` chitraloka.com | Kannada Movie News, Reviews | Image - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ntr, rajkumar image
ntr, rajkumar

ಹಾಲಿವುಡ್ ಚಿತ್ರಗಳಿಗೆ ಹೆದರಲಿಲ್ಲ, ಹಿಂದಿ ಚಿತ್ರಗಳಿಗೂ ಬೆದರಲಿಲ್ಲ. ಆದರೆ ತೆಲುಗು ಚಿತ್ರವೆಂದರೆ ಕನ್ನಡ ಚಿತ್ರರಂಗಕ್ಕೆ ಯಾಕೆ ಇಂಥಾ ಪರಿ ಭಯ?ಇಂಥ ಪ್ರಶ್ನೆಯನ್ನು ಕನ್ನಡ ನಿರ್ಮಾಪಕರಿಗೆ ಕೇಳಿ ನೋಡಿ, ಅವರಿಂದ ಸ್ಪಷ್ಟ ಉತ್ತರ ಸಿಗುವುದಿಲ್ಲ. ತೆಲುಗು ಚಿತ್ರಗಳು ಅದ್ದೂರಿಯಾಗಿರುತ್ತವೆ, ಅದನ್ನು ಸರಿಗಟ್ಟುವುದಕ್ಕೆ ನಮ್ಮಿಂದ ಸಾಧ್ಯವಾಗುವುದಿಲ್ಲ ಎಂದೇನೋ ಗೊಣಗುತ್ತಾರೆ.  ಅದ್ದೂರಿಯಾಗಿರುತ್ತದೆ ಅನ್ನುವ ಒಂದೇ ಕಾರಣಕ್ಕೆ ಜನ ಒಂದು ಸಿನಿಮಾವನ್ನು ಮೆಚ್ಚಿಕೊಳ್ಳುವುದಕ್ಕೆ ಸಾಧ್ಯಾನಾ?ಹಾಲಿವುಡ್ ಮತ್ತು ಬಾಲಿವುಡ್ ಚಿತ್ರಗಳು ತೆಲುಗು ಚಿತ್ರಗಳಿಗಿಂತಲೂ ಅದ್ದೂರಿಯಾಗಿರುವುದಿಲ್ಲವೇ?ಅವುಗಳನ್ನೂ ಜನ ಯಾಕೆ ಇಂಥಾ ಪರಿ ಹಚ್ಚಿಕೊಳ್ಳುವುದಿಲ್ಲ?ಉತ್ತರವನ್ನು ನಾವೇ ಹುಡುಕಿಕೊಳ್ಳಬೇಕು.

