ರವಿಚಂದ್ರನ್ ತಂದೆ ಆಗ್ತಾರಂತೆ!ಈ ಸುದ್ದಿ ಓದಿ ಹಾಲು ಕುಡಿದಷ್ಟು ಸಂತೋಷವಾಯಿತು. ವಯಸ್ಸು 53 ಆಯಿತು, ಈಗಲೂ ಅಪ್ಪನಾಗದೇ ಇದ್ದರೆ ಇನ್ಯಾವಾಗ ಆಗೋದು ಅಲ್ವಾ? ವಯಸ್ಸು ಮೀರುತ್ತಿರುವ ನಮ್ಮ ಮಿಕ್ಕೆಲ್ಲಾ ನಾಯಕರಿಗೂ ಆ ಭಗವಂತ ಇಂಥಾ ಸದ್ಬುದ್ದಿಯನ್ನು ಕೊಡಲಿ ಅನ್ನುವುದು ನನ್ನ ವಿನಮ್ರ ಪ್ರಾರ್ಥನೆ. ನಾನು ಹೀಗಂದ ಕೂಡಲೇ ಈ ಮಾತು ನಮ್ಮ ಗುರುವನ್ನೇ ಉದ್ದೇಶಿಸಿ ಹೇಳಿದ್ದು ಅಂತ ಅಭಿಮಾನಿಗಳು ಕೆರಳಬಾರದು ಅನ್ನುವುದು ನನ್ನ ಮತ್ತೊಂದು ಕೋರಿಕೆ. ಕಾಲ ಮತ್ತು ತನ್ನ ವಯಸ್ಸಿಗೆ ಅನುಗುಣವಾಗಿ ಒಬ್ಬ ನಟ (ವ್ಯಕ್ತಿ) ತನ್ನ ಪಾತ್ರಗಳನ್ನು ಬದಲಾಯಿಸಿಕೊಳ್ಳಬೇಕಾಗುತ್ತದೆ. ಅದು ಪ್ರಕೃತಿಯ ನಿಯಮವೂ ಹೌದು, ಬೆಳ್ಳಿ ಪರದೆಯ ನಿಯಮವೂ ಹೌದು.
ಹಾಗನ್ನುವ ಹೊತ್ತಿಗೆ ನನಗೆ ‘ಕಲಿಯುಗ ಭೀಮ’ಅನ್ನುವ ಟೈಗರ್ ಪ್ರಭಾಕರ್ ಅವರ ಹಳೇ ಚಿತ್ರ ನೆನಪಾಗುತ್ತದೆ. ಬಹುಶಃ ಆ ಪಾತ್ರ ಮಾಡುವ ಹೊತ್ತಿಗೆ ಪ್ರಭಾಕರ್ ಅವರಿಗೆ ನಲುವತ್ತೈದು ವರ್ಷ ಆಗಿದ್ದಿರಬಹುದು. ದಢೂತಿ ದೇಹದಿಂದಾಗಿ ಅವರು ಇನ್ನಷ್ಟು ಪ್ರಾಯವಾದವರಂತೆ ಕಾಣಿಸುತ್ತಿದ್ದರು. ಆದರೆ ಆ ಚಿತ್ರದಲ್ಲಿ ಅವರಿಗೆ ಕಾಲೇಜು ಹುಡುಗನ ಪಾತ್ರ ನೀಡಲಾಗಿತ್ತು. ಕೈಯಲ್ಲಿ ನೋಟು ಬುಕ್ ಹಿಡಿದುಕೊಂಡು ತರಗತಿಯೊಳಗೆ ಬರುವ ಟೈಗರನ್ನು ನೋಡಿ ಜನ ಬಿದ್ದುಬಿದ್ದು ನಕ್ಕಿದ್ದರು. ಇಂಥಾ ಆಭಾಸಗಳು ಆಗ ತಮಿಳು, ತೆಲುಗು ಚಿತ್ರರಂಗದಲ್ಲೂ ಸಾಮಾನ್ಯವಾಗಿತ್ತು. ಅದಕ್ಕೆ ಕಾರಣಗಳೂ ಇದ್ದವು. ಆಗಿನ ಸಿನಿಮಾ ಕತೆಗಳಲ್ಲಿ ನಾಯಕನ ಪಾತ್ರಕ್ಕೆ ನಿರ್ದಿಷ್ಟ ಉದ್ಯೋಗ ಅನ್ನುವುದು ಇರುತ್ತಿರಲಿಲ್ಲ. ಹೆಚ್ಚಿನ ನಾಯಕರು ಕಾಲೇಜು ವಿದ್ಯಾರ್ಥಿಗಳು ಅಥವಾ ಆಗಷ್ಟೇ ಕಾಲೇಜು ಮುಗಿಸಿದ್ದ ನಿರುದ್ಯೋಗಿಗಳು. ನಾಯಕಿಯ ಹಿಂದೆ ಓಡಾಡುವುದು ಮತ್ತು ಖಳರೊಂದಿಗೆ ಹೊಡೆದಾಡುವುದು ಅವರ ಪರ್ಮನೆಂಟ್ ವೃತ್ತಿ. ತಮಾಷೆಯಂದರೆ ಇಂದಿನ ಯಶಸ್ವಿ ನಿರ್ದೇಶಕ ಯೋಗರಾಜ ಭಟ್ಟರ ಚಿತ್ರಗಳ ನಾಯಕನೂ ಇಂಥಾದ್ದೇ ನಿರುದ್ಯೋಗ ಸಮಸ್ಯೆಯಿಂದ ಬಳಲುತ್ತಿರುತ್ತಾನೆ.
