ಸಚಿನ್ 74ಕ್ಕೆ ಔಟಾದ. ಜನ ಅಯ್ಯೋ ದೇವರೆ ಎಂದು ಮರುಗಿದರು. ದೇವರು ತಮ್ಮ ಕೊನೆಯ ಆಟ ಆಡಿ, ಒಮ್ಮೆ ಆಕಾಶದತ್ತ ನೋಡಿ ಅಲ್ಲಿದ್ದ ಇನ್ನೊಬ್ಬ ದೇವರಿಗೆ ವಂದಿಸಿ, ನಂತರ ತಮ್ಮ ಭಕ್ತರ ಕಡೆ ಬ್ಯಾಟ್ ಬೀಸಿ ಪೆವಿಲಿಯನ್ ಗೆ ವಾಪಸಾದರು. ಜನ ತುಂಬಾನೇ ಬೇಜಾರು ಮಾಡಿಕೊಂಡರು. ಆಶಾವಾದಿಗಳು ಅವರಿಗೆ ಸಾಂತ್ವನ ಹೇಳಿದರು “ಇನ್ನೊಂದು ಇನ್ನಿಂಗ್ಸ್ ಇದೆಯಲ್ವಾ, ಸಚಿನ್ ಮತ್ತೆ ಬಂದು ಸೆಂಚುರಿ ಹೊಡೀತಾನೆ ಬಿಡ್ರೀ”. ಆದರೆ ವೆಸ್ಟ್ ಇಂಡೀಸ್ ನವರು ಅದಕ್ಕೆ ಅವಕಾಶ ನೀಡಲಿಲ್ಲ, ಬೇಗನೇ ಆಲೌಟ್ ಆಗಿ ಸೋಲೊಪ್ಪಿಕೊಂಡರು. ಇದು ಸಚಿನ್ ಗೆ ಅವರು ಬಗೆದ ದ್ರೋಹವಲ್ಲದೇ ಇನ್ನೇನು! ಒಟ್ಟಲ್ಲಿ ಇಂಡಿಯಾ ಗೆದ್ದಿದ್ದಕ್ಕೆ ಯಾರೂ ಸಂತೋಷಪಡಲಿಲ್ಲ, ಸಚಿನ್ ತನ್ನ ಕೊನೆಯ ಪಂದ್ಯದಲ್ಲಿ ಸೆಂಚುರಿ ಹೊಡೆಯಲಿಲ್ವಲ್ಲಾ ಅಂತ ದುಃಖಪಟ್ಟರು. ಮ್ಯಾಚು ಮುಗಿಯುತ್ತಿದ್ದಂತೆ ಕೋಟ್ಯಂತರ ಅಭಿಮಾನಿಗಳ ಕಣ್ಣಲ್ಲಿ ನೀರು, ದೇವರ ಕಣ್ಣಲ್ಲೂ ನೀರು. ಆವತ್ತು ಬೆಂಗಳೂರಲ್ಲಿ ತುಂತುರು ಮಳೆ. ದೇವರ ನಿರ್ಗಮನಕ್ಕೆ ಆಕಾಶವೂ ಕಣ್ಣೀರು ಹಾಕುತ್ತಿದೆಯಾ ಅಂತ ಜನ ಆಶ್ಚರ್ಯಚಕಿತರಾದರು.
ಅಂದಹಾಗೆ ದೇವರನ್ನು ಔಟ್ ಮಾಡಿದಾತನ ಹೆಸರು ದೇವನಾರಾಯಣ್. ದೇವರನ್ನು ಕಳಿಸುವುದಕ್ಕೆ ದೇವರೇ ಬರಬೇಕಾಗಿದ್ದದ್ದು ದೈವಲೀಲೆಯಲ್ಲದೇ ಇನ್ನೇನು. ದೇವರೇನೋ ತಮ್ಮ ಆಟ ಮುಗಿಸಿ ಮನೆಗೆ ಹೋದರು. ಆದರೆ ಅವರ ಕೊನೆಯ ಆಟ ಈ ದೇಶದ ಜನಜೀವನದ ಮೇಲೆ ಬೀರಿದ ಪರಿಣಾಮ ವರ್ಣಿಸಲಸದಳ. ಶುಕ್ರವಾರ ಮತ್ತು ಶನಿವಾರ ಬಹಳಷ್ಟು ಜನ ಕಚೇರಿಗೆ ಹೋಗಲಿಲ್ಲ, ಸಿನಿಮಾ - ಸೀರಿಯಲ್ಲು ನೋಡಲಿಲ್ಲ, ಕೆಲವರು ಮನೆಯಲ್ಲಿ ಅಡುಗೆಯನ್ನೇ ಮಾಡಲಿಲ್ಲ. ಎಲ್ಲರ ಕಣ್ಣು ಟೀವಿ ಮ್ಯಾಲೆ. ಇದರಿಂದಾಗಿ ನ್ಯೂಸ್ ಚಾನೆಲ್ಲುಗಳು ಮತ್ತು ಮನರಂಜನಾ ಚಾನೆಲ್ಲುಗಳಿಗೆ ತುಂಬಾನೇ ನಷ್ಟ ಆಯಿತು. ಅಂಗಡಿಗಳಲ್ಲಿ ವ್ಯಾಪಾರವೇ ನಡೆಯದೇ ಇದ್ದುದರಿಂದ ಅವರಿಗೂ ನಷ್ಟ ಆಯಿತು. ಆ ಎರಡು ದಿನಗಳಲ್ಲಿ ದೇಶಕ್ಕಾದ ಒಟ್ಟಾರೆ ನಷ್ಟ ಏನು ಅನ್ನುವುದನ್ನು ಇನ್ನೂ ಲೆಕ್ಕ ಹಾಕಲಾಗುತ್ತಿದೆ. ಇವೆಲ್ಲವೂ ದೇವರ ಸಲುವಾಗಿ ಆಗಿರುವುದರಿಂದ ಎಲ್ಲದಕ್ಕೂ ಕ್ಷಮೆ ಇದೆ.
