ಸನ್ ಸಾವಿರದ ಒಂಬೈನೂರ ಎಂಭತ್ತೈದನೇ ಇಸ್ವಿಯ ಒಂದು ತಂಪು ಮಧ್ಯಾಹ್ನ ನಾನು, ಶಿವರಾಜ್, ಪೆರುವೋಡಿ ಮತ್ತು ಎ. ಬಾಲಕೃಷ್ಣ – ಈ ನಾಲ್ವರು ಜಯನಗರ ನಾಲ್ಕನೇ ಬ್ಲಾಕಲ್ಲಿದ್ದ ಕಾಶಿನಾಥ್ ಮನೆಗೆ ಹೋದೆವು. ಶಿವರಾಜ್ ಅವರಿಗೆ ಕಾಶಿನಾಥ್ ಹಳೇ ಪರಿಚಯ, ಅವರ ಕೆಲವು ಚಿತ್ರಗಳಲ್ಲಿ ಶಿವು ನಟಿಸಿದ್ದರು. ಪೆರುವೋಡಿ ಏಲಿಯಾಸ್ ಸುಕುಮಾರ ನನ್ನ ಚಡ್ಡಿದೋಸ್ತ್. ಅಡ್ಯನಡ್ಕದ ಪ್ರೈಮರಿ ಸ್ಕೂಲಲ್ಲಿ ನಾನು ಮತ್ತೆ ಅವನು ಏಳನೇ ಕ್ಲಾಸ್ ತನಕ ಒಟ್ಟಿಗೇ ಓದಿದ್ದೆವು. ಎ. ಬಾಲಕೃಷ್ಣ ಪತ್ರಕರ್ತರಾಗಿದ್ದವರು ಮತ್ತು ಸಿನಿಮಾ ನಿರ್ದೇಶಕರಾಗುವ ಸಿದ್ಧತೆಯಲ್ಲಿದ್ದವರು. ಆನಂತರ ಅವರು ‘ಎದುರು ಮನೆ ಮೀನಾ’ಎಂಬ ಚಿತ್ರವನ್ನು ನಿರ್ದೇಶಿಸಿದರು. ಪೆರುವೋಡಿ ಕೂಡಾ ‘ಕಲಿಯುಗ ಕೃಷ್ಣ’ಎಂಬ ಕಾಶಿನಾಥ್ ಸಿನಿಮಾವನ್ನು ನಿರ್ದೇಶಿಸಿದ. ನಾನು ಆಗ ಪತ್ರಕರ್ತನಾಗುವ ಕನಸು ಕಾಣುತ್ತಿದ್ದವನು. ನಾವೆಲ್ಲರೂ ಜೊತೆಯಾಗಿ ಫೀಚರ್ ಸಿಂಡಿಕೇಟ್ ಎಂಬ ಸಂಸ್ಥೆ ಹುಟ್ಟುಹಾಕಿದ್ದೆವು. ಅದು ಬರ್ಖತ್ತಾಗಲಿಲ್ಲ ಅನ್ನುವುದು ಬೇರೆ ಮಾತು.
ಈಗ ಮತ್ತೆ ವಿಷ್ಯಕ್ಕೆ ಬರ್ತೀನಿ. ‘ಅನುಭವ’ಸಿನಿಮಾ ಭಯಂಕರ ಹಿಟ್ ಆಗಿದ್ದ ಹಿನ್ನೆಲೆಯಲ್ಲಿ ಕಾಶಿನಾಥ್ ಮನೆತುಂಬಾ ಜನರಿರಬಹುದು ಹಾಗೂ ನಾವು ಅವರನ್ನು ನೋಡುವುದಕ್ಕೆ ಗಂಟಗಟ್ಟಲೆ ಕಾಯಬೇಕಾಗಬಹುದು ಎಂದು ನಾನಂದುಕೊಂಡಿದ್ದೆ. ನಾನು ನಿರುದ್ಯೋಗಿಯಾಗಿದ್ದರಿಂದ ಕಾಯುವುದಕ್ಕೇನೂ ಬೇಜಾರಿರಲಿಲ್ಲ. ಕಾಶಿನಾಥ್ ಮನೆತುಂಬ ಜನರಿದ್ದರು ನಿಜ, ಆದರೆ ಅವರ್ಯಾರೂ ಸಿನಿಮಾದವರಾಗಲಿ, ಅಭಿಮಾನಿಗಳಾಗಲಿ ಆಗಿರಲಿಲ್ಲ. ಬದಲಾಗಿ ಅವರ ಮನೆಯವರೇ ಆಗಿದ್ದರು. ಅಣ್ಣತಮ್ಮಂದಿರು ಜೊತೆಯಾಗಿ ವಾಸ ಮಾಡುತ್ತಿದ್ದ ಕೂಡುಕುಟುಂಬವದು. ಮನೆಯ ಮೊದಲ ಪ್ಲೋರ್ ನಲ್ಲಿ ಕಾಶಿನಾಥ್ ಅವರ ರೂಮ್ ಕಂ ಆಫೀಸು ಇತ್ತು. ಬಾಗಿಲು ತೆರೆದೇ ಇತ್ತು. ನಾವು ಆ ಇಕ್ಕಟ್ಟಾದ ರೂಮಲ್ಲಿ ಅವರ ಮುಂದೆ ಕುಳಿತುಕೊಂಡು ಇನ್ನೇನು ಮಾತು ಶುರು ಮಾಡಬೇಕು ಅನ್ನುವಾಗ ಒಂದು ಅಪಘಾತ ಸಂಭವಿಸಿತು. ಬಾಗಿಲ ಮೇಲಿಂದ ಒಂದು ಪುಟ್ಟ ಆಕೃತಿ ಛಂಗನೆ ಜಿಗಿದು ಟೇಬಲ್ ಮೇಲೆ ಸ್ಥಾಪನೆಯಾಯಿತು, ಅಲ್ಲಿಂದ ಕಾಶಿನಾಥ್ ಹೆಗಲಿಗೆ ರವಾನೆಯಾಯಿತು. ನಾವಿನ್ನೂ ಆ ಆಘಾತದಿಂದ ಚೇತರಿಸಿಕೊಳ್ಳುವ ಮುಂಚೆ ಕಾಶಿನಾಥ್ ನಸುನಗುತ್ತಾ ಹೇಳಿದರು “ಇವನು ನನ್ನ ಮಗ”. ಬಹುಶಃ ಆ ಹುಡುಗನೇ ಈಗ ನಾಯಕನಾಗಿರುವ ಅಲೋಕ್ ಇರಬಹುದು ಅನ್ನುವುದು ನನ್ನ ಗುಮಾನಿ.