ಇಂದಿಗೂ ನನಗೆ ತೆಲುಗು ಸಿನಿಮಾ ಅಂದರೆ ನೆನಪಾಗುವುದು ಎನ್ಟಿಆರ್ ಅವರ ರಾಮನ ಪಾತ್ರ, ರಂಗರಾವ್ ಅವರ ಭೀಮನ ಪಾತ್ರ, ಕಾಂತಾರಾವ್ ಅವರ ನಾರದ.ಉದ್ದುದ್ದ ಡೈಲಾಗು, ಅಬ್ಬರದ ನಗು, ಪ್ರತಿ ಹತ್ತು ನಿಮಿಷಕ್ಕೊಂದು ಹಾಡು. ಭಾಷೆ ಅರ್ಥವಾಗುತ್ತಿರಲಿಲ್ಲವಾದರೂ ಆ ಮಹಾನುಭಾವರ ಬಾಡಿಲಾಂಗ್ವೇಜು ನೋಡುತ್ತಿದ್ದಂತೆ ರೋಮಾಂಚನವಾಗುತ್ತಿತ್ತು, ಭಕ್ತಿ ಉಕ್ಕಿಹರಿಯುತ್ತಿತ್ತು. ಆರಡಿ ಎತ್ತರದ, ಭೂಮಿಯನ್ನೇ ನಡುಗಿಸುವಂಥಾ ಗಟ್ಟಿಕಂಠದ, ಕಬ್ಬಿಣದ ತೊಲೆಗಳಂಥಾ ಕೈಕಾಲುಗಳನ್ನು ಹೊಂದಿದ್ದ  ಆ ನಟರು ಭುವಿಗಿಳಿದ ದೇವತೆಗಳಂತೆಯೂ ಮತ್ತು ಕೆಲವೊಮ್ಮೆ ರಾಕ್ಷಸರಂತೆಯೂ ಕಾಣಿಸುತ್ತಿದ್ದರು. ಪೌರಾಣಿಕ ಚಿತ್ರಗಳನ್ನು ನಿರ್ಮಿಸುವುದರಲ್ಲಿ ತೆಲುಗರನ್ನು ಮೀರಿಸಿದವರಿಲ್ಲ. ಈಗಲೂ ಯಾವುದೋ ಕ್ಯಾಲೆಂಡರಿನಲ್ಲಿ ರಾಮಲಕ್ಷಣರ ಫೋಟೋ ಕಂಡಾಗಲೂ ನನಗೆ ಎನ್ಟಿಆರ್ ಅವರೇ ಕಣ್ಣಮುಂದೆ ಬರುತ್ತಾರೆ. ಈಗ ಹಿಂದಿ ಚಾನೆಲ್ಲುಗಳಲ್ಲಿ ಹತ್ತಾರು ಪೌರಾಣಿಕ ಧಾರಾವಾಹಿಗಳು ಪ್ರಸಾರವಾಗುತ್ತಿವೆ, ವಿಪರೀತ ಖರ್ಚು ಮಾಡಿ ಹಾಕಲಾದ ಸೆಟ್ಟುಗಳು, ನಟನಟಿಯ ವೇಷಭೂಷಣಗಳು ಕಣ್ಣುಕೋರೈಸುವಂತಿರುತ್ತದೆ. ಆದರೆ ಕಲಾವಿದರ ಅಭಿನಯ ಸಪ್ಪೆ, ಹಾಗಾಗಿ ಎಲ್ಲಾ ಅಲಂಕಾರವೂ  ವ್ಯರ್ಥ ಅನಿಸುತ್ತದೆ. ಬಹುಶಃ ನಾನಿನ್ನೂ ಎನ್ಟಿಆರ್, ರಂಗರಾವ್ ಹ್ಯಾಂಗೋವರ್ ನಿಂದ ಈಚೆ ಬಂದಿಲ್ಲವೋ ಏನೋ..

 ಪೌರಾಣಿಕ ಚಿತ್ರಗಳ ಹೊರತಾಗಿ ಮಿಕ್ಕ ತೆಲುಗು ಚಿತ್ರಗಳ ಬಗ್ಗೆ ನನಗಂಥಾ ಆದರವಿಲ್ಲ. ಯಾವುದೋ ಒಂದು ಸಾಮಾಜಿಕ ಚಿತ್ರದಲ್ಲಿ, ಎನ್ಟಿಆರ್ ಮತ್ತು ಶ್ರೀದೇವಿ ದೇವಸ್ಥಾನದ ಮುಂದೆ ರಣಬಿಸಿಲಲ್ಲಿ ಡ್ಯುಯೆಟ್ ಹಾಡುತ್ತಿರುವ ದೃಶ್ಯ ನೋಡಿ ನಾನು ಮನಸಾರೆ ನಕ್ಕಿದ್ದೆ. ಒಂದೇ ಹಾಡಲ್ಲಿ ಏನೆಲ್ಲಾ ವಿರೋಧಾಭಾಸಗಳು ನೋಡಿ. ಐವತ್ತೈದು ದಾಟಿದ್ದ ಎನ್ಟಿಆರ್ ಅವರ ಪ್ರೇಮಾಲಾಪ, ತನ್ನ ಮೊಮ್ಮಗಳ ವಯಸ್ಸಿನ ನಟಿಯೊಂದಿಗೆ ಅವರ ಕುಣಿತ, ಅದಕ್ಕೆ ಆವರು ಆಯ್ದುಕೊಂಡಿದ್ದು ದೇವಸ್ಥಾನದ ಮುಂದಿನ ಆವರಣ, ಅದೂ ಮಟಮಟ ಮಧ್ಯಾಹ್ನದ ಹೊತ್ತಲ್ಲಿ. ಹಾಗಂತ ತೆಲುಗಿವರಿಗೆ ಪ್ರೀತಿ ಮಾಡುವುದಕ್ಕೇ ಬರುವುದಿಲ್ಲ ಅನ್ನುವ ಹಾಗೂ ಇರಲಿಲ್ಲ, ಯಾಕೆಂದರೆ ಎನ್ಟಿಅರ್ ಗೆ ಅಪವಾದವೆಂಬಂತೆ ಪಕ್ಕದಲ್ಲಿ ಅಕ್ಕಿನೇನಿ ನಾಗೇಶ್ವರ ರಾವ್ ಇದ್ದರು. ಅವರ ದೇವದಾಸ್ ಆಗಿನ ಕಾಲಕ್ಕೆ ದೊಡ್ಡ ಹಿಟ್ ಸಿನಿಮಾ. ಎನ್ಟಿಆರ್ ಶ್ರೀಸಾಮಾನ್ಯನ ಹೀರೋ ಆಗಿದ್ದರೆ, ಅಕ್ಕಿನೇನಿ ಮಧ್ಯಮವರ್ಗದ ಪ್ರತಿನಿಧಿ. ರಜನಿಕಾಂತ್ ಮುಂದೆ ಕಮಲಾಹಾಸನ್ ಇದ್ದಂತೆ, ಮಮ್ಮೂಟ್ಟಿ ಮುಂದೆ ಮೋಹನ್ ಲಾಲ್ ಇದ್ದಂತೆ, ವಿಷ್ಣುವರ್ಧನ್ ಮುಂದೆ ಅನಂತನಾಗ್ ಇದ್ದಂತೆ.