ಇನ್ನು ನಾವು ದೇವರಿಲ್ಲದ ಕ್ರಿಕೆಟ್ ನೋಡಬೇಕಾಗಿದೆ, ಕ್ಯಾಲೆಂಡರ್ ಇಲ್ಲದ ಖಾಲಿ ಗೋಡೆಯನ್ನು ನೋಡುವ ಹಾಗೆ. ಇನ್ನು ಮೇಲೆ ಕ್ರಿಕೆಟ್ಟೆಂಬ ಆಟವನ್ನು ಹುಲುಮಾನವರು ಆಡಲಿದ್ದಾರೆ ಅಂತ ಫೇಸ್ ಬುಕ್ಕಲ್ಲಿ ಓದಿದೆ. ಇದು ತೀರಾ ಅವಸರದ ಹೇಳಿಕೆಯಾಯಿತು. ಯಾಕೆಂದರೆ ಇನ್ನು ಕೆಲವೇ ವರ್ಷದಲ್ಲಿ ಕೊಹ್ಲಿ ಅಥವಾ ರೋಹಿತ್ ರೂಪದಲ್ಲಿ ಮತ್ತೊಬ್ಬ ದೇವರು ಪ್ರತ್ಯಕ್ಷ ಆದರೂ ಆಗಬಹುದು. ಅವರಿಬ್ಬರಲ್ಲಿ ಒಬ್ಬರು ಸತತ ಹತ್ತು ಮ್ಯಾಚುಗಳಲ್ಲಿ ಸೆಂಚುರಿ ಬಾರಿಸಿದರೆ ದೇವರಾಗುತ್ತಾರೆ. ಸದ್ಯ, ಮಠಾಧೀಶರಿಗಿರುವ ಅಧಿಕಾರ ದೇವರಿಗಿಲ್ಲ, ಹಾಗೇನಾದರೂ ಇದ್ದಿದ್ದರೆ ಸಚಿನ್ ತನ್ನ ಜಾಗದಲ್ಲಿ ಇನ್ನೊಬ್ಬ ದೇವರನ್ನು ಉತ್ತರಾಧಿಕಾರಿಯನ್ನಾಗಿ ನೇಮಿಸಬಹುದಾಗಿತ್ತು!
