` chitraloka.com | Kannada Movie News, Reviews | Image - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
v manohar image
v manohar

ಬೆಂಗಳೂರಲ್ಲಿ ಒಂದು ಕಾಲಕ್ಕೆ ಫೇಮಸ್ ಆಗಿದ್ದದ್ದು ತೋಟದಪ್ಪನ ಛತ್ರ. ರೈಲ್ವೇ ನಿಲ್ದಾಣದ ಸಮೀಪವಿರುವ ಈ ಛತ್ರ ಇಂದಿಗೂ ಚಲಾವಣೆಯಲ್ಲಿದೆ. ಅದಾಗಿ ಅದೆಷ್ಟೋ ವರ್ಷಗಳ ನಂತರಬೆಂಗಳೂರಿನ ಕುಮಾರಪಾರ್ಕಲ್ಲಿ ಮತ್ತೊಂದು ಛತ್ರ ತಲೆಯೆತ್ತಿತು. ಫಿಲಂ ಛೇಂಬರ್ ಕಟ್ಟಡದ ಮುಂದಿರುವ ರಸ್ತೆಯಲ್ಲಿ ಸ್ವಲ್ಪ ದೂರ ಸಾಗಿ, ಬಲಕ್ಕೆ ತಿರುಗಿ ಇನ್ನೊಂದು ಕಿರುರಸ್ತೆಯಲ್ಲಿ ಸಾಗಿದರೆ ಅಲ್ಲೇ ಇತ್ತು ಆ ಛತ್ರ. ಕಡಿಮೆಯೆಂದರೂ ಹತ್ತು ವರ್ಷಗಳ ಕಾಲ ಈ  ಛತ್ರ ಅಸ್ತಿತ್ವದಲ್ಲಿತ್ತು ಮತ್ತು ಹಲವಾರು ನಿರುದ್ಯೋಗಿಗಳು ಇದರಿಂದ ಉಪಕೃತರಾದರು. ಗುರುಕಿರಣ್ ಅವರಿಂದ ಹಿಡಿದು ‘ಕೇಸ್ ನಂಬರ್ 18/9’ಚಿತ್ರದ ನಾಯಕ ನಿರಂಜನ್ ತನಕ ಅಲ್ಲಿ ಉಂಡು ಮಲಗಿದವರ ಸಂಖ್ಯೆಯನ್ನು ಲೆಕ್ಕ ಇಟ್ಟವರಿಲ್ಲ. ಅಂದಹಾಗೆ ಆ ಛತ್ರದ ಮಾಲೀಕರ ಹೆಸರು ವಿ, ಮನೋಹರ್.

