ಹಿರಿಯ ನಿರ್ದೇಶಕ ರಾಜೇಂದ್ರಬಾಬು ಮತ್ತು ‘ಹಳ್ಳಿಹೈದ ಪ್ಯಾಟೇಗ್ ಬಂದ’ಕಾರ್ಯಕ್ರಮದಿಂದ ಜನಪ್ರಿಯನಾದ ರಾಜೇಶ್, ಇವರಿಬ್ಬರೂ ಮೊನ್ನೆ ಭಾನುವಾರ ಒಂದೆರಡು ಗಂಟೆಗಳ ಅಂತರದಲ್ಲಿ ತೀರಿಕೊಂಡರು. ವಿಪರ್ಯಾಸವೆಂದರೆ ಟೀವಿ ಚಾನೆಲ್ಲುಗಳಲ್ಲಿ ಮತ್ತು ಫೇಸ್ ಬುಕ್ ನಂಥಾ ಸಾಮಾಜಿಕ ತಾಣಗಳಲ್ಲಿ ಅತಿ ಹೆಚ್ಚು ಚರ್ಚೆಗೆ ಒಳಗಾಗಿದ್ದು ರಾಜೇಶ್ ಸಾವಿನ ಸುದ್ದಿ. ಬಾಬು ಸಾವು ಒಂದು ಮಾಮೂಲು ನಿಧನವಾರ್ತೆಯ ರೀತಿಯಲ್ಲೇ ಪ್ರಸಾರವಾಯಿತು. ಆದರೆ ರಾಜೇಶ್ ಸಾವಿಗೆ ಒಂದು ರೋಚಕತೆ ತಗಲಿಕೊಂಡು ವೀಕ್ಷಕರೂ ಅದನ್ನು ತ್ಚುತ್ಚು ಅನ್ನುತ್ತಲೇ ಕಣ್ಣು ಕಿವಿಯರಳಿಸಿ ಅನುಭವಿಸುವ ಹಾಗಾಯಿತು. ಚಾನೆಲ್ಲುಗಳಲ್ಲಿ ಸಾವಿನ ಸುದ್ದಿಯನ್ನೂ ಜನಪ್ರಿಯತೆಯ ಮಾನದಂಡದಲ್ಲೇ ಲೆಕ್ಕ ಹಾಕಲಾಗುತ್ತದೆ.
ರಾಜೇಶ್ ಆತ್ಮಹತ್ಯೆ ಮಾಡಿಕೊಂಡಿರುವುದರಿಂದ, ಟೀವಿ ಭಾಷೆಯಲ್ಲಿ ಹೇಳುವುದಾದರೆ ‘ಎಲ್ಲೋ ಒಂದು ಕಡೆ’ಯಾಕೆ ಅನ್ನುವ ಪ್ರಶ್ನೆ ಹುಟ್ಟಿಕೊಳ್ಳಲೇಬೇಕು. ರಾಜೇಶ್ ಎಂಬ ಜೇನುಕುರುಬರ ಹುಡುಗ ಕಾಡಿನಿಂದ ನಾಡಿಗೆ ಬಂದು ರಿಯಾಲಿಟಿ ಶೋನಲ್ಲಿ ನಟಿಸಿದ್ದು, ಏಕಾಏಕಿ ಜನಪ್ರಿಯನಾಗಿದ್ದು, ಅನಂತರ ಒಂದೆರಡು ಸಿನಿಮಾಗಳಿಗೆ ಬುಕ್ ಆಗಿದ್ದು, ಆ ಸಿನಿಮಾಗಳು ಬರ್ಕತ್ತಾಗದೇ ಇದ್ದದ್ದು, ಇದರಿಂದಾಗಿ ರಾಜೇಶ್ ಮಾನಸಿಕವಾಗಿ ಆಸ್ವಸ್ಥನಾಗಿದ್ದು, ಕೊನೆಗೊಂದು ದಿನ....ಇವೆಲ್ಲವೂ ಫ್ಲಾಷ್ ಬ್ಯಾಕಲ್ಲಿ ಬಂದುಹೋಗಲೇಬೇಕು.