ನಮ್ಮ ದೇಶದಲ್ಲಿ ದೇವರಾಗುವುದು ಅಷ್ಟೇನೂ ಕಷ್ಟದ ಕೆಲಸವಲ್ಲ. ಕರ್ಮಣ್ಯೇ ವಾಧಿಕಾರಸ್ತೆ ಮಾಫಲೇಶು ಕದಾಚನ. ನೀವು ನಿಮ್ಮ ಕೆಲಸವನ್ನು ಮಾಡಿ, ಮಿಕ್ಕಿದ್ದನ್ನು ಮಾಧ್ಯಮಗಳು ನೋಡಿಕೊಳ್ಳುತ್ತವೆ! ಎಲ್ಲೆಡೆಯಲ್ಲೂ ದೇವರನ್ನು ಕಾಣುವರುನಾವು. ಹಾಗಾಗಿ ಪ್ರತಿಕ್ಷೇತ್ರದಲ್ಲೂ ಒಬ್ಬ ದೇವರಿದ್ದಾನೆ. ಈ ಕಂಬದಲ್ಲಿಯೂ ಹರಿಯಿದ್ದಾನೆಯೇ ಎಂದು ಹಿರಣ್ಯಕಶಿಪು ಈಗ ಬಂದು ಕೇಳಿದರೂ, ಇದ್ದರೂ ಇರಬಹುದು ಎನ್ನಬೇಕಾಗುತ್ತದೆ. ದೇವರು ದೇವಮೂಲೆಯಲ್ಲಷ್ಟೇ ಅಲ್ಲ, ಎಲ್ಲಾ ಮೂಲೆಗಳಲ್ಲೂ ಬಂದು ಕುಳಿದ್ದಾನೆ. ಅತಿಹೆಚ್ಚು ದೇವರುಗಳಿರುವುದು ಸಿನಿಮಾದಲ್ಲಿ (ತಮಿಳಿನಲ್ಲಿ ಎಂಜಿಆರ್, ತೆಲುಗಲ್ಲಿ ಎನ್ಟಿಆರ್..), ರಾಜಕೀಯದಲ್ಲಿ ಇಂದಿರಾ ಗಾಂಧಿ ಒಬ್ಬರೇ ದೇವತೆ, ಮೋದಿ ಇನ್ನೂ ಕೆಲವು ವರ್ಷ ಕಾಯಬೇಕು. ಬಾಬಾಗಳಂತೂ ತಾವೇ ದೇವರು ಅಂತ ರಿಜಿಸ್ಟ್ರೇಷನ್ ಮಾಡಿಸಿಕೊಂಡಿದ್ದಾರೆ. ಮಠಗಳಲ್ಲಿ ಬೇಜಾನ್ ದೇವಮಾನವರಿದ್ದಾರೆ. ದೇವರಿಗೂ ಮತ್ತು ದೇವರಂತಿರುವ ಮನುಷ್ಯರಿಗೂ ಸಮಾನ ಗೌರವ ಸಲ್ಲಬೇಕಾಗುತ್ತದೆ. ವಿಚಿತ್ರ ಅಂದರೆ ದೇವರನ್ನೇ ಓಡಿಸಿ ಅಂದ ಪೆರಿಯಾರ್ ಆಮೇಲೆ ತಮಿಳರ ಪಾಲಿಗೆ ದೇವರಾದರು. ನೀತಿಯೇನಪ್ಪಾ ಅಂದರೆ ದೇವರನ್ನು ಮತ್ತೊಬ್ಬ ದೇವರೇ ರಿಪ್ಲೇಸ್ ಮಾಡಬಹುದಷ್ಟೇ ಹೊರತಾಗಿ ಆತನನ್ನು ನಾಶ ಮಾಡುವ ಹಾಗಿಲ್ಲ. ಮನೆಗಳಲ್ಲಿ, ದೇವಾಲಯಗಳಲ್ಲಿ ನೂರಾರು ದೇವರುಗಳನ್ನು ಸ್ಥಾವರ ರೂಪದಲ್ಲಿ ಇಟ್ಟಿರುವ ಜನರಿಗೆ ಓಡಾಡುವ ದೇವರೂ ಬೇಕು ಅನ್ನುವ ಆಸೆ ಶುರುವಾಗಿದ್ದು ಯಾವಾಗ? ಇತಿಹಾಸಕಾರರು ಈ ಕಡೆಗೆ ಗಮನ ಹರಿಸಬೇಕು.
