` chitraloka.com | Kannada Movie News, Reviews | Image - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
ragini ips image
ragini, malashri

‘ಚಿತ್ರಲೋಕ ಡಾಟ್ ಕಾಮ್’ನಲ್ಲಿ ಪ್ರಕಟವಾದ ಈ ಸುದ್ದಿ ಸ್ವಾರಸ್ಯಕರವಾಗಿದೆ.  ಕಳೆದ ವಾರ ಎರಡು ಹಾಸ್ಯ ಚಿತ್ರಗಳು ತೆರೆಕಂಡಿದ್ದವು, ಈ ವಾರ ಎರಡು ಪ್ರಾಯೋಗಿಕ ಚಿತ್ರಗಳು ತೆರೆಕಾಣುತ್ತಿವೆ, ಡಿಸೆಂಬರ್ 27ಕ್ಕೆ ಎರಡು ನಾಯಕಿ ಪ್ರಧಾನ ಆಕ್ಷನ್ ಚಿತ್ರಗಳು ಬಿಡುಗಡೆಯಾಗಲಿವೆ. ಎಂಥಾ ಕಾಕತಾಳೀಯ!

ನನ್ನ ಗಮನವನ್ನು ಜಾಸ್ತಿ ಸೆಳೆದದ್ದು ಮೂರನೇ ಸುದ್ದಿ. ಅದು ಮಾಲಾಶ್ರೀ ವರ್ಸಸ್ ರಾಗಿಣಿ. ಅದನ್ನು ಓದಿದಾಗ ನನಗೆ ನೆನಪಾಗಿದ್ದು ನಾನು ಚಿಕ್ಕವನಾಗಿದ್ದಾಗ ನೋಡಿದ್ದ ‘ರಾವಣ ಮೈರಾವಣ ಕಾಳಗ’ಎಂಬ ಯಕ್ಷಗಾನ ಪ್ರಸಂಗ. ಆದರೆ ಇಲ್ಲಿ ಗುದ್ದಾಟಕ್ಕೆ ನಿಂತವರು ಇಬ್ಬರು ಹೆಣ್ಮಕ್ಕಳು. ಇಬ್ಬರದ್ದೂ ತೂಕದ ವ್ಯಕ್ತಿತ್ವವೇ!ತೂಕಕ್ಕೆ ಹಾಕಿದರೆ ತಕ್ಕಡಿ ಯಾವ ಕಡೆ ವಾಲುತ್ತದೆ ಅನ್ನುವುದನ್ನು ಹೇಳುವುದು ಕಷ್ಟ. ಆದರೆ ಅನುಭವ ಮಾಲಾಶ್ರೀ ಕಡೆಗಿದೆ, ಯೌವನ ರಾಗಿಣಿ ಒಳಗಿದೆ. ಶ್ರದ್ಧೆ ಮತ್ತು ಹುಮ್ಮಸ್ಸಿನ ಪ್ರಶ್ನೆ ಬಂದರೆ ಮಾಲಾಶ್ರೀ ಕೈ ಮೇಲಾಗುತ್ತದೆ.