ನಮ್ಮ ನಾಯಕರೇಕೆ ತಂದೆ ಪಾತ್ರಗಳನ್ನು ಒಪ್ಪಿಕೊಳ್ಳುವುದಕ್ಕೆ ಹಿಂಜರಿಯುತ್ತಾರೆ?ಐವತ್ತು ವರ್ಷ ದಾಟಿದ ನಟರು ಆಂಗ್ರಿ ಯಂಗ್ ಮ್ಯಾನ್ ಪಾತ್ರ ಮಾಡಿ ಪ್ರೇಕ್ಷಕರ ಗೇಲಿಗೆ ಗುರಿಯಾಗುವ ಬದಲಾಗಿ, ತಮ್ಮ ವಯೋಧರ್ಮಕ್ಕೆ ಹೊಂದಿಕೊಳ್ಳುವ ಕಾಲೇಜು ಪ್ರೊಫೆಸರ್ ಥರದ ಪಾತ್ರ ಯಾಕೆ ಮಾಡಬಾರದು? ನಾನೊಂದು ಸಾರಿ ಧೈರ್ಯ ಮಾಡಿ ಇದೇ ಪ್ರಶ್ನೆಯನ್ನು ವಿಷ್ಣುವರ್ಧನ್ ಅವರಿಗೆ ಕೇಳಿದ್ದೆ. “ನೀವು ಯಾಕೆ ನಿಮ್ಮ ವಯಸ್ಸಿಗೆ ತಕ್ಕಂಥ ಪಾತ್ರ ಮಾಡುವುದಿಲ್ಲ?”. ಆಶ್ಚರ್ಯವೆಂದರೆ ವಿಷ್ಣು ಅವರೇನೂ ಈ ಪ್ರಶ್ನೆಯಿಂದ ಸಿಟ್ಟಾಗಲಿಲ್ಲ, ವಿಚಲಿತರೂ ಆಗಲಿಲ್ಲ. ಸ್ವಲ್ಪ ಯೋಚನೆ ಮಾಡಿ ಹೇಳಿದರು. “ನಾನು ಅಂಥಾ ಪಾತ್ರಕ್ಕೆ ಮಾಡುವುದಕ್ಕೆ ರೆಡಿ, ಆದರೆ ನನ್ನ ಅಭಿಮಾನಿಗಳು ನನ್ನನ್ನು ಆ ರೂಪದಲ್ಲಿ ನೋಡುವುದಕ್ಕೆ ಇಷ್ಟಪಡುವುದಿಲ್ಲ. ಹಾಗಾದಾಗ ಸಿನಿಮಾ ಸೋಲುತ್ತದೆ, ನನ್ನನ್ನು ನಂಬಿದ ನಿರ್ಮಾಪಕನಿಗೆ ನಷ್ಟವಾಗುತ್ತದೆ”. ಒಬ್ಬ ನಟ ಸ್ಟಾರ್ ಪಟ್ಟವೇರಿದ ಮೇಲೆ ಆತನಿಗೆ ತನಗಿಷ್ಟವಾದ ಪಾತ್ರ ಮಾಡುವ ಸ್ವಾತಂತ್ರ್ಯ ಇರುವುದಿಲ್ಲ ಅನ್ನುವುದನ್ನು ವಿಷ್ಣುವರ್ಧನ್ ಈ ರೀತಿಯಾಗಿ ಹೇಳಿದರು ಅನಿಸುತ್ತದೆ.
ಹಾಗಿದ್ದರೆ ಒಬ್ಬ ಹೀರೋಗೆ ‘ನೀನಿನ್ನೂ ಕಿರಿಯನಾಗಿಯೇ ಇರು’ಅಂಥ ಶಾಪ ಕೊಡುವವರಾದರೂ ಯಾರು?ನಿರ್ಮಾಪಕರೋ, ನಿರ್ದೇಶಕರೋ ಅಥವಾ ಅಭಿಮಾನಿಗಳೋ?ಈ ಪ್ರಶ್ನೆಗೆ ಉತ್ತರ ಸಿಗುವುದಿಲ್ಲ, ಯಾಕೆಂದರೆ ಈ ಮೂವರೂ ನಾನವನಲ್ಲ ಅನ್ನುತ್ತಲೇ ಪಕ್ಕದವನ ಕಡೆ ಕೈತೋರಿಸುತ್ತಾರೆ. ಅಪ್ಪಿತಪ್ಪಿಒಬ್ಬ ಹೀರೋ ತಂದೆಯಾಗುವುದಕ್ಕೆ ಒಪ್ಪಿಕೊಂಡ ಅಂತಾನೇ ಇಟ್ಟುಕೊಳ್ಲಿ, ಆಗ ಆತನ ಮನಸ್ಸಂತೋಷಪಡಿಸುವುದಕ್ಕೆ ನಿರ್ದೇಶಕ ಇನ್ನೊಂದು ಪಾತ್ರ ಸೃಷ್ಟಿ ಮಾಡುತ್ತಾನೆ. ತಂದೆ ಮತ್ತು ಮಗ- ಇವೆರಡೂ ಪಾತ್ರಗಳಲ್ಲೂ ಹೀರೋನೇ ನಟಿಸುತ್ತಾನೆ.