ಈಗ ಮತ್ತೆ ಕ್ರಿಕೆಟ್ ದೇವರ ವಿಷ್ಯಕ್ಕೆ ಬರೋಣ. ಒಂದು ಕಾಲದಲ್ಲಿ ಮಿಕ್ಕ ಹನ್ನೊಂದು ಜನರ ಆಟವನ್ನೂ ತಾನೊಬ್ಬನೇ ಆಡಬಲ್ಲೆ ಅನ್ನುವಂತಿದ್ದ ಸಚಿನ್ ಕಳೆದ ಕೆಲವು ವರ್ಷಗಳಿಂದ ಕೊಂಚ ಕಳೆಗುಂದಿದಂತೆ ಕಾಣಿಸುತ್ತಿದ್ದರು. ಹೆಸರೇ ಕೇಳದ ಸ್ಪಿನ್ನರುಗಳಿಗೆ ವಿಕೆಟ್ ಒಪ್ಪಿಸುತ್ತಿದ್ದರು, ಅವರು ಎಲ್ ಬಿ ಡಬ್ಲ್ಯೂ ಆಗುವುದು ಜಾಸ್ತಿಯಾಗುತ್ತಿದ್ದಂತೆಯೇ ಭಕ್ತರು ಅಂಪೈರ್ ಮೇಲೆ ರೇಗುವುದಕ್ಕೆ ಶುರು ಮಾಡಿದರು. ಸಚಿನ್ಗೇ ಯಾಕೆ ಹೀಗೆ ಅನ್ಯಾಯವಾಗುತ್ತಿದೆ ಎಂದು ಮರುಗಿದರು. ಅದಕ್ಕೆ ಆತನ ವಯಸ್ಸು ಮತ್ತು ಅದರಿಂದಾಗಿ ಕಡಿಮೆಯಾಗುತ್ತಿದ್ದ ರಿಫ್ಲೆಕ್ಸು ಕಾರಣ ಅಂತ ಯಾರೂ ಒಪ್ಪಿಕೊಳ್ಳುವುದಕ್ಕೆ ತಯಾರಾಗಿರಲಿಲ್ಲ. ಈ ನಡುವೆ ಗಂಗೂಲಿ, ಲಕ್ಷ್ಮಣ್ ಮತ್ತು ದ್ರಾವಿಡ್ ಯಾರ ಅಪ್ಪಣೆಗೂ ಕಾಯದೇ ತಾವಾಗಿ ನಿರ್ಗಮಿಸಿದರು. ಆದರೆ ಸಚಿನ್ ಕ್ರೀಸ್ ಗೆ ಅಂಟಿಕೊಳ್ಳದಿದ್ದರೂ ಟೀಮಿಗೆ ಅಂಟಿಕೊಂಡರು. ಹಿರಿಯ ಆಟಗಾರರು ಅಪಸ್ವರ ಹಾಡುವುದಕ್ಕೆ ಶುರು ಮಾಡಿದರು. ಆಯ್ಕೆ ಸಮಿತಿ ಆಧ್ಯಕ್ಷ ಸಂದೀಪ್ ಪಾಟೀಲ್ ಅವರಂತೂ ಸಚಿನ್ ಗೆ ರಿಟೈರ್ ಆಗುವ ದಿನಾಂಕ ಹೇಳು ಅಂತ ಒತ್ತಾಯ ಮಾಡಿದರು ಅನ್ನುವ ಸುದ್ದಿಯೂ ಬಂತು. ಸಚಿನ್ ಇನ್ನೊಬ್ಬ ಕಪಿಲ್ ದೇವ್ ಆಗುತ್ತಾರಾ ಅನ್ನುವ ಭಯವೂ ಕೆಲವರನ್ನು ಕಾಡಿತು. ಆದರೆ ಸಚಿನ್ ಅಷ್ಟೊಂದು ಸತಾಯಿಸಲಿಲ್ಲ ಅನ್ನುವುದು ಒಳ್ಳೆಯ ಸಂಗತಿ. ದೇವರಿಗೆ ಸದ್ಬುದ್ದಿಯನ್ನು ಕರುಣಿಸಿದ ಭಗವಂತನಿಗೆ ಭಾರತೀಯ ಕ್ರಿಕೆಟ್ ಚಿರಋಣಿಯಾಗಿರುತ್ತದೆ.
ನನಗೆ ಸಚಿನ್ ಬಗ್ಗೆ ವಿಪರೀತ ಮೆಚ್ಚುಗೆ ಮತ್ತು ಸಿಕ್ಕಾಪಟ್ಟೆ ಅನುಕಂಪ . ಅಂಕಿಅಂಶಗಳು ಮತ್ತು ದಾಖಲೆಗಳು ಹೇಳುವಂತೆ ಅಂಥಾ ಆಟಗಾರ ಮತ್ತೆ ಹುಟ್ಟಿಬರುವುದು ಕಷ್ಟ. ಆದರೆ ದೇವರಾದ ಮೇಲೆ ಆತ ಎಷ್ಟೆಲ್ಲಾ ಸಂಕಟ ಪಟ್ಟಿರಬಹುದು ಅನ್ನುವುದನ್ನು ಕಲ್ಪಿಸಿಕೊಂಡಾಗ ಬೇಸರವಾಗುತ್ತದೆ. ದೇವರು ಸಿಗರೇಟು ಸೇದುವ ಹಾಗಿಲ್ಲ, ಗುಂಡು ಹಾಕುವ ಹಾಗಿಲ್ಲ, ಯಾರ ಮೇಲೂ ರೇಗುವ ಹಾಗಿಲ್ಲ, ಪಬ್ಲಿಕ್ಕಲ್ಲಿ ಡ್ಯಾನ್ಸ್ ಮಾಡುವ ಹಾಗಿಲ್ಲ, ಸಿಕ್ಕಾಪಟ್ಟೆ ಸಂತೋಷವಾದರೂ ಒಂದು ಮಿತಿಯೊಳಗೇ ಅದನ್ನು ಪ್ರಕಟಿಸಬೇಕು. ವಿವಾದಗಳಿಗೆ ಸಿಕ್ಕಿ ಹಾಕಿಕೊಂಡರೆ ದೇವರ ಪಟ್ಟ ಹೊರಟುಹೋಗುತ್ತದೆ. ಬಹುಶಃ ಇನ್ನು ಮುಂದೆ ಸಚಿನ್ ಮನುಷ್ಯರ ಥರ ಬದುಕಬಹುದು.