ಫೇಸ್ ಬುಕ್ಕಲ್ಲಿ ಬಂದಿರುವ ಬಹುಪಾಲು ಕಾಮೆಂಟುಗಳು, ರಾಜೇಶನ ಸಾವಿಗೆ ‘ಹಳ್ಳಿಹೈದ ಪ್ಯಾಟೇಗ್ ಬಂದ’ರಿಯಾಲಿಟೀ ಶೋವೇ ಕಾರಣ, ಹಾಗಾಗಿ ಅದನ್ನು ಪ್ರಸಾರ ಮಾಡಿದ ಚಾನೆಲ್ಲಿಗೆ ಒಂದು ಗತಿ ಕಾಣಿಸಲೇಬೇಕು ಅನ್ನುವ ಥರದಲ್ಲೇ ಇವೆ. ಕೆಲವೊಂದು ಸ್ಯಾಂಪಲ್ಲುಗಳು ಹೀಗಿವೆಃ
‘ರಿಯಾಲಿಟಿ ಶೋಗಳು, ಎಲ್ಲೋ ಕಾಡುಮೇಡುಗಳಲ್ಲಿ ಸ್ವಚ್ಚಂದವಾಗಿ ಓಡಾಡಿಕೊಂಡು, ನೆಮ್ಮದಿಯ ಜೀವನ ನಡೆಸಿಕೊಂಡಿದ್ದ ಸೋಲಿಗ, ಜೇನು ಕುರುಬ, ಸಿದ್ದಿ, ದಲಿತ, ಮಾವುತರಂತ ಅರಣ್ಯವಾಸಿ ಹುಡುಗರನ್ನು ಕರೆದುಕೊಂಡು, ಅವರಿಗೆ ಕೊಡಬಾರದ ಕಾಟ ಕೊಟ್ಟು ಜನರಿಗೆ ವಿಕೃತ ಮನರಂಜನೆಯನ್ನು ನೀಡುತ್ತಿವೆ.
ಆ ಹುಡುಗರನ್ನು ಬೆಂಗಳೂರಿಗೆ ಕರೆತಂದು ಪ್ರಾಣಿಗಳಿಗಿಂತ ಹೀನವಾಗಿ ಬಳಸಿಕೊಳ್ಳುತ್ತಿದ್ದಾರೆ. ತಮ್ಮ ಮೂಲ ಪರಿಸರವನ್ನು ಬಿಟ್ಟು ಬೆಂಗಳೂರಿಗೆ ಬಂದಿರುವ ಈ ಹುಡುಗರನ್ನು ಬ್ಯೂಟಿ ಪಾರ್ಲರುಗಳಿಗೆ ಕರೆದೊಯ್ದು ಅವರ ಮೈಮೇಲಿನ ಕೂದಲುಗಳನ್ನು ಕೀಳಿಸಿ, ಫೇಷಿಯಲ್ ಮಾಡಿಸಿ, ತಲೆಗೂದಲಿಗೆ ಬಣ್ಣ ಬಳಿಯಲಾಗುತ್ತದೆ….’
ಟೀವಿ ಕಲಾವಿದ ನಾಗೇಂದ್ರ ಶಾ ಬರೆಯುತ್ತಾರೆಃ
‘..ಹಿಂದೆ ರಾಜ್‍ಕುಮಾರ್ ಒಂದು ಚಿತ್ರದಲ್ಲಿ ಹೆಂಡದಂಗಡಿಯನ್ನು ಧ್ವಂಸ ಮಾಡಿದಾಗ. ಅನೇಕ ಊರುಗಳಲ್ಲಿ ಹೆಂಡದಂಗಡಿಗಳನ್ನು ಕೆಡವಿದರು. ಬಂಗಾರದ ಮನುಷ್ಯ ನೋಡಿದ ಮೇಲೆ ಅನೇಕ ಪದವೀಧರರು ಕೃಷಿಕರಾದರು. ಮಾಯಾಮೃಗ ನೋಡಿದ ಶಿವಮೊಗ್ಗದ ಹೆಣ್ಣು ಮಗಳೊಬ್ಬಳು ಪೋಲೀಸರ ಬಗ್ಗೆ ಇದ್ದ ಭೀತಿ ತೊರೆದು ಇನ್ಸ್ ಪೆಕ್ಟ್ ರ್ ನ ಮದುವೆಯಾದರು.ಲಕ್ಷ್ಮಿಯವರು ನಡೆಸಿಕೊಡುತ್ತಿದ್ದ ಬದುಕು ಜಟಕಾ ಬಂಡಿ ಕಾರ್ಯಕ್ರಮ ವೀಕ್ಷಿಸಿ ಎಷ್ಟೋ ತಾಯಂದಿರು ಬದಲಾದ ಅನೇಕ ಉದಾಹರಣೆಗಳಿವೆ. ಇಂಥ ವಾತಾವರಣಗಳನ್ನು ಸೃಷ್ಟಿಸಬಾರದೇಕೆ...? ಹಾಗೆ ಉಪೇಂದ್ರ, ಪ್ರೇಮ್‍ನ ಸಿನೆಮಗಳನ್ನು ನೋಡಿ ಮಚ್ಚು ಹಿಡಿದವರು ಇದ್ದಾರೆ. ಇದು ಬೇಕಾ....?’