ನಿಮಗೆ ಶಾನ್ ಕಾನರಿ ಎಂಬ ಹಾಲಿವುಡ್ ನಟನ ಬಗ್ಗೆ ಗೊತ್ತಿರಲೇಬೇಕು. ಒಂದು ಕಾಲದಲ್ಲಿ ಜೇಬ್ಸ್ ಬಾಂಡ್ ಆಗಿ ಜನಪ್ರಿಯನಾಗಿದ್ದವನು. 1962ನೇ ಇಸ್ವಿಯಿಂದ 83ರ ತನಕ ಇಪ್ಪತ್ತೊಂದು ವರ್ಷದ ಕಾಲ ಬಾಂಡ್ ಆಗಿಯೇ ರಂಜಿಸಿದವನು. ತನ್ನ ಐವತ್ತೈದನೇ ವಯಸ್ಸಿಗೆ ಆತ ಬಾಂಡ್ ಪಟ್ಟದಿಂದ ಕೆಳಗಿಳಿದ, ಹಾಗಂತ ನಿವೃತ್ತನಾಗಲಿಲ್ಲ. ಬೇರೆ ಮಾದರಿಯ ಪಾತ್ರಗಳಿಗೆ ಹೊರಳಿದ, ಚಿಕ್ಕಪುಟ್ಟ ಹೀರೋಗಳ ಜೊತೆಗೂ ನಟಿಸಿದ. ‘ಅನ್ ಟಚೇಬಲ್’ಎಂಬ ಚಿತ್ರದಲ್ಲಿ ಹಿರಿಯನ ಪಾತ್ರ ನಿರ್ವಹಿಸಿದ. ಆ ಪಾತ್ರಕ್ಕೆ ಶ್ರೇಷ್ಠ ಪೋಷಕ ನಟ ಆಸ್ಕರ್ ಪ್ರಶಸ್ತಿ ಬಂತು. ನೆನಪಿರಲಿ, ಆತ ಬಾಂಡ್ ಆಗಿದ್ದಾಗ ಯಾವತ್ತೂ ಪ್ರಶಸ್ತಿ ಬಂದಿರಲಿಲ್ಲ. ಕಾನರಿಗೆ 79 ವರ್ಷ ತುಂಬಿದಾಗ ಆತನನ್ನು ಈ ಶತಮಾನದ ಸೆಕ್ಸಿಯೆಸ್ಟ್ ನಟ ಎಂದು ಪೀಪಲ್ ಪತ್ರಿಕೆ ಕರೆಯಿತು. ಈಗ ಯಾರೂ ಶಾನ್ ಕಾನರಿಯನ್ನು ಮಾಜಿ ಬಾಂಡ್ ಎಂದು ಕರೆಯುವುದಿಲ್ಲ, ಬದಲಾಗಿ ಒಬ್ಬ ಒಳ್ಳೆಯ ನಟ ಎಂದೇ ಗುರುತಿಸುತ್ತಾರೆ. ಬಾಂಡ್ ಇಮೇಜಿನಿಂದ ಕಳಚಿಕೊಂಡಿದ್ದರಿಂದ ಅವನಿಗೆ ಲಾಭವೇ ಆಯಿತು. ಅದೇ ಥರ ಸಾಹಸಸಿಂಹ ಇಮೇಜಿನಿಂದ ಕಳಚಿಕೊಳ್ಳುವುದಕ್ಕೆ ವಿಷ್ಣುವರ್ಧನ್ ಅವರಿಗೆ ಸಾಧ್ಯವಿತ್ತು, ಅವರೊಂದು ಚಿಕ್ಕ ರಿಸ್ಕ್ ತೆಗೆದುಕೊಳ್ಳಬೇಕಾಗಿತ್ತು. ಅದ್ಯಾಕೋ ಅವರು ಅದಕ್ಕೆ ಸಿದ್ಧರಾಗಿರಲಿಲ್ಲ. ಹಾಗಾಗಿ ಒಬ್ಬ ಚರಿತ್ರ ನಟನಾಗುವ ಅವಕಾಶದಿಂದ ಅವರು ವಂಚಿತರಾದರುಅನ್ನುವುದು ನನ್ನ ಭಾವನೆ.