ನನಗೆ ಸಚಿನ್ ನಿವೃತ್ತರಾದಾಗ ನೆನಪಾದವರು ಗುಂಡಪ್ಪ ವಿಶ್ವನಾಥ್. ಅವರು ಯಾವತ್ತೂ ದೇವರಾಗಲಿಲ್ಲ. ದೇವರಾಗುವುದಕ್ಕೆ ಬೇಕಾದ ಕೆಲವು ಅರ್ಹತೆಗಳು ಅವರಲ್ಲಿರಲಿಲ್ಲ. ಉದಾಹರಣೆಗೆ ಅವರಿಗೆ ಇಂಗ್ಲಿಷ್ ನಲ್ಲಿ ಸುಲಲಿತವಾಗಿ ಮಾತಾಡುವುದಕ್ಕೆ ಬರುತ್ತಿರಲಿಲ್ಲ, ಮೈದಾನದಲ್ಲಿ ಮತ್ತು ಪೆವಿಲಿಯನ್ನಲ್ಲಿ ಅವರು ಅಗ್ರೆಸಿವ್ ಆಗಿರಲಿಲ್ಲ, ನಮ್ಮನಿಮ್ಮಂತೆ ಸಂಕೋಚದ ಮನುಷ್ಯನಾಗಿದ್ದರು (ಈಗಲೂ ಹಾಗೇ ಇದ್ದಾರೆ), ಅವೆಲ್ಲಕ್ಕಿಂತ ಹೆಚ್ಚಾಗಿ ಅವರು ಮುಂಬೈನವರಾಗಿರಲಿಲ್ಲ ಹಾಗೂ ಅವರು ಆಡುತ್ತಿದ್ದಾಗ ಅವರಾಟವನ್ನು ವೈಭವೀಕರಿಸುವುದಕ್ಕೆ ಟೀವಿ ಚಾನೆಲ್ಲುಗಳು ಇರಲಿಲ್ಲ. ಅಂಕಿಅಂಶಗಳು ಮತ್ತು ದಾಖಲೆಗಳೇ ಒಬ್ಬ ಮನುಷ್ಯನ ಶ್ರೇಷ್ಠತೆಗೆ ಮಾನದಂಡವಾಗಬೇಕು ಅನ್ನುವುದಾದರೆ ವಿಶ್ವನಾಥ್ , ಗಾವಸ್ಕರ್, ಸಚಿನ್ ಗಿಂತ ಹಿಂದೆ ಉಳಿಯುತ್ತಾರೆ. ಆದರೆ ಅವರ ಲೇಟ್ ಕಟ್ ನ್ನು ಅವರ ನಂತರ ಯಾವ ಆಟಗಾರನಿಗೂ ರಿಪೀಟ್ ಮಾಡುವುದಕ್ಕೆ ಸಾಧ್ಯವಾಗಲಿಲ್ಲ. (ಲೆಗ್ ಸೈಡಿಗೆ ಮಾಡುತ್ತಿದ್ದ ಫ್ಲಿಕ್ಕನ್ನು ಕೊಂಚ ಮಟ್ಟಿಗೆ ಅಜರುದ್ದೀನ್ ಅನುಕರಿಸಿದ). ವಿಶಿ ಲೇಟ್ ಕಟ್ ನ್ನು ತಡೆಯುವುದಕ್ಕೆ ನಾಲ್ಕು (ಕೆಲವೊಮ್ಮೆ ಐದು) ಸ್ಲಿಪ್, ಎರಡು ಗಲ್ಲಿಗಳಲ್ಲಿ ಫೀಲ್ಡರುಗಳನ್ನು ಜಮಾಯಿಸಲಾಗುತ್ತಿತ್ತು. ಆದರೂ ವಿಶಿ ಕುಕ್ಕರುಗಾಲಲ್ಲಿ ಕುಳಿತು ಅವೆಲ್ಲ ಫೀಲ್ಡರುಗಳ ಕಾಲುಗಳ ನಡುವೆ ಚೆಂಡನ್ನು ತೂರಿಸಿ, ಬೌಂಡರಿ ಗೆರೆ ದಾಟಿಸುತ್ತಿದ್ದರು. ನಿನ್ನ ತಲೆಯನ್ನು ಸಾವಿರ ಹೋಳಾಗಿಸುತ್ತೇನೆ ಎಂದು ಬೆದರಿಸುವ ಬೇತಾಳನಂತೆ ಬೌಲಿಂಗ್ ಮಾಡುತ್ತಿದ್ದ ವೆಸ್ಟ್ ಇಂಡೀಸ್ ನ ನಾಲ್ಕು ದೈತ್ಯರನ್ನು ಮಣಿಸಿದವರು ವಿಶ್ವನಾಥ್, ಅದೂ ಹೆಲ್ಮೆಟ್ ಎಂಬ ತಲೆರಕ್ಷನ ಸಹಾಯವಿಲ್ಲದೇ. ಇಂದು ಆಟಗಾರರು ಮತ್ತು ವಾಹನ ಚಾಲಕರಿಬ್ಬರೂ ಹೆಲ್ಮೆಟ್ ಇಲ್ಲದೇ ಆಡುವ ಹಾಗಿಲ್ಲ, ಓಡಾಡುವ ಹಾಗಿಲ್ಲ.
