` chitraloka.com | Kannada Movie News, Reviews | Image - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
shankarnag image
shankarnag

ಶಂಕರ್ ನಾಗ್ ಬದುಕಿದ್ದರೆ ಅವರಿಗೆ 59 ವರ್ಷ ಆಗಿರುತ್ತಿತ್ತು ಅನ್ನುವ ಲೇಖನ ನಾಡಿನ ಪತ್ರಿಕೆಗಳಲ್ಲಿ ಪ್ರಕಟವಾಗುವುದಕ್ಕೆ ಇನ್ನು ಕೆಲವೇ ದಿನ ಬಾಕಿಯಿದೆ. ‘ಅವರೊಬ್ಬ ಅದ್ಭುತ ನಟನಾಗಿದ್ದರು, ಕರಾಟೆ ಕಿಂಗ್ ಅನ್ನುವ ಬಿರುದನ್ನೂ ಪಡೆದಿದ್ದರು. ಹಾಗಿದ್ದರೂ  ಅವರಿಗೆ ಕೊಂಚವೂ ಜಂಬವಿರಲಿಲ್ಲ. ಅವರೊಬ್ಬ ಸರಳ ಸಜ್ಜನ ಸಹೃದಯೀ ವ್ಯಕ್ತಿಯಾಗಿದ್ದರು...’

ಹೀಗೆಲ್ಲಾ ಫೇಸ್ ಬುಕ್ಕಲ್ಲಿ ಬರೆಯುವುದಕ್ಕೆ ಇನ್ನು ಕೆಲವೇ ದಿನ ಬಾಕಿಯಿದೆ. ನವಂಬರ್ 9 ಶಂಕರ್ ಜನ್ಮದಿನ.

‘ಶಂಕರನಾಗ್ ಅವರ ಜನ್ಮದಿನ ಪ್ರಯುಕ್ತ ಒಂದು ಡಿಸ್ಕಷನ್ ಇಟ್ಟುಕೊಂಡಿದ್ದೇವೆ. ನೀವು ಬರಬೇಕು’. ಹಾಗಂತ ಅನಂತನಾಗ್ ಮತ್ತು ಅರುಂಧತಿ ಅವರಿಗೆ ನ್ಯೂಸ್ ಚಾನೆಲ್ಲುಗಳು ಫೋನ್ ಮಾಡುವುದಕ್ಕೆ ಶುರು ಮಾಡಿರಬಹುದು. ಅನಂತ್ ಅವರಂತೂ ಈ ಕಿರಿಕಿರಿಯನ್ನು ತಾಳಲಾಗದೇ ‘ಇನ್ನು ಮುಂದೆ ನನ್ನ ತಮ್ಮನ ಬಗ್ಗೆ ಟೀವಿಯಲ್ಲಿ ಮಾತಾಡೋಲ್ಲ’ಅಂತ ಕೆಲವು ವರ್ಷದ ಹಿಂದೆ ಘೋಷಿಸಿದ್ದರು. ತೀರಿಕೊಂಡ ಸಜ್ಜನರನ್ನು ನೆನಪಿಸಿಕೊಳ್ಳುವುದು ಸತ್ಸಂಪ್ರದಾಯ ಅನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ನಾವು ಅಷ್ಟಕ್ಕೆ ಸುಮ್ಮನಾಗುವುದಿಲ್ಲ, ಅದನ್ನು ಒಂದು ಸೆಲಬ್ರೇಷನ್ ಮಟ್ಟಕ್ಕೆ ಕೊಂಡೊಯ್ಯುತ್ತೇವೆ. ಸತ್ತವರ ಬಗ್ಗೆ ಹಾಡಿಹೊಗಳುವುದರಲ್ಲೂ ನಾವು ನಿಸ್ಸೀಮರು. ಅವರಲ್ಲಿರುವ ಮತ್ತು ಇಲ್ಲದೇ ಇರುವ ಗುಣಗಳನ್ನು ಅವರ ಮೇಲೆ ಆರೋಪಿಸುತ್ತಾ , ಸಾಧ್ಯವಾದರೆ ಅವರನ್ನು ದೈವತ್ವಕ್ಕೇರಿಸುವ ಹುನ್ನಾರವನ್ನೂ ನಡೆಸುತ್ತೇವೆ. ಶಂಕರ್ ನಾಗ್ ಅಷ್ಟೇ ಅಲ್ಲ, ರಾಜ್ ಕುಮಾರ್, ವಿಷ್ಣುವರ್ಧನ್ ಇವರೆಲ್ಲರೂ ಈ ಹೊಗಳಿಕೆಯ ಹೊನ್ನಶೂಲಕ್ಕೆ ಪದೇಪದೇ ಬಲಿಯಾಗುತ್ತಿರುವವರೇ, ಅಫ್ ಕೋರ್ಸ್ ಅವರ ನಿಧನದ ನಂತರ.