ಜಯಕುಮಾರ್ ಎಂಬವರು ಟೀವಿ ವಾಹಿನಿಗಳ ಪರವಾಗಿ ವಾದ ಮಂಡಿಸುತ್ತಾರೆಃ
‘ರಾಜೇಶ ಮಾಡಿಕೊಂಡ ಎಡವಟ್ಟುಗಳಿಗೆ ಮತ್ತು ಅನಾಹುತಗಳಿಗೆ ವಾಹಿನಿಯೊಂದನ್ನು ದೂರುವುದು ಸರಿಯಲ್ಲ. ರಾಜೇಶ ಪ್ಯಾಟೆ ಹೈದ ಹಳ್ಳಿಗೆ ಬಂದ ರಿಯಾಲಿಟಿ ಶೋ ಗೆ ಬಂದ ತನ್ನ ಅಮಾಯಕತೆ ಮತ್ತು ಮುಗ್ದತೆಯಿಂದ ಜನಮನ ಗೆದ್ದ. ಇವತ್ತು ಈ ಮಟ್ಟಿಗಿನ ಅನುಕಂಪ ಗಳಿಸಿಕೊಳ್ಳಲು ಆತನ ಪರವಾಗಿ ಸಾವಿರಾರು ಜನ ಹಳಹಳಿಕೆಯ ಮಾತನಾಡಲು ವಾಹಿನಿಯ ಶೋ ಕಾರಣ. ಸದರಿ ಶೋ ನ ಎಡವಟ್ಟುಗಳೇನೆ ಇದ್ದರೂ ಕಾಡಿನ ಮನುಷ್ಯನಿಗೆ ಹೊರ ಜಗತ್ತಿನ ಬದುಕನ್ನು ತೋರಿಸುವುದೇ ಆಗಿತ್ತು. ಈತನೊಂದಿಗೆ ಬಂದ ಇತರೆ ಕಾಡಿನ ಹುಡುಗರು ನಗರಕ್ಕೆ ಬಂದು ಹೋದರು ಸಹಾ ತಮ್ಮ ಕಾಡಿನ ಶಿಸ್ತನ್ನ ಬಲಿಗೊಡದೆ ಉಳಿದರು. ಆದರೆಸೆಲೆಬ್ರಿಟಿಯಾದ ರಾಜೇಶ ಕೈಗೆ ಹಣ ಸಿಗುತ್ತಲೇ ಮಂಗನ ಕೈಲಿ ಮಾಣಿಕ್ಯ ಸಿಕ್ಕಂತೆ ಆಡತೊಡಗಿದೆ, ಹೆತ್ತವರನ್ನೇ ಹಿಡಿದು ಬಡಿದ, ಕಟ್ಟಿಕೊಂಡ ಪತ್ನಿಯನ್ನು ಬಾಳಿಸದೇ ತವರಿಗೆ ಅಟ್ಟಿದ, ಅದ್ಯಾವುದೋ ಮಾನಸಿಕ ಕಾಯಿಲೆಗೆ ಬಿದ್ದು ಆಸ್ಪತ್ರೆಗೆ ದಾಖಲಾದ, ಸಿನಿಮಾಗಳಲ್ಲಿ ನಟಿಸಿದ, ಗಳಿಸಿದ ದುಡ್ಡನ್ನು ಕುಡಿದು ತಿಂದು ಮಜಾ ಉಡಾಯಿಸಿ ಹಾಳು ಗೆಡವಿದ. ಇದು ದಾರಿ ತಪ್ಪಿದ ಹುಡುಗನ ಹುಂಬತನದ ಮತ್ತು ಎಲ್ಲೆ ಮೀರಿದ ಅಸ್ವಸ್ಥ ಸ್ಥಿತಿ. ಈತನ ಎಲ್ಲಾ ಕೃತ್ಯಗಳನ್ನು ಅಮಾಯಕ ಎಂಬ ಹಣೆಪಟ್ಟಿ ಕೊಟ್ಟು ಪಾಪದ ಹುಡುಗ ಎಂಬಂತೆ ಬಿಂಬಿಸುತ್ತಾ ಅನುಕಂಪದ ಮಾತುಗಳನ್ನಾಡುವುದು ಸರಿಯೇ?ಸರಿಯಾದ ಮಾರ್ಗದರ್ಶನವಿಲ್ಲದೇ ಹಾದಿ ತಪ್ಪಿದ ರಾಜೇಶ ಅಂತ್ಯ ಕಂಡಿದ್ದಾನೆ’.
