` chitraloka.com | Kannada Movie News, Reviews | Image - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
bangalore international film festival image
thara, sadananda gowda, ompuri

ಕಳೆದ ವರ್ಷ, ಬಹುಶಃ ಈ ಹೊತ್ತಿಗೇ ಇರಬೇಕೇನೋ, ಶಿವಮಣಿ ಫೋನ್ ಮಾಡಿದ್ದರು. ಅವರ ಧ್ವನಿಯಲ್ಲಿ ಆಕ್ರೋಶ, ನೋವು, ಅಸಹಾಯಕತೆ ಎಲ್ಲವೂ ಬೆರೆತಿತ್ತು. ಆಗಿದ್ದು ಇಷ್ಟೆಃ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಒಂದು ಸಿನಿಮಾ ನೋಡುವುದಕ್ಕೆ ಶಿವಮಣಿ ತಮ್ಮ ಸಹೋದ್ಯೋಗಿಗಳ ಜೊತೆ ಥಿಯೇಟರಿಗೆ ಹೋಗಿದ್ದರು. ಅಲ್ಲಿ ಕ್ಯೂನಲ್ಲಿ ನಿಂತಿದ್ದಾಗ ಯಾರೋ ಒಬ್ಬ ಪ್ರೇಕ್ಷಕ ಇವರನ್ನು ಜೋರಾಗಿ ತಳ್ಳಿದ್ದ. ಅದನ್ನು ಪ್ರಶ್ನಿಸಿದ್ದಕ್ಕೆ ಆತ ತೀರಾ ಒರಟಾಗಿ ಮಾತಾಡಿದ್ದ. ಸಿಟ್ಟಿಗೆದ್ದ ಶಿವಮಣಿ ಅಲ್ಲೇ ಒಳಗಿದ್ದ ಚಲನಚಿತ್ರ ಆಕಾಡೆಮಿ ಅಧ್ಯಕ್ಷೆ ತಾರಾ ಅವರಿಗೆ ದೂರು ಕೊಟ್ಟಿದ್ದಾರೆ. ಅದಕ್ಕೆ ಪ್ರತಿಯಾಗಿ ತಾರಾ ಆಡಿದ ಮಾತು ಶಿವಮಣಿಯವರನ್ನು ಇನ್ನಷ್ಟು ಆಘಾತಕ್ಕೀಡು ಮಾಡಿದೆ. “ಚಿತ್ರೋತ್ಸವ ಇರುವುದು ಸಾರ್ವಜನಿಕರಿಗೆ, ಚಿತ್ರರಂಗದವರಿಗಲ್ಲ. ಇಷ್ಟ ಇದ್ದರೆ ಸಿನಿಮಾ ನೋಡಿ, ಇಲ್ಲದಿದ್ದರೆ ಹೊರಡಿ”ಎಂದು ತಾರಾ ಹೇಳಿದರಂತೆ. ಎರಡು ದಶಕಕ್ಕೂ ಹೆಚ್ಚು ಕಾಲ ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕನಾಗಿ ದುಡಿದ ವ್ಯಕ್ತಿ ಇಂಥಾ ಅವಮಾನವನ್ನು ಸಹಿಸಿಕೊಂಡು ಸುಮ್ಮನಿರುವುದು ಸಾಧ್ಯಾನಾ?

