“ನಿಮ್ಮನ್ನು ನೋಡಿದ್ರೆ ನಂಗೆ ಅಸೂಯೆಯಾಗುತ್ತೆ ಕಣ್ರೀ. ನಾವೆಲ್ಲಾ ಕೆಲಸ ಮಾಡಿ ಸಂಬಳ ತೆಗೋತೀವಿ, ಆದರೆ ನಿಮ್ಮ ಅದೃಷ್ಟ ನೋಡಿ. ನೀವು ಸಿನಿಮಾ ನೋಡೋದಕ್ಕೆ ನಿಮ್ಮ ಕಂಪನಿ ಸಂಬಳ ಕೊಡುತ್ತೆ. ಹೋಗ್ಲಿ, ಸಿನಿಮಾ ನೋಡೋದಕ್ಕೆ ನೀವೇನಾದ್ರೂ ದುಡ್ಡು ಕೊಡ್ತೀರಾ, ಅದೂ ಇಲ್ಲ. ಪುಣ್ಯವಂತರಪ್ಪಾ ನೀವು”. ಹಾಗಂತ ಕೆಲವು ವರ್ಷದ ಹಿಂದೆ ಸ್ನೇಹಿತರೊಬ್ಬರು ಕಿಚಾಯಿಸಿದ್ದರು. ನಾನು ನಕ್ಕುಬಿಟ್ಟಿದ್ದೆ. ವ್ಯವಧಾನ ಇದ್ದರೆ ಅವರ ಪ್ರಶ್ನೆಗೆ ಉತ್ತರ ಹೇಳಬಹುದಾಗಿತ್ತು.ಕನ್ನಡ ಸಿನಿಮಾ ನೋಡುವುದು ಕೂಡಾ ಎಂಥಾ ಕಷ್ಟದ ಕೆಲಸ ಅನ್ನುವುದನ್ನು ಮನದಟ್ಟು ಮಾಡಿಸಬಹುದಾಗಿತ್ತು. ಒಂದು ಇಡೀ ದಿನ ಅವರನ್ನು ಮುಂದೆ ಕೂರಿಸಿಕೊಂಡು, ನಮ್ಮಂಥ ಸಿನಿಮಾ ಪತ್ರಕರ್ತರ ಕಷ್ಟಗಳನ್ನು ಉದಾಹರಣೆ ಸಮೇತ ವಿವರಿಸಿ, ಇಂಥಾ ಉದ್ಯೋಗ ಜಗತ್ತಿನಲ್ಲಿ ಯಾರಿಗೂ ಬೇಡಪ್ಪ ಅಂತ ಅವರಿಗೆ ಅನಿಸುವಂತೆ ಮಾಡಬಹುದಾಗಿತ್ತು. ಆದರೆ ಹಾಗೆಲ್ಲಾ ಹೇಳುವುದು ಪ್ರೊಫೆಷನಲ್ ಎಥಿಕ್ಸ್ (ಹ್ಹ..ಹ್ಹ..) ಆಗುವುದಿಲ್ಲ ಅಂತ ಸುಮ್ಮನಾಗಿದ್ದೆ.
ಅನಾದಿ ಕಾಲದಿಂದಲೂ, ಥೇಟು ರವಿಚಂದ್ರನ್ ಥರ ಕನ್ನಡ ಸಿನಿಮಾಗಳನ್ನೇ ನನ್ನುಸಿರನ್ನಾಗಿ ಮಾಡಿಕೊಂಡು, ವಾರಕ್ಕೆ ಮೂರರಿಂದ ನಾಲ್ಕು ಸಿನಿಮಾಗಳನ್ನು ಕಣ್ತುಂಬಾ ತುಂಬಿಕೊಂಡು, ರಾತ್ರಿಯಿಡೀ ಅದೇ ಸೀನುಗಳ ಜೊತೆ ಗುದ್ದಾಡುತ್ತಾ ನಿದ್ದೆ ಹಾಳು ಮಾಡಿಕೊಂಡು ನನ್ನ ಯೌವನವನ್ನು ಕಾಡಬೆಳದಿಂಗಳಾಗಿಸಿಕೊಂಡವನು ನಾನು. ನನ್ನ ಕನಸಲ್ಲಿ ನನ್ನಪ್ಪಣೆಯಿಲ್ಲದೆ ಹಾಜರಾಗುತ್ತಿದ್ದವರಾದರೂ ಎಂಥವರು?ಟೈಗರ್ ನಿಂದ ಹಿಡಿದು ಸಿಂಹದ ತನಕ, ಹ್ಯಾಟ್ರಿಕ್ ಹೀರೋನಿಂದ ಹಿಡಿದು ಡ್ಯಾನ್ಸಿಂಗ್ ಸ್ಟಾರ್ ತನಕ. ಟೆನಿಸ್ ಕೃಷ್ಣನ ಅಂಡಿಗೆ ದೊಡ್ಡಣ್ಣ ಒದೆಯುವ ತಮಾಷೆಯ ಸೀನು, ರಂಭಾ ಹೊಕ್ಕಳನ್ನು ದ್ರಾಕ್ಷಿ ಹಣ್ಣುಗಳಿಂದ ಅಲಂಕರಿಸುವ ರವಿಚಂದ್ರನ್ನು, ಡಿಸ್ಕೋ ಶಾಂತಿಯ ಕ್ಯಾಬರೆ, ಮಮ್ತಾಜಳ ಐಟಂ ಡ್ಯಾನ್ಸ್, ವಜ್ರಮುನಿಯ ಅಟ್ಟಹಾಸ, ಮಂಜುಳಾಳ ಮಂದಹಾಸ..... ಯಾರನ್ನೂ, ಯಾವುದನ್ನೂ ಹೋಗಾಚೆ ಅನ್ನುವ ಹಾಗಿರಲಿಲ್ಲ,. ಯಾಕೆಂದರೆ ಅವರಿದ್ದರೆ ನಾನುಂಟು. ನನ್ನ ದೈನಿಕಗಳನ್ನು ಆವರಿಸಿಕೊಳ್ಳುತ್ತಿದ್ದವರು ಅವರೇ, ನನಗೆ ತಿಂಗಳ ಸಂಬಳ ಕೈಸೇರುವಂತೆ ಮಾಡುತ್ತಿದ್ದವರೂ ಅವರೇ.