dr rajkumar family during shankarnag death

ಅದಕ್ಕೆ ಕಾರಣವಿಲ್ಲದೇ ಇಲ್ಲ, ತೀರಿಕೊಂಡವರ ಬಗ್ಗೆ ಟೀಕೆ ಮಾಡಬಾರದು ಅನ್ನುವ ಭಾರತೀಯ ಸೆಂಟಿಮೆಂಟು ಪತ್ರಿಕೋದ್ಯಮದಲ್ಲೂ ಜಾರಿಯಲ್ಲಿದೆ. ಗಾಯಕ ಅತ್ರಿ ತೀರಿಕೊಂಡಾಗ ನಾನು ಮತ್ತು ಜೋಗಿ ಕನ್ನಡ ಪ್ರಭ ಪತ್ರಿಕೆಯ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೆವು. ಇಬ್ಬರೂ ಒಟ್ಟಾಗಿ ಅತ್ರಿ ಬಗ್ಗೆ ಒಂದು ಲೇಖನ ಬರೆಯುವುದಕ್ಕೆ ತೀರ್ಮಾನಿಸಿದೆವು. ಅದರಲ್ಲಿ ಅತ್ರಿ ಗಾಯಕನಾಗಿ ಬೆಳೆದು ಬಂದ ರೀತಿ, ಅವರ ಅಗ್ರೆಸಿವ್ ಸ್ವಭಾವ, ಪತ್ರಕರ್ತರೊಂದಿಗೆ ಆಗಾಗ ಆಡುತ್ತಿದ್ದ ಜಗಳ, ಇವೆಲ್ಲದರ ರೆಫರೆನ್ಸೂ ಇತ್ತು. ಅದು ‘ಚಿತ್ರಪ್ರಭ’ದಲ್ಲಿಪ್ರಕಟವಾದ ತಕ್ಷಣ ಅತ್ರಿ ಸೋದರ ನಮ್ಮ ಕಚೇರಿಗೆ ಬಂದು ಸಂಪಾದಕರ ಜೊತೆ ಜಗಳ ಆಡಿದರು. ‘ನಿಮ್ಮ ಮಗನಿಗೋ ತಮ್ಮನಿಗೋ ಹೀಗಾಗುತ್ತಿದ್ದರೆ ಇಂಥಾ ಲೇಖನ ಪ್ರಕಟಿಸ್ತಾ ಇದ್ರಾ’ಅಂತ ಅವರು ಕೇಳಿದರಂತೆ. ನಿಧನವಾರ್ತೆ ಬರೆಯುವಾಗ ಟೀಕೆ ಮಾಡಬಾರದು ನಿಜ, ಆದರೆ  ತೀರಿಕೊಂಡವರ ಕುರಿತಾದ ಲೇಖನದಲ್ಲಿ ಆತ ಬದುಕಿದ ರೀತಿಯನ್ನು ದಾಖಲಿಸುವುದರಲ್ಲಿ ತಪ್ಪಿಲ್ಲ ಅನ್ನುವುದು ನನ್ನ ವಾದ.

ಶಂಕರ್ ನಾಗ್ ತೀರಿಕೊಂಡಾಗ ನಾನು ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಎಂದಿನಂತೆ ಸಿನಿಮಾ ವರದಿಗಾರನಾಗಿದ್ದೆ. ಆವತ್ತು ಭಾನುವಾರವಾಗಿದ್ದರಿಂದ ಕಚೇರಿಗೆ ರಜಾ. ಇಂದ್ರಾನಗರದಲ್ಲಿದ್ದ ಗೆಳೆಯನ ಮನೆಯಲ್ಲಿ ಎಲ್ಲರೂ ಸೇರಿಕೊಂಡು ಪಾರ್ಟಿ ಮಾಡುತ್ತಿದ್ದೆವು. ಮಧ್ಯದಲ್ಲೇ ಈ ಕೆಟ್ಟ ಸುದ್ದಿ ಬಂತು. ಆ ಕ್ಷಣಕ್ಕೆ ಓ..ಅನ್ನುವ ಉದ್ಗಾರದ ಹೊರತಾಗಿ ನನ್ನ ಬಾಯಿಂದ ಇನ್ಯಾವ ಮಾತೂ ಹೊರಗೆ ಬರಲಿಲ್ಲ. ನನ್ನಪ್ಪ ಸತ್ತಾಗಲೂ ಹೀಗೇ ಆಗಿತ್ತು. ಯಾಕೆಂದರೆ ಸಾವನ್ನು ಹೇಗೆ ಸ್ವೀಕರಿಸಬೇಕು ಅಂತ ಯಾರೂ ರಿಹರ್ಸಲ್ ಮಾಡಿರುವುದಿಲ್ಲ. ಆ ಸಾವಿನ ನಿಜವಾದ ತಲ್ಲಣಗಳು ಕಾಡುವುದು ಕೆಲವು ದಿನಗಳ ನಂತರವೇ. ಶಂಕರ್ ವಿಷಯದಲ್ಲೂ ಹೀಗೇ ಆಯಿತು. ಅವರು ತೀರಿಕೊಂಡ ಒಂದು ವಾರದ ನಂತರ ಬೆಂಗಳೂರು ಅರಮನೆ ಮೈದಾನಕ್ಕೆ ಯಾವುದೋ ಸಿನಿಮಾ ವರದಿಗಾರಿಕೆಗೆ ಹೋದಾಗ ಅವರ ನೆನಪಾಗಿ ಅಳುವೇ ಬಂದಿತ್ತು. ನಾನು ಮೊದಲಬಾರಿ ಶಂಕರ್ ಸಂದರ್ಶನ ಮಾಡಿದ್ದು ಅಲ್ಲೇ. ಅರಮನೆ ಮುಂದೆಯೇ ‘ಹುಲಿಹೆಬ್ಬುಲಿ’ಶೂಟಿಂಗ್ ನಡೆಯುತ್ತಿತ್ತು. ನಾನಾಗ ‘ಅರಗಿಣಿ’ಪತ್ರಿಕೆಯಲ್ಲಿದ್ದೆ. ಲೀಡ್ ಲೇಖನ ಇನ್ನೂ ರೆಡಿಯಾಗಿರಲಿಲ್ಲ, ಮಾರನೇ ದಿನವೇ ಡೆಡ್ ಲೈನ್. ಶಂಕರ್ ನನಗೆ ರಾತ್ರಿ ಹನ್ನೊಂದು ಗಂಟೆಗೆ ಬಾ ಅಂದಿದ್ದರು. ಅಲ್ಲಿ ಟೈಗರ್ ಪ್ರಭಾಕರ್ ಮತ್ತು ಶಂಕರ್ ನಡುವೆ ಹೊಡೆದಾಟದ ದೃಶ್ಯದ ಶೂಟಿಂಗ್ ನಡೆಯುತ್ತಿತ್ತು. ಇಬ್ಬರಲ್ಲೂ ಯಾರೂ ಸೋಲಲಿಲ್ಲ, ಗೆಲ್ಲಲೂ ಇಲ್ಲ. ಇಬ್ಬರು ಹೀರೋಗಳನ್ನಿಟ್ಟುಕೊಂಡು ಸಿನಿಮಾ ಮಾಡುವಾಗ ಈ ಸಾಮಾಜಿಕ ನ್ಯಾಯ ಪಾಲಿಸಲೇಬೇಕು. ಎಲ್ಲಾ ಮುಗಿದಾಗ ರಾತ್ರಿ ಹನ್ನೆರಡು. ಹೆಬ್ಬುಲಿ ಮನೆಗೆ ಹೋಯಿತು. ಹುಲಿ ನಗುನಗುತ್ತಾ ನನ್ನ ಕಡೆ ಬಂತು. ಇಂಟರ್ ವ್ಯೂ ಶುರು ಮಾಡೋಣ ಅಂದಿತು. ರಾತ್ ಅಭೀ ಬಾಕಿ ಹೈ ಬಾತ್ ಅಭೀ ಬಾಕಿ ಹೈ ಅನ್ನುವ ಥರ ಶಂಕರ್ ಮಾತಾಡಿದ್ದೇ ಆಡಿದ್ದು. ನಾನು ಅಲ್ಲಿಂದ ನಡೆದುಕೊಂಡು ಕಚೇರಿ ಸೇರಿದಾಗ ರಾತ್ರಿ ಎರಡೂವರೆ.