shivamani

ಅಲ್ಲಿಂದ ಹೊರಬಂದವರೇ ಶಿವಮಣಿ ನನಗೆ ಫೋನ್ ಮಾಡಿದ್ದರು. ‘ನಾನು ಈಗೇನು ಮಾಡ್ಲಿ, ನಿಮ್ಮ ಸಲಹೆ ಬೇಕು’ಎಂದರು. ಸಿನಿಮಾದವರಿಗೆ ಸಲಹೆ ಕೊಡುವುದು ಅಂಥಾ ಒಳ್ಳೆಯ ಕೆಲಸ ಅಲ್ಲ ಅನ್ನುವುದು ನನ್ನ ಅನುಭವ ಕಲಿಸಿದ ಪಾಠ. ಪತ್ರಕರ್ತರ ಸಲಹೆಗಿಂತ ಮಾರುಕಟ್ಟೆಯ ಸಲಹೆ ಮೇರೆಗೇ ನಡೆಯುವ ಉದ್ಯಮ ಇದು. ಆದರೆ ಶಿವಮಣಿ ಎಲ್ಲರಂಥಲ್ಲ, ಅವರ ವೃತ್ತಿಬದುಕಿನ ಆರಂಭದ ದಿನಗಳಿಂದಲೂ ನನಗೆ ಪರಿಚಿತರಾಗಿದ್ದವರು, ತನ್ನ ಖಾಸಗಿ ಮತ್ತು ವೃತ್ತಿಬದುಕಿನ ಸಂಗತಿಗಳನ್ನು ಆಗಾಗ ನನ್ನೊಂದಿಗೆ ಹಂಚಿಕೊಳ್ಳುತ್ತಿದ್ದವರು, ಕೆಲವೊಮ್ಮೆ ವಿಪರೀತ ಅನಿಸುವಷ್ಟು ಭಾವನಾಜೀವಿ, ತೀರಿಕೊಂಡ ಅಪ್ಪನನ್ನು ನೆನೆಸಿಕೊಂಡು ಪತ್ರಿಕಾಗೋಷ್ಠಿಯೊಂದರಲ್ಲಿ ಅವರು ಗೊಳೋ ಎಂದು ಅತ್ತಿದ್ದು ಈಗಲೂ ನನಗೆ ನೆನಪಿದೆ. ಅವರು ಹೀರೋ ಆಗುವಾಗಲೂ ನನ್ನ ಸಲಹೆ ಕೇಳಿದ್ದರು. “ದಯವಿಟ್ಟು ಈ ಸಾಹಸಕ್ಕೆ ಕೈಹಾಕಬೇಡಿ”ಅಂದಿದ್ದೆ. ಯಾಕೋ ಈ ಸಲಹೆ ಅವರಿಗೆ ಪಥ್ಯವಾಗಲಿಲ್ಲ. ಶಿವಮಣಿ ಹೀರೋ ಆದರು, ಕೋಟಿ ರುಪಾಯಿ ಕಳಕೊಂಡರು.