ಸ್ಕ್ರಿಪ್ಟು ಬರೆಯುವುದಕ್ಕೆ ಸ್ಟಾರ್ ಹೋಟೆಲ್ಲೇ ಬೇಕು, ಬ್ಯಾಂಕಾಕಿಗೆ ಕಳುಹಿಸಿದರೆ ಇನ್ನೂ ಉತ್ತಮ ಎಂದು ಬೇಡಿಕೆ ಇಡುತ್ತಿರುವ ಈಗಿನ ಡೈರೆಕ್ಟರುಗಳು ಮತ್ತು ರೈಟರುಗಳು ಕಾಶಿನಾಥ್ ತಮ್ಮ ಗಿಜಿಗುಡುತ್ತಿದ್ದ ಮನೆಯಲ್ಲಿ ತಮ್ಮ ಪಾಡಿಗೆ ಬರೆಯುತ್ತಿದ್ದುದನ್ನು ನೋಡಬೇಕಾಗಿತ್ತು. ಅಂದಹಾಗೆ ಕಾಶಿನಾಥ್ ಚಿತ್ರಗಳ ಗೆಲುವಿಗೆ ಮುಖ್ಯ ಕಾರಣವಾಗಿದ್ದದ್ದು ಸ್ಕ್ರಿಪ್ಟು. ಚಿತ್ರಕತೆ ಬರೆಯುವುದರಲ್ಲಿ ಅವರನ್ನು ಮೀರಿಸಿದವರಿಲ್ಲ ಎಂದು ಉಪೇಂದ್ರರೇ ಹೇಳಿದ್ದಾರೆ. ಆ ಕಾರಣಕ್ಕೇ ಕಾಶಿನಾಥ್ ಚಿತ್ರಗಳಲ್ಲಿ ಒಂದೇ ಒಂದು ವೇಸ್ಟ್ ಅನಿಸುವ ದೃಶ್ಯವಾಗಲಿ , ಫ್ರೇಮ್ ಆಗಲಿ ಕಾಣಿಸುವುದಿಲ್ಲ. ಆ ಕಾರಣಕ್ಕೇ ಕಡಿಮೆ ಬಜೆಟ್ಟಲ್ಲಿ, ಕಡಿಮೆ ಕಚ್ಚಾ ಫಿಲಂ ಬಳಸಿ ಚಿತ್ರ ಮಾಡುವುದಕ್ಕೆ ಅವರಿಗೆ ಸಾಧ್ಯವಾಯಿತು. ವಿಪರ್ಯಾಸವೆಂದರೆ ಅವರ ಗರಡಿಯಲ್ಲಿ ಪಳಗಿದ ಉಪೇಂದ್ರ ಮತ್ತು ದೇಸಾಯಿ ಇಬ್ಬರೂ ಸಿಕ್ಕಾಪಟ್ಟೆ ಕಚ್ಚಾಫಿಲಂ ಬಳಸುತ್ತಾರೆ ಅನ್ನುವ ಆರೋಪಕ್ಕೆ ಗುರಿಯಾದವರು.
ಸರಿಸುಮಾರು ಮೂವತ್ತು ವರ್ಷದ ನಂತರ ‘ಅನುಭವ’ಚಿತ್ರ ಮತ್ತೆ ತೆರೆಕಾಣುತ್ತಿರುವ ಹೊತ್ತಿಗೆ ಮೇಲೆ ಹೇಳಲಾದ ಘಟನೆ ನೆನಪಾಯಿತು. ಇಂದಿನ ಟೀವಿ ಚಾನೆಲ್ಲುಗಳ ಜಮಾನದಲ್ಲಿ ಸಿನಿಮಾ ಒಂದು ಮರುಬಿಡುಗಡೆ ಆಗುತ್ತಿರುವುದು ಅಂಥಾ ಕಿವಿ ಅರಳಿಸುವ ಸುದ್ದಿಯೇನಲ್ಲ. ಆದರೂ ಮಾಧ್ಯಮಗಳಲ್ಲಿ ಈ ಸುದ್ದಿಗೆ ಮಹತ್ವ ಸಿಕ್ಕಿದೆ. ಹಾಗೆ ಹುಡುಕುತ್ತಾ ಹೋದರೆ ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಮತ್ತೆಮತ್ತೆ ಬಿಡುಗಡೆಯಾಗುವುದಕ್ಕೆ ಯೋಗ್ಯವಿರುವ ಚಿತ್ರಗಳು ಸಿಗುವುದು ಬೆರಳೆಣಿಕೆಯಷ್ಟು ಮಾತ್ರ. ಉದಾಹರಣೆಗೆ ಬಂಗಾರದ ಮನುಷ್ಯ, ಭೂತಯ್ಯನ ಮಗ ಅಯ್ಯು, ನಾಗರಹಾವು, ಉಯ್ಯಾಲೆ, ಮಯೂರ, ಘಟಶ್ರಾದ್ಧ ಇತ್ಯಾದಿ. ಆದರೆ ಟೀವಿ ಚಾನೆಲ್ಲುಗಳೇ ಈ ಕೆಲಸವನ್ನು ಶ್ರದ್ಧೆಯಿಂದ ಮಾಡುತ್ತಿರುವುದರಿಂದ, ನಮಗೆ ಬೇಕಾದ ಬೇಡವಾದ ಚಿತ್ರಗಳೆಲ್ಲವೂ ಮರುಪ್ರಸಾರ ಕಾಣುತ್ತಿವೆ. ಹಾಗಾಗಿ ಮರಳಿ ಮರಳುವ ಚಿತ್ರಗಳ ಕುರಿತಾದ ಚರ್ಚೆಯೇ ಅಪ್ರಸ್ತುತ.