malashri

ಮಾಲಾಶ್ರೀಯ ‘ಘರ್ಷಣೆ’ಮತ್ತು ರಾಗಿಣಿಯ ‘ರಾಗಿಣಿ ಐಪಿಎಸ್’-  ಇವೆರಡು ಚಿತ್ರಗಳ ನಡುವಿರುವ ಹೋಲಿಕೆ ಚಕಿತಗೊಳಿಸುವಂಥಾದ್ದು. ಮಾಲಾಶ್ರೀ ಕ್ರೈಮ್ ಬ್ರಾಂಚ್ ತನಿಖಾಧಿಕಾರಿಯಾದರೆ, ರಾಗಿಣಿ ಐಪಿಎಸ್ ಅಧಿಕಾರಿ. ಪದವಿ ಏನೇ ಇದ್ದರೂ ಇಬ್ಬರೂ ತೆರೆಯ ಮೇಲೆ ಅಸಂಖ್ಯ ಹೊಡೆದಾಟಗಳಲ್ಲಿ ಕಾಲ ಕಳೆಯುತ್ತಾರೆ ಅನ್ನುವ ಬಗ್ಗೆ ಯಾವುದೇ ಅನುಮಾನ ಬೇಡ.ಯಾಕೆಂದರೆ ಇಬ್ಬರಿಗೂ ಆ ತಾಕತ್ತು ಇದೆ. ಮಾಲಾಶ್ರೀಗೆ ಇಂಥಾ ಪಾತ್ರಗಳೇನೂ ಹೊಸದಲ್ಲ. ಕಳೆದ ಹದಿನೈದು ವರ್ಷಗಳಿಂದ ಅವರು ಆಕ್ಷನ್ ಚಿತ್ರಗಳಿಗೇ ತಮ್ಮನ್ನು ಅರ್ಪಿಸಿಕೊಂಡಿದ್ದಾರೆ.ಸಿಬಿಐ ದುರ್ಗ, ಎಸ್ ಪಿ ಬಾರ್ಗವಿ,  'ಕನ್ನಡದ ಕಿರಣ್ ಬೇಡಿ' 'ಶಕ್ತಿ' 'ವೀರ', 'ಎಲೆಕ್ಷನ್', `ಚಾಮುಂಡಿ',  ಇವೆಲ್ಲಾ ಕೆಲವು ಸ್ಯಾಂಪಲ್ಲುಗಳಷ್ಟೇ. ಅದಕ್ಕೂ ಮುಂಚೆ ಮಾಲಾಶ್ರೀ ವೈವಿಧ್ಯಮಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು.  ‘ನಂಜುಂಡಿ ಕಲ್ಯಾಣ’, ‘ಗಜಪತಿಯ ಗರ್ವಭಂಗ’ಚಿತ್ರಗಳಲ್ಲಿ ದುರಹಂಕಾರಿ ಹೆಣ್ಣು, ‘ಪೊಲೀಸನ ಹೆಂಡತಿ’, ಮಾಲಾಶ್ರೀ ಮಾಮಾಶ್ರೀ ಚಿತ್ರಗಳಲ್ಲಿ ಸೋಂಭೇರಿ ಗಂಡನನ್ನು ಕಟ್ಟಿಕೊಂಡು ಏಗುವ ಹೆಣ್ಣು,ರಾಮಾಚಾರಿ, ಬೆಳ್ಳಿ ಕಾಲುಂಗುರ, ಮನ ಮೆಚ್ಚಿದ ಸೊಸೆ, ಹೃದಯ ಹಾಡಿತು, ಕನಸಿನ ರಾಣಿ, ಮೊದಲಾದ ಚಿತ್ರಗಳಲ್ಲಿ ಅಪ್ಪಟ ಪ್ರೇಮಿ, ರೆಡಿಮೇಡ್ ಗಂಡ, ಹಳ್ಳಿ ರಂಭೆ ಬೆಳ್ಳಿ ಗೊಂಬೆ, ಮಾಲಾಶ್ರೀ ಮಾಮಾಶ್ರೀ ಚಿತ್ರಗಳಲ್ಲಿ ಹಾಸ್ಯನಟಿ, ಹೀಗೆ ಮಾಲಾಶ್ರೀ ರೇಂಜು ವಿಸ್ತಾರವಾದದ್ದು. ರಾಗಿಣಿಯಂಥಾ ನಟಿಯನ್ನು ನಾವು ಇಷ್ಟೊಂದು ವಿಭಿನ್ನ ರೂಪಗಳಲ್ಲಿ ಕಲ್ಪಿಸಿಕೊಳ್ಳುವುದಕ್ಕೇ ಸಾಧ್ಯವಿಲ್ಲ.