v manohar, gurukiran image

ವಾಸ್ತವದಲ್ಲಿ ಅದು ಮನೋಹರ್ ತಮ್ಮ ವಾಸಕ್ಕೆ ಹುಡುಕಿಕೊಂಡ ಬಾಡಿಗೆ ಮನೆಯಾಗಿತ್ತು. ಆಗ ಅವರಿಗಿನ್ನೂ ಮದುವೆಯಾಗಿರಲಿಲ್ಲ. ಎರಡು ಬೆಡ್ ರೂಂ ಹೊಂದಿರುವ ಮನೆಯಲ್ಲಿ ಮನೋಹರ್ ಒಬ್ಬರೇ ಇದ್ದಾರೆ ಅನ್ನುವ ಕಾರಣಕ್ಕೋ ಅಥವಾ ಸುಮ್ಮನೆ ಹೋಟೆಲ್ಲಿಗೆ ಯಾಕೆ ಬಾಡಿಗೆ ಕೊಡಬೇಕು ಅನ್ನುವ ಕಾರಣಕ್ಕೋ , ಒಟ್ಟಲ್ಲಿ ಒಬ್ಬೊಬ್ಬರಾಗಿ ಬಂದು ಅಲ್ಲಿ ಸೇರಿಕೊಂಡರು. ಊಟ ಮತ್ತು ವಸತಿ ಉಚಿತ ಅನ್ನುವ ಆಕರ್ಷಕ ಸ್ಕೀಮು ಇದ್ದಿದ್ದರಿಂದ ಒಂದೆರಡು ದಿನಗಳ ಮಟ್ಟಿಗೆ ಅಂತ ಬಂದವರು ಅಲ್ಲೇ ಖಾಯಂ ಆಗಿ ನೆಲೆಯಾದರು.  ಹೀಗೆ ಮನೋಹರ್ ಮನೆ ಅನ್ನುವುದುನೋಡುನೋಡುತ್ತಿದ್ದಂತೆ ಛತ್ರವಾಗಿ ರೂಪಾಂತರಗೊಂಡಿತು. ಹಾಗೆ ಬಂದ ಅತಿಥಿಗಳ ಪೈಕಿ ಮುಕ್ಕಾಲುಭಾಗ ದಕ್ಷಿಣಕನ್ನಡದವರು. ಮನೋಹರ್ ಕೂಡಾ ಅದೇ ಜಿಲ್ಲೆಯ ವಿಟ್ಲ ಎಂಬ ಊರಿನವರು. ಹಾಗಂತ ಬಂದವರು ಯಾರೂ ಮನೋಹರ್ ನೆಂಟರಲ್ಲ, ಚಡ್ಡಿ ದೋಸ್ತುಗಳೂ ಅಲ್ಲ. ನಮ್ಮ ಊರವನು ಅನ್ನುವ ಏಕೈಕ ಸಂಬಂಧವನ್ನೇ ಸರ್ಟಿಫಿಕೇಟ್ ಥರ ಹಿಡಿದುಕೊಂಡು ಬಂದು ಅಲ್ಲೇ ಠಿಕಾಣಿ ಹೂಡಿದವರು.  ಆಮಂತ್ರಣವಿಲ್ಲದೇ ಬಂದ ಅನಪೇಕ್ಷಿತ ಅತಿಥಿಗಳನ್ನು ‘ನೀವ್ಯಾಕೆ ಬಂದಿದ್ದೀರಿ’ಅಂತ ಮನೋಹರ್ ಯಾವತ್ತೂ ಕೇಳಲಿಲ್ಲ, ಬಂದವರು ವಾಪಸ್ ಹೋಗುವ ಸೂಚನೆ ಕಾಣಿಸದೇ ಇದ್ದಾಗ ‘ನೀವ್ಯಾಕೆ ಇನ್ನೂ ಇಲ್ಲೇ ಇದ್ದೀರಿ’ಅಂತಾನೂ ಕೇಳಲಿಲ್ಲ. ಯಾಕೆಂದರೆ ಅದು ಮನೋಹರ್ ಸ್ವಭಾವ ಅಲ್ಲ. ಹೋಗಲಿ, ಆ ಅತಿಥಿಗಳಿಂದ  ಮನೋಹರ್ ಅವರಿಗೆ ಕಿಂಚಿತ್ತಾದರೂ ಉಪಯೋಗ ಆಯಿತಾ?ಹಾಗಂತ ಕೇಳುವುದು ತಪ್ಪಾಗಬಹುದು, ಅತಿಥಿ ಸತ್ಕಾರಕ್ಕೆ ಕರಾವಳಿ ಜನ ಫೇಮಸ್ಸು.ಮನೋಹರ್ ಆ ಸಂಪ್ರದಾಯವನ್ನು ತುಸು ಅತಿಯಾಗಿ ಪಾಲಿಸಿದರು ಅಷ್ಟೆ. ಮನೋಹರ್ ಅವರ ಸಜ್ಜನಿಕೆಗೆ ಮತ್ತು ತಾಳ್ಮೆಗೆ ಸಾಕ್ಷಿಯಂತಿತ್ತು ಆ ಮನೆ.

ಹೀಗೆ  ಮನೋಹರ್ ಮನೆಗೆ ಬಂದವರೆಲ್ಲಾ ಆಮೇಲೆ ಒಬ್ಬೊಬ್ಬರಾಗಿ ಲೈಫಲ್ಲಿ ಸೆಟ್ಲ್ ಆದರು, ತಮ್ಮದೇ ನೆಲೆ ಹುಡುಕಿಕೊಂಡರು, ಕೆಲವರು ಜನಪ್ರಿಯರಾದರು, ಇನ್ನು ಕೆಲವರು ಮನೋಹರ್ ಬಗ್ಗೇನೇ ಗಾಸಿಪ್ ಸೃಷ್ಟಿ ಮಾಡುತ್ತಾ ಸಂತೋಷಪಟ್ಟರು. ಅನ್ನದ ಋಣವನ್ನು ಹೀಗೂ ತೀರಿಸಬಹುದು ಅಂತ ತೋರಿಸಿಕೊಟ್ಟ ಮಹಾನುಭಾವರು ಅವರು. ಮನೋಹರ್ ಬೇಜಾರು ಮಾಡಿಕೊಳ್ಳಲಿಲ್ಲ,ಕೊಂಚ ತಡವಾಗಿಯಾದರೂ ಹೊಸ ಮನೆ ಹುಡುಕಿಕೊಂಡರು, ನಲುವತ್ತೆಂಟನೇ ವಯಸ್ಸಿಗೆ ತನ್ನನ್ನು ಮೆಚ್ಚಿದ ಅಭಿಮಾನಿಯೊಂದಿಗೇ ಮದುವೆಯಾದರು, ಈಗ ಅವರಿಗೊಬ್ಬ ಮುದ್ದಿನ ಮಗಳಿದ್ದಾಳೆ.