ಸಿನಿಮಾ ವರದಿಗಾರ ಅಂದರೆ ಹೋಟೆಲ್ ನಿಂದ ಮನೆಮನೆಗೆ ಕ್ಯಾಟರಿಂಗ್ ಸರ್ವಿಸು ನೀಡುವ ಹುಡುಗನಂತೆ. ಸಮಯದ ಹಂಗಿಲ್ಲ, ದೂರದ ಗೊಡವೆಯಿಲ್ಲ, ಕಾಲದ ಬಗ್ಗೆ ಚಿಂತೆಯೇ ಇಲ್ಲ. ಬೆಳಿಗ್ಗೆ ಏಳಕ್ಕೆ ಕಂಠೀರವದ ಅಂಗಳದಲ್ಲಿ ಸಿನಿಮಾ ಮುಹೂರ್ತಕ್ಕೆ ಹಾಜರಾಗಿ, ಮಧ್ಯಾಹ್ನ ರತನ್ ಹೌಸ್ ನಲ್ಲಿ ಶೂಟಿಂಗು ನೋಡಿಕೊಂಡು, ಮುಸ್ಸಂಜೆ ಗ್ರೀನ್ ಹೌಸಿನಲ್ಲಿ ಯಾವುದೋ ಕೆಸೆಟ್ ಬಿಡುಗಡೆಯನ್ನು ಮುಗಿಸಿಕೊಂಡು, ಮಧ್ಯರಾತ್ರಿ ರೂಮಿಗೆ ಬಂದು ಮಲಗುವ ಹೊತ್ತಿಗೆ ಹೊರಗೆ ರಸ್ತೆಯಲ್ಲಿ ವಾಚ್ ಮನ್ ಸೀಟಿ ಊದುವ ಸದ್ದು. ಕೆಲವೊಮ್ಮೆ ಹಾಲಿನವನು ಮತ್ತು ನಾನೂ ಜೊತೆಯಾಗಿ ಗೃಹಪ್ರವೇಶ ಮಾಡಿದ್ದೂ ಉಂಟು. ಮನಸ್ಸನ್ನು ರಿಲಾಕ್ಸ್ ಮಾಡುವುದಕ್ಕೆ ತಿಂಗಳಿಗೆ ಎರಡು ಬಾರಿ ಚಿಕ್ಕಮಗಳೂರು, ಮೈಸೂರು, ಮಡಿಕೇರಿ ಪ್ರವಾಸ. ಅದಕ್ಕೂ ಆನ್ ಡ್ಯೂಟಿ ಮೇಲೆಯೇ ಅನ್ನುವ ಕಂಡೀಷನ್ ಅಪ್ಲೈ ಆಗುತ್ತದೆ. ಹೊತ್ತುಗೊತ್ತಿಲ್ಲದೇ ಮನೆಯಿಂದ ನಿರ್ಗಮಿಸುವ, ಹೊತ್ತಲ್ಲದ ಹೊತ್ತಲ್ಲಿ ಮನೆಸೇರುವ ನನ್ನನ್ನು ನೋಡಿ ಅಕ್ಕಪಕ್ಕದ ಮನೆಯವರು ಇವನ್ಯಾವುದೋ ಖಾಸಗಿ ಕಂಪನಿಯ ಬಸ್ ಡ್ರೈವರು ಇರಬೇಕು ಅಂತ ಅಂದುಕೊಂಡಿದ್ದರೆ ಆಶ್ಟರ್ಯವೇನೂ ಇಲ್ಲ. ಇತ್ತೀಚೆಗೆ ತೀರಿಕೊಂಡ ಹಿರಿಯ ಪತ್ರಕರ್ತ ವಿ.ಎನ್. ಸುಬ್ಬರಾವ್ ಒಂದು ಪ್ರಸಂಗವನ್ನು ನೆನಪಿಸಿಕೊಳ್ಳುತ್ತಿದ್ದರು. ಒಂದು ದಿನ, ಅವರ ಪತ್ನಿಯ ಬಳಿ ಪಕ್ಕದ ಮನೆಯಾಕೆ ಒಂದು ಪ್ರಶ್ನೆ ಕೇಳಿದರಂತೆ. “ಅಲ್ರೀ, ನಿಮ್ಮನೆಗೆ ಅದ್ಯಾರೋ ಮಧ್ಯರಾತ್ರಿ ಬಂದು ಬೆಳ್ಳಂಬೆಳಿಗ್ಗೆ ವಾಪಸ್ ಹೋಗುತ್ತಾರಲ್ಲಾ, ಯಾರವರು?”.