ನಿಜ, ಅನುಭವ ಚಿತ್ರ ಎಂಭತ್ತರ ದಶಕದಲ್ಲಿ ಭರ್ಜರಿ ಯಶಸ್ಸು ಕಂಡಿತ್ತು. ಹಾಗಂತ ಈಗಲೂ ಅದು ಅದೇ ಮಟ್ಟದ ಯಶಸ್ಸನ್ನು ಕಾಣುತ್ತದೆ ಎಂಬ ಬಗ್ಗೆ ನನಗೆ ನಂಬಿಕೆಯಿಲ್ಲ. ಆದರೆ ಅದನ್ನು ಮತ್ತೆ ತೆರೆಕಾಣಿಸುತ್ತಿರುವ ಬಸವರಾಜ್ ನೀಡುತ್ತಿರುವ ಕಾರಣ ಕುತೂಹಲಕಾರಿಯಾಗಿದೆ. ಹಿಂದಿ ಮತ್ತು ಕನ್ನಡದಲ್ಲಿ ಈಗ ಸೆಕ್ಸ್ ಕಾಮೆಡಿ ಚಿತ್ರಗಳು ಸಾಲುಸಾಲಾಗಿ ಯಶಸ್ಸು ಕಾಣುತ್ತಿರುವುದರಿಂದ ಅನುಭವ ಚಿತ್ರವೂ ಈ ಕಾಲಕ್ಕೆ ಪ್ರಸ್ತುತವಾದೀತು ಅನ್ನುವ ನಿರೀಕ್ಷೆ ಅವರದು. ಎಂಬಲ್ಲಿಗೆ ‘ಅನುಭವ’ಚಿತ್ರಕ್ಕೆ ಅವರು ಯಾವ ಲೇಬಲ್ ಹಚ್ಚಿ ಬಿಡುಗಡೆ ಮಾಡುತ್ತಿದ್ದಾರೆ ಅನ್ನುವುದೂ ನಿಚ್ಚಳವಾಗುತ್ತದೆ. ತಪ್ಪೇನೂ ಇಲ್ಲ, ‘ಅನುಭವ’ತೆರೆಕಂಡಾಗ ಜನರು ಅದನ್ನು ಪೋಲಿ ಚಿತ್ರ ಅಂತಾನೇ ಕರೆದಿದ್ದರು. ಹಾಗಂತ ಟೀಕಿಸುತ್ತಲೇ ಗುಟ್ಟಾಗಿ ಆ ಚಿತ್ರವನ್ನು ನೋಡಿ ಮೆಚ್ಚಿಕೊಂಡರು. ಕಾಶಿನಾಥ್ ಅವರ ಭಂಡಧೈರ್ಯದ ಬಗ್ಗೆ ಗೆಳೆಯರ ಗುಂಪುಗಳಲ್ಲಿ ಚರ್ಚೆಯಾಯಿತು. ಅವರಿಗೆ ಪೋಲಿನಟ ಎಂಬ ಬಿರುದು ನೀಡುವ ಬಗ್ಗೆ ಒಮ್ಮತದ ನಿರ್ಧಾರಕ್ಕೆ ಬರಲಾಯಿತು. ಇನ್ನೊಂದೆಡೆ ಸೀರಿಯಸ್ ಆಗಿ ಸಿನಿಮಾ ನೋಡುವ ಪ್ರೇಕ್ಷಕರ ವಲಯದಲ್ಲಿ ‘ಅನುಭವ’ದಲ್ಲಿ ಕಾಶಿನಾಥ್ ‘ಮಧ್ಯಮವರ್ಗದ ಲೈಂಗಿಕಲೋಕದ ತವಕತಲ್ಲಣಗಳನ್ನು ಹೇಗೆ ಅನಾವರಣಗೊಳಿಸಿದ್ದಾರೆ’ಎಂಬ ಬಗ್ಗೆ ವಿಸ್ತೃತವಾದ ಸಂಶೋಧನೆ ನಡೆಯಿತು. ‘ಒಂದು ಜನಾಂಗದ ಕಣ್ಣು ತೆರೆಸಿದ ನಿರ್ದೇಶಕ’ಎಂದು ಅವರನ್ನು ಕರೆಯುವುದಕ್ಕೆ ಅಡ್ಡಿಯಿಲ್ಲ ಎಂಬ ತೀರ್ಮಾನಕ್ಕೆ ಅಲ್ಲೂ ಬರಲಾಯಿತು. ಇವೆಲ್ಲದರ ಮಧ್ಯೆ ಸಂಪ್ರದಾಯಸ್ಥರ ಮನೆ ಹೆಣ್ಮಕ್ಕಳು ಕಾಶಿನಾಥ್ ಮೇಲೆ ಕೊಳಕ, ಮನೆಹಾಳ, ಲಫಂಗ, ಫಟಿಂಗ ಎಂದು ತಮ್ಮಲ್ಲಿದ್ದ ಸಕಲ ಬೈಗಳು ಸಂಪತ್ತನ್ನೂ ಪ್ರಯೋಗಿಸಿ ನೆಟಿಗೆ ಮುರಿದರು. ಕಾಶಿನಾಥ್ ಆಯಸ್ಸು ಜಾಸ್ತಿಯಾಯಿತು.