shankarnag accident image

ಆರು ತಿಂಗಳ ನಂತರ ಇನ್ಯಾವುದೋ ಶೂಟಿಂಗಿಗೆ ಆಗುಂಬೆಗೆ ಹೋದಾಗಲೂ ಹಾಗೇ ಆಯಿತು. ಅಲ್ಲಿನ ಕಚ್ಚಾ ರಸ್ತೆಗಳಲ್ಲಿ, ಹಳೇ ಮನೆಗಳಲ್ಲಿ ಶಂಕರ್ ನೆರಳು ಸರಿದಾಡಿದಂತೆ. ಅಲ್ಲೇ ‘ಮಾಲ್ಗುಡಿ ಡೇಸ್’ಶೂಟಿಂಗ್ ನಡೆದಿದ್ದು. ಆವಾಗ ನಾನು,ಗೋಪಾಲ ವಾಜಪೇಯಿ ಮತ್ತು ಶಿವರಾಜ್ (ನಟ ಮತ್ತು ಕಲಾನಿರ್ದೇಶಕ) ಅಲ್ಲಿಗೆ ಹೋಗಿದ್ದೆವು. ಅಲ್ಲಿ ನದಿ ನೀರೊಳಗೆ ಒಂದು ಪುಟ್ಟ ಗಾಜಿನ ಪೆಟ್ಟಿಗೆಯನ್ನಿಳಿಸಿ,ಅದರೊಳಗೆ ಕೆಮರಾಮನ್ ಕುಳಿತುಕೊಂಡು ಮುಂದಿದ್ದ ಪಾತ್ರಧಾರಿ (ಮಾಸ್ಟರ್ ಮಂಜು)ಯನ್ನು ಸೆರೆಹಿಡಿಯುತ್ತಿದ್ದರು. ಯಾವುದೇ ಅತ್ಯಾಧುನಿಕ ತಂತ್ರಜ್ಞಾನದ ಸಹಾಯವಿಲ್ಲದೆಯೇ ಶಂಕರ್ ಅಂಡರ್ ವಾಟರ್ ಶೂಟಿಂಗ್ ಮಾಡುತ್ತಿದ್ದುದನ್ನು ಕಂಡು ನಾನು ಬೆರಗಾಗಿ ಹೋಗಿದ್ದೆ. ಅದು ಶಂಕರ್ ಅವರಿಗೆ ಆ ಕ್ಷಣಕ್ಕೆ ಹೊಡೆದ ಐಡಿಯಾ ಅಂತ ಚಿತ್ರತಂಡದವರ್ಯಾರೋ ಹೇಳಿದರು. ಜೀನಿಯಸ್ ಗಳು ಇರೋದೇ ಹಾಗೆ.