ವಿಶ್ವನಾಥ್ 1983ರಲ್ಲಿ ನಿವೃತ್ತರಾದಾಗ ನಟ ಮತ್ತು ಕ್ರೀಡಾ ಅಂಕಣಕಾರ ಟಾಮ್ ಅಲ್ಟರ್ ‘ಸ್ಪೋರ್ಟ್ಸ್ ವೀಕ್’ನಲ್ಲಿ ಒಂದು ಅದ್ಭುತ ಲೇಖನ ಬರೆದಿದ್ದ. ಅದರ ನಿರೂಪಣೆ ಒಂದು ಕತೆಯ ರೂಪದಲ್ಲಿತ್ತು. ಒಂದು ಪುಟ್ಟ ಮನೆಯ ಚಾವಡಿಯಲ್ಲಿ ಕುಳಿತು ಹತ್ತಾರು ಮಕ್ಕಳು ಕ್ರಿಕೆಟ್ ನೋಡುತ್ತಿದ್ದಾರೆ. ಆಗ ಒಳಗಿಂದ ಬರುವ ಅಜ್ಜನೊಬ್ಬ ಮಕ್ಕಳಿಗೆ ಕತೆ ಹೇಳುತ್ತಾನೆ. ಮಕ್ಕಳೇ ನಿಮಗೆ ಗೊತ್ತಾ, ಕೆಲವು ವರ್ಷದ ಹಿಂದೆ ವಿಶ್ವನಾಥ್ ಎಂಬ ಒಬ್ಬ ಆಟಗಾರನಿದ್ದ ಎಂದು ಶುರುವಾಗುವ ಕತೆ, ವಿಶಿಯ ಆಟದ ಸೊಗಸು ಮತ್ತು ಲಾಲಿತ್ಯವನ್ನು ಬಣ್ಣಿಸುತ್ತಾ ಹೋಗುತ್ತದೆ. ಮಕ್ಕಳು ಟೀವಿ ಆಫ್ ಮಾಡಿ ಕತೆ ಕೇಳುತ್ತಾರೆ. ಕೊನೆಗೆ ತಾತ ಹೇಳುತ್ತಾನೆ. ವಿಶ್ವನಾಥ್ ಆಟವೆಂದರೆ ಮುಖೇಶ್ ಹಾಡಿದ್ದಂತೆ. ಅದಕ್ಕೆ ಯಾವತ್ತೂ ಸಾವಿಲ್ಲ. ಮಕ್ಕಳ ಕಣ್ಣಲ್ಲಿ ಕುತೂಹಲ, ಅದನ್ನು ಓದಿದ ನನ್ನ ಕಣ್ಣಲ್ಲಿ ನೀರು.