telugu stars

ಎನ್ಟಿಆರ್ ನಂತರ ಮೂರು ತಲೆಮಾರುಗಳು ಬಂದರೂ ತೆಲುಗು ಚಿತ್ರಗಳ ವ್ಯಾಕರಣ ಬದಲಾಗಿಲ್ಲ, ಎನ್ಟಿಆರ್ ಜಾಗಕ್ಕೆ ಅವರ ಪುತ್ರ ಬಾಲಕೃಷ್ಣ ಬಂದರು, ಆಮೇಲೆ ಮೊಮ್ಮಗ ಜೂನಿಯರ್ ಎನ್ಟಿಆರ್ ಬಂದರು. ರಾವ್ ಗಳ ಜಾಗಕ್ಕೆ ಬಾಬುಗಳು ಬಂದರು.  ಎಲ್ಲರದ್ದೂ ಅದೇ ಬಾಡಿ ಲಾಂಗ್ವೇಜ್, ಅದೇ ಹುಚ್ಚಾಟ. ಹಾಡುಗಳು ದೇವಸ್ಥಾನದಿಂದ  ಸಿಂಗಾಪುರ್, ಸ್ವಿಜರ್ಲೆಂಡಿನ ತಾಣಗಳಿಗೆ ಶಿಫ್ಟ್ ಆಗಿವೆ. ಶ್ರೀದೇವಿ ಜಾಗದಲ್ಲಿ ತೃಷಾ ಬಂದಿದ್ದಾಳೆ. ಜನ ಹುಚ್ಚೆದ್ದು ನೋಡುತ್ತಿದ್ದಾರೆ. ಚಿರಂಜೀವಿ ಇನ್ನೇನು ನಿವೃತ್ತರಾದರು, ಕನ್ನಡ ಚಿತ್ರಗಳು ಕೊಂಚ ಮಟ್ಟಿಗೆ ಉಸಿರಾಡಬಹುದು ಅಂದುಕೊಳ್ಳುವ ಹೊತ್ತಲ್ಲೇ ಅವರ ತಮ್ಮನೂ, ಮಗನೂ ರಂಗಪ್ರವೇಶ ಮಾಡಿದರು. ಇನ್ನೊಂದೆಡೆ ಮಹೇಶ್ ಬಾಬುವಂಥಾ ಸುಂದರಾಂಗ ಕನ್ನಡದ ಪಡ್ಡೆಗಳನ್ನು ಅಪೋಷನ ತೆಗೆದುಕೊಂಡ. ಮುಂಬೈನಿಂದ ಸಿಡಿಲತೊಡೆಯ ಸುಂದರಿಯರು ಬಂದು ಐಟಂಗಳಾಗಿ ಕಂಗೊಳಿಸಿದರು. ಸಿಂಗಾಪುರ, ಆಸ್ಟ್ರೇಲಿಯಾ, ಬ್ಯಾಂಕಾಕುಗಳೆಲ್ಲಾ ಮೆಜೆಸ್ಟಿಕ್ಕಿನ ಥಿಯೇಟರೊಳಗೆ ಬಂದು ಕುಳಿತವು.  ಕನ್ನಡ ಚಿತ್ರಗಳ ಆಕ್ರಂದನ ಯಾರಿಗೂ ಕೇಳಿಸಲೇ ಇಲ್ಲ.