malashri, raghavendra rajkumar

ನಾಟಕೀಯತೆಯನ್ನೇ ನೆಚ್ಚಿಕೊಂಡ ಅಭಿನಯ, ನವರಸಗಳನ್ನೂ ಏಕಕಾಲದಲ್ಲಿ ತೋರಿಸಬಲ್ಲೆ ಅನ್ನುವ ಅತಿಯಾದ ಆತ್ಮವಿಶ್ವಾಸ, ಕೊಂಚ ಅಸಹಜ ಅನಿಸುವಂಥಾ ಬಾಡಿ ಲಾಂಗ್ವೇಜು – ಇವೆಲ್ಲದರ ಮೊತ್ತದಂತಿರುವ ಮಾಲಾಶ್ರೀ ಭಾರತೀಯ ಚಿತ್ರಗಳಲ್ಲಿ ಕಾಣಿಸುವ ‘ಫಾರ್ಮ್ಯಲಾ ನಾಯಕಿ’ಇಮೇಜಿಗೆ ಮಾದರಿಯಾದವರು. ಆದರೆ ಯಶಸ್ಸನ್ನು ತಲೆಗೇರಿಸಿಕೊಳ್ಳದೆಯೇ ಟ್ರೆಂಡು ಮತ್ತು ತನ್ನ ವಯಸ್ಸಿಗೆ ಅನುಗುಣವಾಗಿ ಮಾಲಾಶ್ರೀ ತನ್ನ ಪಾತ್ರಗಳನ್ನು ಬದಲಾಯಿಸುತ್ತಾ ಹೋಗಿದ್ದನ್ನು ನಾವು ಮೆಚ್ಚುಗೆಯಿಂದಲೇ ಗಮನಿಸಬೇಕು.

malashri, shashikumar in policana hendti movie

1989ರಲ್ಲಿ ಮಾಲಾಶ್ರೀ ತೆಲುಗು ಚಿತ್ರರಂಗದಿಂದ ಕನ್ನಡಕ್ಕೆ ವಲಸೆ ಬಂದು ‘ನಂಜುಂಡಿ ಕಲ್ಯಾಣ’ದಲ್ಲಿ ಗುಂಡು ಕನ್ಯೆಯಾಗಿ ಕುಣಿದಾಗ ಪತ್ರಿಕೆಗಳು ಮಾದಕ ಬೆಡಗಿ ಎಂದು ಬರೆದವು. ಈಜುಕೊಳದ ಪಕ್ಕದಲ್ಲಿ ಮಾಲಾಶ್ರೀಯ ಕ್ಯಾಟ್ ವಾಕನ್ನು ನೋಡಿದ ಪ್ರೇಕ್ಷಕ ಬೆಚ್ಚಗಾದ. ಮೂರನೇ ಚಿತ್ರಕ್ಕೇ ಮಾಲಾಶ್ರೀ ಕನ್ನಡಿಗರ ಪಾಲಿಗೆ ಕನಸಿನ ಕನ್ಯೆಯಾದರು. ಅಲ್ಲಿ ತನಕ ಈ ಬಿರುದು ಬೇರೆ ಯಾವ ಕನ್ನಡದ ನಾಯಕಿಯರಿಗೂ ದಕ್ಕಿರಲಿಲ್ಲ. ಆನಂತರದ ವರ್ಷಗಳಲ್ಲಿ ಮಾಲಾಶ್ರೀ ಕ್ರೇಜು ಯಾವ ಮಟ್ಟಿಗೆ ತಲುಪಿತು ಅಂದರೆ ಆಕೆ ನಟಿಸುವ ಚಿತ್ರಗಳಿಗೆ ನಾಯಕನೇ ಬೇಕಿಲ್ಲ ಎಂಬ ತೀರ್ಮಾನಕ್ಕೆ ನಿರ್ಮಾಪಕರು ಬಂದುಬಿಟ್ಟರು. “ನನ್ನ ಜೊತೆ ನಾಯಿಮರಿ ನಟಿಸಿದರೂ ಸಿನಿಮಾ ನೂರು ದಿನ ಓಡುತ್ತದೆ”ಎಂಬ ವಿವಾದಾತ್ಮಕ ಹೇಳಿಕೆ ಹೊರಬಂದಿದ್ದು ಆಗಲೇ.ಅದು ವಾಸ್ತವವಾಗಿತ್ತು. ಆಗ  ಮಿಕ್ಕೆಲ್ಲಾ ನಟನಟಿಯರು ಸಿನಿಮಾ ಒಂದಕ್ಕೆ ಇಂತಿಷ್ಚು ಸಂಭಾವನೆ ಅಂತ ಪಡೆದುಕೊಳ್ಳುತ್ತಿದ್ದರೆ, ಮಾಲಾಶ್ರೀ ಸಂಭಾವನೆ ಒಂದು ದಿನಕ್ಕೆ ಹತ್ತು ಲಕ್ಷ. ಹಾಗಿದ್ದೂ ಯಾವ ನಿರ್ಮಾಪಕರೂ ಕೊರಗಲಿಲ್ಲ, ಕಂಪ್ಲೇಂಟು ಮಾಡಲಿಲ್ಲ. ಯಾಕೆಂದರೆ ಮಾಲಾಶ್ರೀಯನ್ನು ನೆಚ್ಚಿಕೊಂಡ ನಿರ್ಮಾಪಕರೆಲ್ಲರೂ ಲಾಭ ಮಾಡಿಕೊಂಡರು. ಮನೆಮಠ ಕಳೆದುಕೊಳ್ಳುವ ಸ್ಥಿತಿ ತಲುಪಿದ್ದವರೂ ಮಾಲಾಶ್ರೀ ಕೃಪೆಯಿಂದಾಗಿ ಹೊಸ ಬದುಕು ಕಟ್ಟಿಕೊಂಡರು. ಆಮೇಲೆ ಕನಸಿನ ಕನ್ಯೆಗೆ ಮದುವೆಯಾಯಿತು, ಇಮೇಜು ಕೂಡಾ ಬದಲಾಯಿತು. ಮಾಲಾಶ್ರೀ ಆಕ್ಷನ್ ಪಾತ್ರಗಳತ್ತ ಹೊರಳಿದರು, ಅವರ ಪತಿ ರಾಮು ಅವರದ್ದೂ ಅದೇ ಬ್ರಾಂಡ್ ಆಗಿದ್ದರಿಂದ ಸಾಲುಸಾಲು ಇಂಥಾ ಚಿತ್ರಗಳೇ ಹೊರಬಂದವು.