ಮನೋಹರ್ ‘ಛತ್ರ’ಪತಿಯಾಗಿದ್ದಾಗ ನಾನು ಕೂಡಾ ಆಗಾಗ ಅಲ್ಲಿಗೆ ಭೇಟಿ ನೀಡುತ್ತಿದ್ದೆ. ಯಾಕೆಂದರೆ ನನ್ನ ಮನೆ ಅಲ್ಲೇ ಪಕ್ಕದ ಶೇಷಾದ್ರಿಪುರಂನಲ್ಲಿತ್ತು, ಅದಕ್ಕಿಂತ ಹೆಚ್ಚಾಗಿ ನನಗೆ ಮನೋಹರ್ ಹಲವಾರು ವರ್ಷದಿಂದ ಪಕ್ಕದವರು. ನನ್ನೂರು ಅಡ್ಯನಡ್ಕದಿಂದ ಅವರ ಊರು ವಿಟ್ಲಕ್ಕೆ ಕೇವಲ ಆರೇ ಮೈಲು. ಆದರೆ ನಾವಿಬ್ಬರೂ ಭೇಟಿಯಾಗಿದ್ದು ಬೆಂಗಳೂರಲ್ಲಿ ಮತ್ತು ಸ್ನೇಹಿತರಾಗಿದ್ದೂ ಇಲ್ಲೇ. ನಾನಿಷ್ಟೊಂದು ಸಲಿಗೆಯಿಂದ ಅವರನ್ನು ಟೀಕಿಸುವುದಕ್ಕೆ ಸಾಧ್ಯವಾಗುತ್ತಿರುವುದೂ ಅದೇ ಕಾರಣಕ್ಕೆ. 1986ನೇ ಇಸ್ವಿಯಲ್ಲಿ ‘ಅರಗಿಣಿ’ಪತ್ರಿಕೆಯಲ್ಲಿ ನನ್ನ ವೃತ್ತಿಬದುಕು ಆರಂಭವಾದಾಗ ಮನೋಹರ್ ಅಲ್ಲಿ ಕಾರ್ಟೂನಿಸ್ಟ್ ಆಗಿ ಕೆಲಸ ಮಾಡುತ್ತಿದ್ದರು. ಈಗಿನ ಜನಪ್ರಿಯ ಛಾಯಾಗ್ರಾಹಕ ವೇಣು ಪುಟ ವಿನ್ಯಾಸಕನಾಗಿದ್ದರು,. ಕೆಲಸದ ಒತ್ತಡ ಜಾಸ್ತಿಯಿದ್ದಾಗ ರಾತ್ರಿ ನಾವೆಲ್ಲ ಕಚೇರಿಯಲ್ಲೇ ಮಲಗುತ್ತಿದ್ದೆವು. ಆಗ ಹೊತ್ತುಹೋಗುವುದಕ್ಕೆ ಎಲ್ಲರೂ ಯಾವುದೋ ಒಂದು ಗದ್ಯಕ್ಕೆ ರಾಗಸಂಯೋಜನೆ ಮಾಡಿ ಅದನ್ನು ಪದ್ಯವಾಗಿಸಿ ಹಾಡುತ್ತಿದ್ದೆವು.  ನನಗೀಗಲೂ ನೆನಪಿದೆ.  ರವಿ ಬೆಳಗೆರೆ ಆಗ ಬಳ್ಳಾರಿಯಲ್ಲೊಂದು  ಕ್ರೈಮ್ ಪತ್ರಿಕೆ ನಡೆಸುತ್ತಿದ್ದರು. ಅವರು ತನ್ನ ಪತ್ರಿಕೆಯಲ್ಲಿ ಬರೆದ ಲೇಖನವೊಂದಕ್ಕೆ ‘ಕದ್ದು ಬರುವ ಮಿಂಡನನ್ನು ಗುದ್ದಿ ಗುದ್ದಿ ಕೊಂದರು’ಅನ್ನುವ ಶೀರ್ಷಿಕೆ ಕೊಟ್ಟಿದ್ದರು. ನಾನು, ಮನೋಹರ್ ಮತ್ತು ಅರಗಿಣಿಯ ಇತರೇ ಉದ್ಯೋಗಿಗಳು ಅದನ್ನೇ ಹಾಡಾಗಿಸಿದೆವು. ನಾನು ಟೇಬಲನ್ನೇ ತಬಲಾ ಮಾಡಿಕೊಂಡು,ಅದೇ ಮಿಂಡ ಇರಬೇಕೇನೋ ಅನ್ನುವಷ್ಟು ಉತ್ಸಾಹದಿಂದ  ಗುದ್ದುತ್ತಿದ್ದರೆ, ಮನೋಹರ್ ಸುಶ್ರಾವ್ಯವಾಗಿ ಹಾಡುತ್ತಿದ್ದರು.