ಇಪ್ಪತ್ತು ವರ್ಷದ ಹಿಂದೆ ಬೆಂಗಳೂರಿನ ಥಿಯೇಟರುಗಳು ಭಾಷಾವಾರು ವಿಭಾಗವಾಗಿದ್ದವು. ಅಲಸೂರಿನ ಲಕ್ಷ್ಮಿ, ಅಜಂತಾ, ಶ್ರೀ, ಬ್ರಿಗೇಡ್ ರಸ್ತೆಯ ನ್ಯೂ ಆಪೇರಾ, ಟೌನ್ ಹಾಲ್ ಸಮೀಪವಿದ್ದ ನ್ಯೂ ಸಿಟಿ, ಶಿವಾಜಿ, ಶೇಷಾದ್ರಿಪುರದ ಸ್ವಸ್ತಿಕ್, ಸೆಂಟ್ರಲ್ ಚಿತ್ರಮಂದಿರಗಳು ತಮಿಳಿಗೆ ಮೀಸಲಾಗಿದ್ದವು. ಕೆಂಪೇಗೌಡ ರಸ್ತೆಯಲ್ಲಿರುವ ಮೂವಿಲ್ಯಾಂಡ್, ಸ್ಟೇಟ್ಸ್, ಮಿನರ್ವ, ಪಲ್ಲವಿ ಚಿತ್ರಮಂದಿಗಳು ತೆಲುಗಿಗೆ. ಆಮೇಲೆ ಕಪಾಲಿ, ಅಲಂಕಾರ್, ಕಲ್ಪನ, ತ್ರಿವೇಣಿ, ಸಂತೋಷ್, ನರ್ತಕಿ ಚಿತ್ರಮಂದಿರಗಳು ನಿರ್ಮಾಣವಾಗಿ ಕನ್ನಡಕ್ಕೊಂದಿಷ್ಟು ಜಾಗ ಸಿಗುವಂತಾಯಿತು. ಈಗ ಈ ಪೈಕಿ ಕೆಲವು ಚಿತ್ರಮಂದಿರಗಳು ಕಣ್ಮರೆಯಾಗಿವೆ, ಮಲ್ಟಿಪ್ಲೆಕ್ಸ್ ಥಿಯೇಟರುಗಳು ಬಂದಿವೆ. ಅಲ್ಲೂ ತೆಲುಗು, ತಮಿಳು, ಹಿಂದಿ ಚಿತ್ರಗಳದ್ದೇ ಕಾರುಬಾರು.