ಇತ್ತೀಚೆಗೆ ಜನಶ್ರೀ ಚಾನೆಲ್ಲಲ್ಲಿ ‘ಮಾಲ್ಗುಡಿ ಡೇಸ್’ಮರುಪ್ರಸಾರವಾದಾಗ ಶಂಕರ್ ಮತ್ತೆ ನೆನಪಾದರು. ಈ ಬಾರಿ ಅಳು ಬರಲಿಲ್ಲ. ದುಃಖಕ್ಕೂ ಒಂದು Expiry date ಅನ್ನುವುದು ಇರುತ್ತದೆಯೋ ಏನೋ. ‘ಮೌನಿ’ಸಿನಿಮಾ ಮತ್ತು ‘ಪ್ರೀತಿ ಇಲ್ಲದ ಮೇಲೆ’ಸೀರಿಯಲ್ಲುಗಳಿಗೆ ಡೈಲಾಗ್ ಬರೆಯುತ್ತಿದ್ದ ಸಂದರ್ಭದಲ್ಲಿ ಅನಂತನಾಗ್ ಜೊತೆ ಮಾತಾಡುತ್ತಾ ಕುಳಿತಾಗಲೂ ಶಂಕರ್ ರೆಫರೆನ್ಸು ಬಂದಿದ್ದು ಕಡಿಮೆಯೇ. ಅಷ್ಟಕ್ಕೂ ಶಂಕರ್ ನೆನಪಾಗುವುದಕ್ಕೆ ನಾವೇನು ಉಳಿಸಿದ್ದೇವೆ ಹೇಳಿ?ಶಂಕರ್ ಕನಸಿನ ಕೂಸಾಗಿದ್ದ ಸಂಕೇತ್ ಸ್ಟುಡಿಯೋ ನಿರ್ನಾಮವಾಗಿ ಅಲ್ಲೊಂದು ಕಾಂಪ್ಲೆಕ್ಸು ತಲೆಯೆತ್ತಿದೆ. ಅವರು ಉತ್ಸಾಹದಿಂದ ಕೆಲಸ ಮಾಡಿದ್ದ ಜನತಾದಳ ಪಕ್ಷ ಹೋಳಾಗಿಹೋಗಿದೆ. ಅವರ ಮತ್ತೊಂದು ಕನಸಿನ ಕೂಸು ಕಂಟ್ರಿಕ್ಲಬ್ ಪರಭಾರೆಯಾಗಿದೆ. ಶಂಕರ್ ಬಳಗದಲ್ಲಿದ್ದ ಮಲ್ನಾಡ್, ಕಾಶಿ ಮುಂತಾದವರು ತಮ್ಮದೇ ಬದುಕಲ್ಲಿ ಬಿಜಿಯಾಗಿದ್ದಾರೆ, ರಮೇಶ್ ಭಟ್ ಅಪರೂಪಕ್ಕೆ ಅಲ್ಲೊಂದು ಇಲ್ಲೊಂದು ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ‘ರಂಗಶಂಕರ’ದ ಜವಾಬ್ದಾರಿಯನ್ನು ಅರುಂಧತಿ ಅವರು ಸೂರಿ ಕೈಗೊಪ್ಪಿಸಿದ್ದಾರೆ.

ಹಾಗಿದ್ದರೂ ಶಂಕರ್ ಅವರ ಅಭಿಮಾನಿಗಳಿಗೆ ನೆನಪಾಗುತ್ತಾರೆ, ‘ಗೀತಾ’ಚಿತ್ರದ ‘ಜೊತೆಜೊತೆಯಲಿ’ಹಾಡು ಕೇಳಿದಾಗ. ‘ಒಂದಾನೊಂದು ಕಾಲದಲ್ಲಿ’ಸಿನಿಮಾದ ಬ್ಲಾಕ್ ಅಂಡ್ ವೈಟ್ ಸ್ಟಿಲ್ ನೋಡಿದಾಗ, ಆಟೋಗಳ ಬೆನ್ನಲ್ಲಿ ಶಂಕರಣ್ಣನ ಫೋಟೋ ಕಂಡಾಗ. ಆಟೋ ಚಾಲಕರಿಗೂ ಶಂಕರಣ್ಣನಿಗೂ ಅದೆಂಥದ್ದೋ ಅವಿನಾಭಾವ ಸಂಬಂಧ. ಅದಕ್ಕೆ ಕಾರಣ ‘ಆಟೋ ರಾಜ’ಚಿತ್ರವೊಂದಷ್ಟೇ ಅಲ್ಲ. ಶಂಕರ್ ವ್ಯಕ್ತಿತ್ವದಲ್ಲಿ ಅಡಗಿದ್ದ ಶ್ರೀಸಾಮಾನ್ಯನ ಇಮೇಜು ಕೂಡಾ ಕಾರಣ.