ಈ ಬಾರಿ ನಾನು ಸಲಹೆ ಕೊಡಬೇಕಾಗಿದ್ದದ್ದು ಅವರ ಪ್ರತಿಭಟನೆಯ ಸ್ವರೂಪ ಹೇಗಿರಬೇಕು ಅನ್ನುವ ಬಗ್ಗೆ. ‘ಫಿಲಂಛೇಂಬರ್ ಮುಂದೆ ಧರಣಿ ಕುಳಿತುಕೊಳ್ಳಿ’ಎಂದೆ. ಯಾಕೆಂದರೆ ಚಿತ್ರೋತ್ಸವಕ್ಕೆ ಛೇಂಬರ್ ನಿಂದ ಧನಸಹಾಯ ನೀಡಲಾಗುತ್ತದೆ. ಹಾಗಾಗಿ ನಿರ್ಮಾಪಕರಿಗೆ ಅಥವಾ ನಿರ್ದೇಶಕರಿಗೆ ಅವಮಾನವಾದರೆ ಛೇಂಬರ್ ಆ ಬಗ್ಗೆ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಅನ್ನುವುದು ನನ್ನ ವಾದವಾಗಿತ್ತು.  ಶಿವಮಣಿ ಹೇಳಿದರು ‘ಧರಣಿ ಮಾಡಿದರೆ ನನ್ನ ಜೊತೆ ಬೇರೆಯವರು ಬರುತ್ತಾರೆ ಅನ್ನುವ ನಂಬಿಕೆ ನನಗಿಲ್ಲ. ಈಗೇನೋ ಎಲ್ಲರೂ ನನ್ನ ಪರವಾಗಿ ಮಾತಾಡುತ್ತಾರೆ. ಆದರೆ ಹೋರಾಟಕ್ಕಿಳಿದಾಗ ಅದು ನನ್ನೊಬ್ಬನ ಸಮಸ್ಯೆ ಅನ್ನುವ ಥರ ನೋಡುವವರೇ ಜಾಸ್ತಿ’. ನನಗೂ ಅವರ ಮಾತು ನಿಜ ಅನಿಸಿತು. ಚಿತ್ರೋದ್ಯಮದ ಹಲವಾರು ಹೋರಾಟಗಳುಇದೇ ಕಾರಣಕ್ಕೆ ಹಳ್ಳ ಹಿಡಿದಿದ್ದನ್ನು ನಾನು ನೋಡಿದ್ದೆ.  “ಯಾವುದಾದರೂ ನ್ಯೂಸ್  ಚಾನೆಲ್ಲಿಗೆ ಹೋಗಿ ಮಾತಾಡಿ”ಎಂದು ಇನ್ನೊಂದು ಸಲಹೆ ನೀಡಿದೆ. ಈ ಸಲಹೆ ವರ್ಕೌಟ್ ಆಯಿತು. ನಾನು ಕೆಲಸ ಮಾಡುತ್ತಿದ್ದ ಸುವರ್ಣ ಚಾನೆಲ್ಲಲ್ಲೂ ಶಿವಮಣಿ ಹೇಳಿಕೆ ಪ್ರಸಾರವಾಯಿತು. ಅದಕ್ಕೆ ತಾರಾ ಪ್ರತಿಕ್ರಿಯೆ ನೀಡಿದ್ದೂ ಆಯಿತು. ಈಗ ಮತ್ತೊಂದು ಚಿತ್ರೋತ್ಸವ ಬಂದಿದೆ. ಶಿವಮಣಿ ಹೊಸ ಚಿತ್ರವೊಂದನ್ನು ಸೆಟ್ಟೇರಿಸುವಲ್ಲಿ ಬಿಜಿಯಾಗಿದ್ದಾರೆ, ಹಾಗಾಗಿ ಚಿತ್ರೋತ್ಸವಕ್ಕೆ ಹೋಗುವುದಕ್ಕೆ ಅವರಿಗೆ ಪುರುಸೊತ್ತಿರಲಾರದು. ಈ ಬಾರಿ ಇನ್ಯಾರೋ ಅವಮಾನ ಅನುಭವಿಸುವುದಕ್ಕೆ ತಯಾರಾಗಬಹುದು!