celebrity cricket

ಕನ್ನಡಿಗರಿಗೆ ತೆಲುಗು ಮಂದಿಯನ್ನು ಕಂಡರೆ ಅದೇನೋ ವಿಶೇಷ ಪ್ರೀತಿ. ತಮಿಳು, ತೆಲುಗು, ಮಲೆಯಾಳಂ ಈ ಮೂರೂ ಚಿತ್ರಗಳನ್ನು ಒಂದೇ ತಟ್ಟೆಯಲ್ಲಿಟ್ಟರೆ ಕನ್ನಡಿಗ ಮೊದಲು ಎತ್ತಿಕೊಳ್ಳುವುದು ತೆಲುಗು ಚಿತ್ರವನ್ನೇ. ಕನ್ನಡ ಮತ್ತು ತೆಲುಗು ಭಾಷೆಯ ಲಿಪಿಗಳಿಗೆ ಸಾಮ್ಯವಿರುವದಷ್ಟೇ ಇದಕ್ಕೆ ಕಾರಣವಲ್ಲ. ಇವರಡೂ ರಾಜ್ಯಗಳ ನಡುವಿರುವ ಕೊಡುಕೊಳ್ಳುವ ವ್ಯವಹಾರವೂ ಕಾರಣ. ಕರ್ನಾಟಕ ಸರ್ಕಾರದಲ್ಲಿ ರೆಡ್ಡಿಗಳು, ನಾಯ್ಡುಗಳೂ ಮಂತ್ರಿಗಳಾಗುತ್ತಾರೆ. ವೆಂಕಯ್ಯ ನಾಯ್ಡು ಅವರು ಇಲ್ಲಿಂದಲೇ ರಾಜ್ಯಸಭೆಗೆ ಆಯ್ಕೆಯಾಗುತ್ತಾರೆ.  ವಿಧಾನಸಭೆ ಚುನಾವಣೆಗೆ ಆಂಧ್ರದಿಂದ ಚಿರಂಜೀವಿ, ಸಾಯಿಕುಮಾರ್ ಅವರಂಥಾ ಸ್ಟಾರುಗಳು ಬಂದು ಭಾಷಣ ಮಾಡಿ ಹೋಗುತ್ತಾರೆ.  ಆಂಧ್ರದಿಂದ ಗೋಣಿಚೀಲದಲ್ಲಿ ದುಡ್ಡು ತುಂಬಿಕೊಂಡು ಬರುವ ಶ್ರೀಮಂತರು ನಮ್ಮ ನೆಲವನ್ನು ಖರೀದಿಸಿ ಇಲ್ಲೇ ಠಿಕಾಣಿ ಹೂಡುತ್ತಾರೆ. ಅವರು, ಅವರ ಸಂಸಾರ ಮತ್ತು ಹಿಂಬಾಲಕರು ನೋಡುವುದು ತೆಲುಗು ಚಿತ್ರಗಳನ್ನೇ. ಚರಿತ್ರೆಯ ಪುಟಗಳನ್ನು ತೆರೆದರೆ 500 ವರ್ಷಗಳ ಹಿಂದೆ ಕೃಷ್ಣದೇವರಾಯನ ಆಳ್ವಿಕೆಯಲ್ಲಿ ಕರ್ನಾಟಕ ಮತ್ತು ಆಂಧ್ರಪ್ರದೇಶ ಎರಡೂ ಒಂದೇ ಆಗಿದ್ದವು ಅನ್ನುವ ಮಾಹಿತಿ ಸಿಗುತ್ತದೆ.  ಇಂದಿಗೂ ಕರ್ನಾಟಕದ ಹಲವಾರು ಮನೆಗಳ ಮಾತೃಭಾಷೆ ತೆಲುಗು, ವ್ಯಾವಹಾರಿಕ ಭಾಷೆ ಮಾತ್ರ ಕನ್ನಡ. ನಮ್ಮಲೋಕಲ್ ನಕ್ಸಲೈಟುಗಳಿಗೂ ತರಬೇತಿ ನೀಡುವುದಕ್ಕೆ ಆಂಧ್ರದಿಂದ ಬಂದಿರುವ ಕಾಮ್ರೇಡುಗಳೇ ಬೇಕು.

ಬೆಂಗಳೂರಲ್ಲಿ ತೆಲುಗು ಹವಾ ಯಾವ ಮಟ್ಟಿಗಿದೆಯೆಂದರೆ, ಚಿರಂಜೀವಿ, ಪವನ್ ಕಲ್ಯಾಣ್, ಅಲ್ಲೂ ಅರ್ಜುನ್, ಜ್ಯೂನಿಯರ್ ಎನ್ಟಿಆರ್ ಥರದ ಸ್ಟಾರ್ ಗಳ ಚಿತ್ರಗಳು ಬಿಡುಗಡೆಯಾದಾಗ ಅವರ ಕಟೌಟ್ ಗಳಿಗೆ ಕ್ಷೀರಾಭಿಷೇಕ ನಡೆಯುತ್ತದೆ. ಅವರ ಹುಟ್ಟುಹಬ್ಬದಂದು ಬೆಂಗಳೂರಲ್ಲಿ ರಕ್ತದಾನ ಕಾರ್ಯಕ್ರಮ ನಡೆಯುತ್ತದೆ. ಚಿರಂಜೀವಿಯಿಂದ ಹಿಡಿದು ಮಹೇಶ್ ಬಾಬು ತನಕ ಎಲ್ಲಾ ಮುಂಚೂಣಿಯ ನಟರಿಗೂ ಇಲ್ಲಿ ಅಭಿಮಾನ ಸಂಘಗಳಿವೆ. ಒಬ್ಬ ಸ್ಟಾರ್ ನಟಿಸಿರುವ ತೆಲುಗು ಚಿತ್ರದ ಕರ್ನಾಟಕದ ಬಿಡುಗಡೆಯ ಹಕ್ಕು ಕಡಿಮೆಯೆಂದರೂ ಮೂರು ಕೋಟಿಗೆ ಮಾರಾಟವಾಗುತ್ತದೆ. ವಿಚಿತ್ರವೆಂದರೆ ತಮಿಳು ಚಿತ್ರಗಳ ವಿರುದ್ಧ ಗುರ್ ಅನ್ನುವ ಹೋರಾಟಗಾರರು  ತೆಲುಗು ಚಿತ್ರಗಳ ಬಗ್ಗೆ ಸಾಫ್ಟ್ ಆಗಿ ಮಾತಾಡುತ್ತಾರೆ. ಅಷ್ಟೇಕೆ, ಕೆಲವು ತೆಲುಗು ಚಿತ್ರಗಳ ಕೆಸೆಟ್ ಬಿಡುಗಡೆ ಸಮಾರಂಭವೂ ಬೆಂಗಳೂರಲ್ಲಿ ನಡೆಯುತ್ತದೆ. ಅದರಲ್ಲಿ ಕನ್ನಡದ ದೊಡ್ಡ ನಟರು ಪಾಲ್ಗೊಳ್ಳುತ್ತಾರೆ. ಮಗಧೀರ ಚಿತ್ರ 50 ದಿನ ಪೂರೈಸಿದ್ದಕ್ಕೆ ಬೆಂಗಳೂರಲ್ಲೇ ಒಂದು ಸಮಾಂಭ ನಡೆದಿತ್ತು.  ಆಗ ಸಚಿವರಾಗಿದ್ದ ಶಂಕರಮೂರ್ತಿಗಳು ಅದರಲ್ಲಿ ಭಾಗವಹಿಸಿದ್ದರು.ಹೊಸ ತೆಲುಗು ಚಿತ್ರವೊಂದು ಬಿಡುಗಡೆಯಾಗುವ  ಮುಂಚೆಯೇ ಅದರ ರೀಮೇಕು ಹಕ್ಕುಗಳು ವಿಪರೀತ ಬೆಲೆಗೆ ಕನ್ನಡಕ್ಕೆ ಮಾರಾಟವಾಗುತ್ತದೆ. ಕೆಲವೊಮ್ಮೆ ಅಲ್ಲಿನ ನಿರ್ದೇಶಕರೇ ಇಲ್ಲಿಗೆ ಬಂದು ಆ ರೀಮೇಕನ್ನು ನಿರ್ದೇಶಿಸುತ್ತಾರೆ.