bhargava, shankarnag, ananthnag, vishnuvardhan, shivarajkumar

‘ಒಂದಾನೊಂದು ಕಾಲದಲ್ಲಿ’ಚಿತ್ರ ರಿಲೀಸ್ ಆದಾಗ ನಾನು ಕಾಲೇಜಲ್ಲಿದ್ದೆ. ಸಿನಿಮಾ ನೋಡಿದ ಮೇಲೆ ನಮ್ಮ ಗೆಳೆಯರ ಗುಂಪು ಎರಡು ಭಾಗವಾಯಿತು. ಒಂದು ಶಂಕರ್ ನಾಗ್ ಪರ, ಇನ್ನೊಂದು ಸುಂದರಕೃಷ್ಣ ಅರಸ್ ಪರ. ಇಬ್ಬರೂ ಪೈಪೋಟಿಗೆ ಬಿದ್ದಂತೆ ನಟಿಸಿದ್ದರೂ ಶಂಕರ್ ಗೆ ಅದು ಮೊದಲ ಚಿತ್ರವಾಗಿದ್ದರಿಂದ ಅವರಿಗೆ ಬೋನಸ್ ಪಾಯಿಂಟು ಕೊಡಬೇಕು ಅನ್ನುವುದು ನನ್ನ ವಾದ. ಹೀಗೆ ತನ್ನ ಮೊದಲ ಚಿತ್ರದಲ್ಲೇ ನನ್ನನ್ನು ಅದ್ಭುತ ನಟನಾಗಿ ಕಾಡಿದ ಶಂಕರ್ ಆಮೇಲೆ ಯಾಕೋ ಸ್ಟಿರಿಯೋಟೈಪ್ ಆಗುತ್ತಿದ್ದಾರೆ ಅಂತ ನನಗೇ ಅನಿಸೋದಕ್ಕೆ ಶುರುವಾಯಿತು. ‘ಮಿಂಚಿನ ಓಟ’ದಂಥ ನಾಲ್ಕೈದು ಚಿತ್ರಗಳ ಹೊರತಾಗಿ ಮಿಕ್ಕೆಲ್ಲದರಲ್ಲೂ ಅವರದು ಸರ್ವೇ ಸಾಧಾರಣ ಅನಿಸುವಂಥ ನಟನೆಯಿದೆ. ತಮಾಷೆಯೆಂದರೆ ತನ್ನನ್ನು ಒಳ್ಳೇ ನಟ ಅಂತ ಕರೆಯುವವರ ಬಗ್ಗೆ ಅವರಿಗೇ ಅಸಮಾಧಾನವಿತ್ತು. ನಟನೆ ಅವರ ಕ್ಷೇತ್ರವೇ ಆಗಿರಲಿಲ್ಲ, ವಿಧಿಯ ಪಿತೂರಿಯಿಂದಾಗಿ ಅವರು ಜನಪ್ರಿಯ ನಟನಾದರು, ಅದೂ ಕಮರ್ಶಿಯಲ್ ಸ್ಟಾರ್. ಗಾಯದಮೇಲೆ ಬರೆ ಹಾಕಿದಂತೆ ಕರಾಟೆ ಕಿಂಗ್ ಅನ್ನುವ ಬಿರುದು ಬೇರೆ ಸೇರಿಕೊಂಡು ಶಂಕರ್ ನಾಗ್ ತಮ್ಮ ಅವಸ್ಥೆ ನೆನೆದು ತಾವೇ ಮಮ್ಮಲ ಮರುಗುವಂತಾಗಿತ್ತು. ಈ ಬಗ್ಗೆ ಅವರೇ ನನ್ನೊಡನೆ ಹಲವಾರು ಸಂದರ್ಭಗಳಲ್ಲಿ ಹೇಳಿಕೊಂಡಿದ್ದುಂಟು. ಆದರೆ ಅದನ್ನೆಲ್ಲಾ ಬರೆಯುವ ಹಾಗಿರಲಿಲ್ಲ. ಅವರನ್ನು ನಂಬಿಕೊಂಡು ಲಕ್ಷಾಂತರ ರುಪಾಯಿ ಸುರಿದ ನಿರ್ಮಾಪಕರ ಹೊಟ್ಟೆ ಮೇಲೆ ಹೊಡೆಯುವುದು ನನಗಾಗಲಿ, ಅವರಿಗಾಗಲಿ ಇಷ್ಟವಿರಲಿಲ್ಲ.

ಹಾಗೆ ನೋಡಿದರೆ ಶಂಕರ್ ಅದೃಷ್ಟವಂತ (ಪ್ರತಿಭಾವಂತ ಅನ್ನೋದನ್ನು ನಾನು ಹೇಳಬೇಕಾಗಿಲ್ಲ). ಸಾಂಪ್ರದಾಯಿಕ ಹೀರೋಗೆ ಬೇಕಾದ ಚೆಲುವಾಂತ ಚೆನ್ನಿಗನ ರೂಪವಿಲ್ಲದಿದ್ದರೂ ಸ್ಟಾರ್ ಆದರು. ಬೇರೆ ಯಾರಿಗೂ ಸಿಗದಿದ್ದ ಒಳ್ಳೊಳ್ಳೇ ಹಾಡುಗಳು ಅವರ ಚಿತ್ರಗಳಿಗೆ ದಕ್ಕಿದವು (ಥಾಂಕ್ಯ್ ಟು ಹಂಸಲೇಖಾ ಮತ್ತು ಇಳಯರಾಜಾ), ಮೆಟ್ರೋ ರೈಲು ಮತ್ತು ನಂದಿಬೆಟ್ಟಕ್ಕೆ ರೋಪ್ ವೇ ಇವರೆಡು ಕನಸುಗಳ ಹೊರತಾಗಿ ಮಿಕ್ಕೆಲ್ಲ ಕ್ಷೇತ್ರಗಳಲ್ಲೂ ಅವರಂದುಕೊಂಡಿದ್ದು ಸಾಕಾರಗೊಂಡವು. ಅದು ಸೀರಿಯಲ್ ಇರಬಹುದು, ನಾಗಮಂಡಲದಂಥ ನಾಟಕ ಇರಬಹುದು, ನಿರ್ದೇಶಕನಾಗಿ ಮಿಂಚಿನ ಓಟ, ನೋಡಿ ಸ್ವಾಮಿ, ಆಕ್ಸಿಡೆಂಟ್ ನಂಥಾ ಚಿತ್ರಗಳಿರಬಹುದು, ಹೆಗಡೆ ಜೊತೆ ಸೇರಿಕೊಂಡು ಮಾಡಿದ ರಾಜಕೀಯ ಇರಬಹುದು. ಅವರೊಬ್ಬ ಮಹಾತ್ವಾಕಾಂಕ್ಷಿ. ದಶದಿಕ್ಕುಗಳಿಗೆ ಕೈಚಾಚಿದ ಸಾಹಸಿ. ಹಾಗಂತ ಮಿಕ್ಕಿವರ ನೆತ್ತಿಮೇಲೆ ತನ್ನ ದ್ವಜವನ್ನು ನೆಡುವಂಥಾ ಸ್ವಾರ್ಥಿ ನಾಯಕನಲ್ಲ, ಎಲ್ಲರನ್ನೂ ಮೆರವಣಿಗೆಯಲ್ಲಿ ಕೊಂಡೊಯ್ಯುವ ಸಮಾಜವಾದಿ.