ಶಾನ್ ಕಾನರಿಯ ರೂಪಾಂತರವನ್ನು ನಮ್ಮಲ್ಲಿ ಸರಿಯಾಗಿ ಅರ್ಥ ಮಾಡಿಕೊಂಡವರೆಂದರೆ ಅಮಿತಾಬ್ ಬಚ್ಚನ್. ಹಿಂದಿ ಚಿತ್ರರಂಗದಲ್ಲಿ ಹೊಸನೀರು ಹರಿದುಬರುತ್ತಿರುವ ಸಪ್ಪಳ ಕೇಳಿಸುತ್ತಿದ್ದಂತೆಯೇ ಅಮಿತಾಬ್ ವಯಸ್ಕನ ಪಾತ್ರಗಳಿಗೆ ವರ್ಗವಾದರು. ಒಳ್ಳೆಯ ತಂದೆ, ಕ್ರೂರ ಡಾನ್, ಅಲ್ಜಮೈರ್ ಕಾಯಿಲೆಯಿಂದ ಬಳಲುತ್ತಿರುವ ಮುದುಕ, ಹೀಗೆ. ತಾನು ನಾಯಕನಾಗಿದ್ದಾಗ ನಿರ್ವಸುತ್ತಿದ್ದ ಪಾತ್ರಗಳಿಗಂತ ಹೆಚ್ಚಿನ ವೈವಿಧ್ಯಮಯ ಪಾತ್ರಗಳನ್ನು ವಯಸ್ಸಾದ ನಂತರ ಅಮಿತಾಬ್ ಮಾಡಿದರು. ಅದರಿಂದ ಅವರಿಗೆ, ಪ್ರೇಕ್ಷಕರಿಗೆ ಮತ್ತು ಚಿತ್ರೋದ್ಯಮ ಈ ಮೂವರಿಗೂ ಏಕಕಾಲಕ್ಕೆ ಲಾಭವಾಯಿತು. ಅದೆಲ್ಲಕ್ಕಿಂತ ಹೆಚ್ಚಾಗಿ ಪೋಷಕನಟನ ಪಾತ್ರಕ್ಕೊಂದು ತೂಕ, ಗತ್ತು, ಮರ್ಯಾದೆ, ಬೆಲೆ ಎಲ್ಲವೂ ಒದಗಿಬಂದವು. ಇಂದಿಗೂ ಅವರ ಚಿತ್ರಗಳಲ್ಲಿ ಅವರೇ ನಾಯಕ. ಯಾಕೆಂದರೆ ನಾಯಕನ ಪಾತ್ರ ಆತನ ವಯಸ್ಸಿನಿಂದ ನಿರ್ಧಾರವಾಗುವುದಿಲ್ಲ. ಆ ಸಿನಿಮಾದಲ್ಲಿ ಆ ಪಾತ್ರಕ್ಕಿರುವ ಮಹತ್ವದಿಂದ ನಿರ್ಧಾರವಾಗುತ್ತದೆ. ಉದಾಹರಣೆಗೆ ಕಾಸರವಳ್ಳಿಯವರ ‘ಕನಸೆಂಬೋ ಕುದುರೆಯೇರಿ’ಚಿತ್ರದಲ್ಲಿ ಬಿರಾದಾರ್ ಅವರೇ ಹೀರೋ.
ಅಷ್ಟಕ್ಕೂ ತಂದೆ ಪಾತ್ರ ಮಾಡುವುದು ಅಂದರೆ ಹಿಂಬಡ್ತಿ ಅಂತ ಯಾರಾದರೂ ಯಾಕೆ ಅಂದುಕೊಳ್ಳಬೇಕು?ನನ್ನ ಪ್ರಕಾರ ಅದೊಂದು ಪುಣ್ಯದ ಕೆಲಸ, ಸಿನಿಮಾದಲ್ಲಾದರೂ ಅಷ್ಟೆ, ನಿಜಬದುಕಲ್ಲಾದರೂ ಅಷ್ಟೆ. ಒಬ್ಬ ವ್ಯಕ್ತಿ ತಂದೆಯಾದರೆಜವಾಬ್ದಾರಿ ಅವನ ಹೆಗಲೇರಿತು ಅಂತಾನೇ ಅರ್ಥ ಅಥವಾ ಅಟ್ಲೀಸ್ಟ್ ಹಾಗಂತ ಆತ ಅಂದುಕೊಳ್ಳುವ ಅವಕಾಶವಾದರೂ ಸಿಗುತ್ತದೆ. ತಂದೆ ಅನ್ನುವ ಬಿರುದು ನಿಮ್ಮ ಪ್ರಬುದ್ಧತೆಗೆ ಸಂಕೇತವೂ ಹೌದು. ನೀವು ಇನ್ನು ಮುಂದೆ ಬಿಡುಬೀಸಾಗಿ ಬದುಕುವ ಹಾಗಿಲ್ಲ ಅನ್ನುವ ಎಚ್ಚರಿಕೆಯ ಗಂಟೆಯೂ ಹೌದು. ನಿಮ್ಮ ಮಗಳು ಅಥವಾ ಮಗ ನಿಮ್ಮೆಲ್ಲಾ ನಡವಳಿಕೆಗಳನ್ನು ತದೇಕಚಿತ್ತರಾಗಿ ಗಮನಿಸುತ್ತಿರುತ್ತಾರೆ. ಮುಂದೆ ಅದನ್ನೇ ಅವರು ಅನುಕರಿಸುವ ಸಾಧ್ಯತೆಯೂ ಇದೆ. ಯಾಕೆಂದರೆ ಜಗತ್ತಿನ ಎಲ್ಲ ಮಕ್ಕಳಿಗೂ ಅಪ್ಪನೇ ಹೀರೋ.