ಹೀಗೆ, ತನ್ನ ಸಮಯವನ್ನು ಮತ್ತು ಭವಿಷ್ಯವನ್ನು ಪರರ ಕೈಗೆ ಕೊಟ್ಟು ಒಂದು ಅವಾಸ್ತವ ಲೋಕದಲ್ಲಿ ವಿಹರಿಸುತ್ತಾ, ಆಲ್ಬರ್ಟ್ ಕಾಮುವಿನಂತೆ ಬದುಕನ್ನು ಬಂದ ಹಾಗೆ ಸ್ವೀಕರಿಸುತ್ತಾ ಹೋಗುವವನೇ ಸಿನಿಮಾ ಪತ್ರಕರ್ತ. ಓದುಗರಿಗೆ ಆತನ ಬಗ್ಗೆ ಕುತೂಹಲವಿದೆ, ಚಿತ್ರೋದ್ಯಮಕ್ಕೆ ಆತನ ಬಗ್ಗೆ ಗೌರವ ಇದೆ ಅಂತ ಖಚಿತವಾಗಿ ಹೇಳುವುದಕ್ಕೆ ಸಾಧ್ಯವಿಲ್ಲದಿದ್ದರೂ ಒಂದು ಸಣ್ಣ ಭಯ ಮತ್ತು ಅಸಹನೆಯಂತೂ ಇದ್ದೇ ಇದೆ. ಅದೆಲ್ಲವನ್ನೂ ಹೊರತುಪಡಿಸಿ ನೋಡಿದರೆ ಸಿನಿಮಾ ಪತ್ರಕರ್ತ ಅನ್ನುವ ಲೇಬಲ್ಲು ಅಷ್ಟೇನೂ ಹಿತವಾಗಿ ಕೇಳಿಸುವುದಿಲ್ಲ. ಹೊಸಬರ ಮುಂದೆ ನಾನೊಬ್ಬ ಪತ್ರಕರ್ತ ಎಂದು ಪರಿಚಯಿಸಿದಾಕ್ಷಣ “ಏನಂತಾನೆ ಸಿದ್ದರಾಮಯ್ಯ”ಅನ್ನುತ್ತಾ ರಾಜಕೀಯದ ಬಗ್ಗೆ ಗಂಭೀರ ಚರ್ಚೆಗಿಳಿಯುವ ಜನರು, “ನಾನು ಸಿನಿಮಾ ಪತ್ರಕರ್ತ”ಎಂದು ತಿದ್ದುಪಡಿ ಹಾಕಿದಾಕ್ಷಣ ಓ... ಎಂದು ಉಡಾಫೆಯ ಉದ್ಗಾರ ತೆಗೆಯುತ್ತಾರೆ. ಯಾಕೆಂದರೆ ಪತ್ರಕರ್ತ ಅಂದಾಕ್ಷಣ ಜನರ ಕಣ್ಣಮುಂದೆ ಹಾದುಹೋಗುವ ಚಿತ್ರವೆಂದರೆ ಮಂತ್ರಿ ಮಹೋದಯರ ಪಡಸಾಲೆಯಲ್ಲಿ ಯಾರಿಗೂ ಕೇರ್ ಮಾಡದೇ ಓಡಾಡುವ ಡೇರ್ ಅಂಡ್ ಡೆವಿಲ್ ಮನುಷ್ಯ. ತನ್ನ ಒಂದೇ ಒಂದು ಪ್ರಶ್ನೆಯಿಂದ ಮುಖ್ಯಮಂತ್ರಿಗಳ ಹಣೆಯಲ್ಲಿ ಬೆವರು ಮೂಡಿಸಬಲ್ಲ ಸೂಪರ್ ಮ್ಯಾನ್, ತನ್ನ ಒಂದು ಲೇಖನದಿಂದ ಸರ್ಕಾರವನ್ನೇ ಬುಡಮೇಲು ಮಾಡಬಲ್ಲ ಶಕ್ತಿಮಾನ್. ಆದರೆ ನಮ್ಮಂಥವರ ಕೈಯಲ್ಲಿ ಒಂದು ಸಿನಿಮಾವನ್ನೇ ‘ಓಡಿಸುವುದಕ್ಕಾಗುವುದಿಲ್ಲ’ಅಂದಮೇಲೆ ನಾವೆಂತಾ ಪತ್ರಕರ್ತರು!