‘ಹಸಿರೆಲೆ’ಎಂಬ ಬ್ಲಾಗಲ್ಲಿ ರಾಜೇಶ್ ಅಸ್ವಸ್ಥನಾಗಿ ಆಸ್ಪತ್ರೆಗೆ ಸೇರಿದಾಗ ಪ್ರಕಟವಾದ ಲೇಖನದ ಆಯ್ದ ಭಾಗ ಹೀಗಿದೆಃ
“ಕೆ.ಆರ್. ಆಸ್ಪತ್ರೆಯ ವೈದ್ಯರಾದ ಸುಧೀರ್ ಅವರು ಟಿಎಸ್‌ಐಗೆ ನೀಡಿದ ಮಾಹಿತಿಯ ಪ್ರಕಾರ ರಾಜೇಶ್‌ಗೆ ’ಅಕ್ಯೂಟ್ ಮೇನಿಯಾ’ ಅಟ್ಯಾಕ್ ಅಗಿದೆ. ಇದೊಂದು ರೋಗವೇನಲ್ಲ. ಆದರೆ ಮನಸ್ಸಿನಲ್ಲಿ ಉಂಟಾದ ತೀವ್ರ ಮಾನಸಿಕ ತಳಮಳ, ಹೊಯ್ದಾಟಗಳು ಒಬ್ಬ ವ್ಯಕ್ತಿಗೆ ಈ ಮಾನಸಿಕ ಅಸ್ವಸ್ಥತೆಯ್ನನು ಉಂಟು ಮಾಡುತ್ತದೆ ಎನ್ನುತ್ತಾರವರು. ಕಾಡಿನ ಹಾಡಿಯಲ್ಲಿ ತನ್ನ ಗೆಣೆಕಾರರೊಂದಿಗೆ ಸ್ವಚ್ಛಂದವಾಗಿ ಆಡಿಕೊಂಡಿದ್ದ ಜೇನುಕುರುಬರ ಹುಡುಗನೊಬ್ಬನಿಗೆ ಇಂತಹ ಪರಿಸ್ಥಿತಿ ಬರಲು ಕಾರಣಗಳೇನು?
ರಿಯಾಲಿಟಿ ಶೋನಲ್ಲಿ ರಾಜೇಶ ಪ್ರಖ್ಯಾತನಾಗುತ್ತಿದ್ದಂತೆ ಜಂಗಲ್ ಜಾಕಿ’ ಸಿನಿಮಾದ ಚಿತ್ರೀಕರಣವೂ ಆರಂಭವಾಗಿತ್ತು. ಅದಾದ ನಂತರ ಹಾಡಿ ಸೇರಿಕೊಂಡ ರಾಜೇಶನ ತಲೆಯಲ್ಲಿ ನಿಂತರೂ, ಕುಂತರೂ, ಮಲಗಿದರೂ ಎದ್ದರೂ 'ಜಂಗಲ್ ಜಾಕಿ' ಸಿನಿಮಾದಲ್ಲಿ ತಾನು ಹೀರೋ ಆಗಿ ತೆರೆಯ ಮೇಲೆ ಅದ್ಭುತವಾಗಿ ಕಾಣಿಸಿಕೊಳ್ಳುವ ರಂಗುರಂಗಿನ ದೃಶ್ಯಗಳೇ. ಈ ನಡುವೆ ಬಳ್ಳೇಹಾಡಿಗೆ ಸಮೀಪದ ಅಂತರಸಂತೆಯ ಜಾತ್ರೆಯಲ್ಲಿ ತನ್ನದೇ ಜೇನುಕುರುಬ ಸಮುದಾಯದ ಹುಡುಗಿಯೊಬ್ಬಳು ರಾಜೇಶನ ಕಣ್ಣಿಗೆ ಬಿದ್ದಳು. ಅವಳು ಬೆಳ್ಳಗಿದ್ದ ಹುಡುಗಿ. ಹೇಗೂ ರಾಜೇಶನ ಪ್ಯಾಟೆ ಲೈಫು ಇಷ್ಟರಲ್ಲಾಗಲೇ ’ಸೌಂದರ್ಯ’ ಎಂದರೆ ನಾಡಿನ ಬಹುಸಂಖ್ಯಾತರ ಬಣ್ಣವಾದ ಕಪ್ಪು ಅಲ್ಲ, ಬೆಳ್ಳಗಿರುವುದು ಮಾತ್ರ ಎಂಬುದನ್ನು ತಿಳಿಸಿಕೊಟ್ಟಿತ್ತು. ಉಳಿದ ಜೇನುಕುರುಬ ಹುಡುಗಿಯರೆಲ್ಲ ಕಪ್ಪು ಇರುವಾಗ ಈ ಹುಡುಗಿ ಬೆಳ್ಳಗಿದ್ದದ್ದು ರಾಜೇಶನಿಗೆ ಆ ಹುಡುಗಿಯ ಮೇಲೆ ಮನಸ್ಸಾಗಿತ್ತು.