v manohar, kashinath

ಅರಗಿಣಿಯಲ್ಲಿದ್ದಾಗಲೇ ಮನೋಹರ್ ಅವರಿಗೆ ಸಿನಿಮಾ ಸಂಪರ್ಕವಿತ್ತು, ಕಾಶಿನಾಥ್ ಪರಿಚಯವಾಗಿದ್ದರು. ಅನುಭವ ಚಿತ್ರಕ್ಕೆ ಮನೋಹರ್ ಬರೆದ ‘ಹೋದೆಯಾ ದೂರಾ ಓ ಜೊತೆಗಾರ’ಹಾಡು ಹಿಟ್ ಆಗಿತ್ತು. ಅನಂತರ ಮನೋಹರ್ ಕೆಲಸ ಬಿಟ್ಟು ಸಿನಿಮಾಗೆ ಹೊರಟುಹೋದರು. ಅವರದ್ದು ಬಹುಮುಖ ಪ್ರತಿಭೆ. ಅವರೊಳಗೊಬ್ಬವ್ಯಂಗ್ಯ ಚಿತ್ರಕಾರನಿದ್ದ,  ಕವಿಯಿದ್ದ, ಸಂಗೀತ ನಿರ್ದೇಶಕನಿದ್ದ.  ನಟ ಮತ್ತು ನಿರ್ದೇಶಕನೂ ಇದ್ದ ಅನ್ನುವುದು ತಡವಾಗಿ ಬೆಳಕಿಗೆ ಬಂತು.   ಆದರೆ ಬದುಕಿನ ಅನಿವಾರ್ಯಕ್ಕೋ, ಗೆಳೆಯರ ಒತ್ತಾಯಕ್ಕೋ ಅವೆಲ್ಲವನ್ನೂ ಮಾಡುವುದಕ್ಕೆ ಹೋಗಿ ಮನೋಹರ್ ಬಹುರೂಪಿಯಾದರು. ಕೊನೆಗೆ ಯಾವುದಕ್ಕೂ ಬದ್ಧರಾಗದೇ ಕವಲುದಾರಿಯಲ್ಲಿ ತಬ್ಬಿಬ್ಬಾಗಿ ನಿಂತರು. ಈ ಮಾತನ್ನು ನಾನು ಗಾಢ ವಿಷಾದದಿಂದ ಮತ್ತು ಮನೋಹರ್ ಬಗ್ಗೆ ಇರುವ ಅಪರಿಮಿತ ಪ್ರೀತಿ ತುಂಬಿದ ಕಾಳಜಿಯಿಂದಲೇ ಹೇಳುತ್ತಿದ್ದೇನೆ. ಮೂವತ್ತು ವರ್ಷದ ಸುದೀರ್ಘ ಅನುಭವ ಅವರದು, ಜನ್ಮದತ್ತವಾಗಿ ಬಂದ ಅಪರೂಪದ ಪ್ರತಿಭೆಯೂ ಇತ್ತು, ಚಂದದ ಸಾಲುಗಳು ಹೊಳೆದಂತೆ ಅಷ್ಟೆ ಚಂದದ ರಾಗಗಳೂ ಅವರಿಗೆ ಒಲಿದವು. ಆದರೆ ಮನೋಹರ್ ಆರಕ್ಕೇರಲೇ ಇಲ್ಲ. ಜನುಮದ ಜೋಡಿ ಚಿತ್ರ ತೆರೆಕಂಡು ಹಾಡುಗಳು ಯರ್ರಾಬಿರ್ರಿ ಜನಪ್ರಿಯವಾದಾಗ ಇನ್ನೇನು ಹಂಸಲೇಖಾರನ್ನು ಮನೋಹರ್ ಪಕ್ಕಕ್ಕೆ ಸರಿಸಿಯೇ ಬಿಟ್ಟರು ಅಂತ ಜನ ಅಂದುಕೊಂಡಿದ್ದರು. ಆದರೆ ಹಾಗಾಗಲಿಲ್ಲ. ಅದೃಷ್ಟ ಮತ್ತು ಪ್ರತಿಭೆ ಇವೆರಡನ್ನೂ ನಗದು ಮಾಡಿಕೊಳ್ಳುವ ಕಲೆ ಅವರಲ್ಲಿ ಇರಲೇ ಇಲ್ಲ. ಓ ಮಲ್ಲಿಗೆ ಚಿತ್ರ ಹಿಟ್ ಆದಾಗಲೂ ಹಾಗೇ ಆಯಿತು.  ಮನೋಹರ್ ಒಳ್ಳೆಯ ನಿರ್ದೇಶಕರಾಗಬಹುದು ಅಂತ ನಾವೆಲ್ಲ ಬರೆದೆವು. ಇಂದ್ರಧನುಷ್ ಚಿತ್ರದಲ್ಲಿ ಆ ನಿರೀಕ್ಷೆಯನ್ನು ಅವರು ನುಚ್ಚುನೂರು ಮಾಡಿದರು.