ಅನುಭವದ ಮೂಲಕ ಕಾಶಿನಾಥ್ ಕನ್ನಡಿಗರ ಮಡಿವಂತಿಕೆಗಷ್ಟೇ ಅಲ್ಲ ಮತ್ತು ಕನ್ನಡ ಚಿತ್ರರಂಗದ ಮಡಿವಂತಿಕೆಗೂ ಕೊಳ್ಳಿಯಿಟ್ಟರು. ಈ ಕಾರಣಕ್ಕಾದರೂ ಕೋಟೇಶ್ವರದಂಥಾ ಕರಾವಳಿಯ ಪುಟ್ಟ ಊರಿಂದ ಬೆಂಗಳೂರಿಗೆ ಬಂದ ಬ್ರಾಹ್ಮಣ ಹುಡುಗನ ಧೈರ್ಯ ಮತ್ತು ಜಾಣತನವನ್ನು ನೀವು ಮೆಚ್ಚಿಕೊಳ್ಳಲೇಬೇಕು. ಯಾವುದನ್ನು ಜನರು ನಿಷಿದ್ಧ, ಅಸಭ್ಯ ಎಂದು ಬೆಡ್ ರೂಂ ಒಳಗೆ ಬಚ್ಚಿಟ್ಟಿದ್ದರೋ, ಅದನ್ನು ಕಾಶಿನಾಥ್ ಈಚೆಗೆಳೆದುಪ್ರದರ್ಶನಕ್ಕೆ ಇಟ್ಟರು. ಒಂದೇ ಮಾತಲ್ಲಿ ಹೇಳಬೇಕಾದರೆ ಸೆಕ್ಸ್ ಬಗ್ಗೆ ಜನರಿಗಿದ್ದ ಕುತೂಹಲವನ್ನೇ ಬಂಡವಾಳವಾಗಿಸಿಕೊಂಡರು, ಮೂರು ಲಕ್ಷದಲ್ಲಿ ನಿರ್ಮಾಣವಾದ ‘ಅನುಭವ’ಸಿನಿಮಾ ಲಕ್ಷಗಳನ್ನು ದೋಚಿತು.. ಆದರೆ ಸಿನಿಮಾ ಮಾಧ್ಯಮದ ಮೇಲೆ ಕಾಶಿನಾಥ್ ಅವರಿಗಿದ್ದ ಹಿಡಿತವನ್ನು ನೋಡಬೇಕಾದರೆ ನೀವು ‘ಅಪರಿಚಿತ’ಚಿತ್ರವನ್ನು ನೋಡಬೇಕು. ಅದೊಂದು ಪಕ್ಕಾ ಥ್ರಿಲ್ಲರ್. ಕತೆ, ಚಿತ್ರಕತೆ, ನಟನೆ, ಸಂಗೀತ, ಇವೆಲ್ಲವೂ ಒಂದಕ್ಕೊಂದು ಕಾಂಪ್ಲಿಮೆಂಟ್ ಹೇಳಿದಂತಿರುವ ಚಿತ್ರವದು. ವೈಎನ್ಕೆ ಭಾಷೆಯಲ್ಲಿ ಹೇಳುವುದಾದರೆ ಸುರೇಶ್ ಹೆಬ್ಳಿಕರ್ ಅವರಂತಾ ಹಾಲಿ ‘ವುಡ್’ನಟನ ಮಿತಿಗಳನ್ನೇ ಶಕ್ತಿಯನ್ನಾಗಿ ಬಳಸಿಕೊಂಡ ಚಿತ್ರವದು. ನನ್ನ ದುರದೃಷ್ಟಕ್ಕೆ ನಾನು ಆ ಚಿತ್ರವನ್ನು ನೋಡುವುದಕ್ಕೆ ಹೋದಾಗ ಆಗಷ್ಟೇ ಮ್ಯಾಟಿನಿ ಶೋ ಮುಗಿಸಿಕೊಂಡು ಹೊರಬಂದಿದ್ದ ನನ್ನ ಚಿಕ್ಕಪ್ಪನ ಮಗ ಎದುರಾದ. ನಾನು ಕೇಳುವ ಮುಂಚೆಯೇ “ಪಿಕ್ಚರ್ ಬಹಳ ಚೆನ್ನಾಗಿದೆ, ಸುಂದರಕೃಷ್ಣ ಅರಸ್ ಕೊಲೆಗಾರ ಅನ್ನುವುದು ಕೊನೆತನಕ ಗೊತ್ತಾಗೋದೇ ಇಲ್ಲ”ಅಂದುಬಿಟ್ಟ. ಆ ಕ್ಷಣಕ್ಕೆ ನಾನೇ ಕೊಲೆಗಾರನಾಗೋಣ ಅಂತ ಅನಿಸಿತ್ತು. ಅನಂತರ ಅಪರಿಚಿತದಂಥಾ ಚಿತ್ರವನ್ನು ಕಾಶಿ ಮಾಡಲೇ ಇಲ್ಲ. ಅವರಿಗೆ ಡಬ್ಬಲ್ ಮೀನಿಂಗ್ ಚಿತ್ರಗಳ ರುಚಿ ಹತ್ತಿತ್ತೋ ಅಥವಾ ನಾಯಕನಟನಾಗುವ ಹುಚ್ಚು ಹತ್ತಿತ್ತೋ ಗೊತ್ತಿಲ್ಲ.
ನೀವು ಹಳಬರಾಗಿದ್ದರೆ, ದಾದಾ ಕೋಂಡ್ಕೆ ಹೆಸರು ಕೇಳಿರುತ್ತೀರಿ. 70-80ರ ದಶಕದಲ್ಲಿ ಮರಾಠಿ ಚಿತ್ರರಂಗದಲ್ಲಿ ಆತ ಸೂಪರ್ ಸ್ಟಾರ್. ಅತಿ ಹೆಚ್ಚು ಯಶಸ್ವಿ ಚಿತ್ರಗಳಲ್ಲಿ ನಟಿಸಿದ ನಟ ಅನ್ನುವ ಗಿನೆಸ್ ದಾಖಲೆ ಇಂದಿಗೂ ಆತನ ಹೆಸರಲ್ಲೇ ಇದೆ. ಆತನ 9 ಚಿತ್ರಗಳು ಸತತವಾಗಿ ಸಿಲ್ವರ್ ಜುಬಿಲಿ ಆಚರಿಸಿದ್ದವು. ಕಾಶಿನಾಥ್ ಅನುಭವ ತೆರೆಕಂಡಾಗ ಅವರನ್ನು ಕನ್ನಡದ ದಾದಾ ಕೋಂಡ್ಕೆ ಎಂದು ಜನ ಪ್ರೀತಿಯಿಂದ ಮತ್ತು ತಮಾಷೆಗೆ ಕರೆದರು. ಯಾಕೆಂದರೆ ಇಬ್ಬರಲ್ಲೂ ಕೆಲವು ಸಾಮ್ಯತೆಗಳಿದ್ದವು. ದಾದಾ ಕೋಂಡ್ಕೆ ಥರಾನೇ ಕಾಶಿನಾಥ್ ಕೂಡಾ ನಟ, ನಿರ್ಮಾಪಕ, ನಿರ್ದೇಶಕ. ಇಬ್ಬರದ್ದೂ ಒಂದೇ ಆಸ್ತ್ರ – ದ್ವಂದ್ವಾರ್ಥದ ದೃಶ್ಯ ಮತ್ತು ಸಂಭಾಷಣೆ. ಇಬ್ಬರೂ ಕಾಣುವುದಕ್ಕೆ ಜೋಕರ್ ಥರ ಇದ್ದರು. ಇಬ್ಬರೂ ನಿರ್ಮಿಸುತ್ತಿದ್ದದ್ದು ಕಡಿಮೆ ಬಜೆಟ್ಟಿನ ಚಿತ್ರಗಳನ್ನೇ. ಕಾಶಿನಾಥ್ ಹಿಂದಿ ಚಿತ್ರರಂಗಕ್ಕೆ ನುಗ್ಗಿದ ಹಾಗೆ ಕೋಂಡ್ಕೆಯೂ ಮುಂಬೈನಲ್ಲೊಂದು ಕೈ ನೋಡಿದ. ಆ ಚಿತ್ರದ ಹೆಸರು ‘ಅಂಧೇರಿ ರಾತ್ ಮೆ ದಿಯಾ ತೇರೆ ಹಾಥ್ ಮೇ’. ಈ ಶೀರ್ಷಿಕೆಯೇ ಅಶ್ಲೀಲ ಎಂದು ಸೆನ್ಸಾರ್ ಮಂಡಳಿ ತಕರಾರೆತ್ತಿತ್ತು.