ಪತ್ರಕರ್ತರ ವಲಯದಲ್ಲೂ ಸಿನಿಮಾ ಪತ್ರಕರ್ತರಿಗೆ ಅಂಥಾ ಮನ್ನಣೆಯಿಲ್ಲ. ಎಷ್ಟಾದರೂ ಸಿನಿಮಾ ಅಂದರೆ ರಂಜನೆ, ಜನ ಟೈಮ್ ಪಾಸ್ ಗಾಗಿ ಓದುವ ಬರಹ, ಅದರಿಂದ ದೇಶಕ್ಕೇನೂ ಉಪಯೋಗವಾಗುವುದಿಲ್ಲ ಎಂಬ ಧೋರಣೆ. ಹೀಗಾಗಿ ಒಂದು ಸಣ್ಣ ಕೀಳರಿಮೆಯನ್ನಿಟ್ಟುಕೊಂಡೇ ಸಿನಿಮಾ ಪತ್ರಕರ್ತರು ಕೆಲಸ ಮಾಡಬೇಕಾದ ಸ್ಥಿತಿ. ಈಗ ಟೀವಿ ಚಾನೆಲ್ಲುಗಳು ಬಂದಮೇಲಂತೂ ಪತ್ರಕರ್ತರ ಬೆಲೆ ಇನ್ನಷ್ಟು ಇಳಿದಿದೆ. ಸಿನಿಮಾದವರಿಗೆ ನ್ಯೂಸ್ ಪ್ರಿಂಟಲ್ಲಿ ತಮ್ಮ ಮುಖ ನೋಡುವುದಕ್ಕಿಂತ ನ್ಯೂಸ್ ಸ್ಕ್ರೀನ್ ಮೇಲೆ ಮುಖ ನೋಡುವುದರಲ್ಲೇ ಹೆಚ್ಚು ಮಜಾ ಸಿಗುತ್ತದೆ. ಚಲಿಸುವ ಚಿತ್ರಗಳಿಗಿರುವ ಮರ್ಯಾದೆ ಸ್ಟಿಲ್ ಗಳಿಗಿಲ್ಲ. ಆಫೀಸ್ ವಿಷಯಕ್ಕೆ ಬಂದರೆ, ಲಾಗಾಯ್ತಿನಿಂದಲೂ ಪತ್ರಿಕಾ ಕಚೇರಿಗಳಲ್ಲಿ ಮೊದಲ ಸ್ಥಾನ ರಾಜಕೀಯ ವರದಿಗಾರರಿಗೆ, ನಂತರದ ಸ್ಥಾನಗಳು ಅನುಕ್ರಮವಾಗಿ ಕ್ರೈಮ್ ರಿಪೋರ್ಟರ್, ಕ್ರೀಡಾ ವರದಿಗಾರ ಮತ್ತು ಕೋರ್ಟು ವರದಿಗಾರ, ಶಿಕ್ಷಣ ವರದಿಗಾರ ಮೊದಲಾದವರಿಗೆ. ಕೊನೆಯ ಸ್ಥಾನ ಸಿನಿಮಾ ಪತ್ರಕರ್ತನಿಗೆ ಮೀಸಲು. ಯಾವುದೇ ಪತ್ರಿಕಾಕಚೇರಿಯಲ್ಲಿ ಹೊಸದಾಗಿ ಕೆಲಸಕ್ಕೆ ಸೇರಿಕೊಳ್ಲುವ ವರದಿಗಾರನನನ್ನು ಸಿನಿಮಾ ವಿಭಾಗಕ್ಕೆ ಹಾಕಲಾಗುತ್ತದೆ. ಸ್ವಲ್ಪ ದಿನ ಅನುಭವವಾಗಲಿ ಅನ್ನುವುದು ಒಂದು ಕಾರಣ, ಸಿನಿಮಾ ವರದಿಗಾರಿಕೆ ಅಂಥಾ ಗಂಭೀರವಾದದ್ದೇನೂ ಅಲ್ಲ, ಹೇಗೆ ಬರೆದರೂ ನಡೆಯುತ್ತದೆ ಅನ್ನುವುದು ಮತ್ತೊಂದು ಕಾರಣ. ಹೀಗಾಗಿ ಆರಂಭದಲ್ಲಿ ಸಿನಿಮಾ ವರದಿಗಾರರಾಗಿದ್ದವರು ಅನಂತರದ ದಿನಗಳಲ್ಲಿ ಬಡ್ತಿ ಪಡೆದುಕೊಂಡು ಬೇರೆ ಕಡೆ ಮಿಂಚುತ್ತಾರೆ, ನತದೃಷ್ಟರು ಅಲ್ಲೇ ಬಾಕಿಯಾಗುತ್ತಾರೆ.
ನಾನು ಪತ್ರಕರ್ತನಾಗಿ ನನ್ನ ವೃತ್ತಿ ಶುರು ಮಾಡಿದ್ದೇ ಸಿನಿಮಾ ಪತ್ರಿಕೆಯಲ್ಲಿ ಆಗಿದ್ದರಿಂದ ನನ್ನ ಮುಂದೆ ಬೇರೆ ಆಯ್ಕೆಗಳಿರಲಿಲ್ಲ. ಹಾಗಾಗಿ ನನ್ನ ಹಣೆಯ ಮೇಲೆ ಸಿನಿಮಾ ರಿಪೋರ್ಟರ್ ಎಂಬ ಸ್ಟಿಕ್ಕರ್ ಸಲೀಸಾಗಿ ಅಂಟಿಕೊಂಡಿತು. ನಾನಾಗಿ ಅದನ್ನು ಕಳಚುವ ಪ್ರಯತ್ನ ಮಾಡಲಿಲ್ಲ, ಬೇರೆಯವರಿಗೂ ಅದರ ಅಗತ್ಯ ಕಾಣಿಸಲಿಲ್ಲ. ಚೆನ್ನಾಗಿ ಕಾರು ಓಡಿಸುವ ಡ್ರೈವರನ್ನು ಯಾರಾದರೂ ವಿಮಾನ ಹಾರಿಸು ಅಂತ ಕೇಳುತ್ತಾರಾ?