ಮದುವೆಯೂ ಆಯಿತು. ಆದರೆ ಹುಡುಗಿ ಬೆಳ್ಳಗಿದ್ದ ಮಾತ್ರಕ್ಕೆ ಪ್ಯಾಟೆ ಹುಡುಗಿಯರಂತೆ ಇರಲು ಸಾಧ್ಯವೇ? ರಿಯಾಲಿಟಿ ಶೋ ಮತ್ತು ಸಿನಿಮಾಗಳ ಹುಡುಗಿಯರು ’ಹುಡುಗಿಯರೆಂದರೆ ಹಿಂಗಿಂಗೆ ಇರಬೇಕು’ ಎಂದು ಹೇಳಿಕೊಟ್ಟಾಗಿತ್ತು. ಅದನ್ನೆಲ್ಲಾ ಈ ಹುಡುಗಿಯಿಂದ ನಿರೀಕ್ಷಿಸಲು ಹೇಗೆ ಸಾಧ್ಯ? ಪಾಪ ಆ ಹುಡುಗಿ ಕಾವ್ಯ ತೀರಾ ಮುಗ್ಧೆ. ರಾಜೇಶನ ಬದಲಾಗಿದ್ದ ಲೈಫ್‌ಸ್ಟೈಲ್‌ಗೆ ಹೊಂದಿಕೊಳ್ಳಲು ಆಕೆಗಾಗಲೇ ಇಲ್ಲ. ಹೀರೋ ರಾಜೇಶ. ಆಕೆಯೊಂದಿಗೆ ಹೊಂದಿಕೊಳ್ಳದೇ ಹುಡುಗಿಯನ್ನು ಒಂದೂವರೆ ತಿಂಗಳಲ್ಲೇ ಮನೆಗೆ ಕಳಿಸಿಬಿಟ್ಟ..
ಸಿನೆಮಾದವರು ಕೊಟ್ಟ ಹಣದಿಂದ ಪಲ್ಸಾರ್ ಬೈಕ್ ರಾಜೇಶನ ಗುಡಿಸಲು ನುಗ್ಗಿದೆ. ಈಗ ಅವನ ’ಅಭಿಮಾನಿಗಳೇ’ ಬೇರೆ. ಹೊಸ ಸೂಟು, ಬೂಟಿನ ರಾಜೇಶನಿಗೆ ಆ ಹಾಡಿಯ ತಲೆಗೆ ಎಣ್ಣೆ ಕಾಣದ, ದುಡಿಮೆ ಮಾಡುವ, ಕೂಲಿಕಾರ ಬಡವರು ’ಯಕಶ್ಚಿತ್’ ಎನಿಸಿದ್ದಾರೆ. ಇಷ್ಟೊತ್ತಿಗೆ ರಾಜೇಶ ಹಾಡಿಯ ಇತರರಂತೆ ಲೋಕಲ್ ಸಾರಾಯಿ ಕುಡಿಯುತ್ತಿರಲಿಲ್ಲ. ಬ್ರಾಂಡೆಡ್ ಕುಡುಕನಾಗಿದ್ದ! ಇನ್ನು ಸಿನಿಮಾದವರು ನೀಡಿದ ಐದು ಲಕ್ಷ ರೂಪಾಯಿಗಳಲ್ಲಿ ಒಂದು ಲಕ್ಷ ರೂಪಾಯಿಯನ್ನು ಅಮ್ಮನ ಹೆಸರಿಗೆ ಫಿಕ್ಸೆಡ್ ಮಾಡಿಸಿಡಲಾಗಿದೆ. ಉಳಿದ ಹಣವು ನೀರಿನಂತೆ ಖರ್ಚಾಗಿದೆ. ಅದು ಖಾಲಿಯಾದಾಗ ಕೊನೆಗೆ ತನ್ನ ಫಿಕ್ಸೆಡ್ ಹಣವನ್ನಾದರಿಸಿ ೭೫ ಸಾವಿರ ರೂಪಾಯಿ ಸಾಲವನ್ನೂ ತೆಗೆದುಕೊಂಡಿದ್ದಾನೆ.
ಒಂದೆಡೆ ಹದಗೆಟ್ಟ ಸಂಸಾರ, ಕಾಡಿನ ರಿಯಾಲಿಟಿಗೆ ಮತ್ತೆ ಒಗ್ಗಿಕೊಳ್ಳಲಾಗದ ’ರಿಯಾಲಿಟಿ ಶೋ ಕಲಿಸಿದ್ದ’ ಪ್ಯಾಟೆ ಲೈಫು, ಮತ್ತೊಂದೆಡೆ ತನ್ನ ಸಿನಿಮಾ ಬಿಡುಗಡೆಗೆ ಕಾಯುತ್ತಿರುವ ’ಅಭಿಮಾನಿಗಳು’. ದಿನಕಳೆದಂತೆಯೂ ರಾಜೇಶ ಸುತ್ತಲಿನ ಜನರಿಗೆ ಮುಖತೋರಿಸಲಾಗದ ಮಾನಸಿಕ ವಿಹ್ವಲತೆಗೊಳಗಾಗಿದ್ದಾನೆ. ದೂರದಿಂದ ಯಾರಾದರೂ ಕಂಡ ಕೂಡಲೇ ಕಾಡಿನ ಕಡೆ ಓಟ ಕೀಳತೊಡಗಿದ್ದಾನೆ. ಏಕೆಂದು ಅಮ್ಮ ಕೇಳಿದರೆ ’ಅಭಿಮಾನಿಗಳು’ ಸಿನಿಮಾದ ಬಗ್ಗೆ ಕೇಳುತ್ತಾರೆ. ಅದಕ್ಕೆ ಏನು ಹೇಳಲಿ? ಎಂಬ ಮರುಪ್ರಶ್ನೆ. ನಾಚಿಕೆ ಸ್ವಭಾವದ ಜೊತೆಗೇ ತೀವ್ರ ಮುಂಗೋಪಿತನವೂ ಆತನ ಸ್ವಭಾವದಲ್ಲಿದ್ದುರಿಂದ ರಾಜೇಶನ ಮಾನಸಿಕ ನಿಯಂತ್ರಣ ತಪ್ಪಿದ್ದಾನೆ. ಹುಚ್ಚನಂತೆ ವರ್ತಿಸುವುದು, ನಿಂತಲ್ಲಿ ನಿಲ್ಲದಂತಿರುವುದು, ಜೋರಾಗಿ ಕಿರುಚುವುದು ಇತ್ಯಾದಿ ಹೆಚ್ಚಾಗಿದೆ. ಮನೆಯವರೆಲ್ಲ ದೇವರ ಮೊರೆಹೋದರೂ ಉಪಯೋಗವಾಗಿಲ್ಲ.