ಆರು ವರ್ಷಗಳ ಹಿಂದೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸಿನಿಮಾ ತಾರೆಯರು ಮತ್ತು ಕ್ರಿಕೆಟ್ ಆಟಗಾರರ ನಡುವೆ ಕ್ರಿಕೆಟ್ ಮ್ಯಾಚ್ ನಡೆದಿತ್ತು. ಆ ಪಂದ್ಯಕ್ಕೆ ಕಪಿಲ್ ದೇವ್, ಶ್ರೀಲಂಕಾದಿಂದ ರಣತುಂಗ, ಮಹಾನಾಮ, ಮೊದಲಾದವರು ಬಂದಿದ್ದರು. ರಾತ್ರಿ ನಡೆದ ಪಾರ್ಟಿಯಲ್ಲಿ ನನಗೆ ಅವರ ಜೊತೆ ಮಾತಾಡುವ ಅವಕಾಶ ಸಿಕ್ಕಿತ್ತು. ಆಗ ರಣತುಂಗ, ಮಹಾನಾಮರು ನೆನಸಿಕೊಂಡಿದ್ದು ವಿಶ್ವನಾಥ್ ಅವರನ್ನು. ಆತ ಒಬ್ಬ ಅದ್ಭುತ ಆಟಗಾರ, ಅದಕ್ಕಿಂತ ಹೆಚ್ಚಾಗಿ ಅದ್ಭುತ ಮನುಷ್ಯ. ನಾವು ಬೆಂಗಳೂರಿಗೆ ಬಂದಾಗಲೆಲ್ಲಾ ಆತ ಪಾರ್ಟಿ ಕೊಡುತ್ತಾರೆ, ನಡುರಾತ್ರಿ ಗುಂಡು ಖಾಲಿಯಾಯಿತು ಅಂದರೆ ತಾನೇ ಹೋಗಿ ಅದೆಲ್ಲಿಂದಲೋ ಬಾಟಲ್ ಹಿಡಕೊಂಡು ಬರುತ್ತಿದ್ದರು. ಹೀಗೆ ಗುಂಡಪ್ಪ ಗುಣಗಾನ ಕಲ್ಲು ಕರಗುವ ಸಮಯದ ತನಕ ನಡೆದೇ ಇತ್ತು. ನಿಮಗೆ ಗೊತ್ತಿರುವ ಹಾಗೆ ವಿಷ್ಣುವರ್ಧನ್ ಅವರಿಗೆ ಕ್ರಿಕೆಟ್ ಅಂದರೆ ಇಷ್ಟ. ಅದರಲ್ಲೂ ವಿಶ್ವನಾಥ್ ಅಂದರೆ ಇನ್ನೂ ಇಷ್ಟ. ವಿಶ್ವನಾಥ್ ಅವರಿಗೂ ಕನ್ನಡ ಸಿನಿಮಾಗಳ ಬಗ್ಗೆ ಪ್ರೀತಿ ಇದೆ. ಸುದೀಪ್ ನಾಯಕತ್ವದ ಕರ್ನಾಟಕ ಸಿನಿಮಾ ತಂಡಕ್ಕೆ ವಿಶ್ವನಾಥ್ ರಾಯಭಾರಿಯಾಗಿದ್ದರು.
ಇಂದಿಗೂ ಮನುಷ್ಯರೂಪದಲ್ಲೇ ಓಡಾಡುತ್ತಿರುವ ವಿಶ್ವನಾಥ್ ಯಾವ ಬ್ರಾಂಡಿಗೂ ಮಾಡೆಲ್ ಆಗಲಿಲ್ಲ, ಆದರೆ ನನ್ನಂಥ ಕ್ರಿಕೆಟ್ ಪ್ರೇಮಿಗಳಿಗೆ ಮಾಡೆಲ್ ಆದರು. ಅವರ ಕೈಯಲ್ಲಿ ಬ್ಯಾಟ್ ಅನ್ನುವುದು ಕಲಾವಿದನ ಕೈಯಲ್ಲಿರುವ ಕುಂಚದಂತೆ ಕಾಣಿಸುತ್ತಿತ್ತು ಅಂತ ಯಾರೋ ಬರೆದಿದ್ದರು. ಅದಕ್ಕಿಂತ ಒಳ್ಳೇ ಸಾಲನ್ನು ಕವಿ ಲಕ್ಷ್ಮಣರಾಯರು ಬರೆದಿದ್ದಾರೆಃ
ವೈಭವಗಳ ಹಂಪೆಯಲ್ಲಿ ಅಂಡಲೆಯುವ ಭೂತ ಸವೆದ ಸ್ಪರ್ಶಮಣಿ,
ಕಂಬ ಕುಂಚ ಉಳಿ ಅನಾಥ
ಕೃತಜ್ಞತೆ, ಸಹಾನುಭೂತಿ ವಿಶ್ವನಾಥ.