v manohar, shailendra babu, sundarnath suvarna

ಇಂದ್ರಧನುಷ್ ಚಿತ್ರದ ಸೋಲು ಮನೋಹರ್ ಅವರನ್ನು ನಾನಾ ರೀತಿಯಲ್ಲಿ ಹೈರಾಣಾಗಿಸಿತು. ಹಳೆಯ ಗೆಳೆಯ ಸುಂದರನಾಥ ಸುವರ್ಣರೇ ಅವರ ವಿರುದ್ಧ ತಿರುಗಿಬಿದ್ದರು. ಶೂಟಿಂಗ್ ಸಂದರ್ಭದಲ್ಲಿ ಮನೋಹರ್ ನಿದ್ದೆ ಮಾಡುತ್ತಿದ್ದರು ಅನ್ನುವ ಆರೋಪ ಮಾಡಿದರು. ಮನೋಹರ್ ಅದಕ್ಕೆ ತಕ್ಕ ಉತ್ತರ ನೀಡಿದರೂ ಚಿತ್ರ ಸೋತುಹೋಗಿದ್ದರಿಂದ ಅವರ ಸಮರ್ಥನೆಯನ್ನು ಚಿತ್ರೋದ್ಯಮ ನಂಬಲಿಲ್ಲ. ಅನಂತರ ಮನೋಹರ್ ಹತ್ತಿರ ಯಾವ ನಿರ್ಮಾಪಕನೂ ಸುಳಿಯಲಿಲ್ಲ. ಸಂಗೀತ ನಿರ್ದೇಶಕನಾಗಿಯೂ ದೊಡ್ಡ ಬ್ಯಾನರಿನ ಚಿತ್ರಗಳು ಸಿಗಲಿಲ್ಲ, ಹೆಸರೇ ಕೇಳದ ಹೊಸನಾಯಕನ ಚಿತ್ರಗಳಿಗೆ ಅವರು ಸಂಗೀತ ನೀಡಿದರು, ಆ ಪೈಕಿ ಬಹುಪಾಲು ಚಿತ್ರಗಳು ತೋಪಾದವು, ಕೆಲವು ಬಿಡುಗಡೆಯಾಗಲೇ ಇಲ್ಲ. ತನಗಿಂತ ಕಿರಿಯ ಸಂಗೀತ ನಿರ್ದೇಶಕರ ರಾಗಕ್ಕೆ ಹಾಡು ಬರೆದರು. ಯಾವುದೂ ಬರ್ಖತ್ತಾಗದೇ ಇದ್ದಾಗ ಟೀವಿ ಚಾನೆಲ್ಲುಗಳತ್ತ ಹೊರಳಿದರು. ಒಂದಿಷ್ಟು ಸೀರಿಯಲ್ಲುಗಳಿಗೆ ಹಾಡು ಬರೆದರು, ಶೀರ್ಷಿಕೆ ಗೀತೆಗೆ ರಾಗಸಂಯೋಜನೆ ಮಾಡಿದರು. ‘ದಂಡಪಿಂಡಗಳು’ಹಾಡು ಕ್ಲಿಕ್ ಆಯಿತು. ಅವರು ಮತ್ತು ಕಾಸರಗೋಡು ಚಿನ್ನಾ ಸೇರಿಕೊಂಡು ನಡೆಸಿಕೊಡುತ್ತಿದ್ದ ‘ಬುರುಡೆ ಭವಿಷ್ಯ’ಅನ್ನುವ ಟೀವಿ ಕಾರ್ಯಕ್ರಮ ಜನಪ್ರಿಯವಾಗಿತ್ತು. ಅಲ್ಲಿಂದಾಚೆಗೆ ಮತ್ತೆ ಎಲ್ಲವೂ ಸ್ತಗಿತವಾಯಿತು. ಇಂದಿಗೂ ಅವರ ಬಳಿ ಸಿನಿಮಾ ಆಗಬಲ್ಲ ಹತ್ತಾರು ಕತೆಗಳಿಗೆ, ಸೀರಿಯಲ್ಲು ಆಗಬಲ್ಲ ಇಪ್ಪತ್ತಾರು ಹಾಸ್ಯಕತೆಗಳಿವೆ, ಅವೆಲ್ಲವಕ್ಕೂ ಮನೋಹರ್ ಅವರಷ್ಟೇ ವಯಸ್ಸಾಗಿವೆ. ಚಾನೆಲ್ಲುಗಳು ಮನೋಹರ್ ಮನವಿಗೆ ಕಿವುಡಾಗಿವೆ.

