತಾ ಹೋದರು.
ರಾಜನಂತೆಯೇ ಬಾಳಿದ್ದರು. ರಾಜನಂತೆಯೇ ಕಳಿಸಿಕೊಟ್ಟಿರಿ. ಇದಕ್ಕೆ ಕಾರಣವಾದ ಎಲ್ಲರಿಗೂ ಧನ್ಯವಾದ ಎಂದರು ಸುಮಲತಾ. ಅದರಲ್ಲೂ ಕೊನೆಯಲ್ಲಿ ಭಗವದ್ಗೀತೆ ಉಲ್ಲೇಖಿಸಿ ಹೇಳಿದ ಮಾತು ಎಲ್ಲರ ಮನಮುಟ್ಟಿತು.
ದೇವರು ಮನುಷ್ಯನನ್ನು ಕಳಿಸುವಾಗ ಹೋಗುವಾಗ ಏನನ್ನೂ ತೆಗೆದುಕೊಂಡು ಹೋಗುವುದಿಲ್ಲ. ಬರುವಾಗ ಏನನ್ನೂ ತೆಗೆದುಕೊಂಡು ಬರುವುದಿಲ್ಲ ಎಂದು ದೇವರು ಮನುಷ್ಯನಿಗೆ ಹೇಳುತ್ತಾನೆ. ಅದಕ್ಕೆ ಉತ್ತರಿಸಿದ ಮನುಷ್ಯ, ನೀನು ಕಳಿಸುವಾಗ ಒಂದು ಹೃದಯ ಕೊಟ್ಟು ಕಳುಹಿಸುತ್ತೀಯ. ನಾನು ಬರುವಾಗ ಸಾವಿರಾರು ಹೃದಯಗಳಲ್ಲಿ ನೆಲೆಸುತ್ತೇನೆ ಎಂದು ಹೇಳುತ್ತಾನೆ. ಅಂಬರೀಷ್ ಹಾಗೆಯೇ ಬದುಕಿದರು. ನಾಡಿನ ಹೃದಯಗಳಲ್ಲಿ ನೆಲೆಸಿದರು ಎಂದು ಕಣ್ಣೀರಾದರು ಸುಮಲತಾ.