malashri in sp bhargavi movie

ಮೂರು ದಶಕದ ಹಿಂದೆ ತೆರೆಮೇಲೆ ನಾಯಕಿಯೊಬ್ಬಳು ಹೊಡೆದಾಡುವುದನ್ನು ಕಲ್ಪಿಸಿಕೊಳ್ಳಲೂ ಪ್ರೇಕ್ಷಕರಿಗೆ ಸಾಧ್ಯವಿರಲಿಲ್ಲ. ಸೀತಾರಾಮು ಚಿತ್ರದಲ್ಲಿ ಮೊದಲಬಾರಿಗೆ ಮಂಜುಳಾ ಥೇಟು ಹೀರೋ ಥರಾ ಹೊಡೆದಾಡಿ ಖಳರ ಪ್ರಾಣ ತೆಗೆದಾಗ ಪ್ರೇಕ್ಷಕರು ಬೆಚ್ಚಿಬಿದ್ದಿದ್ದರು. ಆದರೆ ಆ ಪಾತ್ರಕ್ಕೊಂದು ಸಮರ್ಥನೆ ಇತ್ತು. ತೀರಿಕೊಂಡ ನಾಯಕನ ಆತ್ಮ ಆಕೆಯೊಳಗೆ ಆಗಾಗ ಆವಾಹನೆಯಾಗುತ್ತಿದ್ದುದರಿಂದ ಆಕೆಗೂ ಅತಿಮಾನುಷ ಶಕ್ತಿ ಬಂತು ಅಂತ ನಿರ್ದೇಶಕರು ನಂಬಿಸಿದ್ದರು. ಮಂಜುಳಾಗೆ ಬಜಾರಿ ಇಮೇಜು ಇದ್ದುದರಿಂದ ಪ್ರೇಕ್ಷಕರಿಗೆ ಇದನ್ನು ಪಥ್ಯ ಮಾಡಿಕೊಳ್ಳುವುದು ಸುಲಭವಾಯಿತು. ಆದರೆ ಮಾಲಾಶ್ರೀ ಅವರ ಆಕ್ಷನ್ ಪಾತ್ರಗಳಿಗೆ ಇಂಥಾ ಯಾವುದೇ ಲಾಜಿಕ್ಕು ಇರಲಿಲ್ಲ. ಅನ್ಯಾಯದ ವಿರುದ್ಧ ಹೀರೋ  ಮಾತ್ರ ಹೋರಾಡಬೇಕು ಅನ್ನುವ ಕಾನೂನೆಲ್ಲಿದೆ ಅನ್ನುವ ಥರ ಅವರು ಹೊಡೆದಾಡಿದರು. ಕಾರಲ್ಲಿ ಚೇಸ್ ಮಾಡಿದರು, ಆಕಾಶದಲ್ಲಿ ಹಾರಾಡಿದರು, ಹೆಲಿಕಾಪ್ಟರುಗಳನ್ನೂ ಚಿಂದಿ ಮಾಡಿದರು. ಇವೆಲ್ಲವೂ ಡ್ಯೂಪ್ ಗಳ ಕರಾಮತ್ತು ಅಂತ ಗೊತ್ತಿದ್ದರೂ ಜನ ಚಪ್ಪಾಳೆ ಹೊಡೆದರು. ಮಾಲಾಶ್ರೀ ಹೊಡೆಯುತ್ತಿದ್ದ ಅಬ್ಬರದ ಡೈಲಾಗುಗಳ ಹಿಂದೆ ಕಂಠದಾನ ಕಲಾವಿದರಾದ ಶಶಿಕಲಾ ,ಸರ್ವಮಂಗಳಾ ಇದ್ದಾರೆ ಅಂತ ಗೊತ್ತಿದ್ದೂ ಜನ ಶಿಳ್ಳೆ ಹೊಡೆದರು.  ತೆಲುಗಿನಲ್ಲಿ   ಲೇಡಿ ಬಾಂಡ್ ಎಂದೇ ಖ್ಯಾತರಾಗಿದ್ದ ವಿಜಯಶಾಂತಿಗೆ ಮಾಲಾಶ್ರೀ ನಮ್ಮ ಉತ್ತರ ಎಂದು ಕನ್ನಡ ಚಿತ್ರೋದ್ಯಮ ಬೀಗಿತು.