ಹಿಂದಿ ಚಿತ್ರಗಳ ಹಾವಳಿಯಿಂದಾಗಿ ಹೆಚ್ಚುಕಮ್ಮಿ ಕೊನೆಯುಸಿರೆಳೆಯುವ ಹಂತಕ್ಕೆ ಬಂದಿದ್ದ ಮರಾಠಿ ಚಿತ್ರರಂಗಕ್ಕೆ ಟಾನಿಕ್ ನೀಡಿದಾತ ಕೋಂಡ್ಕೆ. ಆತನಿಗೆ ಪೈಪೋಟಿ ನೀಡುವವರೇ ಇರಲಿಲ್ಲ. ಕೋಂಡ್ಕೆಗಿಂತ ಕಾಶಿನಾಥ್ ಒಂದಡಿ ಮೇಲೆ ನಿಲ್ಲುವುದು ಇಲ್ಲೇ. ಯಾಕೆಂದರೆ ಎಂಭತ್ತರದ ದಶಕದಲ್ಲಿ ಕಾಶಿ ತಮ್ಮದೇ ಬ್ರಾಂಡ್ ಚಿತ್ರಗಳೊಂದಿಗೆ ಕಾಲಿಟ್ಟಾಗ ಕನ್ನಡದಲ್ಲಿ ಅನಂತನಾಗ್, ಶಂಕರ್ ನಾಗ್, ರವಿಚಂದ್ರನ್, ವಿಷ್ಣುವರ್ಧನ್ ಮೊದಲಾದ ಸ್ಟಾರ್ ನಟರಿದ್ದರು, ಗಿರೀಶ್ ಕಾರ್ನಾಡ್, ಕಾಸರವಳ್ಳಿ ಅವರಂಥ ಘಟಾನುಘಟಿ ನಿರ್ದೇಶಕರಿದ್ದರು. ಹಾಗಿದ್ದೂ ಕಾಶಿನಾಥ್ ತನ್ನದೇ ಆದ ಪ್ರೇಕ್ಷಕವರ್ಗವನ್ನು ಸಂಪಾದಿಸಿದರು. ಮಿಕ್ಕವರಿಗಿಂತ ಭಿನ್ನವಾಗಿ ನಿಂತರು. ಆವರ ನರಪೇತಲ ಆಕೃತಿ, ಅವರು ಆಯ್ದುಕೊಳ್ಳುತ್ತಿದ್ದ ಕಥಾ ವಸ್ತುಗಳು ಮತ್ತು ನಿರೂಪಣಾ ಶೈಲಿಯಿಂದಾಗಿ ಕಾಶಿನಾಥ್ ಬ್ರಾಂಡ್ ಬಹಳ ಕಾಲ ಬಾಳಿಕೆ ಬಂತು.
ಸಿನಿಮಾರಂಗದ ಮಜಾ ಏನು ಅಂದರೆ, ಒಬ್ಬ ನಾಯಕನನ್ನು ಕಾಡಬಹುದಾದ ಮೈನಸ್ ಪಾಯಿಂಟುಗಳೆಲ್ಲವೂ ಒಬ್ಬ ಹಾಸ್ಯನಟನಿಗೆ ಪ್ಲಸ್ ಪಾಯಿಂಟುಗಳಾಗುತ್ತದೆ. ದಢೂತಿ ಅಥವಾ ನರಪೇತಲ ನಾಯಕನನ್ನು ಜನ ತಿರಸ್ಕರಿಸುತ್ತಾರೆ, ಆದರೆ ಅದೇ ವಿಲಕ್ಷಣಗಳನ್ನು ಹೊಂದಿರುವಾತನನ್ನು ಹಾಸ್ಯನಟನನ್ನಾಗಿ ಒಪ್ಪಿಕೊಳ್ಳುತ್ತಾರೆ. ಅದಕ್ಕೆ ಕಾರಣ ಸರಳಃ ಜನ ಹೀರೋಗಳನ್ನು ಆರಾಧಿಸುತ್ತಾರೆ, ಜೋಕರ್ ಗಳನ್ನು ಇಷ್ಟಪಡುತ್ತಾರೆ. ಹೊಡೆದಾಡುವುದು ಸುಲಭದ ಕೆಲಸ, ನಗಿಸುವುದು ಕಷ್ಟದ ಕೆಲಸ.