rajendra singh babu

ಈಗ ಹೊಸದಾಗಿ ಹುಟ್ಟಿಕೊಂಡಿರುವ ಪ್ರಶ್ನೆ ಬೇರೆಯೇ ಇದೆ. ಬೆಂಗಳೂರು ಅಂತಾರಾಷ್ಚ್ರೀಯ ಚಿತ್ರೋತ್ಸವದಿಂದ ಯಾರಿಗೆ ಲಾಭ?ಯಾವ ಪುರುಷಾರ್ಥಕ್ಕೆ ಈ ಚಿತ್ರೋತ್ಸವ ಮಾಡಬೇಕು ಮತ್ತು ಸರ್ಕಾರ ಯಾಕೆ ಇಂಥಾ ವ್ಯರ್ಥ ಕಾಲಕ್ಷೇಪಕ್ಕೆ ಕೋಟಿಗಟ್ಟಲೆ ಹಣ ಸುರಿಯಬೇಕು?ಹಿರಿಯ ರಾಜೇಂದ್ರಸಿಂಗ್ ಬಾಬು ಅವರು ಕೆಲವು ದಿನಗಳ ಹಿಂದೆ ಈ ಬಗ್ಗೆ ಖಾರವಾಗಿ ಮಾತಾಡಿದ್ದಾರೆ. ಅವರ ಪ್ರಕಾರ ಬೆಂಗಳೂರಲ್ಲಿ ಚಿತ್ರೋತ್ಸವ ನಡೆಸುವುದೇ ವೇಸ್ಟು. ಅದಕ್ಕೆ ಅವರು ನೀಡುವ ಕಾರಣಗಳನ್ನು ಅಷ್ಟೊಂದು ಸುಲಭವಾಗಿ ತಳ್ಳಿಹಾಕುವುದಕ್ಕಾಗುವುದಿಲ್ಲ. ಗೋವಾದಲ್ಲಿ ಚಿತ್ರೋತ್ಸವ ನಡೆದ ಬೆನ್ನಿಗೇ ಇಲ್ಲಿ ಚಿತ್ರೋತ್ಸವ ನಡೆಯುವುದರಿಂದ ಹೆಚ್ಚುಕಮ್ಮಿ ಅಲ್ಲಿ ಪ್ರದರ್ಶಿತವಾದ ಚಿತ್ರಗಳೇ ಇಲ್ಲಿಗೂ ಬರುತ್ತವೆ. ಕೆಲವೊಮ್ಮೆಅಲ್ಲಿ ಅಯ್ಕೆಯಾಗದೇ ಇರುವ ಎರಡನೇ ದರ್ಜೆಯ ಚಿತ್ರಗಳೂ ಬರುವುದೂ ಉಂಟು. ಚಿತ್ರೋತ್ಸವದಲ್ಲಿ ಪ್ರದರ್ಶನವಾಗುವ ಚಿತ್ರಗಳಲ್ಲಿ ನೂರಕ್ಕೆ ಎಪ್ಪತ್ತೈದು ಚಿತ್ರಗಳು ಈಗಾಗಲೇ ‘ಯೂ ಟ್ಯೂಬ್’ನಲ್ಲಿವೆ. ವಸ್ತುಸ್ಥಿತಿ ಹೀಗಿರುವಾಗ ಈ ಉತ್ಸವ ಯಾರ ಸಲುವಾಗಿ ಅನ್ನುವುದು ಅವರ ಪ್ರಶ್ನೆ.