ರಾಜ್ಯೋತ್ಸವದ ಆ ಶುಭಸಂದರ್ಭದಲ್ಲಿ ಪವನ್ ಕಲ್ಯಾಣ್ ನಟಿಸಿದ ‘ಅಟ್ಟರಿಂಟಿಕಿ ದರೇದಿ’ಎಂಬ ತೆಲುಗು ಚಿತ್ರ ಸೂಪರ್ ಹಿಟ್ ಆಗುತ್ತದೆ. ಋತಿಕ್ ರೋಷನ್ ನಟಿಸಿದ ಕ್ರಿಶ್-3,  ಅಜಿತ್ ನಟಿಸಿದ ಆರಂಭಂ ಚಿತ್ರಗಳ ಪೈಪೋಟಿಗೆ ಕ್ಯಾರೇ ಮಾಡದ ‘ರಾಜಾಹುಲಿ’ಚಿತ್ರಕ್ಕೆ ಪವನ್ ಕಲ್ಯಾಣೇ ತಲೆನೋವು.  ಅದು ತೆಲುಗು ಪವರ್. ಫಿಲಂ ಚೇಂಬರ್ ಕೂಡಾ ಈ ತೆಲುಗು ಆಕ್ರಮಣವನ್ನು ತಡೆಯುವ ಸ್ಥಿತಿಯಲ್ಲಿಲ್ಲ. ಸಿಸಿಐ (ಭಾರತೀಯ ಸ್ಪರ್ಧಾತ್ಮಕ ಆಯೋಗ) ನೀಡಿರುವ ತೀರ್ಪಿನ ಪ್ರಕಾರ ಯಾವುದೇ ರಾಜ್ಯದಲ್ಲಿ ಯಾವುದೇ ಭಾಷೆಯ ಸಿನಿಮಾ ಯಾವಾಗ ಬೇಕಾದರೂ ರಿಲೀಸ್ ಆಗಬಹುದು. ಹಾಗಾಗಿ ಮಗಧೀರ 50ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತದೆ. ಅದರ ಆಟಾಟೋಪದ ಮುಂದೆ ಮಳೆ ಬರಲಿ ಮಂಜು ಇರಲಿ ಚಿತ್ರ ಮಂಕಾಗುತ್ತದೆ. ಅಷ್ಚೇಕೆ, ಪರಾರಿ, ಸತ್ಯ ಇನ್ ಲವ್ ಚಿತ್ರಗಳಲ್ಲಿ ಕನ್ನಡಕ್ಕಿಂತ ತೆಲುಗು ಸಂಭಾಷಣೆಯೇ ಜಾಸ್ತಿ ಇದೆ. ಉಪೇಂದ್ರ ಅಭಿನಯದ ಬುದ್ದಿವಂತ ಚಿತ್ರದ ಒಂದು ಹಾಡು ಪೂರ್ತಿಯಾಗಿ ತೆಲುಗು ಭಾಷೆಯಲ್ಲಿದೆ.