v manohar

ಕನ್ನಡ ಸಿನಿಮಾ ಸಂಗೀತದಲ್ಲಿ ಪ್ರಯೋಗದ ಮಾತು ಬಂದಾಗ ಹಂಸಲೇಖಾ ಅವರಿಗೆ ಸರಿಸಮಾನರಾಗಿ ನಿಲ್ಲುತ್ತಾರೆ ಮನೋಹರ್. ‘ಜನುಮದ ಜೋಡಿ’ಗೆ ಬರಗೂರು ಬರೆದ ಸಂಭಾಷಣೆಯ ಸಾಲನ್ನೇ ಹಾಡಾಗಿಸಿದ ಖ್ಯಾತಿ ಅವರದು. ‘ರಂಗೇನಹಳ್ಳಿಯಾಗೆ ರಂಗಾದ ರಂಗೇಗೌಡ’ಚಿತ್ರದಲ್ಲಿ ‘ಪೋಗುವೆಯೇತಕೆ ರಮಣಿ’ಅನ್ನುವ ಗೀತೆಯ ಮೂಲಕ ಅರುವತ್ತರ ದಶಕದ ಗೀತೆ ಮತ್ತು ಸಂಗೀತದ ರುಚಿಯನ್ನು ನೆನಪಿಸಿದರು. ಅದೇ ಮಾದರಿಯಲ್ಲಿ ಗುರುಕಿರಣ್ ರಾಗಸಂಯೋಜಿಸಿದ ‘ಪ್ಯಾರ್ ಗೆ ಆಗ್ ಬಿಟ್ಟೈತೆ’ಹಾಡು ಕ್ಲಿಕ್ ಆಯಿತು. ಇದೀಗ ಅಭಿಮನ್ಯು ಸಂಯೋಜಿಸಿರುವ ‘ಸರಳಾ ಸರಳಾ’ಗೀತೆ ಕೂಡಾ ಅದೇ ಬ್ರಾಂಡಿಗೆ ಸೇರಿದ್ದು. ಆದರೆ ಮನೋಹರ್ ಯಾರಿಗೂ ನೆನಪಾಗಲೇ ಇಲ್ಲ. ಕರಾವಳಿಯ ಜನಪದ, ನೇಜಿ ನೆಡುವಾಗ ಹಾಡುವ ಓ ಬೇಲೆ ಪದ, ಹಳೆಗನ್ನಡದ ಸೊಗಡು ಇವೆಲ್ಲವನ್ನೂ ತಮ್ಮ ರಚನೆಗಳಲ್ಲಿ ಬಳಸಿಕೊಳ್ಳುವ ವಿಶಿಷ್ಟ ಶಕ್ತಿ ಮನೋಹರ್ ಪೆನ್ನಿಗಿದೆ.

 ‘ಮನುಷ್ಯ ಇಷ್ಟೊಂದು ಒಳ್ಲೆಯವನಾಗಬಾರದು ಮಾರಾಯ್ರೇ’ಅಂತ ಗುರುಕಿರಣ್ ಆಗಾಗ ಮನೋಹರ್ ಬಗ್ಗೆ ಹೇಳುತ್ತಿರುತ್ತಾರೆ. ನನ್ನದೂ ಅದೇ ಅಭಿಪ್ರಾಯ. ಅದರಲ್ಲೂ ಸಿನಿಮಾರಂಗದಲ್ಲಿ ಇಂಥಾ ಒಳ್ಳೆಯವರು ಉದ್ಧಾರ ಆಗುವುದು ಕನಸಿನ ಮಾತು. ಈ ಮಾತಿಗೆ ಪೂರಕವಾಗಿ ಒಂದು ಘಟನೆ ಹೇಳುತ್ತೇನೆ ಕೇಳಿ.

ಖ್ಯಾತ ನಿರ್ಮಾಪಕರೊಬ್ಬರು ತಮ್ಮ ಹೊಸಚಿತ್ರಕ್ಕೆ ಮನೋಹರ್ ಅವರನ್ನು ಸಂಗೀತ ನಿರ್ದೇಶಕರನ್ನಾಗಿ ಆಯ್ಕೆ ಮಾಡಿಕೊಂಡಿದ್ದರು. ಆ ಚಿತ್ರದ ಮುಹೂರ್ತದ ದಿನ ಸಂಜೆ ಗ್ರೀನ್ ಹೌಸ್ ನಲ್ಲಿ ಪಾರ್ಟಿ ಏರ್ಪಾಡಾಗಿತ್ತು. ಮೈಕ್ ಹಿಡಿದ ನಿರ್ಮಾಪಕರು ಮನೋಹರ್ ಅವರನ್ನು ಯದ್ವಾತದ್ವಾ ಹೊಗಳಿದರು. ಹೊಗಳಿಕೆಯ ಕೊನೆಯ ಸಾಲು ಹೀಗಿತ್ತು -  ‘ನಾನು ಈ ಚಿತ್ರಕ್ಕೆ ಐದು ಲಕ್ಷ ರುಪಾಯಿ ಸಂಭಾವನೆ ಕೊಡುತ್ತೇನೆ ಅಂತ ಮನೋಹರ್ ಗೆ ಹೇಳಿದ್ದೆ. ಆದರೆ ನಿಮ್ಮಂಥಾ ನಿರ್ಮಾಪಕರಿಂದ ಸಂಭಾವನೆ ತೆಗೆದುಕೊಳ್ಳುವುದುಂಟೆ, ನಾನು ಉಚಿತವಾಗಿ ಸಂಗೀತ ನೀಡುತ್ತೇನೆ ಎಂದು ಮನೋಹರ್ ಹೇಳಿದರು. ಇಂಥ ಮನುಷ್ಯರು ಸಿಗೋದು ಬಹಳ ಅಪರೂಪ’.  ಮನೋಹರ್ ಕುರ್ಚಿಯಲ್ಲೇ ಕುಸಿದರು.