ನೀವು ಸಾಹಿತ್ಯಾಸಕ್ತರಾಗಿದ್ದರೆ ಪ್ರತಿವರ್ಷ ನಡೆಯುವ ಸಾಹಿತ್ಯ ಸಮ್ಮೇಳನದ ಬಗ್ಗೆಯೂ ಇಂಥಾದ್ದೇ ಅಪಸ್ವರ ಕೇಳಿಬರುವುದು ನೆನಪಿರಬಹುದು. ಅದು ಸಾಹಿತ್ಯ ಸಮ್ಮೇಳನವಲ್ಲ, ಜನಜಾತ್ರೆ. ಅಲ್ಲಿ ಕೈಗೊಳ್ಳಲಾಗುವ ಯಾವ ನಿರ್ಧಾರಗಳೂ ಆಚರಣೆಗೆ ಬರುವುದಿಲ್ಲ, ಸಮ್ಮೇಳನದ ಹೆಸರಲ್ಲಿ ಲಕ್ಷಾಂತರ ಜನ ಭೂರಿಬೋಜನ ಸವಿದು ವಾಪಸಾಗುತ್ತಾರೆ ಇತ್ಯಾದಿ ದೂರುಗಳು. ಈಗ ಚಿತ್ರೋತ್ಸವದ ಸರದಿ. ಉತ್ಸವ, ಸಮ್ಮೇಳನಗಳಿಂದ ಏನು ಲಾಭ ಎಂಬ ಪ್ರಶ್ನೆಗೆ ಉತ್ತರಿಸುವುದು ಸ್ವಲ್ಪ ಕಷ್ಟದ ಕೆಲಸ. ಹಾಗೆ ನೋಡುತ್ತಾ ಹೋದರೆ ಎಲ್ಲಾ ಕೆಲಸಗಳನ್ನು ಅಥವಾ ಕಾರ್ಯಕ್ರಮಗಳನ್ನು ಲಾಭದ ಉದ್ದೇಶ ಇಟ್ಟುಕೊಂಡೇ ಮಾಡುವುದಕ್ಕಾಗುವುದಿಲ್ಲ. ಬೆಳ್ಳಂಬೆಳಿಗ್ಗೆ ಹಿತ್ತಲಲ್ಲಿ ಅರಳಿದ ದಾಸವಾಳವನ್ನು ನೋಡುತ್ತಾ ಕುಳಿತುಕೊಳ್ಳುವುದರಿಂದ  ಏನು ಲಾಭವಿದೆ ಹೇಳಿ?ಅದೇ ಥರ ಉತ್ಸವ ಅನ್ನುವುದು ನಿಮ್ಮ ಮನಸ್ಸಂತೋಷಕ್ಕೆ ಸಂಬಂಧಪಟ್ಟ ಸಂಗತಿ. ಆ ನೆಪದಲ್ಲಿ ಅಲ್ಲೊಂದಿಷ್ಚು ಸಿನಿಮಾಸಕ್ತರು ಸೇರುತ್ತಾರೆ, ಅವರ ಜೊತೆ ನೀವು ಆಗಷ್ಟೇ ನೋಡಿದ ಒಂದೊಳ್ಳೇ ಚಿತ್ರದ ಬಗ್ಗೆ ಕಾಫಿ ಕುಡಿಯುತ್ತಲೋ, ಗುಂಡು ಹೀರುತ್ತಲೋ ಚರ್ಚೆ ಮಾಡಬಹುದು. ನೀವು ನಿರ್ದೇಶಕರಾಗಿದ್ದರೆ ಬೇರೆ ದೇಶಗಳ ಚಿತ್ರಗಳನ್ನು ನೋಡುತ್ತಾ ನಿಮ್ಮಲ್ಲೊಂದು ಹೊಸ ವಸ್ತು ಮೊಳಕೆಯೊಡೆಯಬಹುದು ಅಥವಾ ನೀವು ಜಾಣರಾಗಿದ್ದರೆ ಅದೇ ಚಿತ್ರದ ವಸ್ತುವನ್ನು ಕದಿಯಬಹುದು. ನೀವು ಸಿನಿಮಾ ವಿದ್ಯಾರ್ಥಿಯಾಗಿದ್ದರೆ ಪ್ರತಿ ಚಿತ್ರೋತ್ಸವವೂ ನಿಮ್ಮ ಪಾಲಿಗೆ ಒಳ್ಳೆಯ ಗುರುವಿನಂತೆ, ಕನ್ನಡ ಸಿನಿಮಾ ಪರ್ತಕರ್ತರಿಗೆ ಬಿಡುಗಡೆಯ ಹಾದಿಯಂತೆ, ಟೈಮ್ ಪಾಸ್ ಗೆ ಬರುವವರಿಗೆ ಬಸವನಗುಡಿಯ ಕಡಲೆಕಾಯಿ ಪರಿಷೆಯಂತೆ....