ತನ್ನ ವೃತ್ತಿಬದುಕಿನ ಆರಂಭದ ದಿನಗಳಲ್ಲಿ ಕಾಶಿನಾಥ್ ಗೆ ತನ್ನ ಮಿತಿಗಳ ಅರಿವಿತ್ತು. ಹುಲ್ಲಕಡ್ಡಿಯಿಂಥಾ ದೇಹ, ಪಂಕ್ಚರ್ ಆದ ಬಲೂನಿನಂತಿದ್ದ ಕೆನ್ನೆಗಳು, ಒಣಹುಲ್ಲಿನ ಮೂಟೆಯಂತಿದ್ದ ಕೇಶರಾಶಿ, ಈ ಅರ್ಹತೆಗಳನ್ನಿಟ್ಟುಕೊಂಡೇ ತೆರೆಯ ಮೇಲೆ ಆಟ ಆಡಬೇಕು ಅನ್ನುವ ಪ್ರಜ್ಞೆಯನ್ನಿಟ್ಟುಕೊಂಡೇ ಅವರು ಕತೆಗಳನ್ನು ಹುಡುಕಿದರು. ಆದರೆ ಯಾವಾಗ ಅವರು ಸೇಲೇಬಲ್ ನಟನಾದರೋ ಬೇರೆ ನಿರ್ಮಾಪಕರು ಮತ್ತು ನಿರ್ದೇಶಕರ ಕಣ್ಣು ಅವರ ಮೇಲೆ ಬಿತ್ತು. ಅಲ್ಲಿಂದ ಕಾಶಿ ರೂಪಾಂತರಗೊಂಡರು. ರಂಗುರಂಗಿನ ಬಟ್ಟೆಗಳು ಆ ಸಣಕಲು ದೇಹವನ್ನು ಅಲಂಕರಿಸಿದವು, ತಲೆಗೆ ವಿಗ್ಗು ಬಂತು, ಕೆನ್ನೆಗಳು ತುಂಬಿಕೊಂಡಂತೆ ಕಾಣಿಸುವುದಕ್ಕೆ ಹತ್ತಿಯ ಉಂಡೆಗಳನ್ನು ಬಾಯೊಳಗೆ ತುರುಕಲಾಯಿತು, ಇಂಥಾ ಮನ್ಮಥರಾಜನನ್ನು ರಮಿಸುವುದಕ್ಕೆ ಎರೆಡೆರಡು ನಾಯಕಿಯರು. ಕಾಶಿನಾಥ್ ಥೇಟು ಹೀರೋ ಥರ ಮರಸುತ್ತಿದರು, ಡಜನ್ ಖಳರ ಜೊತೆ ಹೊಡೆದಾಡಿದರು. ಬಹುಶಃ ಅವರು ಕೂಡಾ ಈ ಹೊಸ ಸವಲತ್ತುಗಳನ್ನು, ಸ್ಟಾರ್ ಪಟ್ಟವನ್ನು ಆನಂದಿಸುವುದಕ್ಕೆ ಶುರುಮಾಡಿದರು ಅನಿಸುತ್ತದೆ. ಆದರೆ ಪ್ರೇಕ್ಷಕರ ಪಾಲಿಗೆ ಇದು ಚಿತ್ರಹಿಂಸೆಯಾಯಿತು. ಒರಿಜಿನಾಲಿಟಿ ಕಳೆದುಕೊಂಡ ಕಾಶಿನಾಥ್ ಬ್ರಾಂಡ್ ಎಕ್ಸ್ ಪಾಯಿರಿ ಡೇಟ್ ನ್ನೂ ದಾಟಿತು. ಈಗ ಅದೇ ತಪ್ಪನ್ನು ಕೋಮಲ್ ಮಾಡುತ್ತಿದ್ದಾರೆ.
ಕಾಶಿನಾಥ್ ಜನಪ್ರಿಯರಾಗಿದ್ದು ಅವರ ಡಬ್ಬಲ್ ಮೀನಿಂಗ್ ಚಿತ್ರಗಳಿಂದಾಗಿ ಅನ್ನುವುದು ನಿಜ, ಆ ಇಮೇಜ್ ಅವರಿಗೆ ಎಂಥಾ ಡ್ಯಾಮೇಜು ಮಾಡಿತ್ತೆಂದರೆ ಅವರ ಚಿತ್ರಗಳಲ್ಲಿದ್ದ ಸಮಾಜಮುಖಿ ಸಂದೇಶಗಳು ಯಾರ ಗಮನಕ್ಕೂ ಬರಲಿಲ್ಲ. ಉದಾಹರಣೆಗೆ ಅವಳೇ ನನ್ನ ಹೆಂಡ್ತಿಯಂಥಾ ಚಿತ್ರಗಳಲ್ಲಿ ಕಾಶಿನಾಥ್ ವರದಕ್ಷಿಣೆಯ ವಿರುದ್ಧ ಹೋರಾಡಿದ್ದಾರೆ, ಹೆಣ್ಮಕ್ಕಳನ್ನು ಮಾರಾಟದ ವಸ್ತುವಾಗಿಸುವ ಸಮಾಜವನ್ನು ಟೀಕಿಸಿದ್ದಾರೆ. ಆಗಿನ ಕಾಲದ ಸಂದರ್ಭಕ್ಕೆ ಅದು ತೀರಾ ಆಗತ್ಯವಾಗಿತ್ತು. ಆದರೆ ಇಂದಿಗೂ ಅವರು ನೆನಪಾಗುವುದು ಅಶ್ಲೀಲ ಚಿತ್ರಗಳ ವಕ್ತಾರನೆಂದೇ. ಅನಂತರದ ವರ್ಷಗಳಲ್ಲಿ ಜಗ್ಗೇಶ್, ರವಿಚಂದ್ರನ್ ಮೊದಲಾದವರ ಚಿತ್ರಗಳಲ್ಲಿ ಅದಕ್ಕಿಂತ ದುಪ್ಪಟ್ಟು ಅಶ್ಲೀಲ ಮಾತು ದೃಶ್ಯಗಳು ಬಂದುಹೋದರೂ ಕಾಶಿನಾಥ್ ಅವರೇ ಕಾಯಂ ಆಗಿ ಅಪರಾಧಿ ಸ್ಥಾನದಲ್ಲಿ ಕುಳಿತಿದ್ದಾರೆ. ಇಂದಿಗೂ ಅವರ ಹಳೇ ಚಿತ್ರಗಳು ದೂರದರ್ಶನದಲ್ಲಿ ಪ್ರಸಾರವಾದಾಗ ಮನೆಯ ಹಿರಿಯಂದಿರು ಚಾನೆಲ್ ಬದಲಾಯಿಸುತ್ತಾರೆ. 80ರ ದಶಕದಲ್ಲಂತೂ ಹೆತ್ತವರು ಅಪ್ಪಿತಪ್ಪಿಯೂ ತಮ್ಮ ಮಕ್ಕಳನ್ನು ಕಾಶಿನಾಥ್ ಸಿನಿಮಾಗಳನ್ನು ನೋಡುವುದಕ್ಕೆ ಬಿಡುತ್ತಿರಲಿಲ್ಲ. ಆದರೂ ಲಕ್ಷಾಂತರ ಕನ್ನಡ ಮಕ್ಕಳು ಕಾಶಿನಾಥ್ ಸಿನಿಮಾ ನೋಡಿ ‘ದೊಡ್ಡವ’ರಾಗಿದ್ದಾರೆ. ವಯಸ್ಕರ ರೋಚಕ ಲೋಕಕ್ಕೆ ಅವರನ್ನು ಪರಿಚಯಿಸಿದ ಕೀರ್ತಿ ಕಾಶಿ ಅವರದು. ಈಗ ಬಿಡಿ, ಅಂತರ್ಜಾಲವಿದೆ, ಯೂ ಟ್ಯೂಬ್ ಇದೆ. ಆಗ ಇದ್ದಿದ್ದು ಕಾಶಿನಾಥ್ ಒಬ್ಬರೇ.