ವಿಪರ್ಯಾಸವೆಂದರೆ ಸಿನಿಮಾದಲ್ಲಿ ಅಪ್ಪನ ಪಾತ್ರವನ್ನು ನಾವ್ಯಾರೂ ಹೀರೋ ಥರ ನೋಡುವುದಿಲ್ಲ. ನಮ್ಮ ಮಟ್ಟಿಗೆ ಅದೊಂದು ಬಂದುಹೋಗುವ ಪೋಷಕ ಪಾತ್ರ. ಅದನ್ನು ಯಾರು ಮಾಡಿದರೂ ನಡೆಯುತ್ತದೆ ಅನ್ನುವ ಮನೋಭಾವ ನಮ್ಮ ನಿರ್ಮಾಪಕ, ನಿರ್ದೇಶಕರಲ್ಲಿ ಮನೆಮಾಡಿದೆ. ತರ್ಕಬದ್ಧವಾಗಿ ಯೋಚನೆ ಮಾಡಿದರೆ ನಮ್ಮ ಸಿನಿಮಾಗಳಲ್ಲಿ ನಾಯಕಿನಿಗೇನು ಕೆಲಸ ಇರುತ್ತದೆ ಹೇಳಿ.. ಲವ್ ಮಾಡುವುದು, ಹೊಡೆದಾಡುವುದು, ಡ್ಯುಯೆಟ್ ಹಾಡುವುದು ಇಷ್ಟಕ್ಕೆ ಅವನ ಪಾತ್ರ ಮುಗಿದುಹೋಗುತ್ತದೆ. ಆದರೆ ಅಪ್ಪನ ಪಾತ್ರ ಕ್ಕೆ ಹತ್ತಾರು ಶೇಡ್ಸ್ ಇರುತ್ತವೆ. ರಾಜ್ ಕುಮಾರ್ ಅವರ ಜೀವನಚೈತ್ರ, ಪರಶುರಾಮ ಚಿತ್ರಗಳನ್ನು ನೋಡಿದರೆ ನಿಮಗದು ಅರ್ಥ ಆಗುತ್ತದೆ. ಹಾಗಿದ್ದರೂ ಅಪ್ಪ ಅಂದಾಕ್ಷಣ ನಮ್ಮ ಕಣ್ಣಮುಂದೆ ನೆನಪಾಗುವುದು ಅಶ್ವತ್ಥ್. ಅವರು ಅಪ್ಪನ ಪಾತ್ರಕ್ಕೊಂದು ಘನತೆ ತಂದುಕೊಟ್ಟರು ಅನ್ನುವುದರಲ್ಲಿ ಎರಡು ಮಾತಿಲ್ಲ, ಆದರೆ ಬೇರೆಯವರೂ ಆ ಮಟ್ಟಕ್ಕೆ ಏರುವ ಅವಕಾಶವಿತ್ತು ಅನ್ನುವುದೂ ಅಷ್ಟೇ ನಿಜ. ದುರದೃಷ್ಟವಶಾತ್ ಯಾವ ನಾಯಕನೂ ಮನಸ್ಸು ಮಾಡಲಿಲ್ಲ.