rekha inaugrating 2008 goa film festival

ಅಂಥಾ ಅನುಭೂತಿ ಸಿಗಬೇಕಾದರೆ ಚಿತ್ರೋತ್ಸವ ನಡೆಯುವ ವಾತಾವರಣವೂ ಅದಕ್ಕೆ ತಕ್ಕಂತೆ ಇರಬೇಕಾಗುತ್ತದೆ. ಇಪ್ಪತ್ತು  ವರ್ಷದ ಹಿಂದೆ ನಾನು ಚೆನ್ನೈನಲ್ಲಿ ನಡೆದ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರೇಕ್ಷಕನಾಗಿದ್ದೆ. ದಿನವೊಂದಕ್ಕೆ ಐದು ಸಿನಿಮಾಗಳನ್ನು ನೋಡುವ ಅವಕಾಶ. ಆಗ ಅಪರೂಪಕ್ಕೆ ಚೆನ್ನೈನಲ್ಲಿ ಕೊಂಚ ಚಳಿಯಿತ್ತು, ಡಿಸೆಂಬರ್ ತಿಂಗಳಲ್ಲಿ ನಸುಕಿನಲ್ಲೆದ್ದು ಹೋಟೆಲ್ ಪಕ್ಕದಲ್ಲೇ ಇದ್ದ ಚಿತ್ರಮಂದಿರಕ್ಕೆ ಪುಟ್ಟ ವಾಕ್ ಮಾಡಿ, ಆಯ್ದ ಐವತ್ತು ಪ್ರೇಕ್ಷಕರ ನಡುವೆ ಕುಳಿತು, ಬೆಳಿಗ್ಗೆ ಏಳೂವರೆಗೆ ಮೊದಲ ಚಿತ್ರ ನೋಡುವ ಸುಖ ಇದೆಯಲ್ಲ. ಲೋಕಾಂತದಲ್ಲಿ ಏಕಾಂತವೆಂಬಂತೆ, ಅದನ್ನು ಅನುಭವಿಸಿಯೇ ತೀರಬೇಕು. ಸಿನಿಮಾ ಮುಗಿದ ತಕ್ಷಣ ಕಾಫಿ ತಿಂಡಿಗೆ ವ್ಯವಸ್ಥೆ. ತಿಂಡಿ ತಿನ್ನುತ್ತಲೇ ಆ ಚಿತ್ರದ ನಿರ್ದೇಶಕರ ಜೊತೆ ಸಂವಾದ ನಡೆಸಬಹುದಾಗಿತ್ತು. ಈಗ ಅಂಥಾ ಚರ್ಚೆ - ಸಂವಾದಗಳು ವಿರಳವಾಗಿವೆ. ಟೀವಿಯಲ್ಲಿ, ಯೂ ಟ್ಯೂಬ್ ನಲ್ಲಿ ಫೆಸ್ಟಿವಲ್ ಚಿತ್ರಗಳು ಪ್ರಸಾರವಾಗುವ ಸಾಧ್ಯತೆಗಳು ಜಾಸ್ತಿಯಿರುವುದರಿಂದ ಸಿನಿಮಾಸಕ್ತರ ಒಂದು ದೊಡ್ಡ ಗುಂಪು ಚಿತ್ರೋತ್ಸವದಿಂದ ದೂರ ನಿಂತಿದೆ. ಇನ್ನೇನೋ ನಿರೀಕ್ಷೆ ಇಟ್ಟುಕೊಂಡು ಬರುವ ರಸಿಕ ಪ್ರೇಕ್ಷಕರು ತಮ್ಮ ನಿರೀಕ್ಷೆ ಸುಳ್ಳಾದಾಗ ಗಲಾಟೆ ಮಾಡುವ ಘಟನೆಗಳೂ ನಡೆಯುತ್ತಿವೆ.  ಪ್ರಾದೇಶಿಕ ಚಿತ್ರಗಳಿಗೆ ಚಿತ್ರೋತ್ಸವ ಅನ್ನುವುದು ಹೊಸ ಅವಕಾಶಗಳ ಹೆಬ್ಬಾಗಿಲು ತೆರೆಯುತ್ತವೆ ಅನ್ನುವ ಮಾತು ಕೂಡ ಈಗ ಸುಳ್ಳಾಗುತ್ತಿವೆ. ಮಾರುಕಟ್ಟೆ ವಿಭಾಗದಲ್ಲಿ ಕನ್ನಡ ಸಿನಿಮಾಗಳನ್ನು ಕೊಳ್ಳುವವರಿಲ್ಲ.  ಹೀಗಾಗಿ ಈ ಸಂದರ್ಭಕ್ಕೆ ಬಾಬು ಅವರ ವಾದ ಸರಿ ಅನಿಸುತ್ತದೆ.

ಈ ಹಿಂದೆ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವವನ್ನು ಸುಚಿತ್ರ ಫಿಲಂ ಸೊಸೈಟಿಯವರೇ ಉತ್ಸಾಹದಿಂದ ನಡೆಸುತ್ತಿದ್ದರು. ಈಗ ಚಲನಚಿತ್ರ ಅಕಾಡಮಿಗೆ ಈ ಅಧಿಕಾರ ಹಸ್ತಾಂತರವಾಗಿದೆ. ಅಕಾಡಮಿ ಅನ್ನುವುದು ಸರ್ಕಾರಿ ಸ್ವಾಧೀನದಲ್ಲಿರುವ ಸಂಸ್ಥೆಯಾಗಿರುವದರಿಂದ ಈ ಉತ್ಸವಕ್ಕೂ ಸರ್ಕಾರಿ ಸಮಾರಂಭದ ಕಳೆ ಬರುವುದು ಅನಿವಾರ್ಯ. ಮುಖ್ಯಮಂತ್ರಿಗಳು ಈಗಾಗಲೇ ಎರಡು ಕೋಟಿ ರುಪಾಯಿಯನ್ನು ಉತ್ಸವದ ಸಲುವಾಗಿ ಮಂಜೂರು ಮಾಡಿದ್ದಾರೆ, ಇದು ಸಾಲದೇ ಇದ್ದರೆ ಇನ್ನಷ್ಟು ಕೊಡುವ ಭರವಸೆಯನ್ನೂ ನೀಡಿದ್ದಾರೆ. ಕಮಲಾಹಾಸನ್ ಬಂದುಹೋಗುತ್ತಾರೆ, ನಮ್ಮ ಉದ್ಯಮದ ನಾಯಕರು ಕೋಟುಸೂಟುಗಳಲ್ಲಿ ಮಿಂಚುವುದಕ್ಕಿದೆ. ಇದು ಕ್ರಿಕೆಟ್ ಮ್ಯಾಚ್ ಅಲ್ಲವಾಗಿರುವದರಿಂದ ರಾಜಕಾರಣಿಗಳು ಪಾಸುಗಳ ಸಲುವಾಗಿ ಗದ್ದಲ ಮಾಡುವುದಿಲ್ಲ. ಬೆಂಗಳೂರು ಪ್ರಜೆ ಈ ಚಳಿಗಾಲದ ಸಂಜೆಯನ್ನು ಬಾರಲ್ಲಿ ಕಳೆಯುವುದೋ ಅಥವಾ ಥಿಯೇಟರಲ್ಲಿ ಕಳೆಯುವುದೋ ಎಂಬ ಪ್ರಶ್ನೆಯನ್ನಿಟ್ಟುಕೊಂಡು ಕುಳಿತಿದ್ದಾನೆ.