ಈ ಅಂಕಣ ಬರೆಯುವ ಹೊತ್ತಿಗೆ ಸಚಿನ್ ಗೆ ಭಾರತರತ್ನ ಪ್ರಶಸ್ತಿ ಸಂದಾಯವಾದ ಸುದ್ದಿ ಬಂದಿದೆ. ಭಾರತರತ್ನ ಅನ್ನುವುದು ಮ್ಯಾನ್ ಆಫ್ ದಿ ಸೀರೀಸ್ ಥರದ ಪ್ರಶಸ್ತಿ ಅಲ್ಲ. ಆತ ಸಮಾಜಕ್ಕೆ ದೊಡ್ಡ ರೀತಿಯಲ್ಲಿ ಸೇವೆ ಮಾಡಿರಬೇಕು ಮತ್ತು ಮುಂದಿನ ಪೀಳಿಗೆಗೆ ಮಾದರಿ ಭಾರತೀಯನಾಗಿರಬೇಕು. ಸಚಿನ್ ಆ ಚೌಕಟ್ಟೊಳಗೆ ಬರುತ್ತಾರೆಯೇ? ಕ್ರಿಕೆಟ್ ಆಟಗಾರನಿಗೆ ಭಾರತರತ್ನ ನೀಡಿದ ಮೇಲೆ ಸಿನಿಮಾದವರೂ ಅದಕ್ಕೆ ಅರ್ಹರಾಗುತ್ತಾರಲ್ವಾ? ಅಮಿತಾಬ್. ಸಲ್ಮಾನ್, ರಜನಿ, ಕಮಲಾಹಾಸನ್ ಇವರಿಗೂ ನಾಳೆ ಈ ಪುರಸ್ಕಾರ ಸಿಗುವಂತಾಗಲಿ ಅನ್ನುವುದು ನನ್ನ ಆಸೆ. ಅದೇನೇ ಇರಲಿ, ರೆಕಾರ್ಡ್ ಪ್ರಿಯ ಸಚಿನ್ ನಿವೃತ್ತರಾದ ಮೇಲೂ ರೆಕಾರ್ಡ್ ಮಾಡಿದ್ದಾರೆ. ಮೊದಲಬಾರಿಗೆ ಭಾರತರತ್ನ ಸ್ವೀಕರಿಸುವ ಕ್ರೀಡಾ ಪಟು ಅಂದರೆ ಇವರೇ. ಅವರನ್ನು ಅಭಿನಂದಿಸೋಣ, ಆನಂದ್ ವಿಶ್ವನಾಥ್ ಅವರಿಗೇ ಇದು ಸಲ್ಲಬೇಕಾಗಿತ್ತು ಅಂತ ಯಾರಾದರೂ ಅಂದರೆ ಅವರ ಬಾಯಿಗೆ ಹೊಲಿಗೆ ಹಾಕೋಣ.
ಆದರೆ ಕೋಟಿಗಟ್ಟಲೆ ಭಕ್ತರನ್ನು ಹೊಂದಿರುವ ದೇವರಿಗೆ ಪ್ರಶಸ್ತಿಯ ಕಿರೀಟದ ಅಗತ್ಯ ಇತ್ತಾ ಅನ್ನುವುದು ಈಗ ಹುಟ್ಟಿಕೊಂಡ ಪ್ರಶ್ನೆ.
Also See
Uma Column 11 - ಯಾರಿಗೇಳೋಣಾ ನಮ್ಮ ಪ್ರಾಬ್ಲಂ
Uma Column 10 - ತೊಲಗು ಅಂದರೆ ನಾನು ತೆಲುಗು ಅಂದ ಹಾಗಾಯಿತು
Uma Column 9 - ಹಳ್ಳಿ ಹುಡುಗನನ್ನು ಕೊಂದವರ್ಯಾರು?
Uma Column 8 - ಶಂಕರ ನಾಗಮಂಡಲದಲ್ಲಿ ಒಂದು ಸುತ್ತು..
Uma Column 7 - ಪ್ರಶಸ್ತಿಗಳು ಮಾರಾಟಕ್ಕಿವೆ!
Uma Column 6 - ಹಾಯ್ ಕನ್ನಡ ತಾಯ್!
Uma Column 5 - ನನ್ನ ಭಯ ಮತ್ತು ಅಭಯನ ಜಯ
Uma Column 4 - ಭಟ್ರ ಕ್ವಾರ್ಟರ್ರು ಎಂಬ ಸೀರಿಯಸ್ ಮ್ಯಾಟರ್ರು
Uma Column 3 - ಕಲ್ಲು ಕೊರಗುವ ಸಮಯ
Uma Column 2 - ಮುನಿ ಮತ್ತು MONEY
Uma Column 1 - ಜಗತ್ತಿನ ಕೂಸು ಮತ್ತು ಕನ್ನಡದ ಮನಸ್ಸು
ಸಿನಿಮಾ ಪತ್ರಿಕೋದ್ಯಮದಲ್ಲಿ ಉದಯ್ ನನ್ನ ಗುರು - ಜೋಗಿ
Udaya Marakini Column In Chitraloka
Pls Note -
The views expressed in this column are those of its author and Chitraloka or its publishers do not claim to endorse it. You can express your opinion to his e-mail - This email address is being protected from spambots. You need JavaScript enabled to view it.