೧೯೮೦ರಲ್ಲಿ ದಕ್ಷಿಣ ಆಫ್ರಿಕದ ಸಿನಿಮಾ ನಿರ್ದೇಶಕ ಜೇಮಿ ಉಯಿಸ್ ಎಂಬುವವರು ನಿರ್ದೇಶಿಸಿದ್ದ ’ದ ಗಾಡ್ಸ್ ಮಸ್ಟ್ ಬಿ ಕ್ರೇಝಿ’ ಸಿನಿಮಾದಲ್ಲಿ ಕಲಹರಿ ಮರುಭೂಮಿಯ ಬುಷ್‌ಮನ್ ಎಂಬ ಬುಡಕಟ್ಟು ಸಮುದಾಯವು ನಾಗರಿಕತೆಯೊಂದಿಗೆ ಎದುರುಗೊಳ್ಳುವ ಕತೆಯನ್ನು ಅದ್ಭುತವಾಗಿ ಚಿತ್ರ್ರಿಸಿದ್ದರು. ವಿಮಾನದಿಂದ ಕುಡಿದು ಎಸೆದ ಕೋಕೊಕೋಲಾ ಬಾಟಲಿಯೊಂದು ಬುಡಕಟ್ಟು ಜನರ ಹಾಡಿಗೆ ಬಂದು ಬಿದ್ದದ್ದೇ ಅವರ ನಡುವೆ ಇನ್ನಿಲ್ಲದ ಸ್ವಾರ್ಥ-ಹೊಡೆದಾಟ ಶುರುವಾಗಿಬಿಡುತ್ತದೆ. ತಮ್ಮ ನಡುವೆ ಕಲಹ ಸೃಷ್ಟಿಸಿದ ಅದು ಭೂತವೆಂದುಕೊಂಡು ಭೂಮಿಯ ಮತ್ತೊಂದು ತುದಿಯಲ್ಲಿ ಎಸೆದು ಬರಲು ಹೋಗುವ ಬುಡಕಟ್ಟು ಮನುಷ್ಯನೊಬ್ಬ ’ಆಧುನಿಕ’ಜಗತ್ತಿನೊಳಗೆ ಪಜೀತಿಗೆ ಸಿಕ್ಕಿಹಾಕಿಕೊಳ್ಳುವ ಕತೆ ಅದು. ಇದೇ ವೇಳೆಗೆ ಈ ಸಿನಿಮಾ ಬುಡಕಟ್ಟು ಜನರ ನಿಜವಾದ ’ನಾಗರಿಕ’ಬದುಕನ್ನು ಹಾಗೂ ಮಾನವೀಯತೆಯನ್ನೂ ಮನಮುಟ್ಟುವಂತೆ ಹೇಳಿತ್ತು. ನಮ್ಮ ನಾಗರಿಕ ಜಗತ್ತಿನ ಈ ಕಾಲದ ಐಲುಗಳಾದ ರಿಯಾಲಿಟಿ ಶೋಗಳು ಮತ್ತು ಹುಚ್ಚು ಭ್ರಮೆಗಳಲ್ಲಿ ಮುಳುಗಿಸುವ ಸಿನಿಮಾಗಳೂ, ಅವುಗಳನ್ನು ತಯಾರಿಸುವವರೂ, ನೋಡುವವರೂ ಎಲ್ಲಾ ಸೇರಿ ರಾಜೇಶನ ’ಜೇನು ಕುರುಬರ’ ಹಾಡಿಯಲ್ಲಿ ಸೃಷ್ಟಿಸಿರುವ ತಳಮಳ ಕೂಡ ಇದೇ ತೆರನಾದದ್ದು…”