ಇನ್ನೊಂದು ರೀತಿಯಲ್ಲಿ ನೋಡಿದರೆ ಶಂಕರ್ ನತದೃಷ್ಟ. ನಿರ್ದೇಶಕನಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಬೇಕು ಅನ್ನೋ ಆಸೆಯಿತ್ತು. ಕಮರ್ಷಿಯಲ್ ಚಿತ್ರಗಳ ಸೆಟಪ್ ಅವರಿಗೆ ಒಗ್ಗುತ್ತಿರಲಿಲ್ಲ. ಆದರೆ ಜನ ಒಪ್ಪಿಕೊಂಡ ಮೇಲೆ ಅವರ ಮುಂದೆ ಆಯ್ಕೆಗಳಿರಲಿಲ್ಲ. ಮೊದಲನೆಯದಾಗಿ ಅವರು ಅಂಥಾ ಅದ್ಭುತ ನಟನಾಗಿರಲಿಲ್ಲ. ಬೇಕಿದ್ದರೆ ಅವರು ನಟಿಸಿದ ಕಮರ್ಷಿಯಲ್ ಚಿತ್ರಗಳಲ್ಲಿ ಅವರ ಬಾಡಿ ಲಾಂಗ್ವೇಜ್ ನೋಡಿ. ಸಹಜವಾಗಿಲ್ಲದೇ ಇರುವುದೇ ಸಿನಿಮಾ ನಟನೆ ಅನ್ನುವ ಹಳೇ ಸಿದ್ಧಾಂತಕ್ಕೆ ಗಂಟುಬಿದ್ದವರಂತೆ ಶಂಕರ್ ನಟಿಸಿದ್ದಾರೆ. ಅದನ್ನು ಅವರು ಉದ್ದೇಶಪೂರ್ವಕವಾಗಿಯೇ ಮಾಡಿದ್ದಾರೆ, ತನ್ನನ್ನು ತಾನೇ ಗೇಲಿ ಮಾಡಿಕೊಳ್ಳುವ ಥರ, ತನ್ನನ್ನು ಸ್ಟಾರ್ ಆಗಿಸಿದವರ ವಿರುದ್ಧ ಸೇಡು ತೀರಿಸಿಕೊಳ್ಳುವ ಥರ. ಈ ಕಾರಣಕ್ಕೇ ಬಹಳಷ್ಟು ಮಿಮಿಕ್ರಿಪಟುಗಳು ಶಂಕರ್ ಒಂದು ಕಡೆ ವಾಲುತ್ತಾ, ಬಾಯಲ್ಲಿ ಬಿಸ್ಕತ್ತು ಇಟ್ಟುಕೊಂಡಂತೆ ಮಾತಾಡುವ ಶೈಲಿಯನ್ನು ಸಲೀಸಾಗಿ ಕಾಪಿ ಮಾಡುತ್ತಾರೆ. ಆದರೆ ಮೋಹನ್ ಲಾಲ್ ಅಥವಾ ಸಂಜೀವ್ ಕುಮಾರ್ ಅವರನ್ನು ಅನುಕರಿಸುವವರು ಎಷ್ಟು ಜನರಿದ್ದಾರೆ ತೋರಿಸಿ ನೋಡೋಣ?ಅದ್ಭುತ ನಟರನ್ನು ಅನುಕರಿಸುವುದು ಕಷ್ಟದ ಕೆಲಸ ಸ್ವಾಮೀ.

ತೆರೆಯಾಚೆಗೆ ಶಂಕರ್ ನಿಜವಾದ ಅರ್ಥದಲ್ಲಿ ನಾಯಕನಾಗಿದ್ದರು. ಒಂದು ದೊಡ್ಡ ಗುಂಪನ್ನು ಮುನ್ನೆಡೆಸುವ ಶಕ್ತಿ ಅವರಿಗಿತ್ತು. ಒಬ್ಬ ಅಪ್ಪಟ ರೈತನಲ್ಲಿರುವ ಎನರ್ಜಿ ಅವರಲ್ಲಿತ್ತು. ದಿನಕ್ಕೆ ಹದಿನೆಂಟು ಗಂಟೆ ದುಡಿದರೂ ದಣಿವು ಅನ್ನೋ ಮಾತೇ ಇರಲಿಲ್ಲ. ಚಿಕ್ಕವರ ತಲೆನೇವರಿಸುವ ದೊಡ್ಡಗುಣಮತ್ತು ದೊಡ್ಡವರ ಮುಂದೆ ತಲೆಬಾಗುವ ವಿನಯ ಇವೆರಡೂ ಇತ್ತು. ಇಂಥಾ ಗುಣಗಳೆಲ್ಲಾ ಒಟ್ಟುಸೇರಿ ಒಬ್ಬ ನಟನ ಸುತ್ತ ಪ್ರಭಾವಳಿಯಾದಾಗಲೇ ಒಂದು ಇಮೇಜು ಸೃಷ್ಟಿಯಾಗುವುದು, ಆಗಲೇ ಆತ ಜಗಮೆಚ್ಚಿದ ಮಗನಾಗುವುದು.