ಇಂಥಾ ನೂರಾರು ಪ್ರಸಂಗಗಳು ಮನೋಹರ್ ನೆನಪಿನ ಬುತ್ತಿಯಲ್ಲಿವೆ. ನಿರ್ಮಾಪಕ ಕೊಟ್ಟ ಚೆಕ್ ಬೌನ್ಸ್ ಆದಾಗ ಗಾಯಕರಿಗೆ ತಮ್ಮ ಜೇಬಿನಿಂದಲೇ ಸಂಭಾವನೆ ಕೊಟ್ಟಿದ್ದೂ ಇದೆ. ‘ನನ್ನ ಸಂಭಾವನೆ ಇಷ್ಟು,. ಇದಕ್ಕಿಂತ ಕಡಿಮೆಗೆ ನಾನು ಸಂಗೀತ ನೀಡಲಾರೆ’ಎಂಬ ಮಾತು ಮನೋಹರ್ ಬಾಯಿಂದ ಕಳೆದ ಮೂವತ್ತು ವರ್ಷಗಳಲ್ಲಿ ಒಮ್ಮೆಯೂ ಬಂದಿಲ್ಲ. ಹೆಸರೇ ಕೇಳದ ನಿರ್ಮಾಪಕರು ಬಂದು ನಮ್ಮ ಸಿನಿಮಾಗೆ ಸಂಗೀತ ನೀಡಿ ಅಂದಾಗಲೂ ಮನೋಹರ್ ಊಹೂಂ ಅಂದಿದ್ದಿಲ್ಲ. ಯಾಕೆಂದರೆ ಮನೋಹರ್ ಅವರಿಗೆ ತನ್ನನ್ನು ತಾನೇ ಮಾರ್ಕೆಟ್ ಮಾಡೋದಕ್ಕೆ ಬರೋದಿಲ್ಲ. ಹಾಗಂತ ಮನೋಹರ್ ಅವರಲ್ಲಿ ಬಂಡಾಯದ ಗುಣ ಇಲ್ಲ ಅನ್ನುವ ಹಾಗಿಲ್ಲ. ಚಿತ್ರರಂಗದೊಳಗೆ ಏನಾದರೂ ಆನ್ಯಾಯ ಆದಾಗಲೆಲ್ಲಾ ಮೊದಲು ಧ್ವನಿಯೆತ್ತುವವರೇ ಆವರು. ಆದರೆ ಅದರಿಂದ ತೊಂದರೆ ಆಗುತ್ತಿದ್ದದ್ದು ಅವರಿಗೇ. ಎಫ್ ಎಂ ಚಾನೆಲ್ಲುಗಳು ಕನ್ನಡ ಚಿತ್ರಗೀತೆಗಳಿಗೆ ಅನ್ಯಾಯ ಮಾಡುತ್ತಿದೆ ಅಂತ ಮನೋಹರ್ ಹೇಳಿದ್ದಕ್ಕೆ ಹಲವಾರು ಎಫ್ ಎಂ ಸ್ಟೇಷನ್ನುಗಳು ಅವರನ್ನು ಬ್ಯಾನ್ ಮಾಡಿದ್ದುಂಟು.