ಚಿಂತಾಮಣಿ, ಕೋಲಾರ, ಬಳ್ಳಾರಿ ಮೊದಲಾದ ಗಡಿನಾಡ ಜಿಲ್ಲೆಗಳ ಜನರು ಅನಾದಿಕಾಲದಿಂದಲೂ ತೆಲುಗು ಚಿತ್ರಗಳ ಭಕ್ತರೇ. ಮಂಗಳೂರು, ಮುಂಬೈ ಕರ್ನಾಟಕದಲ್ಲಿ ಹಿಂದಿ ಚಿತ್ರಗಳದ್ದೇ ದರ್ಬಾರು. ಬೆಂಗಳೂರಲ್ಲಿ ತೆಲುಗು, ತಮಿಳು, ಹಿಂದಿ, ಇಂಗ್ಲಿಷ್ ಚಿತ್ರಗಳ ನಂತರದ ಸ್ಥಾನ ಕನ್ನಡ ಚಿತ್ರಕ್ಕೆ.  ಎಂಬಲ್ಲಿಗೆ ಹಳೇಮೈಸೂರು, ಮಂಡ್ಯ, ದಾವಣಗೆರೆಯಲ್ಲಷ್ಟೇ ಕನ್ನಡ  ಚಿತ್ರಗಳನ್ನು ನೋಡುವರು ಉಳಿದುಕೊಂಡಿದ್ದಾರೆ.  ಹೀಗೆ ಕನ್ನಡ ಪ್ರೇಕ್ಷಕರು ಅಲ್ಪಸಂಖ್ಯಾತರಾಗಿರುವುದರಿಂದ ಸಿದ್ದರಾಮಯ್ಯ ಅವರು ಶಾದಿಭಾಗ್ಯದ ಥರದ ಯಾವುದಾದರೂ ಯೋಜನೆಯನ್ನು ಇವರಿಗೋಸ್ಕರ ಘೋಷಿಸಿದರೆ ಚೆನ್ನಾಗಿರುತ್ತದೆ.

telugu movie kissing

ತೆಲುಗು ಚಿತ್ರರಂಗದ ಮಾರುಕಟ್ಟೆ ದೊಡ್ಡದು. ತೆಲುಗಿನವರಿಗೆ ಸಿನಿಮಾ ಅನ್ನುವುದು ಅನ್ನದಷ್ಟೇ ಅನಿವಾರ್ಯ, ತೆಲುಗು ಜನ ಪರದೇಶಗಳಲ್ಲೂ ನೆಲೆಸಿರುವುದರಿಂದ ಅಲ್ಲೂ ತೆಲುಗು ಚಿತ್ರಗಳಿಗೆ ಮಾರುಕಟ್ಟೆ ಇದೆ. ಇವೆಲ್ಲ ಕಾರಣಗಳಿಂದ ತೆಲುಗಿನಲ್ಲಿ ದೊಡ್ಡ ಬಜೆಟ್ಟು ಚಿತ್ರಗಳ ನಿರ್ಮಾಣ ರಿಸ್ಕಿ ಅನಿಸುವುದಿಲ್ಲ. ಆದರೆ ಗುಣಮಟ್ಟದ ಮಾತು ಬಂದಾಗ ತಮಿಳು ಚಿತ್ರಗಳು ತೆಲುಗು ಚಿತ್ರಗಳನ್ನು ಸಲೀಸಾಗಿ ಹಿಂದಿಕ್ಕುತ್ತವೆ. ತಮಿಳು ಪ್ರೇಕ್ಷಕರಲ್ಲಿ ಅನಕ್ಷರಸ್ತರೇ ತುಂಬಿಕೊಂಡಿದ್ದರೂ ಹೊಸಪ್ರಯೋಗಗಳನ್ನು ಅವರು ಒಪ್ಪಿಕೊಳ್ಳುವ ರೀತಿ ನಮ್ಮನ್ನು ಚಕಿತಗೊಳಿಸುತ್ತದೆ. ಹಾಗಿದ್ದರೂ ಕಮಲ್, ರಜನಿಯಂಥಾ ಹಳಬರ ಹೊರತಾಗಿ ಮಿಕ್ಕ ತಮಿಳು ನಟರನ್ನು ಬೆಂಗಳೂರಿನ ಕನ್ನಡಿಗರು ಅಷ್ಟಾಗಿ ಹಚ್ಚಿಕೊಂಡಿಲ್ಲ. ನ್ಯೂಸ್ ಚಾನೆಲ್ಲುಗಳ ಪ್ರೈಮ್ ಟೈಮಲ್ಲಿ ಪ್ರಸಾರವಾಗುವ ತೆಲುಗು ಸಿನಿಮಾ ಆಧಾರಿತ ಕಾರ್ಯಕ್ರಮಗಳ ಯಶಸ್ಸೇ ಈ ಮಾತಿಗೆ ಸಾಕ್ಷಿ. ಅವುಗಳಿಗೆ ಸಿಗುವ ರೇಟಿಂಗ್ ನ ಅರ್ಧದಷ್ಟು ಕೂಡಾ ಕನ್ನಡ ಚಿತ್ರಗಳಿಗೆ ಸಿಗುವುದಿಲ್ಲ.