ತಮಾಷೆಯೆಂದರೆ ನಾನು ‘ಅರಗಿಣಿ’ಬಿಟ್ಟು ‘ಸಂಯುಕ್ತ ಕರ್ನಾಟಕ’ಪತ್ರಿಕೆ ಸೇರಿಕೊಂಡಾಗ ಸಂಪಾದಕ ಶಾಮರಾಯರು ನನಗೆ ಕೊಟ್ಟ ಡಿಸಿಗ್ನೇಷನ್ ಸಿನಿಮಾ ನ್ಯೂಸ್ ಕಲೆಕ್ಟರ್ಅಂತ. ನಮ್ಮೂರಲ್ಲಿ ಪ್ರೈವೇಟ್ ಬಸ್ಸುಗಳಿಗೆ ಟಿಕೆಟ್ ನೀಡುವ ಏಜಂಟನಂತೆ ನನ್ನ ಕಣ್ಣಿಗೆ ನಾನು ಕಾಣಿಸುತ್ತಿದ್ದೆ. ಆತ ಜನರಿಗೆ ಟಿಕೆಟ್ ಕೊಡುತ್ತಾನೆ, ನಾನು ಸುದ್ದಿ ಕೊಡುತ್ತೇನೆ. ಅಷ್ಟೆ ವ್ಯತ್ಯಾಸ. ಶಾಮರಾಯರಿಗೆ ನಾನು ಹುಟ್ಟಿದ್ದೇ ಸಿನಿಮಾ ವರದಿಗಾರನಾಗುವುದಕ್ಕೆ ಎಂದು ಅನಿಸಿರಬೇಕು. ಕೆಲಸಕ್ಕೆ ಸೇರುವ ಹೊತ್ತಲ್ಲಿ ನಿಮ್ಮ ಹೆಸರೇನು ಎಂದು ಅವರು ಕೇಳಿದಾಗ ನಾನು ಉದಯಕುಮಾರ ಅಂದಿದ್ದೆ. ‘ಓ ಸಿನಿಮಾ ನಟ ಉದಯಕುಮಾರ್’ಎಂದು ಅವರು ನಕ್ಕಿದ್ದರು. ನಮ್ಮಪ್ಪ ಅಮ್ಮ, ರಾಜುಕುಮಾರ್ ಅಂತ ಹೆಸರಿಟ್ಟಿದ್ದರೆ ಎಷ್ಟು ಚೆನ್ನಾಗಿರೋದು ಅಂತ ಆಗ ಅನಿಸಿತ್ತು. ಆಮೇಲೆ ಇದೇ ಉದಯಕುಮಾರ, ರಾಜಕುಮಾರ್ ಅವರನ್ನು ಇಂಟರ್ ವ್ಯೂ ಮಾಡಿದ್ದು ಇತಿಹಾಸ ಅಂತಈಗ ಬೇರೆ ಯಾರಾದರೂ ಬರೆದರೆ ಚೆನ್ನಾಗಿರುವುದು!
ಸಿನಿಮಾ ಪತ್ರಿಕೋದ್ಯಮ ಅನ್ನುವುದು ಒಂದು ಥ್ಯಾಂಕ್ ಲೆಸ್ ಜಾಬ್. ಆ ಕಟುವಾಸ್ತವವನ್ನು ಒಪ್ಪಿಕೊಂಡೇ ಕೆಲಸ ಮಾಡಿದರೆ ಬಹಳ ಮಜಾ ಬರುತ್ತದೆ. ಯಾವುದನ್ನೂ ಜಾಸ್ತಿ ಸೀರಿಯಸ್ಸಾಗಿ ತೆಗೆದುಕೊಳ್ಳಬಾರದು, ಯಾಕೆಂದರೆ ಕನ್ನಡದಲ್ಲಿ ಸೀರಿಯಸ್ ಸಿನಿಮಾಗಳು ಬರುವುದೇ ಕಡಿಮೆ! ಕನ್ನಡ ಪತ್ರಿಕೆಗಳಲ್ಲಿ ವಸ್ತುನಿಷ್ಠ ವಿಮರ್ಶೆಗಳು ಬರುವುದಿಲ್ಲ ಎಂದು ಯಾರಾದರೂ ಮೂಗುಮುರಿದರೆ ನಾನು ಹೇಳುತ್ತೇನೆ. ಅದಕ್ಕೆ ಕಾರಣ ಕನ್ನಡ ಚಿತ್ರಗಳೇ ಅಂತ. ಮಲೆಯಾಳಂ ಅಥವಾ ಬಂಗಾಲಿ ಚಿತ್ರರಂಗದಲ್ಲಿ ನಡೆಯುವಂಥಾ ಪ್ರಯೋಗಗಳು ನಮ್ಮಲ್ಲಿ ನಡೆಯುವುದಿಲ್ಲ. ನಮ್ಮ ಪ್ರೇಕ್ಷಕರಲ್ಲೂ ಸಿನಿಮಾ ಅಕ್ಷರಸ್ತರ ಸಂಖ್ಯೆ ಕಡಿಮೆಯಿದೆ. ಚಿತ್ರರಂಗ ಬೆಳೆದರಷ್ಟೇ ಸಿನಿಮಾ ಪತ್ರಕರ್ತನೂ ಬೆಳೆಯುವುದಕ್ಕೆ ಸಾಧ್ಯ.