ಮನೋಹರ್ ಇದೀಗ ಯಾವುದೋ ಯಾವುದೋ ತುಳುಚಿತ್ರಕ್ಕೆ ನಿರ್ದೇಶನ ಮಾಡುವುದಕ್ಕೆ ಹೊರಟಿದ್ದಾರೆ ಅನ್ನುವ ಸುದ್ದಿ ಓದಿದಾಗ ಹಳೆಯದೆಲ್ಲವೂ ನೆನಪಾಯಿತು. ಎಲ್ಲಾ ವ್ಯವಸ್ಥೆಯೊಳಗೂ ಒಂದು ರಾಜಕೀಯ ಇದ್ದೇ ಇರುತ್ತದೆ, ಅದಕ್ಕೆ ಹೊಂದಿಕೊಳ್ಳದೇ ಇದ್ದವರು ಮನೋಹರ್ ಆಗುತ್ತಾರೆ. ಈಗಿನ ಸ್ಕೂಲ್ ಮಕ್ಕಳ ಕಣ್ಣಿಗೆ ಗಾಂಧಿ ಹೇಗೆ ಕಾಣಿಸುತ್ತಾರೋ ಚಿತ್ರೋದ್ಯಮದ ಕಣ್ಣಿಗೆ ಮನೋಹರ್ ಹಾಗೇ ಕಾಣಿಸುತ್ತಿದ್ದಾರೆ. ಒಳ್ಲೇತನ ಅನ್ನುವುದು ಮೌಲ್ಯ ಎಂಬ ನಂಬಿಕೆ ಮಾಯವಾಗಿ ಅದೊಂದು ದೌರ್ಬಲ್ಯ ಅನ್ನುವ ಸ್ಥಿತಿಗೆ ನಾವು ತಲುಪಿದ್ದಾಗಿದೆ.

ಅಂದಹಾಗೆ ಮನೋಹರ್ ತವರೂರು ವಿಟ್ಲ ಆವತ್ತು ಹೇಗಿತ್ತೋ ಈಗಲೂ ಹಾಗೇ ಇದೆ, ಥೇಟು ಮನೋಹರ್ ಥರಾನೇ. ವಿಟ್ಲದ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ಇತ್ತೀಚೆಗಷ್ಟೇ ಜೀರ್ಣೋದ್ಧಾರ ಆಯಿತು. ಮನೋಹರ್ ಇದೇ ಥರ ಉದ್ಧಾರ ಆಗಬೇಕು ಅನ್ನುವುದು ನನ್ನಂಥ ಭಕ್ತರ ಪ್ರಾರ್ಥನೆ.

Also See

Uma Column 17 - ತಂದೆ ನೀನಾಗು ಬಾ

Uma Column 16 - ಎಲ್ಲರೂ ಮಾಲಾಶ್ರೀ ಆಗುವುದಕ್ಕಾಗೋಲ್ಲ

Malashree Vs Ragini On Dec 27

Uma Column 15 - ಚಿತ್ರೋತ್ಸವವನ್ನು ಯೂ ಟ್ಯೂಬ್ ನಲ್ಲಿ ನೋಡಿ!

Uma Column 14 - ಹಾಗೆ ಸುಮ್ಮನೆ ಕಳೆದು ಹೋದ ಜೀನಿಯಸ್

Uma Column 13 - ಮಲ್ಟಿಪ್ಲೆಕ್ಸಲ್ಲಿ ಸಿನಿಮಾ ಭಾಗ್ಯ ಯೋಜನೆ

Uma Column 12 - ದೇವರಿಗೂ ಬೇಕಾ ಪ್ರಶಸ್ತಿಯ ಕಿರೀಟ?

Uma Column 11 - ಯಾರಿಗೇಳೋಣಾ ನಮ್ಮ ಪ್ರಾಬ್ಲಂ

Uma Column 10 - ತೊಲಗು ಅಂದರೆ ನಾನು ತೆಲುಗು ಅಂದ ಹಾಗಾಯಿತು

Uma Column 9 - ಹಳ್ಳಿ ಹುಡುಗನನ್ನು ಕೊಂದವರ್ಯಾರು?

Uma Column 8 - ಶಂಕರ ನಾಗಮಂಡಲದಲ್ಲಿ ಒಂದು ಸುತ್ತು..

Uma Column 7 - ಪ್ರಶಸ್ತಿಗಳು ಮಾರಾಟಕ್ಕಿವೆ!

Uma Column 6 - ಹಾಯ್ ಕನ್ನಡ ತಾಯ್!

Uma Column 5 - ನನ್ನ ಭಯ ಮತ್ತು ಅಭಯನ ಜಯ

Uma Column 4 - ಭಟ್ರ ಕ್ವಾರ್ಟರ್ರು ಎಂಬ ಸೀರಿಯಸ್ ಮ್ಯಾಟರ್ರು

Uma Column 3 - ಕಲ್ಲು ಕೊರಗುವ ಸಮಯ

Uma Column 2 - ಮುನಿ ಮತ್ತು MONEY

Uma Column 1 - ಜಗತ್ತಿನ ಕೂಸು ಮತ್ತು ಕನ್ನಡದ ಮನಸ್ಸು

ಸಿನಿಮಾ ಪತ್ರಿಕೋದ್ಯಮದಲ್ಲಿ ಉದಯ್ ನನ್ನ ಗುರು - ಜೋಗಿ

Udaya Marakini Column In Chitraloka

Pls Note -

The views expressed in this column are those of its author and Chitraloka or its publishers do not claim to endorse it. You can express your opinion to his e-mail - This email address is being protected from spambots. You need JavaScript enabled to view it.