ನಾಯಕನನ್ನು ದೇವಮಾನವಂತೆ ತೋರಿಸುವ, ನಾಯಕಿಯರನ್ನು ವಲ್ಗರ್ ಆಗಿ ಬಿಂಬಿಸುವ, ನೆತ್ತರಿನ ಓಕುಳಿಯನ್ನೇ ಹರಿಸುವ, ತೆಲುಗು ಚಿತ್ರಗಳು ಕನ್ನಡದ ನೆಲದಲ್ಲಿ ಗೆಲ್ಲುವುದು ಅಂಥಾ ಒಳ್ಳೆಯ ಬೆಳವಣಿಗೆಯೇನಲ್ಲ. ಆದರೆ ತೆಲುಗು ಸಿನಿಮಾ ನೋಡುವುದು  ಒಂದು ವ್ಯಾಮೋಹದಂತೆ, ಚಟದಂತೆ ನಮ್ಮವರನ್ನು ಆವರಿಸಿರುವುದರಿಂದ ನಾವೇನೂ ಮಾಡಲಾಗದ ಅಸಹಾಯಕ ಸ್ಥಿತಿಯನ್ನು ತಲುಪಿದ್ದೇವೆ. ಈಗ ಭಟ್ಚರು, ಸೂರಿ, ಶಶಾಂಕ್, ಒಡೆಯರ್, ಮೊದಲಾದವರ ಪಡೆಯೇ ಕನ್ನಡವನ್ನು ಕಾಪಾಡಬೇಕು.

Also See

Uma Column 9 - ಹಳ್ಳಿ ಹುಡುಗನನ್ನು ಕೊಂದವರ್ಯಾರು?

Uma Column 8 - ಶಂಕರ ನಾಗಮಂಡಲದಲ್ಲಿ ಒಂದು ಸುತ್ತು..

Uma Column 7 - ಪ್ರಶಸ್ತಿಗಳು ಮಾರಾಟಕ್ಕಿವೆ!

Uma Column 6 - ಹಾಯ್ ಕನ್ನಡ ತಾಯ್!

Uma Column 5 - ನನ್ನ ಭಯ ಮತ್ತು ಅಭಯನ ಜಯ

Uma Column 4 - ಭಟ್ರ ಕ್ವಾರ್ಟರ್ರು ಎಂಬ ಸೀರಿಯಸ್ ಮ್ಯಾಟರ್ರು

Uma Column 3 - ಕಲ್ಲು ಕೊರಗುವ ಸಮಯ

Uma Column 2 - ಮುನಿ ಮತ್ತು MONEY

Uma Column 1 - ಜಗತ್ತಿನ ಕೂಸು ಮತ್ತು ಕನ್ನಡದ ಮನಸ್ಸು

ಸಿನಿಮಾ ಪತ್ರಿಕೋದ್ಯಮದಲ್ಲಿ ಉದಯ್ ನನ್ನ ಗುರು - ಜೋಗಿ

Udaya Marakini Column In Chitraloka

Pls Note -

The views expressed in this column are those of its author and Chitraloka or its publishers do not claim to endorse it. You can express your opinion to his e-mail - This email address is being protected from spambots. You need JavaScript enabled to view it.