ರಾಜೇಶ್ ಸಾವಿನ ಹಿನ್ನೆಲೆಯಲ್ಲಿ ಮತ್ತೆಮತ್ತೆ ಓದಬೇಕಾದ ಲೇಖವಿದು. ಒಬ್ಬ ಕಾಡು ಹುಡುಗನ ಮುಗ್ಧತೆ ನಾಶವಾಗುತ್ತಾ ಹೋಗುವ ಪ್ರಕ್ರಿಯೆ, ಅದರ ಜೊತೆಗೆ ಆತನ ಮನಸ್ಸು ಭ್ರಷ್ಟವಾಗುತ್ತಾ ಹೋಗುವ ಪರಿಯನ್ನು ಲೇಖಕರು ಅದ್ಭುತವಾಗಿ ಹೇಳುತ್ತಾ ಹೋಗುತ್ತಾರೆ. ಕಾಡಿನ ಜನರನ್ನು ಅಲ್ಲಿಂದ ಒಕ್ಕಲೆಬ್ಬಿಸಿ ನಾಡಿನಲ್ಲಿ ಅವರಿಗೆ ಪುನರ್ವಸತಿ ಮಾಡಿಕೊಡುವ ಸರ್ಕಾರದ ಯೋಜನೆ ಯಾಕೆ ವಿಫಲವಾಗುತ್ತದೆ ಅನ್ನುವ ಪ್ರಶ್ನೆಗೂ ಲೇಖನದಲ್ಲಿ ಉತ್ತರವಿದೆ. ಇನ್ನೊಂದೆಡೆ ರಿಯಾಲಿಟಿ ಶೋ ಎಂಬ ಭೂತ ಮಾಡುತ್ತಿರುವ ಅವಾಂತರಗಳ ಬಗ್ಗೆಯೂ ಇದು ಹೇಳುತ್ತದೆ. ಆದರೆ ಇದೇ ರಿಯಾಲಿಟಿ ಶೋವನ್ನು ಜನಪ್ರಿಯವಾಗಿಸಿದ ವೀಕ್ಷಕರು ಯಾರು?ನಾವೇ ಅಲ್ಲವೇ. ಹಾಗಾಗಿ ಅವನ ಸಾವಿಗೆ ನಾವೂ ಕಾರಣರಲ್ಲವೇ? ಕಾಡಿನಿಂದ ನಾಡಿಗೆ ನುಗ್ಗಿ ಬರುವ ಆನೆಯ ಪುಂಡಾಟವನ್ನು ನೋಡುವಷ್ಟೇ ಕುತೂಹಲದಿಂದ ಮತ್ತು ಆಸಕ್ತಿಯಿಂದ ನಾವು ರಾಜೇಶನ ತುಂಟತನಗಳನ್ನು ನೋಡಿದ್ದೇವೆ. ಆ ಹೊತ್ತಿಗೆ ಇದು ಸೃಷ್ಟಿಸಬಹುದಾದ ಅಪಾಯಗಳ ಅರಿವು ಯಾರಿಗೂ ಇರಲಿಲ್ಲ. ನಮ್ಮ ಪಾಲಿಗೆ ಕ್ರೌರ್ಯವೂ ಮನರಂಜನೆಯ ಒಂದು ಭಾಗ, ರಸ್ತೆಯಲ್ಲಿ ನಡೆಯುವ ಹೊಡೆದಾಟವನ್ನು ನಿಂತು ನೋಡುವಂತೆ, ನಾವು ಇಂಥಾ ರಿಯಾಲಿಟಿ ಶೋಗಳಲ್ಲಿರುವ ಕ್ರೌರ್ಯವನ್ನು ಆನಂದಿಸುವ ಸ್ಥಿತಿ ತಲುಪಿದ್ದಾಗಿದೆ. ಒಂದು ಭೀಬತ್ಸ ದೃಶ್ಯವನ್ನು ನೋಡಿದ ಮೇಲೆ, ಓಕೆ ವಾಟ್ ನೆಕ್ಟ್ಸ್ ಅಂತ ಕೇಳುವ ವರ್ತಮಾನದಲ್ಲಿ ನಾವಿದ್ದೇವೆ.