ಒಂದು ಸಾರಿ ಹಿರಿಯ ನಟ ಸೋಮಶೇಖರ್ (ದತ್ತಣ್ಣನ ಅಣ್ಣ) ಪಾರ್ಟಿಯೊಂದರಲ್ಲಿ ನನಗೆ ತಗಲಿಕೊಂಡಿದ್ದರು. ನಾನು ಬರೆಯುತ್ತಿರುವ ಸಿನಿಮಾ ವಿಮರ್ಶೆಗಳು ವಿಮರ್ಶೆಯೇ ಅಲ್ಲವೆಂದೂ, ಕೇವಲ ಜನರನ್ನು ಮೆಚ್ಚಿಸುವುದಕ್ಕಾಗಿ ನಾನು ಬರೆಯುತ್ತಿದ್ದೇನೆಂದೂ ಗಂಭೀರ ಆರೋಪ ಮಾಡುತ್ತಾ, ಸಿನಿಮಾ ವಿಮರ್ಶೆ ಹೇಗಿರಬೇಕು ಅನ್ನುವ ಬಗ್ಗೆ ಬ್ರಿಟನ್ನಿನ ಯಾರೋ ಒಬ್ಬ ಮಹನೀಯ ಬರೆದ ಪುಸ್ತಕವನ್ನು ನನಗೆ ಕೊಡುವುದಾಗಿ ಬೆದರಿಸಿದ್ದರು. ಅದೃಷ್ಟವಶಾತ್ ಆ ಪುಸ್ತಕವನ್ನು ನನಗವರು ಕೊಡಲಿಲ್ಲ, ನಾನು ಅದನ್ನು ಹುಡುಕಿಕೊಂಡು ಹೋಗಲೂ ಇಲ್ಲ. ಯಾಕೆಂದರೆ ಕನ್ನಡ ಚಿತ್ರರಂಗದ ಸಂದರ್ಭದಲ್ಲಿ ಮತ್ತು ನಾನು ಕೆಲಸ ಮಾಡುತ್ತಿದ್ದ ‘ಕನ್ನಡಪ್ರಭ’ಪತ್ರಿಕೆಯ ಸಂದರ್ಭದಲ್ಲಿ ವಿಮರ್ಶೆಗಳು ಹೇಗಿರಬೇಕು ಅನ್ನುವ ಸ್ಪಷ್ಚ ಚಿತ್ರಣ ನನಗೆ ಗೊತ್ತಿತ್ತು. ನನ್ನ ಸಂಪಾದಕ ವೈಎನ್ಕೆ ಹೇಳುತ್ತಿದ್ದರು. “ದೂರದಲ್ಲಿರುವವರಿಗೆ ಕಲ್ಲು ಹೊಡೀರಿ, ಯಾಕೆಂದರೆ ಕಲ್ಲು ಅವರಿಗೆ ತಾಕುವುದಿಲ್ಲ, ತಾಕಿದರೂ ಹೊಡೆದವರಾರು ಅನ್ನುವುದು ಗೊತ್ತಾಗುವುದಿಲ್ಲ. ಹತ್ತಿರದಲ್ಲಿರುವವರಿಗೆ ಕಲ್ಲು ಹೊಡೆದರೆ ಅದು ವಾಪಸ್ಸು ನಿಮಗೇ ಬಂದು ಬೀಳುತ್ತದೆ”. ಅದರ ಅರ್ಥ ಇಷ್ಟೆ, ಹಿಂದಿ ಚಿತ್ರರಂಗದವರ ಬಗ್ಗೆ ಬೇಕಾದ್ದು ಬರಿ, ಕನ್ನಡ ಚಿತ್ರರಂಗದ ತಂಟೆಗೆ ಹೋಗಬೇಡ. ಹಾಗಾಗಿ ನಾನು ಕಲ್ಲು ಕೆಳಗಿಟ್ಟೆ, ಶಾಲು ಕೈಗೆತ್ತಿಕೊಂಡೆ. ಹೊಡೆದರೆ ನೋವಾಗಬಾರದು, ಆದರೆ ಸೊಳ್ಳೆ ಕಚ್ಚಿದ ಹಾಗೆ ಇರಿಟೇಟ್ ಮಾಡಬೇಕು. ಕಾಲೆಳೆಯುವ ಸುಖವೇ ಅಂಥಾದ್ದು, ಎಳೆಯುವನನಿಗೆ ಖುಶಿ, ಎಳೆಸಿಕೊಂಡವನಿಗೆ ಕಸಿವಿಸಿ.