malashri ramu

ಇವೆಲ್ಲಾ ಕತೆಗಳಿಗೆ ವಯಸ್ಸಾಗಿದೆ. ಯಾಕೆಂದರೆ ಮಾಲಾಶ್ರೀಗೆ ಈಗ ನಲುವತ್ತರ ವಯಸ್ಸು. ಹಾಗಿದ್ದೂ ಆಕ್ಷನ್ ದೃಶ್ಯಗಳಲ್ಲಿ ಲೀಲಾಜಾಲವಾಗಿ ನಟಿಸುತ್ತಿರುವ ಇವರ ಶಕ್ತಿ ದಂಗುಬಡಿಸುವಂಥಾದ್ದು. ಚಿತ್ರ ಓಡುತ್ತೋ ಬಿಡುತ್ತೋ, ಮಾಲಾಶ್ರೀಯಂತೂ ತನ್ನ ದಢೂತಿ ದೇಹ ಹೊತ್ತುಕೊಂಡು ತೆರೆಯಮೇಲೆ  ಓಡುತ್ತಲೇ ಇದ್ದಾರೆ. ಕಾಲನ ಜೊತೆ ಪೈಪೋಟಿಗೆ ಬಿದ್ದವರಂತೆ. ನೆನಪಿರಲಿ, ಕನ್ನಡದಲ್ಲಿ ಸುದೀರ್ಘ ಕಾಲ ನಾಯಕಿಯಾಗಿ ಮೆರೆದ ದಾಖಲೆ ಅವರ ಹೆಸರಲ್ಲಿದೆ. ಮದುವೆಯಾದ ನಂತರವೂ ನಾಯಕಿಯಾಗಿ ಮುಂದುವರೆದ ಖ್ಯಾತಿಯೂ ಅವರ ಹೆಸರಲ್ಲೇ ಇದೆ. ದಶಕಗಳ ಹಿಂದೆ ಅವರ ಚಿತ್ರಗಳಲ್ಲಿ ನಾಯಕರು ನೆಪಮಾತ್ರಕ್ಕಿದ್ದರು, ಯಾಕೆಂದರೆ ನಾಯಕಿಯೊಬ್ಬಳೇ ಮರಸುತ್ತುವುದಕ್ಕಾಗುವುದಿಲ್ಲವಲ್ಲ.  ಈಗಂತೂ ನಾಯಕರೇ ಇರುವುದಿಲ್ಲ. ನಾಯಕ, ನಾಯಕಿ ಎಲ್ಲವೂ ಅವರೇ. ನಿರ್ದೇಶಕರ ಅಗತ್ಯವೂ ಬೇಕಿದ್ದಂತೆ ಕಾಣಿಸುವುದಿಲ್ಲ. ಸಾಹಸ ನಿರ್ದೇಶಕರು ಯಾರು ಅನ್ನುವುದಷ್ಟೇ ಮುಖ್ಯವಾಗುತ್ತದೆ.