ಅನಂತನಾಗ್, ವಿಷ್ಣುವರ್ಧನ್ ಅವರಷ್ಟು ಚಂದವಿಲ್ಲದ, ಅಂಬರೀಶ್ - ಪ್ರಭಾಕರ್ ಅವರಷ್ಟು ಮ್ಯಾಚೋ ಅಲ್ಲದ ಕಾಶಿನಾಥ್ ಅವರು ಯಾವತ್ತೂ ಯಾರಿಗೂ ರೋಲ್ ಮಾಡೆಲ್ ಆಗಲಿಲ್ಲ. ಅವರ ಹೆಸರು ಪ್ರಸ್ತಾಪವಾಗುತ್ತಿದ್ದದ್ದು ಮಿಕ್ಕವರನ್ನು ಗೇಲಿ ಮಾಡುವ ಸಂದರ್ಭದಲ್ಲಿ. ಯಾರಾದರೂ ಕೋತಿ ಥರ ಪೆಕರು ಪೆಕರಾಗಿ ಆಡುತ್ತಿದ್ದರೆ ಯಾಕೋ ಕಾಶಿನಾಥ್ ಥರ ಆಢ್ತೀಯಾ ಅಂತ ಬೈಯುತ್ತಿದ್ದ ಕಾಲವಿತ್ತು. ಕಡ್ಡಿ ಪೈಲ್ವಾನ್ ಗಳನ್ನು ಕಾಶಿನಾಥ್ ಗೆ ಹೋಲಿಸುತ್ತಿದ್ದುಂಟು. ಹಾಗಿದ್ದೂ ಕನ್ನಡ ಚಿತ್ರ ನಿರ್ದೇಶಕರಿಗೆ ಕಾಶಿ ರಾಲ್ ಮಾಡೆಲ್ ಆಗಬೇಕಾಗಿತ್ತು. ಎಂಭತ್ತರ ದಶಕದಲ್ಲಿ ಬೆಂಗಳೂರು ಹೇಗಿತ್ತು ಅನ್ನುವುದು ಗೊತ್ತಿದ್ದವರಿಗೆ ಕಾಶಿನಾಥ್ ಚಿತ್ರಗಳು ಬೀರಿದ ಪರಿಣಾಮ ಅರ್ಥವಾಗುತ್ತದೆ. ಆಗ ಜನಸಂಖ್ಯೆ ಕಡಿಮೆಯಿತ್ತು, ವಲಸೆಗಾರರ ಹಾವಳಿ ಈ ಮಟ್ಟಕ್ಕಿರಲಿಲ್ಲ, ಈ ಸಿಟಿ ಏನಿದ್ದರೂ ಇಂಗ್ಲಿಷ್ ಮಾತಾಡುವ ದೊಡ್ಡ ಮನುಷ್ಯರಿಗಷ್ಟೇ ಅನ್ನುವ ಅಭಿಪ್ರಾಯವೂ ಇತ್ತು. ಅಂಥಾ ಕಾಲದಲ್ಲಿ ಅಪ್ಪಟ ಕನ್ನಡಿಗರ, ಅದರಲ್ಲೂ ಮಧ್ಯಮವರ್ಗದವರ ಸಂವೇದನೆಗಳನ್ನು ಹೇಳುವ ಸಿನಿಮಾಗಳನ್ನು ನೀಡಿದವರು ಕಾಶಿ. ಅವರು ಸೃಷ್ಟಿಸಿದ ಪಾತ್ರಗಳನ್ನೇ ಗಮನಿಸಿ. ದೊಡ್ಡ ಬಾಯಿಯ ಅಜ್ಜಿ, ಗದರುವ ಅತ್ತೆ, ಕಾಮುಕ ಪರಪುರುಷ, ಅವಕಾಶವಾದಿ ಬ್ರೋಕರ್ ಗಳು- ಇವೆಲ್ಲವೂ ಆ ಕಾಲದ ನಗರ ಬದುಕಿನ ವ್ಯಕ್ತಿತ್ವವೇ ಆಗಿತ್ತು. ಜನರ ಮಧ್ಯೆ ಬದುಕುವ ನಿರ್ದೇಶಕನಿಗಷ್ಟೇ ಈ ಒಳನೋಟಗಳು ದಕ್ಕುವುದಕ್ಕೆ ಸಾಧ್ಯ. ಆದರೆ ಇಂಥಾ ಸಾಧನೆ ಮಾಡಿದ ಮಹನೀಯನನ್ನು ಚಿತ್ರೋದ್ಯಮ ಸಲೀಸಾಗಿ ಮರೆತುಬಿಟ್ಟಿದೆ. ಮೊನ್ನೆ ಚೆನ್ನೈನಲ್ಲಿ ನಡೆದ ಚಿತ್ರೋದ್ಯಮದ ಶತಮಾನೋತ್ಸವ ಸಮಾರಂಭಕ್ಕೆ ಕಾಶಿನಾಥ್ ಅವರನ್ನು ಯಾರೂ ಕರೆಯಲಿಲ್ಲ.