ಉತ್ಸವಗಳು ಕಳೆಗುಂದುತ್ತಿರುವ ಕಾಲದಲ್ಲಿ ನಾವಿದ್ದೇವೆ ಅನ್ನುವುದು ನಿಜವಾದ ದುರಂತ.

Also See

Uma Column 14 - ಹಾಗೆ ಸುಮ್ಮನೆ ಕಳೆದು ಹೋದ ಜೀನಿಯಸ್

Uma Column 13 - ಮಲ್ಟಿಪ್ಲೆಕ್ಸಲ್ಲಿ ಸಿನಿಮಾ ಭಾಗ್ಯ ಯೋಜನೆ

Uma Column 12 - ದೇವರಿಗೂ ಬೇಕಾ ಪ್ರಶಸ್ತಿಯ ಕಿರೀಟ?

Uma Column 11 - ಯಾರಿಗೇಳೋಣಾ ನಮ್ಮ ಪ್ರಾಬ್ಲಂ

Uma Column 10 - ತೊಲಗು ಅಂದರೆ ನಾನು ತೆಲುಗು ಅಂದ ಹಾಗಾಯಿತು

Uma Column 9 - ಹಳ್ಳಿ ಹುಡುಗನನ್ನು ಕೊಂದವರ್ಯಾರು?

Uma Column 8 - ಶಂಕರ ನಾಗಮಂಡಲದಲ್ಲಿ ಒಂದು ಸುತ್ತು..

Uma Column 7 - ಪ್ರಶಸ್ತಿಗಳು ಮಾರಾಟಕ್ಕಿವೆ!

Uma Column 6 - ಹಾಯ್ ಕನ್ನಡ ತಾಯ್!

Uma Column 5 - ನನ್ನ ಭಯ ಮತ್ತು ಅಭಯನ ಜಯ

Uma Column 4 - ಭಟ್ರ ಕ್ವಾರ್ಟರ್ರು ಎಂಬ ಸೀರಿಯಸ್ ಮ್ಯಾಟರ್ರು

Uma Column 3 - ಕಲ್ಲು ಕೊರಗುವ ಸಮಯ

Uma Column 2 - ಮುನಿ ಮತ್ತು MONEY

Uma Column 1 - ಜಗತ್ತಿನ ಕೂಸು ಮತ್ತು ಕನ್ನಡದ ಮನಸ್ಸು

ಸಿನಿಮಾ ಪತ್ರಿಕೋದ್ಯಮದಲ್ಲಿ ಉದಯ್ ನನ್ನ ಗುರು - ಜೋಗಿ

Udaya Marakini Column In Chitraloka

Pls Note -

The views expressed in this column are those of its author and Chitraloka or its publishers do not claim to endorse it. You can express your opinion to his e-mail - This email address is being protected from spambots. You need JavaScript enabled to view it.