ನಮ್ಮ ಕಮರ್ಷಿಯಲ್ ಚಿತ್ರಗಳಲ್ಲಿ ಅಪ್ಪನಿಗೆ ನಿರ್ದೇಶಕರು ಜಾಸ್ತಿ ಅವಕಾಶ ನೀಡುವುದಿಲ್ಲ ಅನ್ನುವುದು ನಿಜ. ಆದರೆ ಒಬ್ಬ ಜನಪ್ರಿಯ ನಟನೇ ಅಪ್ಪನ ಪಾತ್ರ ಮಾಡಿದಾಗ ನಿರ್ದೇಶಕರು ಉದಾರಿಗಳಾಗಲೇಬೇಕು. ಪ್ರೇಕ್ಷಕರನ್ನು ಮೆಚ್ಚಿಸುವ ಸಲುವಾಗಿಯಾದರೂ ಆ ಪಾತ್ರಕ್ಕೆ ಕತೆಯೊಳಗೆ ಜಾಸ್ತಿ ಸ್ಪೇಸ್ ಮತ್ತು ಸ್ಕೋಪ್ ಕೊಡಲೇಬೇಕಾಗುತ್ತದೆ. ಉದಾಹರಣೆಗೆ ‘ಲಾಲಿ’ಚಿತ್ರ ನೋಡಿ. ಅಲ್ಲಿ ನೆಪಕ್ಕೊಬ್ಬ ಹೀರೋ ಇದ್ದಾನೆ (ಹರೀಶ್). ಆದರೆ ಇಡೀ ಚಿತ್ರವನ್ನು ಆವರಿಸಿಕೊಳ್ಳುವುದು ಅಪ್ಪನ ಪಾತ್ರಧಾರಿ ವಿಷ್ಣುವರ್ಧನ್. ಅಭಿಮಾನಿಗಳಿಗೆ ಈ ಪಾತ್ರ ರುಚಿಸಿದೆಯೋ ಇಲ್ಲವೋ, ನನ್ನಂಥಾ ಅಪ್ಪಟ ಸಿನಿಮಾಸಕ್ತರಿಗಿಂತೂ ತುಂಬ ಇಷ್ಟವಾದ ಪಾತ್ರವದು. ಅದರಲ್ಲೊಂದು ದೃಶ್ಯವಿದೆ. ಅಪ್ಪನ ಜೊತೆ ಜಗಳ ಆಡಿ ಮಗಳು ಹೊರಟುಹೋಗುತ್ತಾಳೆ. ಆಗ ಜಗಲಿಯಲ್ಲಿ ಅಪ್ಪ ಇಡೀ ಮೈಯನ್ನೇ ಹಿಡಿ ಮಾಡಿಕೊಂಡು ಒರಸೋ ಬಟ್ಟೆ ಥರ ಕುಳಿತುಕೊಳ್ಳುತ್ತಾನೆ. ಆ ಒಂದು ಲಾಂಗ್ ಶಾಟ್ ಜಗತ್ತಿನ ಎಲ್ಲಾ ಅಪ್ಪಂದಿರ ಅಸಹಾಯಕತೆಯನ್ನು ಹೇಳಿಬಿಟ್ಟಿತ್ತು. ಪ್ರಕಾಶ್ ರೈ ನಟಿಸಿದ ‘ನಾನೂ ನನ್ನ ಕನಸು’ಚಿತ್ರದಲ್ಲೂ ಇಂಥಾದ್ದೇ ಹತ್ತಾರು ದೃಶ್ಯಗಳಿವೆ. ‘ಜೀವನಚೈತ್ರ’ವಂತೂಎಲ್ಲಾ ಅಪ್ಪಂದಿರೂ ಕಡ್ಡಾಯವಾಗಿ ನೋಡಬೇಕಾದ ಚಿತ್ರ.
ಒಬ್ಬ ನಟ ಹಲವಾರು ಪಾತ್ರಗಳನ್ನು ಮಾಡುತ್ತಾ ಹೋಗುತ್ತಿದ್ದಂತೆ ಮೌಲ್ಡ್ ಆಗುತ್ತಾನೆ ಅನ್ನುವ ಮಾತಿದೆ. ಈ ಮಾತು ಆತನ ಮುಖ ಮತ್ತು ನಟನೆಯೆರಡಕ್ಕೂ ಸಲ್ಲುತ್ತದೆ. ಉದಾಹರಣೆಗೆ ಸಂಜಯ್ ದತ್ತನ ಆರಂಭದ ಚಿತ್ರಗಳನ್ನು ನೋಡಿ. ಡ್ರಗ್ ಆಡಿಕ್ಟ್ ಥರ ಇದ್ದ ಮುಖ ಮತ್ತು ಅದನ್ನು ಮೀರಿಸುವಂಥಾ ಕೆಟ್ಟ ಅಭಿನಯ. ಕೆಲವು ವರ್ಷಗಳ ನಂತರ ಸಂಜಯ್ ದತ್ ಸುಧಾರಿಸಿದ. ಹಾಗೆ ನೋಡುತ್ತಾ ಹೋದರೆ ನಮ್ಮ ನಡುವಿರುವ ಎಲ್ಲಾ ಒಳ್ಳೆಯ ನಟರು ಕೊನೆಗೆ ಗೆಲ್ಲಬೇಕಾಗಿರುವುದು ವಯಸ್ಕನ ಪಾತ್ರದಲ್ಲಿ. ಅಲ್ಲಿ ಅವರು ಸೋತರೆ ಅಷ್ಟೂ ವರ್ಷ ಅವರು ಮಾಡಿದ ಪಾತ್ರಗಳೆಲ್ಲಾ ವ್ಯರ್ಥ ಅಂತಾನೇ ಲೆಕ್ಕ. ನಾಯಗನ್ ಚಿತ್ರದಲ್ಲಿ ಕಮಲ್ ಎರಡೂ ಥರದ ಪಾತ್ರ ಮಾಡಿದ್ದಾರೆ. ಆರಂಭದಲ್ಲಿ ಕುಪಿತ ಯುವಕ, ಕೊನೆಗೆ ನಿಸ್ಸಹಾಯಕ ಮುದುಕ. ನಿಮಗಿಷ್ಟವಾಗುವುದು ಮುದುಕನೇ. ಅಪ್ಪಾ ನೀನು ನಿಜಕ್ಕೂ ಒಳ್ಳೆಯವನಾ ಅಥವಾ ಕೆಟ್ಟವನಾ ಅಂತ ಮಗಳು ಪ್ರಶ್ನಿಸುವ ದೃಶ್ಯದಲ್ಲಿ ಕಮಲ್ ಅಭಿನಯವನ್ನು ನಾನಿನ್ನೂ ಮರೆತಿಲ್ಲ.