ಅಷ್ಟಕ್ಕೂ ನಾವು ಚಿತ್ರವಿಮರ್ಶೆ ಬರೆಯುವುದು ಯಾರಿಗಾಗಿ?ಕನ್ನಡ ಪ್ರೇಕ್ಷಕರಿಗೆ ಎಂದು ಅಂದುಕೊಂಡರೆ ತಪ್ಪು. ನನಗೆ ನನ್ನ ಪತ್ರಿಕೆಯ ಓದುಗರು ಮುಖ್ಯ, ನಾನು ಬರೆಯುವುದು ಆತನಿಗೋಸ್ಕರ. ಭಾನುವಾರದ ರಜಾ ದಿನದಂದು ಬೆಳಿಗ್ಗೆ ಎದ್ದತಕ್ಷಣ ಆತನ ಮೂಡ್ ಕೆಡಿಸುವಂಥಾ ಘನಗಂಭೀರ ವಿಮರ್ಶೆಯನ್ನು ಬರೆಯುವುದು ಅಪರಾಧವಾಗುತ್ತದೆ. ಹಾಗಾಗಿ ಅವರಿಗೊಂದು ಅಹ್ಲಾದಕರ ಮುಂಜಾವನ್ನು ಕರುಣಿಸುವ ಶಕ್ತಿಯನ್ನು ಕೊಡು ದೇವರೇ ಎಂದು ಪ್ರಾರ್ಥಿಸುತ್ತಲೇ ನಾನು ವಿಮರ್ಶೆ ಬರೆಯುವುದಕ್ಕೆ ಕುಳಿತುಕೊಳ್ಳುತ್ತಿದ್ದೆ. ಪತ್ರಿಕೆಯ ಓದುಗರಲ್ಲಿ ಯಾರಾದರೂ ಕನ್ನಡ ಸಿನಿಮಾಗಳನ್ನು ನೋಡುವ ಪ್ರೇಕ್ಷಕರಿದ್ದು, ಅವರು ನಾನು ಬರೆದ ವಿಮರ್ಶೆ ಓದಿ ಆ ಚಿತ್ರ ನೋಡಿದರೆ ಅದು ನಿರ್ಮಾಪಕನಿಗೆ ಬೋನಸ್ಸು ಅಷ್ಟೆ. ನೋಡದೇ ಇದ್ದರೆ ಅದು ನನ್ನ ತಪ್ಪಲ್ಲ. ಒಂದು ಒಳ್ಳೆಯ ಚಿತ್ರಕ್ಕೆ ಒಳ್ಳೇ ವಿಮರ್ಶೆಯಿಂದ ಸ್ವಲ್ಪ ಸಹಾಯವಾಗಬಹುದು, ಆದರೆ ಕೆಟ್ಟ ಚಿತ್ರವನ್ನು ಒಳ್ಳೆಯ ವಿಮರ್ಶೆ ಕಾಪಾಡುವುದಕ್ಕೆ ಸಾಧ್ಯವಿಲ್ಲ. ಕೆಲವೊಮ್ಮೆ “ಸಿನಿಮಾಕ್ಕಿಂತ ನಿಮ್ಮ ವಿಮರ್ಶೆಯೇ ಚೆನ್ನಾಗಿತ್ತು”ಅಂತ ಯಾರಾದರೂ ಅಂದಾಗ ಇದು ಕಾಂಪ್ಲಿಮೆಂಟಾ ಅಥವಾ ಕಂಪ್ಲೇಂಟೋ ಎಂದು ಗೊತ್ತಾಗದೆ ನಾನು ಗೊಂದಲಕ್ಕೊಳಗಾಗಿದ್ದುಂಟು.