ನಿಮಗೆ ತಮಾಷೆ ಗೊತ್ತಾ. ಕರಾಟೆಕಿಂಗ್ ಗೆ ಕರಾಟೆಯ ಗಂಧಗಾಳಿಯೂ ಗೊತ್ತಿರಲಿಲ್ಲ. ಅವರು ಹಾಹೂ ಅನ್ನುತ್ತಾ ಕೈಕಾಲು ಅಲ್ಲಾಡಿಸುವುದು, ಅಷ್ಟಕ್ಕೇ ಖಳರು ಕುಯ್ಯೋ ಮುರ್ರೋ ಅನ್ನುತ್ತಾ ಬಿದ್ದು ಹೊರಳಾಡುವುದು, ಅದನ್ನು ನೋಡಿ ಪ್ರೇಕ್ಷಕರು ಚಪ್ಪಾಳೆ ಹೊಡೆಯುವುದು. ಶಂಕರ್ ಡ್ಯಾನ್ಸ್ ಕೂಡಾ ವಿಚಿತ್ರ, ಅವರೇ ಕಂಡುಹಿಡಿದ ಸ್ಟೆಪ್ಪುಗಳೋ ಅನಿಸುವಷ್ಟು ಹೊಸದು. ನಮ್ಮ ಚಿತ್ರರಂಗದಲ್ಲಿ ಇಂಥಾ ವಿರೋಧಾಭಾಸಗಳು ನಡೆಯುತ್ತಲೇ ಇರುತ್ತವೆ. ಒಂದು ಸಾರಿ ಜನ ನಿಮ್ಮನ್ನು ಒಪ್ಪಿಕೊಂಡರೆ ಮುಗೀತು. ಆಮೇಲೆ ನೀವೇನೇ ಮಾಡಿದರೂ ಚಂದವೇ.

‘ಕಮರ್ಷಿಯಲ್ ಚಿತ್ರಗಳಲ್ಲಿ ನಟಿಸುವುದು ಬಹಳ ಹಿಂಸೆಯ ಕೆಲಸ. ಇದರಿಂದ ಬರುವ ದುಡ್ಡಲ್ಲಿ ಒಂದಿಷ್ಟು ಒಳ್ಳೇ ಚಿತ್ರ ಮಾಡಬಹುದು ಅನ್ನೋ ಕಾರಣಕ್ಕೆ ನಾನು ನಟಿಸ್ತಿದೀನಿ’ಅಂತ ಶಂಕರ್ ಒಮ್ಮೆ ಹೇಳಿದ್ದರು. ಆಸಾಮಿ ಮಾತಿಗೆ ತಪ್ಪಲಿಲ್ಲ. ಮಿಂಚಿನ ಓಟ, ನೋಡಿ ಸ್ವಾಮಿ, ಆಕ್ಸಿಡೆಂಟ್ ಥರದ ಒಳ್ಳೆಯ ಪ್ರಯೋಗಗಳನ್ನು ಮಾಡಿದರು. ಪ್ರಯೋಗಗಳು ಕೆಲವೊಮ್ಮೆ ಕೈಕೊಟ್ಟಿದ್ದೂ ಉಂಟು. ‘ಒಂದು ಮುತ್ತಿನ ಕತೆ’ಯಲ್ಲಿ ರಾಜ್ ಕುಮಾರ್ ಅವರನ್ನು ಸಾಮಾನ್ಯ ಮನುಷ್ಯನನ್ನಾಗಿ ತೋರಿಸುವ ಪ್ರಯತ್ನವನ್ನು ಜನ ಒಪ್ಪಲಿಲ್ಲ. ಶಂಕರ್ ಬೇಜಾರು ಮಾಡಿಕೊಂಡರೂ ಹಿಂದೆ ಸರಿಯಲಿಲ್ಲ. ಶ್ರೀಸಾಮಾನ್ಯನ ಸಲುವಾಗಿ ವ್ಯಾಪಾರಿ ಚಿತ್ರಗಳಲ್ಲಿ ನಟಿಸಿದರು, ಬುದ್ದಿವಂತರಿಗೋಸ್ಕರ ಸೀರಿಯಲ್ಲು, ಥಿಯೇಟರ್ ಅಂತ ಸುತ್ತಾಡಿದರು. ತನ್ನ ಮನಸ್ಸನ್ನು ಸಂತೈಸಲು ಸಂಕೇತ್, ಕಂಟ್ರಿಕ್ಲಬ್ ಕಟ್ಟಿದರು. ಎಲ್ಲವನ್ನೂ ಅವಸರಕ್ಕೆ ಬಿದ್ದಂತೆ ಮಾಡಿದರು, ಅವಸರದಲ್ಲೇ ಹೊರಟುಹೋದರು.

ಒಬ್ಬ ನಟ ತನ್ನ ಕಾಲದಾಚೆಗೂ ಜನಮಾನಸದಲ್ಲಿ ಜೀವಂತವಾಗಿ ನಿಲ್ಲಬೇಕಾದರೆ ಆತ ಕೇವಲ ನಟನಾಗಿದ್ದರಷ್ಟೇ ಸಾಕಾಗುವುದಿಲ್ಲ. ಜನರನ್ನು ಬೇರೆಬೇರೆ ರೀತಿಯಲ್ಲಿ ಆವರಿಸಿಕೊಳ್ಳಬೇಕಾಗುತ್ತದೆ. ಆದರ್ಶ ಪುರುಷನ ಮಟ್ಟಕ್ಕೆ ಏರಬೇಕಾಗುತ್ತದೆ. ಆ ಮಟ್ಟಿಗೆ ಶಂಕರ್ ಒಬ್ಬ ಐಕಾನ್. ಸತ್ತ ಒಂದೇ ವಾರಕ್ಕೆ ಒಬ್ಬ ವ್ಯಕ್ತಿಯನ್ನು ಮರೆವಿನ ಕಸದಬುಟ್ಟಿಗೆ ಎಸೆಯುವ ಜನರು ಇಂದಿಗೂ ಶಂಕರ್ ಅವರನ್ನು ನೆನಪಲ್ಲಿಟ್ಟುಕೊಂಡಿದ್ದಾರೆ ಅನ್ನುವುದೇ ಅವರು ದೊಡ್ಡ ಮನುಷ್ಯ ಅನ್ನೋದಕ್ಕೆ ಸಾಕ್ಷಿ.