ನಿಮ್ಮ ವಯಸ್ಸೀಗ ಐವತ್ತರ ಆಸುಪಾಸಲ್ಲಿದ್ದರೆ ನಿಮಗೆ ‘ನಖಾಬ್’ಎಂಬ ಸೀರಿಯಲ್ ಹೆಸರು ನೆನಪಿರುತ್ತದೆ. 1982ನೇ ಇಸ್ವಿಯಲ್ಲಿ ದೂರದರ್ಶನದಲ್ಲಿ ಇದು ವಾರಕ್ಕೊಮ್ಮೆ ಪ್ರಸಾರವಾಗುತ್ತಿತ್ತು. ಅನಿಲ್ ಚಟರ್ಜಿ ಎಂಬ ಬಂಗಾಲಿ ನಟ ಅದ್ಭುತವಾಗಿ ನಟಿಸಿದ್ದ ಸೀರಿಯಲ್ ಅದು. ನಖಾಬ್ ಕತೆಯೇ ವಿಶೇಷವಾದದ್ದು. ಜನಪ್ರಿಯ ನಟನೊಬ್ಬನಿಗೆ ವಯಸ್ಸಾಗುತ್ತದೆ, ಕಣ್ಣ ಕೆಳಗೆ ವರ್ತುಲಗಳು, ಕತ್ತಲ್ಲಿ ನೆರಿಗೆಗಳು ಮೂಡುವುದಕ್ಕೆ ಶುರುವಾಗುತ್ತವೆ. ಆದರೆ ತನಗೆ ವಯಸ್ಸಾಗಿದೆ ಅನ್ನುವುದನ್ನು ಒಪ್ಪಿಕೊಳ್ಳುವುದಕ್ಕೆ ಆತ ತಯಾರಾಗಿಲ್ಲ. ತಾನಿನ್ನೂ ಸೂಪರ್ ಸ್ಟಾರ್ ಎಂಬ ಭ್ರಮೆಯಲ್ಲೇ ಆತ ತೇಲಾಡುತ್ತಿರುತ್ತಾನೆ. ಇಂಥಾ ಸಂದರ್ಭದಲ್ಲೇ ಆತನಿಗೊಂದು ಚಿಕ್ಕ ಅಪಘಾತವಾಗಿ ಆಸ್ಪತ್ರೆ ಸೇರುತ್ತಾನೆ, ತಾನಿಲ್ಲದಿದ್ದರೆ ಇಡೀ ಚಿತ್ರರಂಗವೇ ಸ್ತಗಿತಗೊಳ್ಳುತ್ತದೆ ಎಂದಾತ ಅಂದುಕೊಳ್ಳುತ್ತಾನೆ. ಕಾಲಕಳೆದಂತೆ ಆತನಿಗೆ ವಾಸ್ತವದ ಅರಿವಾಗುತ್ತಾ ಹೋಗುತ್ತದೆ, ಹತಾಶೆ ಆವರಿಸಿಕೊಳ್ಳುತ್ತದೆ. ಕೊನೆಗೆ ಒಬ್ಬ ನರ್ಸ್ ಮಾತ್ರ ಆತನ ಪಕ್ಕದಲ್ಲಿರುತ್ತಾಳೆ. ಕ್ಲೋಸಪ್ಪುಗಳಲ್ಲೇ ನಡೆಯುವ ಈ ಧಾರಾವಾಹಿಯಲ್ಲಿ ಕೇಂದ್ರಪಾತ್ರವಾದ ಅನಿಲ್ ಚಟರ್ಜಿ ಕನ್ನಡಿ ನೋಡುತ್ತಾ ಹಲುಬುವ ದೃಶ್ಯಗಳಿವೆ, ಗೇಲಿಗೊಳಗಾಗುವ ದೃಶ್ಯಗಳಿವೆ. ಆತ್ಮರತಿ, ಅವಮಾನ, ಅಸಹಾಯಕತೆ, ಪರಾವಲಂಬನೆ, ಇವೆಲ್ಲದರ ಒಟ್ಟಾರೆ ಮೊತ್ತದಂತಿರುವ ಆ ಪಾತ್ರದಲ್ಲಿ ಅನಿಲ್ ಚಟರ್ಜಿ ಭಾರತದ ಎಲ್ಲಾ ಸ್ಟಾರ್ ಗಳನ್ನು ಅಣಕಿಸುತ್ತಾರೆ. ಯಾವುದೇ ಇಗೋ ಇಲ್ಲದ ಅಪ್ಪಟ ನಟನೊಬ್ಬ ಮಾತ್ರ ಇಂಥಾ ಪಾತ್ರವನ್ನು ಒಪ್ಪಿಕೊಳ್ಳುವುದಕ್ಕೆ ಸಾಧ್ಯ.