ಕಾಶಿನಾಥ್ ಅವರ ಇನ್ನೊಂದು ಮುಖ ಬಹಳ ಜನರಿಗೆ ಗೊತ್ತಿರಲಿಕ್ಕಿಲ್ಲ. ಅವರು ಓದಿದ್ದು ವಿಜ್ಞಾನ, ಹಾಗಾಗಿ ಸಿನಿಮಾದತ್ತ ಹೊರಳಿದರೂ ಅವರ ಇತರೇ ಆಸಕ್ತಿಗಳು ಜೀವಂತವಾಗಿದ್ದವು. ಕನ್ನಡಪ್ರಭ ಪತ್ರಿಕೆಯ ಓದುಗರ ಕಾಲಂ ಅಂಕಣಕ್ಕೆ ಅವರು ಆಗಾಗ ಪತ್ರ ಬರೆಯುತ್ತಿದ್ದರು. ಬೆಂಗಳೂರು ಟ್ರಾಫಿಕ್ ಸಮಸ್ಯೆಯನ್ನು ನಿವಾರಿಸಲು ಎಲ್ಲಾ ಸಿಗ್ನಲುಗಳಲ್ಲಿ ನಂಬರ್ ವ್ಯವಸ್ಥೆಯನ್ನು ಅಳವಡಿಸಬಹುದು ಎಂದು ಮೊದಲು ಸಲಹೆ ನೀಡಿದವರೇ ಅವರು. ಅದು ಜಾರಿಗೆ ಬಂದಾಗ ಯಾರೂ ಕಾಶಿಯನ್ನು ನೆನೆಯಲಿಲ್ಲ. ಆಗಾಗ ವಿಜ್ಞಾನಿಯ ಗೆಟಪ್ ಧರಿಸುತ್ತಿದ್ದ ಕಾರಣಕ್ಕೋ ಏನೋ ಕಾಶಿನಾಥ್ ಗೆ ವಿಪರೀತ ಮರೆವು ಕಾಡುತ್ತಿತ್ತು. ಚಿರಪರಿಚಿತ ಪತ್ರಕರ್ತರು ಎದುರಾದಾಗಲೂ “ನಿಮ್ಮನ್ನೆಲ್ಲೋ ನೋಡಿದ ಹಾಗಿದ್ಯಲ್ಲಾ”ಎಂದು ತುಟಿ ಮೇಲೆ ಬೆರಳಿಡುತ್ತಿದ್ದರು. ಹಿರಿಯ ಪತ್ರಕರ್ತರು ಇದನ್ನು ಅವಮಾನವೆಂದೂ, ಕಿರಿಯರು ಇದನ್ನು ತಮಾಷೆಯೆಂದೂ ಪರಿಗಣಿಸುತ್ತಿದ್ದರು. ಕಾಶಿನಾಥ್ ಗಂತೂ ಇದ್ಯಾವುದರ ಪರಿವೆಯೇ ಇರುತ್ತಿರಲಿಲ್ಲ.
ಅಂದಹಾಗೆ “ನಿಮ್ಮನ್ನೆಲ್ಲೋ ನೋಡಿದ ಹಾಗಿದ್ಯಲ್ಲಾ”ಅಂತ ಈಗಿನ ಪ್ರೇಕ್ಷಕರು ಕಾಶಿನಾಥ್ ಅವರನ್ನೇ ಕೇಳುವ ಅಪಾಯಗಳಿವೆ. ನಾನು ಹೇಳುತ್ತೇನೆಃ ಅವರೊಬ್ಬ ಜೀನಿಯಸ್, ವ್ಯರ್ಥವಾಗಿ ಹೋದ ಜೀನಿಯಸ್.
Also See
Uma Column 13 - ಮಲ್ಟಿಪ್ಲೆಕ್ಸಲ್ಲಿ ಸಿನಿಮಾ ಭಾಗ್ಯ ಯೋಜನೆ
Sign Online Petitation - Click
Uma Column 12 - ದೇವರಿಗೂ ಬೇಕಾ ಪ್ರಶಸ್ತಿಯ ಕಿರೀಟ?
Uma Column 11 - ಯಾರಿಗೇಳೋಣಾ ನಮ್ಮ ಪ್ರಾಬ್ಲಂ
Uma Column 10 - ತೊಲಗು ಅಂದರೆ ನಾನು ತೆಲುಗು ಅಂದ ಹಾಗಾಯಿತು
Uma Column 9 - ಹಳ್ಳಿ ಹುಡುಗನನ್ನು ಕೊಂದವರ್ಯಾರು?
Uma Column 8 - ಶಂಕರ ನಾಗಮಂಡಲದಲ್ಲಿ ಒಂದು ಸುತ್ತು..
Uma Column 7 - ಪ್ರಶಸ್ತಿಗಳು ಮಾರಾಟಕ್ಕಿವೆ!
Uma Column 6 - ಹಾಯ್ ಕನ್ನಡ ತಾಯ್!
Uma Column 5 - ನನ್ನ ಭಯ ಮತ್ತು ಅಭಯನ ಜಯ
Uma Column 4 - ಭಟ್ರ ಕ್ವಾರ್ಟರ್ರು ಎಂಬ ಸೀರಿಯಸ್ ಮ್ಯಾಟರ್ರು
Uma Column 3 - ಕಲ್ಲು ಕೊರಗುವ ಸಮಯ
Uma Column 2 - ಮುನಿ ಮತ್ತು MONEY
Uma Column 1 - ಜಗತ್ತಿನ ಕೂಸು ಮತ್ತು ಕನ್ನಡದ ಮನಸ್ಸು
ಸಿನಿಮಾ ಪತ್ರಿಕೋದ್ಯಮದಲ್ಲಿ ಉದಯ್ ನನ್ನ ಗುರು - ಜೋಗಿ
Udaya Marakini Column In Chitraloka
Pls Note -
The views expressed in this column are those of its author and Chitraloka or its publishers do not claim to endorse it. You can express your opinion to his e-mail - This email address is being protected from spambots. You need JavaScript enabled to view it.