ಇಂಥಾ ರೆಕಾರ್ಡು ಹೊಂದಿರುವ ಮಾಲಾಶ್ರೀಯವರಿಗೆ ಸೆಡ್ಡು ಹೊಡೆಯುವುದಕ್ಕೆನಿನ್ನೆ ಮೊನ್ನೆ ಬಂದ ರಾಗಿಣಿಗೆ ಸಾಧ್ಯವೇ ಇಲ್ಲ ಎಂದು ನೀವು ಬೆಟ್ ಕಟ್ಟಿದರೆ ಸೋಲುವ ಅಪಾಯವಿದೆ. ಯಾಕೆಂದರೆ ನಾಯಕಿಯರನ್ನು ಕಾಪಾಡುವುದು ಅವರ ಅನುಭವ ಅಥವಾ ಪ್ರತಿಭೆಯಲ್ಲ, ಬದಲಾಗಿ  ವಯಸ್ಸು. ರಾಗಿಣಿ ಸುರಸುಂದರಿಯಲ್ಲದೇ ಇರಬಹುದು,  ಸಾಂಪ್ರದಾಯಿಕ ಶೈಲಿಯ ನಾಯಕಿ ಪಾತ್ರಗಳಿಗೆ ಹೊಂದಿಕೊಳ್ಳದೇ ಇರಬಹುದು, ಈಕೆ ವ್ಯಾಂಪ್ ಪಾತ್ರಕ್ಕೆ ಅಥವಾ ಐಟಂ ಡ್ಯಾನ್ಸಿಗಷ್ಟೇ ಸರಿ ಎಂದು ಆಕೆಯ ವಿರೋಧಿಗಳು ಟೀಕಿಸಬಹುದು.  ಆದರೆ ಇವೆಲ್ಲ ನೆಗೆಟಿವ್ ಅಂಶಗಳೇ ಪ್ರೇಕ್ಷಕರನ್ನು ಆಕರ್ಷಿಸುವ ಸಂಗತಿಗಳಾಗಿವೆ ಅನ್ನುವುದೇ ಸೋಜಿಗ.

 ನಾಲ್ಕು ವರ್ಷದ ಹಿಂದೆ ರಾಗಿಣಿಗೆ ಇಂಥಾ ಬೇಡಿಕೆಯಿರಲಿಲ್ಲ. ನಾನು ಕೆಲಸ ಮಾಡುತ್ತಿದ್ದ ನ್ಯೂಸ್ ಚಾನೆಲ್ಲಿನ ವರದಿಗಾರ್ತಿಗೆ ಆಗಾಗ ಫೋನ್ ಮಾಡಿ ತನ್ನ ಸಂದರ್ಶನ ಮಾಡು ಅಂತ ದುಂಬಾಲು ಬೀಳುತ್ತಿದ್ದಳು. ದೀಪಾವಳಿ, ಯುಗಾದಿಯಂಥ ಹಬ್ಬಗಳು ಬಂದರೆ ಚಾನೆಲ್ಲುಗಳ ಕೈಗೆ ಸುಲಭವಾಗಿ ಸಿಗುತ್ತಿದ್ದ ನಟಿಯೆಂದರೆ ರಾಗಿಣಿ. ಅದೇ ರಾಗಿಣಿ ವರ್ಷದ ಹಿಂದೆ ಕಾರ್ಯಕ್ರಮವೊಂದರ ಸಲುವಾಗಿ  ಚಾನೆಲ್ಲೊಂದರ ಸ್ಟುಡಿಯೋದೊಳಗೆ ಬಂದಳು.  ಅಲ್ಲಿದ್ದ ಇತರ ನಟಿಯರನ್ನು ನೋಡಿ ತಾನು ಇವರ ಜೊತೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ವಾಪಸ್ ಹೋದಳು. ಮಾಲಾಶ್ರೀ ಯಾವತ್ತೂ ಈ ಥರ ವರ್ತಿಸಿದ್ದು ನನಗೆ ನೆನಪಿಲ್ಲ. ಅವರು ಗಾಸಿಪ್ಪುಗಳಲ್ಲಿ ಸಿಲುಕಿದಾಗಲೂ ಮಾಧ್ಯಮಗಳು ಹಗುರವಾಗಿ ಬರೆಯಲಿಲ್ಲ. ಯಾಕೆಂದರೆ ಅವರು ಮಾತಿಗೆ ಸಿಗುತ್ತಿದ್ದರು,  ತನ್ನ ಕಷ್ಟದ ದಿನಗಳಲ್ಲೂ ಘನತೆಯನ್ನು ಕಳಕೊಳ್ಳಲಿಲ್ಲ.