ನಾವು ನೋಡಿದ ಜನಪ್ರಿಯ ಹೀರೋಗಳೆಲ್ಲರೂ ಕಲಾವಿದರಾದದ್ದು ವಯಸ್ಸಾದ ನಂತರವೇ. ಉದಾಹರಣೆಗೆ ಸಂಜೀವ್ ಕುಮಾರ್, ನಾನಾ ಪಾಟೇಕರ್, ಮಿಥುನ್ ಚಕ್ರವರ್ತಿ, ರಣಧೀರ್ ಕಪೂರ್....ಆದರೆ ಕನ್ನಡದಲ್ಲಿ ಇನ್ನೂ ಮೂವತ್ತೈದು ದಾಟದವರೇ ತಂದೆಯಾಗುತ್ತಾರೆ. ಉದಾಹರಣೆಗೆ ಶರತ್ ಲೋಹಿತಾಶ್ವ. ಎಂಥಾ ಅನ್ಯಾಯ ಅಲ್ವಾ. ಬಹುಶಃ ಈ ಮಾತಿಗೆ ಅಪವಾದವೆಂದರೆ ಅನಂತನಾಗ್. ಸದ್ಯಕ್ಕೆ ನಮ್ಮ ಕಣ್ಣ ಮುಂದಿರುವ ಶ್ರೇಷ್ಠ ತಂದೆಯೆಂದರೆ ಅವರೇ.
Also See
Uma Column 16 - ಎಲ್ಲರೂ ಮಾಲಾಶ್ರೀ ಆಗುವುದಕ್ಕಾಗೋಲ್ಲ
Uma Column 15 - ಚಿತ್ರೋತ್ಸವವನ್ನು ಯೂ ಟ್ಯೂಬ್ ನಲ್ಲಿ ನೋಡಿ!
Uma Column 14 - ಹಾಗೆ ಸುಮ್ಮನೆ ಕಳೆದು ಹೋದ ಜೀನಿಯಸ್
Uma Column 13 - ಮಲ್ಟಿಪ್ಲೆಕ್ಸಲ್ಲಿ ಸಿನಿಮಾ ಭಾಗ್ಯ ಯೋಜನೆ
Uma Column 12 - ದೇವರಿಗೂ ಬೇಕಾ ಪ್ರಶಸ್ತಿಯ ಕಿರೀಟ?
Uma Column 11 - ಯಾರಿಗೇಳೋಣಾ ನಮ್ಮ ಪ್ರಾಬ್ಲಂ
Uma Column 10 - ತೊಲಗು ಅಂದರೆ ನಾನು ತೆಲುಗು ಅಂದ ಹಾಗಾಯಿತು
Uma Column 9 - ಹಳ್ಳಿ ಹುಡುಗನನ್ನು ಕೊಂದವರ್ಯಾರು?
Uma Column 8 - ಶಂಕರ ನಾಗಮಂಡಲದಲ್ಲಿ ಒಂದು ಸುತ್ತು..
Uma Column 7 - ಪ್ರಶಸ್ತಿಗಳು ಮಾರಾಟಕ್ಕಿವೆ!
Uma Column 6 - ಹಾಯ್ ಕನ್ನಡ ತಾಯ್!
Uma Column 5 - ನನ್ನ ಭಯ ಮತ್ತು ಅಭಯನ ಜಯ
Uma Column 4 - ಭಟ್ರ ಕ್ವಾರ್ಟರ್ರು ಎಂಬ ಸೀರಿಯಸ್ ಮ್ಯಾಟರ್ರು
Uma Column 3 - ಕಲ್ಲು ಕೊರಗುವ ಸಮಯ
Uma Column 2 - ಮುನಿ ಮತ್ತು MONEY
Uma Column 1 - ಜಗತ್ತಿನ ಕೂಸು ಮತ್ತು ಕನ್ನಡದ ಮನಸ್ಸು
ಸಿನಿಮಾ ಪತ್ರಿಕೋದ್ಯಮದಲ್ಲಿ ಉದಯ್ ನನ್ನ ಗುರು - ಜೋಗಿ
Udaya Marakini Column In Chitraloka
Pls Note -
The views expressed in this column are those of its author and Chitraloka or its publishers do not claim to endorse it. You can express your opinion to his e-mail - This email address is being protected from spambots. You need JavaScript enabled to view it.