ಅವರಲ್ಲಿ ನಾನಿಲ್ಲಿ

ಆ ಚಿತ್ರದ ಹೆಸರು ‘ರಾಮರಾಜ್ಯದಲ್ಲಿ ರಾಕ್ಷಸರು’. ಸಂಯುಕ್ತ ಕರ್ನಾಟಕ ಪತ್ರಿಕೆಯ ಕಚೇರಿಯಲ್ಲಿ ಒಂದು ಮಧ್ಯಾಹ್ನ ಶೂಟಿಂಗ್. ಅನಂತ್ ಮತ್ತು ಶಂಕರ್ ಇಬ್ಬರೂ ಆ ಚಿತ್ರದಲ್ಲಿ ನಟಿಸಿದ್ದರು. ಅನಂತನಾಗ್ ನೇಣುಹಾಕಿಕೊಂಡು ಸಾಯುವ ಸನ್ನಿವೇಶವದು. ಅದು ಕೊಲೆಯೋ ಅಥವಾ ಆತ್ಮಹತ್ಯೆಯೋ ಅಂತ ಪತ್ತೆ ಹಚ್ಚುವ ಕೆಲಸ ಶಂಕರ್ ಅವರದು. ಶೂಟಿಂಗ್ ಇನ್ನೇನು ಶುರುವಾಗಬೇಕು ಅನ್ನೋವಾದ ಪತ್ರಕತ್ರ ವೈಎನ್ಕೆ ಅಲ್ಲಿಗೆ ಬಂದರು. ಅನಂತನಾಗ್ ಅವರನ್ನು ಮುಂಬೈನಿಂದ ಕರಕೊಂಡು ಬಂದು ನಟನೆಗೆ ಹಚ್ಚಿದವರೇ ವೈಎನ್ಕೆ. ಮಧ್ಯಾಹ್ನದ ಹೊತ್ತಲ್ಲಿ ಗುರುಗಳ ದರ್ಶನವಾಗಿದ್ದರಿಂದ ಸಂತೋಷಗೊಂಡ ಅನಂತ್ ಅವರನ್ನು ಕರಕೊಂಡು ಕಚೇರಿಯ ಮುಂದಿನ ರಸ್ತೆಯಲ್ಲಿರುವ ರೆಸ್ಟಾರೆಂಟಿಗೆ ಹೋದರು. ಮೂರು ಗಂಟೆಯ ನಂತರ ವಾಪಸ್ ಬಂದರು. ಸಾಯುವ ಸನ್ನಿವೇಶದ ಶೂಟಿಂಗಿಗೆ ಕಾಯುವ ಹೊತ್ತಲ್ಲಿ ಶಂಕರ್ ಇಡೀ ಕಚೇರಿ ಸುತ್ತಾಡಿದರು. ‘ಇನ್ನೂ ಎಷ್ಟು ದಿನಾಂತ ಜರ್ನಲಿಸಂ ಮಾಡ್ತೀರಾ, ನಮ್ ಜೊತೆ ಬನ್ನಿ, ಬೇರೆ ಏನಾದ್ರೂ ಮಾಡೋಣ’ಅಂತ ನನಗೆ ಆಮಿಷ ಒಡ್ಡಿದರು. ಶೂಟಿಂಗ್ ಮುಗಿಸಿ ಹೋಗುವ ಮುಂಚೆ ಮತ್ತೊಮ್ಮೆ ಕೇಳಿದರು ‘ನಮ್ ಜೊತೆ ಬರ್ತೀರಾ ಅಥವಾ ಇಲ್ಲೇ ಇರ್ತೀರಾ?’.

ನಾನಿನ್ನೂ ಇಲ್ಲೇ ಇದೀನಿ, ಶಂಕರ್ ಎಲ್ಲೋ ಹೊರಟುಹೋಗಿದ್ದಾರೆ.

Also See

Shankarnag Images - View

Uma Column 7 - ಪ್ರಶಸ್ತಿಗಳು ಮಾರಾಟಕ್ಕಿವೆ!

Uma Column 6 - ಹಾಯ್ ಕನ್ನಡ ತಾಯ್!

Uma Column 5 - ನನ್ನ ಭಯ ಮತ್ತು ಅಭಯನ ಜಯ

Uma Column 4 - ಭಟ್ರ ಕ್ವಾರ್ಟರ್ರು ಎಂಬ ಸೀರಿಯಸ್ ಮ್ಯಾಟರ್ರು

Uma Column 3 - ಕಲ್ಲು ಕೊರಗುವ ಸಮಯ

Uma Column 2 - ಮುನಿ ಮತ್ತು MONEY

Uma Column 1 - ಜಗತ್ತಿನ ಕೂಸು ಮತ್ತು ಕನ್ನಡದ ಮನಸ್ಸು

ಸಿನಿಮಾ ಪತ್ರಿಕೋದ್ಯಮದಲ್ಲಿ ಉದಯ್ ನನ್ನ ಗುರು - ಜೋಗಿ

Udaya Marakini Column In Chitraloka

Pls Note -

The views expressed in this column are those of its author and Chitraloka or its publishers do not claim to endorse it. You can express your opinion to his e-mail - This email address is being protected from spambots. You need JavaScript enabled to view it.