“ಆಕ್ಷನ್ ಸಿನಿಮಾಗಳಲ್ಲಿ ನಟಿಸುವ ಬಗ್ಗೆ ನಾನು ಮಾಲಾಶ್ರೀಯವರಿಂದ ಟ್ರೇನಿಂಗ್ ತೆಗೋಬೇಕು”ಅಂತ ರಾಗಿಣಿ ಹೇಳಿದ್ದನ್ನುಎಲ್ಲೋ ಓದಿದ ನೆನಪು. ಆಕೆ ಟ್ರೇನಿಂಗ್ ತೆಗೆದುಕೊಳ್ಳಬೇಕಾಗಿರುವುದು ನಟನೆಯ ಬಗ್ಗೆ ಅಲ್ಲ, ನಡುವಳಿಕೆ ಬಗ್ಗೆ. ಅದಕ್ಕೆ ಮಾಲಾಶ್ರೀಯೇ ಬೆಸ್ಟ್ ಟೀಚರ್.

Also See

Malashree Vs Ragini On Dec 27

Uma Column 15 - ಚಿತ್ರೋತ್ಸವವನ್ನು ಯೂ ಟ್ಯೂಬ್ ನಲ್ಲಿ ನೋಡಿ!

Uma Column 14 - ಹಾಗೆ ಸುಮ್ಮನೆ ಕಳೆದು ಹೋದ ಜೀನಿಯಸ್

Uma Column 13 - ಮಲ್ಟಿಪ್ಲೆಕ್ಸಲ್ಲಿ ಸಿನಿಮಾ ಭಾಗ್ಯ ಯೋಜನೆ

Uma Column 12 - ದೇವರಿಗೂ ಬೇಕಾ ಪ್ರಶಸ್ತಿಯ ಕಿರೀಟ?

Uma Column 11 - ಯಾರಿಗೇಳೋಣಾ ನಮ್ಮ ಪ್ರಾಬ್ಲಂ

Uma Column 10 - ತೊಲಗು ಅಂದರೆ ನಾನು ತೆಲುಗು ಅಂದ ಹಾಗಾಯಿತು

Uma Column 9 - ಹಳ್ಳಿ ಹುಡುಗನನ್ನು ಕೊಂದವರ್ಯಾರು?

Uma Column 8 - ಶಂಕರ ನಾಗಮಂಡಲದಲ್ಲಿ ಒಂದು ಸುತ್ತು..

Uma Column 7 - ಪ್ರಶಸ್ತಿಗಳು ಮಾರಾಟಕ್ಕಿವೆ!

Uma Column 6 - ಹಾಯ್ ಕನ್ನಡ ತಾಯ್!

Uma Column 5 - ನನ್ನ ಭಯ ಮತ್ತು ಅಭಯನ ಜಯ

Uma Column 4 - ಭಟ್ರ ಕ್ವಾರ್ಟರ್ರು ಎಂಬ ಸೀರಿಯಸ್ ಮ್ಯಾಟರ್ರು

Uma Column 3 - ಕಲ್ಲು ಕೊರಗುವ ಸಮಯ

Uma Column 2 - ಮುನಿ ಮತ್ತು MONEY

Uma Column 1 - ಜಗತ್ತಿನ ಕೂಸು ಮತ್ತು ಕನ್ನಡದ ಮನಸ್ಸು

ಸಿನಿಮಾ ಪತ್ರಿಕೋದ್ಯಮದಲ್ಲಿ ಉದಯ್ ನನ್ನ ಗುರು - ಜೋಗಿ

Udaya Marakini Column In Chitraloka

Pls Note -

The views expressed in this column are those of its author and Chitraloka or its publishers do not claim to endorse it. You can express your opinion to his e-mail - This email address is being protected from spambots. You need JavaScript enabled to view it.