ರಿಯಲ್ ಶೋ ಬೇರೆಯೇ ಇದೆ. ರಾಜೇಶ್ ಎಂಬ ಹುಡುಗ,ಹಳ್ಳಿಗಾಡಿನಿಂದ ದಿನನಿತ್ಯ ಬೆಂಗಳೂರಿಗೆ ವಲಸೆ ಬಂದು, ತಬ್ಬಿಬ್ಬಾಗುವ ನಿಲ್ಲುವ ಸಾವಿರಾರು ಹುಡುಗರಿಗೆ ಈಗ ಸಂಕೇತವಾಗುತ್ತಾನೆ. ಆ ಪೈಕಿ ಕೆಲವರು ಬದಲಾಗುತ್ತಾರೆ, ಇನ್ನು ಕೆಲವರು ಹೊಸ ಪರಿಸರಕ್ಕೆ ಹೊಂದಿಕೊಳ್ಳಲಾಗದೇ, ವಾಪಸ್ಸು ಹೊರಟು ಹೋಗಲೂ ಆಗದೇ ತ್ರಿಶಂಕು ಸ್ಥಿತಿಯಲ್ಲೇ ಕಾಲ ತಳ್ಳುತ್ತಾರೆ. ಒಂದಿಷ್ಟು ಜನ ಉದ್ಧಾರವಾದರೂ ಆಗಾಗ ತವರೂರಿನ ಜಪ ಮಾಡುವುದನ್ನು ನಿಲ್ಲಿಸುವುದಿಲ್ಲ. ಆದರೆ ಬೆಂಗಳೂರೆಂಬ ಮಹಾನಗರಿಯ ವ್ಯಸನ ಅವರನ್ನು ವಾಪಸ್ ಹೋಗದಂತೆ ತಡೆಗಟ್ಟುತ್ತದೆ. ಅಭದ್ರತೆ ಮತ್ತು ಕಂಪರ್ಟ್ಸ್ – ಈ ಡೆಡ್ಲಿ ಕೋಕ್ಟೇಲ್ ಮುಂದೆ ಇನ್ನೇನೂ ಬೇಡ ಅನಿಸುವುದಕ್ಕೆ ಶುರುವಾಗುತ್ತದೆ. ಇದು ಪಕ್ಕಾ ರಾಜೇಶ್ ಸಿಂಡ್ರೋಮ್.
ರಾಜೇಶನನ್ನು ಕರೆತಂದ ಮಹಾನುಭಾವರು ಮೊನ್ನೆ ಚಾನೆಲ್ಲಲ್ಲಿ ‘ನಾವೆಲ್ಲಾ ತಪ್ಪು ಮಾಡಿದ್ದೇವೆ ಅಂತ ಅನಿಸುತ್ತಿದೆ’ಅಂದರು. ಆದರೆ ಒಂದು ಕ್ಷಮೆಯಿಂದ ತಪ್ಪೊಪ್ಪಿಗೆಯಿಂದ ವಸ್ತುಸ್ಥಿತಿ ಬದಲಾಗುವುದಿಲ್ಲ. ರಿಯಾಲಿಟಿ ಶೋಗಳು ನಿಲ್ಲುವುದೂ ಇಲ್ಲ. ಇನ್ನೊಂದಿಷ್ಟು ರಾಜೇಶರು ಕ್ಯೂನಲ್ಲಿ ನಿಂತಿದ್ದಾರೆ. ವೀಕ್ಷಕರಿಂದ ಮೊದಲು ಚಪ್ಪಾಳೆ, ಆಮೇಲೆ ಅನುಕಂಪ. ‘ಗಾಡ್ಸ್ ಮಸ್ಟ್ ಬಿ ಕ್ರೇಜಿ’ಚಿತ್ರದಲ್ಲಿ ಆಕಾಶದಿಂದ ಬಿದ್ದ ಕೋಕೋಕೋಲಾದ ಶೀಷೆ ಈಗ ರಿಯಾಲಿಟಿ ಶೋ ಅನ್ನುವ ಹೆಸರಲ್ಲಿ ನಮ್ಮ ನಡುವೆ ಓಡಾಡುತ್ತಿದೆ ಅಷ್ಟೆ. ದಿ ಶೋ ಮಸ್ಟ್ ಗೋ ಆನ್.
Also See
Uma Column 8 - ಶಂಕರ ನಾಗಮಂಡಲದಲ್ಲಿ ಒಂದು ಸುತ್ತು..
Uma Column 7 - ಪ್ರಶಸ್ತಿಗಳು ಮಾರಾಟಕ್ಕಿವೆ!
Uma Column 6 - ಹಾಯ್ ಕನ್ನಡ ತಾಯ್!
Uma Column 5 - ನನ್ನ ಭಯ ಮತ್ತು ಅಭಯನ ಜಯ
Uma Column 4 - ಭಟ್ರ ಕ್ವಾರ್ಟರ್ರು ಎಂಬ ಸೀರಿಯಸ್ ಮ್ಯಾಟರ್ರು
Uma Column 3 - ಕಲ್ಲು ಕೊರಗುವ ಸಮಯ
Uma Column 2 - ಮುನಿ ಮತ್ತು MONEY
Uma Column 1 - ಜಗತ್ತಿನ ಕೂಸು ಮತ್ತು ಕನ್ನಡದ ಮನಸ್ಸು
ಸಿನಿಮಾ ಪತ್ರಿಕೋದ್ಯಮದಲ್ಲಿ ಉದಯ್ ನನ್ನ ಗುರು - ಜೋಗಿ
Udaya Marakini Column In Chitraloka
Pls Note -
The views expressed in this column are those of its author and Chitraloka or its publishers do not claim to endorse it. You can express your opinion to his e-mail - This email address is being protected from spambots. You need JavaScript enabled to view it.