ವಿಮರ್ಶೆಯ ಮಾತು ಬಂದಾಗ ಹಳೇ ಘಟನೆಯೊಂದು ನೆನಪಾಗುತ್ತದೆ. ಅದು ‘ತರಲೆ ನನ್ಮಗ’ಚಿತ್ರ ಬಿಡುಗಡೆಯಾದ ಸಂದರ್ಭ. ಸೂರಪ್ಪ ಬಾಬು, ಉಪೇಂದ್ರ ಮತ್ತು ನಾಯಕನಾಗಿ ಜಗ್ಗೇಶ್ ಈ ಮೂವರಿಗೂ ಮೊದಲ ಚಿತ್ರವದು. ಕನ್ನಡಪ್ರಭ ಕಚೇರಿಯ ಮುಂದಿದ್ದ ಒಲಂಪಸ್ ಎಂಬ ದೆವ್ವದ ಬಂಗಲೆಯಂತಿದ್ದ ಹೋಟೆಲಲ್ಲಿ ನಾನು ಮತ್ತು ನನ್ನ ಬಾಸ್ ಎಸ್.ಕೆ.ಶಾಮಸುಂದರ್ ಅವರು ಉಪೇಂದ್ರರ ಸಂದರ್ಶನ ಮಾಡಿದ್ದೆವು. ಆಗ ಉಪೇಂದ್ರ ಒಂದು ಹಕ್ಕೊತ್ತಾಯವನ್ನು ಮುಂದಿಟ್ಟರು. ನೀವು ಬೇರೆ ಚಿತ್ರಗಳನ್ನು ವಿಮರ್ಶೆ ಮಾಡಿದ ಹಾಗೆ ಈ ಚಿತ್ರವನ್ನು ಟೀಕಿಸಬೇಡಿ. ಯಾಕೆಂದರೆ ಇದು ಹೊಸಬರ ಪ್ರಯತ್ನ, ಕೊಂಚ ರಿಯಾಯಿತಿ ಕೊಟ್ಟೇ ಬರೆಯಿರಿ. ಇದರಿಂದ ನಮಗೂ ಉಪಯೋಗ ಆಗುತ್ತೆ ಮತ್ತು ಚಿತ್ರರಂಗಕ್ಕೂ ಉಪಯೋಗ ಆಗುತ್ತೆ. ರಿಯಾಯಿತಿ ಕೊಡುವಷ್ಟು ಕೆಟ್ಟದಾಗಿಯೇನೂ ಆ ಚಿತ್ರ ಇರಲಿಲ್ಲ. ಆದರೆ ನಂಗಿಷ್ಟವಾಗಿದ್ದು ಉಪೇಂದ್ರರ ಗಟ್ಸ್. ಫಿಲ್ಟರ್ ತೆಗೆದಿಟ್ಟು ಮಾತಾಡುವ ಅವರ ಈ ಗುಣ ಮುಂದೆ ‘ಎ’ಮತ್ತು ‘ಉಪೇಂದ್ರ’ಚಿತ್ರಗಳಲ್ಲಿ ಜಗಜ್ಜಾಹೀರಾಯಿತು.
ನಿಮಗಿಲ್ಲಿ ಒಂದು ರಹಸ್ಯ ಹೇಳಬೇಕು. ಒಂದು ಚಿತ್ರವನ್ನು ಕಟುವಾದ ಪದಗಳಲ್ಲಿ ಟೀಕಿಸಿ ಬರೆದಾಗ ಅದು ಸುಲಭವಾಗಿ ಹಿಟ್ ಆಗುತ್ತದೆ. ಹ್ಯಾಗೆ ಕೆತ್ತಿ ಬರೆದಿದ್ದಾರೆ ನೋಡಿ ಎಂಬ ಮಾತು ಕೇಳಿಬರುತ್ತದೆ. ಜನರು ಯಾವತ್ತೂ ನಿಂದಕರನ್ನು ಮೆಚ್ಚುತ್ತಾರೆ. ಟಾಬ್ಲೋಯ್ಡ್ ವಿಮರ್ಶೆಗಳು ಜನರನ್ನು ಆಕರ್ಷಿಸುವುದಕ್ಕೆ ಅದೇ ಕಾರಣ. ಆದರೆ ಒಂದು ಸಿನಿಮಾ ಎಷ್ಟೇ ಕೆಟ್ಟದಾಗಿರಲಿ, ಅದನ್ನು ನೋಡಲೇಬೇಡಿ ಎಂದು ಅಪ್ಪಣೆ ಕೊಡುವ ಅಧಿಕಾರ ಪತ್ರಕರ್ತನಿಗಿಲ್ಲ. ನಿರ್ದೇಶಕ ಕುಂಬಾರ ಅಲ್ಲದೇ ಇರಬಹುದು, ನಾವು ದೊಣ್ಣೆಯಂತೂ ಅಲ್ಲವಲ್ಲ.
Also See
Uma Column 10 - ತೊಲಗು ಅಂದರೆ ನಾನು ತೆಲುಗು ಅಂದ ಹಾಗಾಯಿತು
Uma Column 9 - ಹಳ್ಳಿ ಹುಡುಗನನ್ನು ಕೊಂದವರ್ಯಾರು?
Uma Column 8 - ಶಂಕರ ನಾಗಮಂಡಲದಲ್ಲಿ ಒಂದು ಸುತ್ತು..
Uma Column 7 - ಪ್ರಶಸ್ತಿಗಳು ಮಾರಾಟಕ್ಕಿವೆ!
Uma Column 6 - ಹಾಯ್ ಕನ್ನಡ ತಾಯ್!
Uma Column 5 - ನನ್ನ ಭಯ ಮತ್ತು ಅಭಯನ ಜಯ
Uma Column 4 - ಭಟ್ರ ಕ್ವಾರ್ಟರ್ರು ಎಂಬ ಸೀರಿಯಸ್ ಮ್ಯಾಟರ್ರು
Uma Column 3 - ಕಲ್ಲು ಕೊರಗುವ ಸಮಯ
Uma Column 2 - ಮುನಿ ಮತ್ತು MONEY
Uma Column 1 - ಜಗತ್ತಿನ ಕೂಸು ಮತ್ತು ಕನ್ನಡದ ಮನಸ್ಸು
ಸಿನಿಮಾ ಪತ್ರಿಕೋದ್ಯಮದಲ್ಲಿ ಉದಯ್ ನನ್ನ ಗುರು - ಜೋಗಿ
Udaya Marakini Column In Chitraloka
Pls Note -
The views expressed in this column are those of its author and Chitraloka or its publishers do not claim to endorse it. You can express your opinion to his e-mail - This email address is being protected from spambots. You need JavaScript enabled to view it.